ಅಲ್ಲಿ ಹಕ್ಕಿನ ಪ್ರಶ್ನೆ ಇರಲಿಲ್ಲ. ಇದ್ದದ್ದು ಬದುಕಿನ ಪ್ರಶ್ನೆ ಮಾತ್ರ. ಅರಣ್ಯ ಹಕ್ಕು ಕಾಯಿದೆ, ಆದಿವಾಸಿಗಳ ಹಕ್ಕು... ಇಂಥ ಯಾವ ಹಕ್ಕುಗಳ ಕುರಿತು ತಲೆಕೆಡಿಸಿಕೊಳ್ಳದ ಜಡೇ ಜಲ್ಲೆ ಮಾದಮ್ಮ ತನ್ನ ಪಾಡಿಗೆ ತಾನು ಕಾಡಲ್ಲಿ ಬದುಕಿದವರು. ತನಗೆ ಗೊತ್ತಿದ್ದ ಔಷಧಿ ನೀಡುತ್ತಾ ಅನೇಕರ ಆರೋಗ್ಯದ ಬದುಕಿಗೆ ಕಾರಣರಾದವರು. ಮುಖ್ಯವಾಗಿ ನೂರಾರು ಹೆರಿಗೆ ಮಾಡಿಸಿ ಅನೇಕರನ್ನು ಬದುಕಿಸಿದವರು.

‘ಈ ಹಲಸಿನ ಚಕ್ಕೆ ಇದ್ಯಲ್ಲ, ಇದು ಮಕ್ಕಳಾಗೋದಿಕ್ಕೆ ಕೊಡುವ ಔಷಧಿ’ ಎಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಚರಿಸುತ್ತ ಅನೇಕ ಔಷಧೀಯ ಸಸ್ಯಗಳನ್ನು ತೋರಿಸುತ್ತಿದ್ದ ಮಾದಮ್ಮ, ಕಾಡಿನಲ್ಲಿದ್ದ ಅತ್ಯುತ್ತಮ ಪಾರಂಪರಿಕ ವೈದ್ಯೆಯಾಗಿದ್ದರು. ಜೊತೆಗೆ, ಪಾರಂಪರಿಕ ವಿಧಾನದಲ್ಲಿ ಹೆರಿಗೆ ಮಾಡಿಸುವ ಸೂಲಗಿತ್ತಿಯಾಗಿ ಹೆಸರಾಗಿದ್ದರು.

ಅದು ದಟ್ಟ ಕಾಡು. ಕಾಡಿನ ಮಧ್ಯೆ ಅಲ್ಲಲ್ಲಿ ಪುಟ್ಟಪುಟ್ಟ ಪೋಡುಗಳು. ಅಲ್ಲಿ ವಾಸಿಸುವ ಆದಿವಾಸಿ ಜನಾಂಗ ಕಷ್ಟದ ಬದುಕಿನೊಂದಿಗೇ ನಾಟಿ ವೈದ್ಯ ಪದ್ಥತಿಯನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದಂಥವರು. ನಾಗರಿಕ ಪ್ರಪಂಚದಿಂದ ದೂರವಾಗಿ ಕಾಡಿನಲ್ಲೇ ವಾಸವಿರುವ ಕಾರಣಕ್ಕಾಗಿ ಯಾವುದೇ ಕಾಯಿಲೆಗೂ ಅವರದ್ದೇ ಔಷಧೋಪಚಾರಗಳನ್ನು ಕಂಡುಕೊಂಡಿದ್ದರು.

ಜ್ವರ, ಕೆಮ್ಮು, ಹಾವು ಕಡಿದು ನಂಜೇರಿದರೆ, ಯಾವುದೇ ಗಾಯವಾದರೆ, ಮುಟ್ಟಿನ ಸಮಸ್ಯೆಗೆ, ಬಸಿರು-ಬಾಣಂತನದ ತೊಂದರೆಗೆ ಹೀಗೆ ಯಾವುದೇ ಕಾಯಿಲೆಗೂ ಅಲ್ಲಿಯೇ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ ಕುಡಿದು ಬದುಕುತ್ತಿದ್ದರು ಅವರೆಲ್ಲ. ಅದು ಅಜ್ಜಿಯಿಂದ ಅಮ್ಮನಿಗೆ, ಅಮ್ಮನಿಂದ ಮಗಳಿಗೆ ಸಹಜವಾಗಿಯೇ ಹರಿದು ಬರುವ ವಿದ್ಯೆ. ಇಂಥ ಪಾರಂಪರಿಕ ವೈದ್ಯ ಪದ್ಧತಿಯ ವಾರಸುದಾರರಾಗಿದ್ದರು ಮಾದಮ್ಮ.

