ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

Published : 13 ಸೆಪ್ಟೆಂಬರ್ 2024, 22:57 IST
Last Updated : 13 ಸೆಪ್ಟೆಂಬರ್ 2024, 22:57 IST
ಫಾಲೋ ಮಾಡಿ
Comments

‘ನೀವು ಎಷ್ಟನೆಯ ಗಂಡ’ ಎಂದು ನ್ಯಾಯಾಧೀಶರು ಕೇಳುತ್ತಿದ್ದಾರೆ, ಆತನ ಪರ ವಕೀಲರು ಸಂಕೋಚದಿಂದಲೇ ಹೇಳುತ್ತಾರೆ ’ಏಳನೆಯವನು’ ಎಂದು. ನ್ಯಾಯಾಧೀಶರದ್ದು ಆಶ್ಚರ್ಯವನ್ನೂ ಮೀರಿದ ಉದ್ಗಾರ. ಹೌದು, ರಾಜ್ಯ ಉಚ್ಚನ್ಯಾಯಾಲವನ್ನೇ ಬವಳಿ ಬೀಳಿಸಿದ ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಸತತವಾಗಿ ಆರು ಮದುವೆಗಳನ್ನು ಮಾಡಿಕೊಂಡು ಪ್ರತೀ ಬಾರಿಯೂ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿ ಗಂಡನಿಂದ ಲಕ್ಷಾಂತರ ರೂಪಾಯಿಯ ಪರಿಹಾರ ಪಡೇದು ವಿಚ್ಛೇದನ ನೀಡುವುದನ್ನು ಕಾಯಕ ಮಾಡಿಕೊಂಡು ಈಗ ಏಳನೆಯ ಗಂಡನ ಮೇಲೆ ಪ್ರಕರಣ ಹೂಡಿದ್ದರು. ನ್ಯಾಯಾಧೀಶರು ಇದೊಂದು ದುರುದ್ದೇಶಪೂರಿತ ಪ್ರಕರಣ ಎಂದು ದಾಖಲಿಸಿ ಆಕೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದರು.

ಮತ್ತೊಬ್ಬಾಕೆ ತನ್ನ ಇಬ್ಬರು ಮಕ್ಕಳ ಶಾಲೆ, ಆಹಾರ, ಮನೆ ಬಾಡಿಗೆ ಇನ್ನಿತರೆ ಖರ್ಚನ್ನು ಬಿಟ್ಟು ತನ್ನ ಸ್ವಂತಕ್ಕೆ ಪ್ರತಿ ತಿಂಗಳೂ ₹ 6 ಲಕ್ಷದ 16 ಸಾವಿರ ಜೀವನಾಂಶ ಕೋರಿ ಅರ್ಜಿ ಹಾಕಿದ್ದರು. ಯಾವುದೇ ಉತ್ಪ್ರೇಕ್ಷಿತ ಕಥೆ ಕಾದಂಬರಿಗಳಲ್ಲೂ ಸಿಗದ ಇಂತಹ ಪ್ರಕರಣಗಳು ನಿಜ ಜೀವನದಲ್ಲಿ ಒಮ್ಮೊಮ್ಮೆ ಘಟಿಸಿ ಎಲ್ಲರ ಉಸಿರು ತಡೆಹಿಡಿಯುವ ತಾತ್ಕಾಲಿಕ ಕೆಲಸ ಆಗುತ್ತಿರುತ್ತದೆ.

