ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತಸದ ಭಾವಜಗತ್ತಿಗೆ ನವ ಸೂತ್ರ

Published : 27 ಸೆಪ್ಟೆಂಬರ್ 2024, 23:40 IST
Last Updated : 27 ಸೆಪ್ಟೆಂಬರ್ 2024, 23:40 IST
ಫಾಲೋ ಮಾಡಿ
Comments

ಈಗ ನವದುರ್ಗೆಯರನ್ನು ಆರಾಧಿಸುವ ಸಮಯ. ದುರ್ಗೆಯೆಂದರೆ ಶಕ್ತಿ. ನಮ್ಮೊಳಗಿರುವ ಅಂತಃಸತ್ವ. ಆಗಾಗ್ಗೆ ಹೆಣ್ಣುಮಕ್ಕಳು ತಮ್ಮ ಭಾವಪ್ರಪಂಚದೊಳಗಿಳಿದು ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಾದಿಯೇನೆಂಬುದನ್ನು ಗಮನಿಸಬೇಕು. ಈವರೆಗಿನ ಬದುಕಿನಲ್ಲಿ ಎಲ್ಲಿ ಎಡವಿದ್ದೇವೆ, ಯಾವುದಕ್ಕೆ ಹೆಚ್ಚು ಪುಷ್ಠಿ ಒದಗಿಸಬೇಕು ಎಂಬುದರ ವಿಶ್ಲೇಷಣೆ ಮಾಡಿಕೊಳ್ಳಬೇಕು. ನಮಗೇನು ಬೇಕು, ಬೇಡ ಎಂಬುದರ ಸ್ಪಷ್ಟ ಜ್ಞಾನವಿದ್ದಾಗ, ಅದಕ್ಕೆ ತಕ್ಕುದಾದ ಧೈರ್ಯದ ಹೆಜ್ಜೆಗಳನ್ನು ಇಡಬಹುದು.  ಭಾವನಾಜೀವಿಗಳು ಎಂಬ ಹಣೆಪಟ್ಟಿಯನ್ನು ಮೆಲ್ಲಗೆ ಸರಿಸಿ, ಯಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು ಎಂಬ ವಾಸ್ತವಿಕತೆಯನ್ನು ಒಪ್ಪಿಕೊಳ್ಳೋಣ. ನವರಾತ್ರಿಯ ಹೊಸ್ತಿಲಲ್ಲಿ ಭಾವಪ್ರಪಂಚದ ಏರಿಳಿತಗಳನ್ನು ಅರ್ಥೈಸಿಕೊಳ್ಳುತ್ತ ನವ ಸ್ಪರ್ಶ ನೀಡೋಣ. 

ನಿಮಗೆ ನೀವೇ ಆದ್ಯರಾಗಿ

ಜವಾಬ್ದಾರಿಗಳ ನಡುವೆ ಕಳೆದುಹೋಗಿದ್ದರೆ ನಿಮ್ಮ ಇಷ್ಟದ ಕೆಲಸವೇನು? ಎಂಬುದನ್ನು ಮೊದಲು ಮನನ ಮಾಡಿಕೊಳ್ಳಿ. ಹೊಸತೇನಾದರೂ ಪ್ರಯತ್ನಿಸಲು ಆರಂಭಿಸಿ. ಜವಾಬ್ದಾರಿಗಳ ನಡುವೆ ಸಣ್ಣ ಸಣ್ಣ ಖುಷಿ ಕೊಡುವ ಪೇಂಟಿಂಗ್‌, ಆಭರಣ ತಯಾರಿ, ಕಸೂತಿ, ಸಂಗೀತ ಕಲಿಯುವಿಕೆ, ನಾಲ್ಕು ಸಾಲು ಗೀಚಿಯಾದರೂ ಹಗುರಾಗಿ. ಮೈ ಚಳಿ ಬಿಟ್ಟು ಈಜಬೇಕು ಎಂದು ಎಂದಾದರೂ ಕನಸು ಕಂಡಿದ್ದರೆ, ಅದನ್ನು ಪೂರೈಸಿಕೊಳ್ಳಲು ಮನಸ್ಸು ಮಾಡಿ. ನಿಮ್ಮೊಳಗಿನ  ನಿಮಗೆ ಮೊದಲ ಆದ್ಯತೆ ಕೊಡಿ. ಅದಕ್ಕಾಗಿ ದಿನಕ್ಕೆ ಅರ್ಧಗಂಟೆಯನ್ನು ಮೀಸಲಿಡಿ. 

