‘ಹೆಣ್ಣು ಮಕ್ಕಳು ತಮ್ಮ ಸುತ್ತ ಒಂದು ಚೌಕಟ್ಟು ಹಾಕಿಕೊಂಡಿರುತ್ತಾರೆ. ‘ನನ್ನಿಂದ ಇಷ್ಟೇ ಆಗುವುದು' ಎಂಬುದು ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಪ್ರಯತ್ನ ಮಾಡದೇ ಸಾಧನೆ ಸಾಧ್ಯವೇ? ಇಲ್ಲ.ಯಶಸ್ಸು ಸಿಗುತ್ತದೋ, ಬಿಡುತ್ತದೋ; ಅದು ಬೇರೆ. ಕನಿಷ್ಠ ಪಕ್ಷ ಯತ್ನವನ್ನಾದರೂ ಮಾಡಬೇಕಲ್ಲ? ಮಹಿಳೆಯರು ಮನಸ್ಸಿನಲ್ಲಿ ಹಾಕಿಕೊಂಡಿರುವ ಈ ಮಿತಿಯ ರೇಖೆಯನ್ನು ತೆಗೆದು ಹಾಕಿದರೆ ಶೇ 50ರಷ್ಟು ಕೆಲಸ ಆಗಿಬಿಡುತ್ತದೆ. ಉಳಿದಿದ್ದು ಪ್ರಯತ್ನದಿಂದ ಸಾಕಾರವಾಗುತ್ತದೆ ಎಂಬುದನ್ನು ಅಂಟಾರ್ಕ್ಟಿಕಾಗೆ ಹೋಗಿ ನಾನು ಕಂಡುಕೊಂಡಿದ್ದೇನೆ...’

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ(ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹಾಗೂ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಅವರ ದೃಢವಾದ ಮಾತುಗಳಿವು.

ಈ ವರ್ಷದ ಮಾರ್ಚ್ನಲ್ಲಿ ಹಿಮಖಂಡ ಅಂಟಾರ್ಕ್ಟಿಕಾಗೆ ಭೇಟಿ ನೀಡಿರುವ ಸಾಹಸಿ ಅವರು. ಈ ಸಾಧನೆ ಮಾಡಿರುವ ದೇಶದ ಮೊದಲ ಮಹಿಳಾ ಐಎಫ್ಎಸ್ ಅಧಿಕಾರಿ ಎಂಬ ಹೆಗ್ಗಳಿಕೆಯೂ ಅವರದ್ದು. ಅನಿರೀಕ್ಷಿತವಾಗಿ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು 10 ದಿನಗಳ ಕಾಲ ಹಿಮಖಂಡ ಯಾತ್ರೆ ಕೈಗೊಂಡಿದ್ದಾರೆ.

38ರ ಹರೆಯದ ದೀಪ್ ಅವರು, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಮೊದಲ ನಿರ್ದೇಶಕಿಯಾಗಿ 10 ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ. ಗುಜರಾತ್ನ ಅಹಮದಾಬಾದ್ನವರಾದ ಅವರು 2011ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ. ಅವರೀಗ ಕರ್ನಾಟಕದ ಸೊಸೆ. ಅವರ ಪತಿ ಡಿ.ಮಹೇಶ್ ಕುಮಾರ್ ಕೂಡ ಐಎಫ್ಎಸ್ ಅಧಿಕಾರಿ.