ಬಹುಶಃ ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣಗಳಲ್ಲಿ ಕೋಟ್ಯಂತರ ಪರಿಹಾರಕ್ಕೆ ಅವರು ಸೆಟಲ್ ಮಾಡಿಕೊಳ್ಳುವುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುವ ನಮ್ಮ ಮಹಿಳೆಯರು ತಾವೂ ಕೂಡ ವಾಸ್ತವತೆಯ ಜೊತೆ ಬದುಕಲಾರದೆ ಕಲ್ಪಿತ ನಾಳೆಗಳನ್ನು ಸುಂದರವಾಗಿಸಿಕೊಳ್ಳಲು ಹೀಗೆ ಅಸಹಜತೆಯತ್ತ ಮುಖಮಾಡಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೇನೋ? ವಿಚ್ಛೇದನದ ಸಂದರ್ಭದಲ್ಲಿ ಗಂಡಸು ಪರಿಹಾರ ಧನ ನೀಡಬೇಕು ಎನ್ನುವ ಕಾನೂನು ಮಾಡಿದ್ದು ಸಂವಿಧಾನದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೀಡಿರುವ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಲು. ಅವರುಗಳು ನಿರ್ಗತಿಕರಾಗುವುದನ್ನು ತಪ್ಪಿಸುವುದಕ್ಕಾಗಿ ಜೀವನಾಂಶ ಎನ್ನುವ ಸಹಾಯ ಹುಟ್ಟಿಕೊಂಡಿರುವುದು. ಆದರೆ ಬದುಕಿನೆಡೆಗೆ ಭ್ರಮೆಗೆ ಒಳಾಗಿರುವ ಕೆಲವು ಮಹಿಳೆಯರಿಂದ ಇದರ ಮೂಲ ಉದ್ದೇಶವೇ ತಲೆ ಕೆಳಕಾಗಿ ನಿಜಾರ್ಥದಲ್ಲಿ ನೋಯುತ್ತಿರುವ ಮಹಿಳೆಯರಿಗೆ ದಾರಿ ಮತ್ತಷ್ಟು ದುರ್ಗಮವಾಗುತ್ತಿದೆ.

ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಈ ಮೊದಲು ಕ್ರಿಮಿನಲ್ ಪ್ರೊಸೀಜರ್ ಕೋಡ್), ವಿಶೇಷ ಮದುವೆಗಳ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಿಕೆ ಕಾನೂನು, ಹಿಂದೂ ವಿವಾಹ ಅಧಿನಿಯಮ ಮತ್ತು ಹಿಂದೂ ದತ್ತಕ ಮತ್ತು ವಾರಸುದಾರ ಕಾಯ್ದೆಯ ಅಡಿಯಲ್ಲಿ ಮಹಿಳೆಯು ತನ್ನ ಗಂಡನಿಂದ ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಆದರೆ ಯಾವ ಯಾವ ಕಾನೂನಿನ ಅಡಿಯಲ್ಲಿ ಯಾವ ಅಂಶಗಳನ್ನು ಪರಿಗಣಿಸಿ ಎಷ್ಟು ಪರಿಹಾರ ನೀಡಬೇಕು ಮತ್ತು ಯಾವ ಹಂತದಲ್ಲಿ ಜೀವನಾಂಶದ ತೀರ್ಪು ನೀಡಬೇಕು ಹಾಗೆಯೇ ಅದು ಯಾವ ದಿನದಿಂದ ಜಾರಿಗೆ ಬರಬೇಕು ಎನ್ನುವ ಗೊಂದಲ ನ್ಯಾಯಾಲಯಗಳಲ್ಲಿಯೇ ಇದ್ದು ಬಹಳಷ್ಟು ಹೆಂಗಸರು ಇಂದಿಗೂ ಒಂದು ರೂಪಾಯಿಯ ಸಹಾಯವಿಲ್ಲದೆ ಬವಣೆ ಪಡುತ್ತಿದ್ದಾರೆ.

ಇದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಅಪೀಲ್ ಸಂಖ್ಯೆ:730/2020 ರಜನೀಶ್ Vs ನೇಹ ಮತ್ತು ಇತರೆ ಈ ಪ್ರಕರಣದಲ್ಲಿ ಸುದೀಘವಾದ ಅಧ್ಯಯನವನ್ನು ನಡೆಸಿ ನಮ್ಮ ದೇಶದ ಎಲ್ಲಾ ಉಚ್ಚ ನ್ಯಾಯಾಲಯಗಳು ಅವರೆಗೂ ನೀಡಿರುವ ತೀರ್ಪುಗಳನ್ನು ವಿಶ್ಲೇಷಿಸಿ ಕೌಟುಂಬಿಕ ನ್ಯಾಯಾಲಯಗಳು ಯಾವೆಲ್ಲಾ ಅಂಶಗಳ ಆಧಾರದ ಮೇಲೆ ಜೀವನಾಂಶದ ಮೊತ್ತವನ್ನು ತೀರ್ಮಾನಿಸಿಅಬೇಕು ಎನ್ನುವ ಮಾರ್ಗದರ್ಶನ ನೀಡಿದೆ.

ಸಾಮಾಜಿಕ ನ್ಯಾಯ ಎಲ್ಲರಿಗೂ ಸಮ ಬಾಳು- ಎಲ್ಲರಿಗೂ ಸಮಪಾಲು ಎನ್ನುವ ತತ್ವದ ಮೇಲೆ ರಚನೆಯಾಗಿರುವ ಜೀವನಾಂಶ ಕಾನೂನಿನ ಅಡಿಯಲ್ಲಿ ಗಂಡ ತಾನು ಆರ್ಥಿಕವಾಗಿ ಅಸಮರ್ಥ ಎನ್ನುವ ಕಾರಣಕ್ಕಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಹೆಂಡತಿಯ ದುಡಿಮೆ ಇದ್ದರೂ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಅವಕಾಶ ಇಲ್ಲ. ಹಾಗೆಂದ ಮಾತ್ರಕ್ಕೆ ತನ್ನದೆಲ್ಲವನ್ನೂ ಹೆಂಡತಿ ಮಕ್ಕಳಿಗೆ ಕೊಟ್ಟೂ ಅವನು ಬರಿದಾಗಿ ಹೋಗಬೇಕು ಎನ್ನುವುದು ವ್ಯವಸ್ಥೆಯ ಉದ್ದೇಶವಲ್ಲ.

ಪ್ರತಿ ಪ್ರಕರಣದಲ್ಲೂ ಪತಿಯೊಬ್ಬ ಇಂತಿಷ್ಟೇ ಪರಿಹಾರಧನವನ್ನು ನೀಡಬೇಕು ಎನ್ನುವ ನಿರ್ಧಾರಿತ ಫಾರ್ಮುಲ ಇಲ್ಲದಿದ್ದರೂ, ಮದುವೆಯ ನಂತರ ಗಂಡ  ಹೆಂಡತಿ ಯಾವ ಮಟ್ಟದ ಜೀವನ ಶೈಲಿಯಲ್ಲಿ ಬದುಕಿರುತ್ತಾರೆ, ಬೇರೆಯಾದ ನಂತರ ಹೆಂಡತಿ ಮತ್ತು ಮಕ್ಕಳು ಕಾಲಕ್ಕೆ ತಕ್ಕ ಘನತೆಯುಕ್ತ ಬಾಳ್ವೆ ಮಾಡಲು ಇರುವ ಅವಶ್ಯಕತೆ ಏನು, ಎಷ್ಟು ವರ್ಷದ ದಾಂಪತ್ಯ, ಬೇರೆಯಾಗುತ್ತಿರುವ ಹೆಂಡತಿ ಮತ್ತು ಮಕ್ಕಳ ವಯಸ್ಸು ಎಷ್ಟು, ಇಬ್ಬರಿಗೂ ಇರುವ ಸಂಪಾದನೆ ಎಷ್ಟು  ಎನ್ನುವ ಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟೂಕೊಂಡು ನ್ಯಾಯಾಲಯ ಜೀವನಾಂಶದ ಮೊತ್ತವನ್ನು ನಿರ್ಧಾರ ಮಾಡುತ್ತದೆ. ಗಂಡನು ತಾನು ಇಷ್ಟೇ ಕೊಡಬಲ್ಲೆ ಎಂದು ಹೇಳಿದ್ದರೂ ಹೆಂಡತಿಯು ಅಗಾಧ ಮೊತ್ತದ ಬೇಡಿಕೆ ಇಟ್ಟಿದ್ದರೂ ಸಹ ನ್ಯಾಯಾಲಯವು ವಿವೇಚನಾಯುಕ್ತವಾಗಿ ಎರಡೂ ಕಡೆಯವರಿಗೂ ಅನ್ಯಾಯವಾಗದಂತೆ ತೀರ್ಪು ನೀಡುತ್ತದೆ. ಹೀಗಿದ್ದರೂ ಗಂಡಸರು ತಮ್ಮ ಆದಾಯದ ಮೂಲವನ್ನು ಸುಳ್ಳಾಗಿಯೇ ನೀಡುವುದು ಮತ್ತು ಹೆಂಗಸರು ಅವಾಸ್ತವಿಕ ನಿರೀಕ್ಷೆಗಳಿಂದ ಹೊರಬರಲು ಬಿಡದ ಸುತ್ತಲಿನ ಸಾಮಾಜಿಕ ಪರಿಸ್ಥಿತಿಯ ಪರಿಣಾಮದಿಂದ ನೊಂದ ಮಹಿಳೆಯರು ನ್ಯಾಯಾಲಯದ ಹೊಸಿಲುಗಳಲ್ಲಿ ನಿಂತೂ ಇನ್ನೂ ಕಣ್ಣೀರು ಹಾಕುತ್ತಿರುವುದು ಖೇದಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT