‘ಬಳಿಗೆ ಬಂದವನು ತನ್ನ ವಾಂಛೆ ತೀರಿದ ಮೇಲೆ ಮತ್ ಈ ಕಡೆ ಬರಾಂಗಿಲ್ರಿ. ಹೆಂಗ್ ಮುಖ ಹೊತ್ಕೊಂಡ್ ಅಡ್ಡಾಡ್ಲಿ. ಮಕ್ಕಳು ಸಾಲಿಗ್ ಹೋಗ್ತೀನಿ ಅಂತಾವ, ಕಳಸಾಕ ಆಗ್ಬೇಕಲ್ರಿ. ಕೈಯ್ಯಾಗ ರೊಕ್ಕಿಲ್ಲ. ಹೊಟ್ಟಿಗೆ ಹಿಟ್ಟಿಲ್ಲ...’ ಹೀಗೆ ದೇವದಾಸಿ ಹೇಳುವಾಗ ಮೂಕಿಯಾಗಿದ್ದೆ. ವಿಜಯಪುರ, ಕೊಪ್ಪಳ ಜಿಲ್ಲೆಗಳ ಹಳ್ಳಿಗಳಿಗೆ ಓಡಾಡಿ ಬರುವಷ್ಟರಲ್ಲಿ ಇಂತಹ ನೋವಿನ ಗೊಂಚಲುಗಳು ನನ್ನ ಒಡಲನ್ನು ಭಾರವಾಗಿಸಿದ್ದವು...

‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ (ದೇವರ ಸತಿ, ಮನುಷ್ಯರ ದಾಸಿ) ಸಾಕ್ಷ್ಯಚಿತ್ರ ರೂಪಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪ್ರಾಧ್ಯಾಪಕಿ ಪೂರ್ಣಿಮಾ ರವಿ ಅವರು ‘ದೇವರ ಪತ್ನಿ’ಯರನ್ನು ಭೇಟಿ ಮಾಡಿದ ತಮ್ಮ ಅನುಭವಗಳನ್ನು ಹೇಳುತ್ತಿದ್ದರೆ, ಕೇಳುವ ತಾಯ್ಗರುಳು ಸಂಕಟಪಡದೆ ಇರಲಾರದು.

‘Representations of the Devadasi Tradition in Select Indian English Narratives’ ವಿಷಯದ ಮೇಲೆ ಪಿಎಚ್.ಡಿ ಮಾಡುತ್ತಿರುವ ಪೂರ್ಣಿಮಾ, ದೇವದಾಸಿ ವಿಮೋಚನಾ ಸಂಘದ ಸಹಕಾರದೊಂದಿಗೆ ಉತ್ತರ ಕರ್ನಾಟಕದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ, 100ಕ್ಕೂ ಹೆಚ್ಚು ದೇವದಾಸಿಯರ ಜೊತೆ ಒಂದಿಷ್ಟು ಸಮಯ ಕಳೆದಿದ್ದಾರೆ. ಶುರುವಿನಲ್ಲಿ ಮೌನಕ್ಕೆ ಶರಣಾಗಿದ್ದ ಆ ಮಹಿಳೆಯರ ಹೆಪ್ಪುಗಟ್ಟಿದ ನೋವು, ನಿಧಾನಕ್ಕೆ ಕರಗಿ ಧಾರೆಯಾಗಿದೆ.