ಸಾಹಸ ಪ್ರವೃತ್ತಿ

ಬಾಲ್ಯದಿಂದಲೇ ಸಾಹಸ ಪ್ರವೃತ್ತಿ ಹೊಂದಿದ್ದ ದೀಪ್,ತಂದೆ ಹಾಗೂ ತಾಯಿಯ ಪ್ರೋತ್ಸಾಹದಿಂದ 5ನೇ ವರ್ಷಕ್ಕೆ ಈಜು, 5ನೇ ತರಗತಿಯಿಂದಲೇ ಕರಾಟೆ ಕಲಿಯಲು ಆರಂಭಿಸಿದ್ದರು. ಏಳನೇ ವಯಸ್ಸಿಗೆ ತಂದೆ ಯನ್ನು ಕಳೆದುಕೊಂಡವರು. ತಾಯಿಯ ಆರೈಕೆಯಲ್ಲಿ ಬೆಳೆದ ಅವರಿಗೆ ಚಾರಣ, ಪರಿಸರ, ಕಾಡು ಎಂದರೆ ಆಸಕ್ತಿ. ಪದವಿಯವರೆಗೆ ಅಹಮದಾಬಾದ್ನಲ್ಲಿ ಓದಿ, ನಂತರ ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಒಂದು ವರ್ಷ ವರ್ಲ್ಡ್ ವೈಲ್ಡ್ಲೈಫ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಬಳಿಕ, ಐಎಫ್ಎಸ್ ಪರೀಕ್ಷೆ ಬರೆದು ಪಾಸಾಗಿ, ಅರಣ್ಯ ಸೇವೆಗೆ ಸೇರಿದರು.

‘ಐಪಿಎಸ್, ಐಎಫ್ಎಸ್ ಕಷ್ಟದ ಕೆಲಸ. ಓಡಾಟ ಹೆಚ್ಚು, ನಮಗೆ ಸಾಧ್ಯವಿಲ್ಲ ಎಂದು ಅನೇಕ ಹೆಣ್ಣುಮಕ್ಕಳು ಪೊಲೀಸ್, ಅರಣ್ಯ ಸೇವೆಗೆ ಸೇರಲು ಸ್ವಲ್ಪ ಹಿಂಜರಿಯುತ್ತಾರೆ. ಕೆಲವು ಬಾರಿ ಅವರಿಗೆ ಇಷ್ಟ ಇದ್ದರೂ, ಪೋಷಕರ ಒತ್ತಡದಿಂದ ಐಎಎಸ್ ಆಯ್ಕೆಮಾಡಿಕೊಳ್ಳುವವರೂ ಇದ್ದಾರೆ. ಆದರೆ, ನನಗೆ ಮೊದಲಿನಿಂದಲೂ ಕಾಡು, ಪ್ರಾಣಿಗಳು ಅಚ್ಚುಮೆಚ್ಚು. ಡೆಹ್ರಾಡೂನ್ನಲ್ಲಿ ಓದುತ್ತಿರುವಾಗ ಭೂಮಿ, ಅರಣ್ಯ, ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ತಿಳಿದು ನನ್ನ ಯೋಚನೆಯೇ ಬದಲಾಯಿತು. ಐಎಎಸ್, ಐಪಿಎಸ್ ಪರೀಕ್ಷೆ ಬರೆಯಲು ಹೋಗಲಿಲ್ಲ. ಐಎಫ್ಎಸ್ ಪರೀಕ್ಷೆ ಮಾತ್ರ ಎದುರಿಸಿದೆ. ಪುರುಷ ಅಧಿಕಾರಿಗಳ ಸರಿ ಸಮನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ’ ಎಂಬುದು ಅವರ ಮಾತು.

‘2011ರ ಬ್ಯಾಚ್ನಲ್ಲಿ 85 ಮಂದಿ ಐಎಫ್ಎಸ್ ಅಧಿಕಾರಿಗಳ ನೇಮಕವಾಗಿತ್ತು. ಅದರಲ್ಲಿ ಮಹಿಳೆಯರು ಇದ್ದುದು 14 ಮಂದಿ ಮಾತ್ರ. ಈಗ ಚಿತ್ರಣ ಕೊಂಚ ಬದಲಾವಣೆಯಾಗಿದೆ. ಹೆಚ್ಚೆಚ್ಚು ಮಹಿಳಾ ಅಧಿಕಾರಿಗಳು ಆಯ್ಕೆಯಾಗುತ್ತಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬೇಕು’ ಎಂಬುದು ದೀಪ್ ಆಶಯ.

ಹಲವು ಸವಾಲು...