ಹಾಗೆ ನೋಡಿದರೆ, ಮಾದಮ್ಮ ಅವರನ್ನು ನಾವು ತಿಳಿಯುವುದಕ್ಕಿಂತಲೂ ಮುಂಚೆ ಅವರ ಅಮ್ಮ ಸಿದ್ದಮ್ಮ ಅವರ ಬಗ್ಗೆ ಅರಿಯಬೇಕಾಗುತ್ತದೆ. ಸೋಲಿಗರ ಪೋಡುಗಳಲ್ಲಿ ಹೆಚ್ಚು ಪ್ರಸಿದ್ಧರಾದ ಪಾರಂಪರಿಕ ವೈದ್ಯೆ ಸಿದ್ದಮ್ಮ.

ಸಿದ್ದಮ್ಮನವರ ಪಾರಂಪರಿಕ ಔಷಧೋಪಚಾರ ಹಾಗೂ ಹೆರಿಗೆ ಮಾಡಿಸುವ ವಿಧಾನ ಅಪಾರ ಮೆಚ್ಚುಗೆಗಳಿಸಿತ್ತು. ಆ ಕಾಲಕ್ಕೆ ಇಡೀ ಬಿಳಿಗಿರಿರಂಗನಬೆಟ್ಟ ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಸಿದ್ದಮ್ಮನೇ ದೊಡ್ಡ ವೈದ್ಯೆಯಾಗಿದ್ದರು. ಅವರು ಹೆರಿಗೆ ಮಾಡಿಸುವ ರೀತಿ ನೋಡಿ ಎಂಥವರಿಗೂ ವಿಶೇಷವೆನಿಸುತ್ತಿತ್ತು. ಅದನ್ನೇ ಮುಂದುವರಿಸಿಕೊಂಡು ಬಂದಿರುವವರು ಸಿದ್ದಮ್ಮ ಅವರ ಪುತ್ರಿ ಮಾದಮ್ಮ. ಮಾದಮ್ಮನನ್ನು ತುಂಬ ಚಿಕ್ಕವಯಸ್ಸಿನಲ್ಲಿಯೇ ತಮಿಳುನಾಡಿನ ಕಡೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಗಂಡ ಬೇಗ ತೀರಿ ಹೋಗಿದ್ದರಿಂದ ಮಕ್ಕಳನ್ನು ಕರೆದುಕೊಂಡು ಮತ್ತೆ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದು ವಾಸವಾಗಿದ್ದರು.

ಕೈ ಹಿಡಿದ ತಾಯಿ ಕೊಟ್ಟ ವಿದ್ಯೆ

ಗಂಡ ತೀರಿಕೊಂಡ ಹೊತ್ತಿಗೆ ಮಾದಮ್ಮನ ವಯಸ್ಸಿನ್ನೂ ಚಿಕ್ಕದು. ಆಗಲೇ ಮೂವರು ಮಕ್ಕಳ ತಾಯಿ. ಬದುಕು ಮುಂದೇನು ಎಂಬ ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರವೇ ಈ ವೈದ್ಯ ವೃತ್ತಿ.

‘ತಾಯಿ ಹೇಳಿಕೊಟ್ಟ ವಿದ್ಯೆಯಿತ್ತು. ಅಮ್ಮನೂ ಜೊತೆಯಲ್ಲಿದ್ದಳು. ಹಾಗಾಗಿ ಇಲ್ಲಿಯೇ ಬದುಕನ್ನು ದೂಡ ಹತ್ತಿದೆ’ ಎನ್ನುತ್ತಿದ್ದ ಮಾದಮ್ಮಗೆ ಅಮ್ಮ ಹೇಳಿಕೊಟ್ಟ ವಿದ್ಯೆಯೇ ಆಸ್ತಿಯಾಗಿತ್ತು. ಚಿಕ್ಕಂದಿನಿಂದಲೂ ಅಮ್ಮನನ್ನು ನೋಡುತ್ತ, ಅವಳ ಜೊತೆ ಹೆರಿಗೆಗೆ ಹೋಗುತ್ತ ಇದ್ದುದರಿಂದ ಆ ವಿದ್ಯೆ ಅನಾಯಾಸವಾಗಿ ಒಲಿದಿತ್ತು. ಅಮ್ಮನ ಜೊತೆಗೆ 7-8 ವರ್ಷಗಳಿರುವಾಗಲೇ ಹೆರಿಗೆ ಮಾಡಿಸಲು ಹೋಗುತ್ತಿದ್ದರು ಮಾದಮ್ಮ.

ಗಿಡಮೂಲಿಕೆಗಳಿಂದ ಔಷಧಿ ತಯಾರಿಸಲು ಮಗಳಿಗೆ ಹೇಳುತ್ತಿದ್ದರು ಸಿದ್ದಮ್ಮ. ಎಲೆಗಳನ್ನು ಕಾಡಿನಿಂದ ಕೊಯ್ದು ತರಲೂ ಹೇಳುತ್ತಿದ್ದರು. ಕಾಡಿನೊಳಗೆ ಹೋಗಿ ಔಷಧೀಯ ಗಿಡಗಳನ್ನು ತಂದು ಇಂತಿಂಥ ಕಾಯಿಲೆಗೆ ಇಂತಿಂಥ ಔಷಧಿ ತಯಾರಿಸಬಹುದು ಎಂಬುದು ಮಾದಮ್ಮ ಅವರಿಗೆ ಕರಗತವಾಗಿತ್ತು. ಹೆರಿಗೆ ಮಾಡಿಸುವ ವಿದ್ಯೆಯನ್ನೂ ಬಾಲ್ಯದಲ್ಲೇ ಕಲಿತಿದ್ದರು. ನಂತರ ಮದುವೆಯಾಗಿ, ಮಕ್ಕಳು ಹುಟ್ಟಿ, ಗಂಡನೂ ತೀರಿ ಹೋದ ಮೇಲೆ ಇದೇ ವಿದ್ಯೆಯನ್ನೇ ನಂಬಿ ಬದುಕಿದರು.

ಕೂತು ಹೆರಿಗೆ ಮಾಡಿಸುವ ಪದ್ಧತಿ

ಮಲಗಿಸಿ ಹೆರಿಗೆ ಮಾಡಿಸುವ ಪದ್ಧತಿ ಎಲ್ಲೆಡೆ ಜನಜನಿತ. ಆದರೆ, ಸೋಲಿಗರ ಸಮುದಾಯದಲ್ಲಿ ಕುಕ್ಕರಗಾಲಿನಲ್ಲಿ ಕೂರಿಸಿ ಹೆರಿಗೆ ಮಾಡಿಸುವಂಥ ವಿಶಿಷ್ಟ ಪದ್ಧತಿ ರೂಢಿಯಲ್ಲಿದೆ. ಇದು ವೈಜ್ಞಾನಿಕವಾಗಿಯೂ ಸರಿಯಾದದ್ದು ಎನ್ನಲಾಗುತ್ತದೆ.