ತೀರ್ಪುಗಾರರನ್ನು ನಿಭಾಯಿಸಿ

ಕೇಳದಿದ್ದರೂ ಅಭಿಪ್ರಾಯ, ತೀರ್ಪು ಮಂಡಿಸುವವರಿಂದ ನೋವು ಅಧಿಕ. ಹೆಣ್ಣುಮಕ್ಕಳ ಪ್ರತಿ ನಡೆಯನ್ನು ‘ಇವಳು ಹೀಗೆ’ ಅದಕ್ಕೆ ‘ಹೀಗಾಗಿದೆ’ ಎಂದು ತೀರ್ಪು ನೀಡುವವರು ಇದ್ದೇ ಇರುತ್ತಾರೆ. ಅವರಿಂದ ದೂರವಿರುವುದು ಕಷ್ಟ. ಹಾಗಾಗಿ ಅವರನ್ನು ನಿಭಾಯಿಸುವುದು ಒಂದು ಕೌಶಲ. ಯಾರಾದರೂ ‘ಕಾಡೆಮ್ಮೆ’ಯ ಹಾಗೆ ಇದ್ದೀಯಾ ಎಂದು ಚೋದ್ಯ ಮಾಡಿದರೆ, ‘ಕಾಡೆಮ್ಮೆಯೇ ಇಷ್ಟದ ಪ್ರಾಣಿ’ ಎಂದು ಹೇಳಲು ಮರೆಯದಿರಿ. ಸುಖಾಸುಮ್ಮನೆ ಬರುವ ಪ್ರತಿ ತೀರ್ಪಿಗೆ ತಲೆ ಕೆಡಿಸಿಕೊಳ್ಳುತ್ತಾ ಕುಳಿತರೆ ಸಮಯ ವ್ಯರ್ಥ. ಬೇರೆಯವರ ತೀರ್ಪಿನ, ಅಭಿಪ್ರಾಯಗಳ ಕನ್ನಡಿಯಿಂದ ನಿಮ್ಮ ನಿಲುವನ್ನು ನೋಡಿಕೊಳ್ಳುವುದನ್ನು ಬಿಟ್ಟುಬಿಡಿ. ಹಾಗೆಯೇ ಬೇರೆಯವರ ಮಾತುಗಳನ್ನು ಯಾವುದೇ ಪೂರ್ವಗ್ರಹವಿಲ್ಲದೇ ಆಲಿಸಿ. ಪ್ರತಿಕ್ರಿಯೆ ನೀಡುವ ಸಲುವಾಗಿಯೇ ಮಾತನಾಡುವುದಿದ್ದರೆ ಮಾತಿಗಿಂತ ಮೌನವೇ ಲೇಸಲ್ಲವೇ.

ಸ್ವಆರೈಕೆ ಇರಲಿ

ಮನೆ, ಕೆಲಸ, ಕುಟುಂಬ, ಮಕ್ಕಳು ಹೀಗೆ ಎಲ್ಲದರ ನಡುವೆ ಕಳೆದು ಹೋಗಿದ್ದರೆ, ಪ್ರತಿ ಕ್ಷಣ ಆತಂಕ, ಒತ್ತಡ ಅನುಭವಿಸುತ್ತಿದ್ದರೆ ಕೂಡಲೇ ಸ್ವಆರೈಕೆಗೆ ಮುಂದಾಗಿ. ಬೇರೆಯವರ ಆರೈಕೆಯಲ್ಲಿ ಕಳೆಯುವ ನಮಗೆ ಸ್ವಆರೈಕೆಯೂ ಗೊತ್ತಿರಲಿ. ನಮ್ಮ ಅಗತ್ಯಗಳಿಗೆ ಮನ್ನಣೆ ನೀಡೋಣ. ಯಾವುದಾದರೂ ಸ್ಪಾಗೆ ಹೋಗಿ ಕಾಲ ಕಳೆಯಬೇಕು ಎನಿಸಿದರೆ, ಏನನ್ನಾದರೂ ಓದುತ್ತಾ  ಚಿಪ್ಸ್‌ ತಿನ್ನಬೇಕು ಎನಿಸಿದರೆ ಅದನ್ನೇ ಮಾಡೋಣ. ಯಾರು ಏನು ಅಂದುಕೊಳ್ಳೋತ್ತಾರೋ ಎನ್ನುವ ಆಲೋಚನೆಗಳಿಗೆ ಸಾಧ್ಯವಾದಷ್ಟು ವಿರಾಮ ಹಾಕೋಣ. 

ಅಪೂರ್ಣತೆಯೇ ಅಂತಿಮ

ಇಲ್ಲಿ ಯಾರೂ ಪರಿಪೂರ್ಣರಲ್ಲ. ಜೀವನದಲ್ಲಿ ಒಂದು ಉದ್ದೇಶ, ಅದನ್ನು ಈಡೇರಿಸಲು ನಡೆಸುವ ಎಲ್ಲ ಕಸರತ್ತು, ಹೊಸದೇನಾದರೂ ಪ್ರಯತ್ನಿಸುವ ಹಂಬಲ ಇವೆಲ್ಲವೂ ಮುಖ್ಯ. ಪರಿಪೂರ್ಣರಾಗುವ ದಿಕ್ಕಿನಲ್ಲಿ ಹೊಸತನ್ನು ಪ್ರಯತ್ನಿಸುವುದನ್ನು ಮರೆಯದಿರಿ. ಇದರಿಂದ ಅವಕಾಶ ಹಾಗೂ ಖುಷಿಯಿಂದ ವಂಚಿತರಾಗುತ್ತೀರ. ಹಾಗೆಯೇ ಪರಿಪೂರ್ಣತೆಯನ್ನು ಇತರರಿಂದ ನಿರೀಕ್ಷಿಸುವುದನ್ನು ಬಿಟ್ಟಾಗ ಹೆಚ್ಚು ಖುಷಿಯಿಂದ ಇರಲು ಸಾಧ್ಯ. 

ಆರಾಮವಲಯದಿಂದ ಹೊರಬನ್ನಿ

ಸ್ವಾವಲಂಬನೆಯೆಂಬುದು ಮನಸ್ಸು ಹಾಗೂ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಎಂಥ ಆರಾಮವಲಯದಲ್ಲಿ ಇದ್ದರೂ ಇವರೆಡಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಿ. ಆರಾಮವಲಯದಿಂದ ಹೊರಬರುವುದು ಎಂದರೆ ವಿಪರೀತ ಸವಾಲುಗಳನ್ನು ಸ್ವೀಕರಿಸುವುದು ಎಂದರ್ಥವಲ್ಲ. ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತ ದೊಡ್ಡದನ್ನು ಸಾಧಿಸಲು ಆರಾಮವಲಯದಿಂದ ಹೊರಬರುವುದೇ ಮೊದಲನೇ ಹೆಜ್ಜೆ. 

ಇಲ್ಲ ಎಂಬುದನ್ನು ಕಲಿಯಿರಿ

ಯಾವಾಗ ಇಲ್ಲ ಎನ್ನಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ಇಂಥದ್ದನ್ನು ಮಾಡೋಣವೆಂದು ಯಾರಾದರೂ ಹೇಳಿದರೆ, ಇಷ್ಟವಿಲ್ಲ ಎಂದಾದರೆ ಸ್ಪಷ್ಟವಾಗಿ ‘ಇಲ್ಲ  ಆಗುವುದಿಲ್ಲ’ ಎಂದು ಹೇಳುವುದನ್ನು ಕಲಿಯಿರಿ. ಇದರಿಂದ ಏಕಕಾಲಕ್ಕೆ ನಮ್ಮ ಹಾಗೂ ಇತರರ ಭಾವನೆಗಳಿಗೆ ಬೆಲೆ ಕೊಟ್ಟಂತೆ ಆಗುತ್ತದೆ. ಇಷ್ಟವಿಲ್ಲದ್ದನ್ನು ಇಲ್ಲ ಎಂದಾಗ ಉಳಿದವರಿಂದ ಪ್ರತಿರೋಧ ಬರುವುದು ಸಹಜ. ಇಲ್ಲ ಎಂದು ಹೇಳುವುದಷ್ಟೆ ಸಲೀಸಾಗಿ ಇತರರ ಪ್ರತಿರೋಧವನ್ನು ನಾಜೂಕಾಗಿ ನಿಭಾಯಿಸಲು ಕಲಿಯಿರಿ. ಬದುಕು ಪೋಲಿಂಗ್ ಕ್ಯಾಂಪೇನ್‌ ಅಲ್ಲ. ನಮ್ಮ ನಿರ್ಧಾರಗಳಿಗೆ ಉಳಿದವರ ಒಮ್ಮತದ ಮೊಹರು ಇರಬೇಕೆಂದು ನಿರೀಕ್ಷಿಸಬೇಡಿ. 