ದೀಪ್ ಅವರಿಗೆ ಅಂಟಾರ್ಕ್ಟಿಕಾಗೆ ಹೋಗುವ ಯೋಚನೆ ಇರಲಿಲ್ಲ. ಇವರ ಸಾಹಸ ಪ್ರವೃತ್ತಿಯ ಬಗ್ಗೆ ಅರಿವಿದ್ದ, 2012ನೇ ಬ್ಯಾಚ್ನ ಐಎಎಸ್ ಅಧಿಕಾರಿ, ಚಾಮರಾಜನಗರದ ಹಾಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಹಿಮಖಂಡಕ್ಕೆ ಹೋಗುವ ಅವಕಾಶದ ಬಗ್ಗೆ ತಿಳಿಸಿದ್ದರು. ಚಾರುಲತಾ, ಈ ಹಿಂದೆಯೂ ಒಮ್ಮೆ ಅಂಟಾರ್ಕ್ಟಿಕಾ ಹೋಗಿ ಬಂದಿದ್ದರು. ಈ ವರ್ಷದ ಮಾರ್ಚ್ನಲ್ಲಿ ಅಂಟಾರ್ಕ್ಟಿಕಾಗೆ ಅಧ್ಯಯನಕ್ಕೆ ತೆರಳಿದ್ದ ತಂಡದಲ್ಲಿ ದೀಪ್ ಜೊತೆ ಚಾರುಲತಾ ಅವರೂ ಇದ್ದರು.

‘2021ರ ಜುಲೈನಲ್ಲಿ ಚಾರುಲತಾ ಈ ಅವಕಾಶದ ಬಗ್ಗೆ ಗಮನ ಸೆಳೆದರು. ಅದುವರೆಗೆ ನಾನು ಈ ಬಗ್ಗೆ ಚಿಂತಿಸಿರಲಿಲ್ಲ. ಯಾಕೆ ಪ್ರಯತ್ನಿಸಬಾರದು ಎಂಬ ಯೋಚನೆ ಬಂತು. ತಾಯಿ, ತಂಗಿ ಒಪ್ಪಿಗೆ ನೀಡಿದರು. ಪತಿಯ ಪ್ರೋತ್ಸಾಹವೂ ದೊರೆಯಿತು. ಹಾಗಾಗಿ, ಅರ್ಜಿ ಹಾಕಿದೆ. ಹಿಮಖಂಡದಲ್ಲಿ ಉಳಿಯುವುದು, ಓಡಾಡುವುದು ಸುಲಭವಲ್ಲ. ಅದಕ್ಕೆ ದೈಹಿಕ ಆರೋಗ್ಯ ಮುಖ್ಯ, ಮಾನಸಿಕವಾಗಿ ದೃಢವಾಗಿರಬೇಕು. ಅದಕ್ಕಾಗಿ ಸಿದ್ಧತೆ ಮಾಡಬೇಕಿತ್ತು. ವ್ಯಾಯಾಮಗಳನ್ನು ಆರಂಭಿಸಿದೆ. ಕೆಲವು ದಿನಗಳಲ್ಲಿ ಮಂಡಿ ನೋವು ಶುರುವಾಯಿತು. ಅದಕ್ಕೆ ಚಿಕಿತ್ಸೆ ಪಡೆದು ಸುಧಾರಿಸಿದ ತಕ್ಷಣ ಅಪೆಂಡಿಸೈಟಿಸ್ನಿಂದ ಬಳಲಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಎರಡು ತಿಂಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದರು. ಇಷ್ಟಾಗುವಾಗ ಡಿಸೆಂಬರ್ ಬಂದಿತ್ತು. ಮಾರ್ಚ್ನಲ್ಲಿ ಅಂಟಾರ್ಕ್ಟಿಕಾಗೆ ಹೋಗಬೇಕಿತ್ತು. ನನ್ನಿಂದ ಸಾಧ್ಯವಿಲ್ಲ ಎಂದು ಮನಸ್ಸಿಗೆ ಬಂತು. ಪತಿ ಧೈರ್ಯ ಹೇಳಿದರು. ನಂತರದ ಎರಡು ತಿಂಗಳಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ಮಾರ್ಚ್ 16ಕ್ಕೆ ಪ್ರಯಾಣ ಆರಂಭಿಸಿದೆ’ ಎಂದು ತಾವು ಎದುರಿಸಿದ ಸವಾಲುಗಳನ್ನು ದೀಪ್ ವಿವರಿಸಿದರು.

‘ಹಿಮಖಂಡದ ವಾತಾವರಣ ಸಂಪೂರ್ಣ ಭಿನ್ನ. ಪೂರ್ವಭಾವಿಯಾಗಿ ಎಷ್ಟು ಅಭ್ಯಾಸ ಮಾಡಿದರೂ ಅಲ್ಲಿನ ಪರಿಸ್ಥಿತಿ ಬೇರೆಯೇ ಇರುತ್ತದೆ. ನಾಲ್ಕೈದು ದಿರಿಸು ಧರಿಸುವುದು, ದಪ್ಪನೆಯ ಶೂ ಹಾಕಿ ಓಡಾಡುವುದು ಕಷ್ಟ. ಆದರೆ, ಭಯ ಪಡದೆ, ದಿಟ್ಟ ಹೆಜ್ಜೆ ಇಟ್ಟೆ’ ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

‘ಹೆಣ್ಣು ದೈಹಿಕವಾಗಿ ದುರ್ಬಲಳು. ವಯಸ್ಸು ಜಾಸ್ತಿಯಾಗುತ್ತಿದ್ದಂತೆಯೇ ಆಕೆಗೆ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂಬ ಮಾತುಗಳನ್ನು ಪದೇ ಪದೇ ಕೇಳುತ್ತಿರುತ್ತೇವೆ. ಇದು ನಿಜವಲ್ಲ. ಅಂತಹ ಒಂದು ವಾತಾವರಣವನ್ನು ನಮ್ಮ ಸಮಾಜದಲ್ಲಿ ಸೃಷ್ಟಿಸಲಾಗಿದೆ. ಮನಸ್ಸೊಂದಿದ್ದರೆ ಏನು ಬೇಕಾದರೂ ಮಾಡ ಬಹುದು. ಪೋಷಕರೂ ಅಷ್ಟೆ. ಹೆಣ್ಣುಮಕ್ಕಳ ಆಸಕ್ತಿಗೆ ನೀರೆಯಬೇಕು’ ಎಂಬುದುದೀಪ್ ಧೃಢ ಮಾತು.

ದಕ್ಷಿಣ ಧ್ರುವಕ್ಕೆ ಹೋಗಿ ಬಂದಿರುವ ಅವರು, ಈಗ ಉತ್ತರ ಧ್ರುವದತ್ತ ದೃಷ್ಟಿ ನೆಟ್ಟಿದ್ದಾರೆ!

ಅಂಟಾರ್ಕ್ಟಿಕಾ ರಕ್ಷಣೆಯ ಉದ್ದೇಶ

ರಾಬರ್ಟ್ ಸ್ವಾನ್ ಎಂಬುವವರು ಸ್ಥಾಪಿಸಿರುವ ‘2041 ಫೌಂಡೇಷನ್ ಆಶ್ರಯದಲ್ಲಿ’ ದೀಪ್, ಚಾರುಲತಾ ಸೋಮಲ್ ಸೇರಿದಂತೆ ವಿವಿಧ ರಾಷ್ಟ್ರಗಳ165 ಮಂದಿ ಮಾರ್ಚ್ ನಲ್ಲಿಅಂಟಾರ್ಕ್ಟಿಕಾಗೆ ಹೋಗಿದ್ದರು. ರಾಜ್ಯದಿಂದ ಇವರಿಬ್ಬರಲ್ಲದೆ ಬೆಂಗಳೂರಿನ ಅವಿನಾಶ್ ಎಂಬುವವರು ಈ ತಂಡದಲ್ಲಿದ್ದರು.

ಹವಾಮಾನ ವೈಪರೀತ್ಯದ ಪರಿಣಾಮವನ್ನು ಅಧ್ಯಯನ ಮಾಡುವುದು, ಅಂಟಾರ್ಕ್ಟಿಕಾ ಖಂಡವನ್ನು ರಕ್ಷಿಸುವುದು ಹಾಗೂ ಸುಸ್ಥಿರ ಪ್ರಗತಿಯ ಅವಶ್ಯಕತೆಯನ್ನು ಜಗತ್ತಿಗೆ ಸಾರುವುದು ಈ ಅಧ್ಯಯನ ಪ್ರವಾಸದ ಉದ್ದೇಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.