‘ನಮ್ಮಲ್ಲಿ ಮಲಗಿಸಿಕೊಂಡು ಹೆರಿಗೆ ಮಾಡಿಸುವುದಿಲ್ಲ. ಕೂತು ಹೆರಿಗೆ ಮಾಡಿಸಿದರೆ ಮಗುವಿನ ತಲೆ ಕೆಳಕ್ಕೆ ಸುಲಭವಾಗಿ ಬರುತ್ತದೆ. ಆಗ ಹೆರಿಗೆ ಮಾಡಿಸುವುದು ಸುಲಭ. ನಿಧಾನಕ್ಕೆ ನೋವು ಮುಕ್ಕು ಎಂದು ಹೇಳುತ್ತಾ ಕೂರಿಸಿಕೊಂಡು ಮಂತ್ರಗಳನ್ನು ಪಠಿಸುತ್ತಾ ಇದ್ದರೆ ತನ್ನಿಂದ ತಾನೇ ಮಗು ಹೊರಗೆ ಬರುತ್ತದೆ. ಮಲಗಿ ಹೆರಿಗೆ ಮಾಡಿಸಿದರೆ ಗರ್ಭಿಣಿ ನೋವು ತಿನ್ನುವ ಸಮಯದಲ್ಲಿ ಮಗು ಮೇಲಕ್ಕೆ ಹೋಗುವ ಸಂಭವವಿರುತ್ತದೆ. ಅದಕ್ಕೇ ನಾವು ಅಮ್ಮ ಹೇಳಿಕೊಟ್ಟಂತೆ ಕೂರಿಸಿಕೊಂಡೇ ಹೆರಿಗೆ ಮಾಡಿಸುತ್ತೇವೆ’ ಎಂದು ವಿವರಿಸುತ್ತಿದ್ದರು ಮಾದಮ್ಮ.

ಮಾದೇಸ್ವರ ಕಾಯ್ತಾನೆ

ನಾನೊಮ್ಮೆ ಅವರನ್ನು ಸಂದರ್ಶಿಸಿದ್ದೆ. ಆಗ ಅವರು ಹೇಳಿದ್ದು ಹೀಗೆ; ‘ನಾನು 7-8 ವರ್ಷದವಳಿದ್ದಾಗಲೇ ಅಮ್ಮನ ಜೊತೆ ಹೋಗುತ್ತಿದ್ದೆ. ಅಮ್ಮ ಕೈಗೆ ಎಣ್ಣೆ ಹಾಕ್ಕೊಂಡು ಮಂತ್ರ ಹಾಕಿ ಗರ್ಭಿಣಿಯರ ಹೊಟ್ಟೆಗೆ ಉಜ್ಜುತ್ತಿದ್ದಳು. ಆಗ ಸಲೀಸಾಗಿ ಹೆರಿಗೆ ಆಗ್ಬುಡ್ತಾ ಇತ್ತು. ಅದನ್ನು ನೋಡ್ಕಂತಾ, ಅಮ್ಮಂಗೆ ಸಹಾಯನೂ ಮಾಡ್ಕಂತಾ ಇದ್ದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ನಾನು ಒಂದೆರಡು ಹೆರಿಗೆ ಕೂಡ ಮಾಡ್ಸಿದೀನಿ. ಹೆರಿಗೆ ನೋವಿನಿಂದ ಒದ್ದಾಡ್ತಾ ಇರೋವಾಗ ನಾನು ಮೊದಲೆಲ್ಲ ಅವರನ್ನು ಹಿಡ್ಕೋತಿದ್ದೆ. ಅವರಿಗೆ ದೇವರ ಮೇಲೆ ಭಾರ ಹಾಕು. ಮಾದೇಸ್ವರ ನಮ್ಮನ್ನು ಕಾಯ್ತಾನೆ, ಏನ್ ಭಯ ಬೀಳ್ಬೇಡ ಎಂದೆಲ್ಲ ಹೇಳ್ತಾ ಇರ್ತಿದ್ದೆ. ಅಮ್ಮನೂ ಹೇಳ್ತಾ ಇದ್ದಳು. ಹೀಗೆ ಹೇಳ್ತಾ ಇರೋವಾಗ್ಲೇ ಹೆರಿಗೆ ಆಗ್ಬಿಡ್ತಾ ಇತ್ತು’ ಎಂದಿದ್ದರು ಮಾದಮ್ಮ.

ಇಂಥ ಸಮಯದಲ್ಲೇ ಹೆರಿಗೆಯಾಗುತ್ತದೆಂಬುದನ್ನು ಕರಾರುವಾಕ್ಕಾಗಿ ಹೇಳಬಲ್ಲವರಾಗಿದ್ದರು. ‘ಹೆರಿಗೆ ನೋವು ಕಾಣಿಸ್ಕಂಡಿದೆ ಬಾ ಮಾದಮ್ಮ’ ಎಂದು ಜನ ಹೇಳಿಕಳಿಸ್ತಾ ಇದ್ರು. ಅಲ್ಲಿಗೆ ಹೋದಾಗ ಕೈಗೆ ಎಣ್ಣೆ ಹಾಕಿ, ಮಂತ್ರ ಹಾಕಿ ಹೊಟ್ಟೆಗೆ ಚೆನ್ನಾಗಿ ಉಜ್ಜಿ ನೋಡ್ತಿದ್ದೆ. ಎಣ್ಣೆ ದಪ್ಪಗಿದ್ದರೆ ಹೆರಿಗೆಗೆ ಇನ್ನೂ ಸಮಯ ಬಾಕಿ ಇದೆ ಎಂದೂ, ಎಣ್ಣೆ ತೆಳ್ಳಗಿದ್ದರೆ ಬೇಗ ಹೆರಿಗೆ ಆಗುತ್ತದೆ ಎಂದೂ ನಾನು ಕಂಡುಕೊಂಡಿದ್ದೆ’ ಎಂದು ವಿವರಿಸುತ್ತಿದ್ದರು.

ಹೆರಿಗೆಯಾದ ಮೇಲೆ ನಾವು ಬಾಣಂತಿಗೆ ಅವರು ನಂಜಿನ ಔಷಧಿ ಕೊಡುತ್ತಿದ್ದರು. ಅದನ್ನು ಕೊಟ್ಟ ತಕ್ಷಣ ಅದೆಂಥ ನಂಜು ಇದ್ದರೂ ಎಲ್ಲವೂ ಹೊರಟು ಹೋಗುತ್ತದೆ ಎನ್ನುವುದು ಸೋಲಿಗರ ಬೀಡಿನಲ್ಲಿ ನೆಲೆಯೂರಿದ್ದ ಗಟ್ಟಿ ವಿಶ್ವಾಸ.

‘ಹೆರಿಗೆ ಆಗಿ, ಮಗುವನ್ನು ಆ ಕಡೆ ಮಲಗ್ಸೋದು, ನಂಜಿನ ಔಷಧಿ ಕುಡಿಯೋದು. ಹಂಗೇ ಅವಳು ಮನೆ ಕೆಲ್ಸಕ್ಕೆ, ತೋಟದ ಕೆಲ್ಸಕ್ಕೆ ಹೋಗೋದು ಇಲ್ಲಿಯ ರಿವಾಜು. ಹಿಟ್ಟು ಬೀಸಿ ಮುದ್ದೆ ಮಾಡೋಕೆ ಹೋಗ್ಬೇಕು. ಇಲ್ಲಾಂದ್ರೆ ನಡೀಬೇಕಲ್ಲವ್ವ ನಮ್ಮ ಸಂಸಾರ’ ಎಂದು ಅವರು ಪ್ರಶ್ನಿಸುತ್ತಿದ್ದರು.

ಹೆರಿಗೆಗೂ ಪ್ರತ್ಯೇಕ ಕೋಣೆ ಎಂಬುದು ಇವರಲ್ಲಿಲ್ಲ. ಹತ್ತಿರವೇ ಗುಡಿಸಲು ಮಾಡಿ, ಅಲ್ಲಿಯೇ ಬೆಂಕಿ ಒಲೆ ಮಾಡುತ್ತಾರೆ. ಅಲ್ಲಿಯೇ ಹೆರಿಗೆ ಮಾಡಿಸುತ್ತಾರೆ. ಬಾಣಂತಿಯೂ ಅಲ್ಲಿಯೇ ಇರುತ್ತಾಳೆ. ಅದಕ್ಕೆ ಗುಳ್ಳು ಎನ್ನುತ್ತಾರೆ. ಪ್ರತಿ ಮನೆಗೂ ಗುಳ್ಳು ಅಂತ ಮಾಡ್ಕೋತಾರೆ. ಹುಲ್ಲಿನಿಂದ ರಚಿಸಿದ ಗುಳ್ಳುಗಳಿವು. ಈಗ ಹೆಂಚಿನ ಮನೆಗಳಾದ ಮೇಲೆ ಈ ರೀತಿಯ ಗುಳ್ಳುಗಳನ್ನು ನಿರ್ಮಿಸುವುದಿಲ್ಲ. ಈಗ ಮನೆಯಲ್ಲೇ ಹೆರಿಗೆ ಮಾಡಿಸುತ್ತಾರೆ.

ಮಗುವಿಗೆ ಕುಡುಗೋಲಿನಾಗೆ ಖಾರ ಹಾಕಿ, ಚೆನ್ನಾಗಿ ಕುದಿಸಿ ಆ ರಸವನ್ನು ಮಗುವಿಗೆ ಕೊಡುತ್ತಾರೆ. ಅದನ್ನು ಕುಡಿದ ಮೇಲೆ ಮಗುವಿಗೆ ಮುಂದೆ ಯಾವ ಕಾಯಿಲೆಯೂ ಬರುವುದಿಲ್ಲ ಎಂಬ ನಂಬಿಕೆ ಇದೆ. ಇದೆಲ್ಲ ಮಾದಮ್ಮನ ಔಷಧಿ. ಅದು ವೈಜ್ಞಾನಿಕವಾಗಿ ಎಷ್ಟು ಸರಿ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ, ಅದನ್ನೇ ಕುಡಿದು ಅವರೆಲ್ಲ ಆರೋಗ್ಯವಾಗಿ ಬದುಕಿದ್ದಾರೆಂಬುದೂ ಅಷ್ಟೇ ದಿಟ.

ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದ ಗಿರಿಜನ ವೈದ್ಯೆ, ಸೂಲಗಿತ್ತಿ ಜಲ್ಲೆಜಡೆ ಮಾದಮ್ಮನನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿವೆ. ಅನೇಕ ಸಂಘ– ಸಂಸ್ಥೆಗಳು ಸನ್ಮಾನಿಸಿವೆ.

ಇಷ್ಟಲ್ಲದೇ ಮಾದಮ್ಮ ಒಳ್ಳೆ ಹಾಡುಗಾರ್ತಿಯಾಗಿದ್ದರು. ಸೋಲಿಗರ ಜನಪದ ಹಾಡುಗಳನ್ನು ತುಂಬ ಚೆಂದವಾಗಿ ಹಾಡಬಲ್ಲವರಾಗಿದ್ದರು. ಹಾಡುತ್ತಾ ಹಾಡುತ್ತಾ ನೃತ್ಯವನ್ನೂ ಮಾಡುತ್ತಿದ್ದರು. ‘ಗೊರು ಗೊರುಕು ಗೊರುಕನ...’ ಎಂದು ಹಾಡಲು ಕುಳಿತರೆ ಪ್ರಪಂಚವನ್ನೇ ಮರೆತು ಬಿಡುವಷ್ಟು ತನ್ಮಯತೆ ಅವರಲ್ಲಿ ಸಿದ್ಧಿಸಿತ್ತು. ಆ ಹಾಡಿನಲ್ಲಿ ಕೂಡ ಕಾಡಿನ ವರ್ಣನೆಯೇ ತುಂಬಿರುತ್ತಿತ್ತು.

ನಾಟಿ ಔಷಧಿಗಳ ಕುರಿತು, ಅಲ್ಲಿನ ಕಾಡುಗಳಿಗೇ ಕರೆದುಕೊಂಡು ಹೋಗಿ ಇದು ಇಂತಿಂಥ ಕಾಯಿಲೆಗೆ ಔಸ್ದವಾಗ್ತದೆ ಎಂದು ಯಾವ್ಯಾವುದೋ ಎಲೆ ತೋರಿಸುತ್ತ, ಯಾವ್ಯಾವುದೋ ಮರ ತೋರಿಸುತ್ತ, ಅಷ್ಟೊಷ್ಟೊತ್ತಿಗೆ ಕಾಡಿನ ಹಾಡನ್ನು ಗುನುಗುತ್ತಿದ್ದ ಮಾದಮ್ಮ ಮರೆಯಾಗುತ್ತಿದ್ದಂತೆಯೇ ಒಂದಿಡೀ ಕಾಡಿನ ಸಂಸ್ಕೃತಿಯೇ ಮರೆಯಾಗಿದೆಯೇನೋ ಎಂದೆನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.