ಪಾತ್ರ 1: ‘ಮದುವೆಯಾಗದೆ ತಾಳಿ ಕಟ್ಟಿಕೊಳ್ಳುವುದಿದೆಯಲ್ಲ ಅದು ತಾಳಿಗಿಂತಲೂ ಘೋರ ಬಂಧವಾಗಬಹುದೆಂದು ಅರೆಕ್ಷಣವೂ ಯೋಚಿಸಿರಲಿಲ್ಲ. ಯಾವಾಗ ಮದುವೆಯಾಯ್ತೆ, ವರಿಸಿದವನು ಯಾರೆಂದು ಹಾದಿ–ಬೀದಿಯಲ್ಲಿ ಸಿಕ್ಕವರ ಪ್ರಶ್ನೆಗಳು ಹೃದಯ ಹಿಂಡುತ್ತಿದ್ದವು. ದಿಕ್ಕು ತೋಚದೆ, ತಾಳಿಯನ್ನೇ ಕಿತ್ತು ಬಿಸಾಡಿದಾಗ ಒಂದಿಷ್ಟು ನಿರಾಳವಾಯ್ತು. ಕಾಯುತ್ತ, ಕನವರಿಸುತ್ತಿದ್ದ ದೀರ್ಘ ನಿರೀಕ್ಷೆ ಕೈಗೂಡಿತು, ಕೊನೆಗೂ ಜೊತೆಗಾರನೊಬ್ಬ ಸಿಕ್ಕನೆಂದು ನಿಟ್ಟುಸಿರು ಬಿಟ್ಟೆ. ಫಲಿತ ಪ್ರೀತಿಯ ಕುರುಹಾಗಿ ಗರ್ಭದಲ್ಲೊಂದು ಕುಡಿ ಮೂಡಿತು, ನಾನು ತಾಯ್ತನದ ಖುಷಿಯ ಹೂಮಾಲೆ ಕಟ್ಟುತ್ತಿದ್ದೆ, ಆತ ಬಾಂಧವ್ಯವನ್ನೇ ಹರಿದು ಬಿಸಾಕಿ ದೂರ ಹೊರಟುಹೋದ. ಇನ್ನೊಬ್ಬ ಜತೆಗಾರನ ಕಾಯುವಿಕೆ, ಇಲ್ಲದ ಗಂಡನ ಬಗ್ಗೆ ಬಚ್ಚಿಡುವ ಸುಳ್ಳು, ಲೋಕನಿಂದನೆಯ ಚುಚ್ಚುಮಾತುಗಳು ಅದೆಂತಹ ಯಾತನೆ...’

ಪಾತ್ರ 2: ‘ಗಂಡನ ಪಾತ್ರಧಾರಿಯಾಗಿ ಬಂದವ ಜನುಮದ ಜೊತೆಗಾರನೆಂಬ ಭ್ರಮೆಯಲ್ಲಿ ಆತನ ಪುಸಲಾಯಿಸುವ ಮಾತಿಗೆ ಮರುಳಾಗಿ ಸಾಲ ಮಾಡಿಕೊಟ್ಟು, ಅವನ ಆನಂದದಲ್ಲಿ ನನ್ನ ಸುಖವನ್ನು ಮರೆತೆ. ಎರಡು ಮಕ್ಕಳಾದವು. ಒಮ್ಮೆ ಹೋದವ ಮತ್ತೆ ತಿರುಗಿ ನೋಡಿಲ್ಲ. ಮಕ್ಕಳು ಈಗ ಬೆಳೆದು ನಿಂತಿದ್ದಾರೆ. ಅವರಿಬ್ಬರ ಕಂಗಳಲ್ಲೂ ಸುಂದರ ನಾಳೆಗಳ ಕನಸಿತ್ತು, ಬೆಟ್ಟದಷ್ಟು ಓದಿ, ಅಮ್ಮನನ್ನು ಚೆನ್ನಾಗಿ ಸಲಹಬೇಕೆಂದು. ಆದರೆ, ಬಡತನ ಬಾಹು ಅಷ್ಟು ಸಲೀಸಾಗಿ ಹಿಡಿತ ಸಡಿಲಿಸದು. ಪೆನ್ನು ಹಿಡಿಯಬೇಕಿದ್ದ ಪುಟ್ಟ ಕೈಗಳು ಈಗ ಸಾಲತೀರಿಸಲೋಸುಗ ನನ್ನೊಂದಿಗೆ ಪಾತ್ರೆ ತೊಳೆಯುತ್ತವೆ. ನೋವಿನಲ್ಲಿ ಬೆಂದ ಗಟ್ಟಿಜೀವವಿದು, ಉರುಳನ್ನೂ ಜಾರಿಕೊಂಡು ಬದುಕಿಕೊಂಡಿದೆ. ಅದೆಷ್ಟು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆನೋ ಗೊತ್ತಿಲ್ಲ...’

ಪಾತ್ರ 3: ‘ಮನೆಯಲ್ಲಿ ಗೋಡೆಗಳು ಮಾತನಾಡುತ್ತವೆ, ತಲ್ಲಣಿಸಿದ ಜೀವಕ್ಕೊಂದಿಷ್ಟು ಸಾಂತ್ವನ ಹೇಳುತ್ತವೆ. ಅವು ಎಂದಿಗೂ ನನ್ನನ್ನು ಹೀಯಾಳಿಸಲಾರವು. ‘ದೇವದಾಸಿ’ ನೀನೆಂದು ಕರ್ಣಕಠೋರ ಅಕ್ಷರಗಳಲ್ಲಿ ಇರಿಯಲಾರವು. ಗೋಡೆಗಳ ನಡುವೆ ಬಂಧಿಯಾಗಿರುವುದೇ ನನಗೆ ಇಷ್ಟ. ಸಮಾಜದ ಕುಹಕಗಳ ಉತ್ತರದಾಯಿತ್ವಕ್ಕಿಂತ ಗೃಹಬಂಧನದ ಬದುಕೇ ನಿರುಮ್ಮಳ...’

ಇಂತಹ ಹಲವಾರು ನೈಜ ಬದುಕಿನ ದುರಂತ ಕತೆಗಳನ್ನು ಸಾಕ್ಷ್ಯಚಿತ್ರದಲ್ಲಿ ನಿರೂಪಿಸಿರುವ ಪೂರ್ಣಿಮಾ, ಸಮಾಜದ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

2008ರಲ್ಲಿ ದೇವದಾಸಿಯರ ಸಮೀಕ್ಷೆ ನಡೆದಿತ್ತಾದರೂ, ಆಗ 35 ವರ್ಷ ಮೇಲಿನವರನ್ನು ಮಾತ್ರ ಪಿಂಚಣಿಗೆ ಪರಿಗಣಿಸಲಾಗಿತ್ತು. ಕನಿಷ್ಠ ಸೌಲಭ್ಯ ವಂಚಿತ ಮಹಿಳೆಯರು ಈಗಲೂ ಲೆಕ್ಕಕ್ಕೆ ಸಿಗದಷ್ಟು ಇದ್ದಾರೆ. ಅವರ ಬಳಿ ರೇಷನ್ ಕಾರ್ಡ್ ಇಲ್ಲ, ಗೃಹಲಕ್ಷ್ಮಿ ಯೋಜನೆಯ ಭಾಗ್ಯವೂ ಸಿಗುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಆರ್ಥಿಕ ಸಾಮರ್ಥ್ಯವಿಲ್ಲ. ಸ್ತ್ರೀ ವಿಮೋಚನೆ, ಮಹಿಳಾ ಸಬಲೀಕರಣ ಎಂಬ ಎಲ್ಲ ಘೋಷಣೆ, ಭಾಷಣೆಗಳ ಮಧ್ಯೆ 21ನೇ ಶತಮಾನದಲ್ಲೂ ಅದೆಷ್ಟೋ ಸಹೋದರಿಯರು ಅಕ್ಷರಶಃ ಕತ್ತಲೆಯ ಕೂಪದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಹಾನುಭೂತಿ ಬೇಕಿಲ್ಲ, ಸಹಾಯಹಸ್ತ ಬೇಕು ಎನ್ನುತ್ತಾರೆ ಪೂರ್ಣಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.