ನಿರಾಶೆಯನ್ನು ಒಳಗೊಳ್ಳಿ

ಹೊಸತೇನಾದರೂ ಪ್ರಯತ್ನಿಸಿದಾಗ ಯಶಸ್ಸು ಸಿಗದೇ ಹೋದರೆ ನಿರಾಶರಾಗುವುದು ಸಹಜ. ಅದು ಬದುಕಿನ ಭಾಗವೆಂಬುದನ್ನು ಮರೆಯದಿರಿ. ಹಾಗೆಂದ ಮಾತ್ರಕ್ಕೆ ತೆಗೆದುಕೊಂಡ ನಿರ್ಧಾರವೇ ತಪ್ಪು ಎಂಬ ಅಭಿಪ್ರಾಯಕ್ಕೆ ಬರಬೇಡಿ.

ತ‍ಪ್ಪಿತಸ್ಥ ಭಾವನೆಯನ್ನು ಬಿಟ್ಟುಬಿಡಿ

ಈ ಬದುಕಿನಲ್ಲಿ ಅನವಶ್ಯಕವಾಗಿ ಬಂದುಹೋಗುವ ತಪ್ಪಿತಸ್ಥ ಭಾವನೆಗಳಿಗೆ ಬೆಲೆ ಕೊಟ್ಟು, ಅವೇ ನಿಮ್ಮ ಸುತ್ತ ಇರುವಂತೆ ಮಾಡಿಕೊಳ್ಳಬೇಡಿ.. ‘ಅಯ್ಯೊ ನಾ  ಮನೆಯಲ್ಲಿ ಇದ್ದಿದ್ದರೆ ಮಗು ಬೀಳುತ್ತಿರಲಿಲ್ಲ’ ಎಂಬುದರಿಂದ ಹಿಡಿದು, ಮಗು, ಗಂಡ, ಅತ್ತೆ ಮಾವನನ್ನು ಬಿಟ್ಟು ಒಬ್ಬಳೇ ಸಿನಿಮಾ ನೋಡುವುದಾ? ಎಂದು ಕೊರಗಬೇಡಿ. ಅತಿ ಆಲೋಚನೆಗಳು ನಿಮ್ಮೊಳಗೆ ಆತಂಕವನ್ನು ತುಂಬಬಲ್ಲವೇ ಹೊರತು ಆತ್ಮವಿಶ್ವಾಸವನ್ನಲ್ಲ.

ತಪ್ಪಿಗೂ ಒಪ್ಪಿಗೂ ಸೂತ್ರಧಾರರಾಗಿ

ಬದುಕಿನಲ್ಲಿ ಸಮಸ್ಯೆಗಳು ಬಂದು ಹೋಗುತ್ತಿರುತ್ತವೆ. ವೈಯಕ್ತಿಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಆಯ್ಕೆ ನೀವೇ ಇಟ್ಟುಕೊಳ್ಳಿ. ತಪ್ಪಾಗಿ ಬಿಡುತ್ತದೆ ಎಂಬ ಆತಂಕದಲ್ಲಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹಿಂಜರಿಯಬೇಡಿ. ದುಡಿದು ಹಣ ಗಳಿಸಿದ್ದರೆ, ಅದರ ಹೂಡಿಕೆ ಯಾವುದರಲ್ಲಿ ಮಾಡುವುದು ಸೂಕ್ತ ಎಂಬುದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಭೂಮಿ , ಚಿನ್ನ, ಮನೆ, ಷೇರು ಖರೀದಿ ಹೀಗೆ ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬುದರ ಬಗ್ಗೆ ತಿಳಿದಿರಲಿ. ದುಡಿಯುವಷ್ಟೆ ಚೆನ್ನಾಗಿ ಆರ್ಥಿಕ ಶಿಸ್ತು ಹಾಗೂ ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲಿ ಹಿಂದೆ ಬೀಳಬೇಡಿ. ವೈಯಕ್ತಿಕ ಬದುಕಿನಲ್ಲಿ ಅತ್ಯಾಪ್ತರೇ ಇರಲಿ, ಅಭಿಪ್ರಾಯ ಹೇಳಲೂ ಮಾತ್ರ ಅವಕಾಶ ಮಾಡಿಕೊಡಿ. ನಿರ್ಧಾರದ ದಾಳವನ್ನು ನೀವೇ ಉರುಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT