ಸುಮಾರು 15 ವರ್ಷಗಳ ಹಿಂದಿನ ಮಾತು. ಸಾಲು ಸಾಲು ಕೊಳವೆ ಬಾವಿಗಳು ವಿಫಲವಾದವು. ನಾಲ್ಕು ಕೊಳವೆಬಾವಿಯಿಂದ ದೊರೆಯುತ್ತಿದ್ದ ಒಂದೂವರೆ ಇಂಚಿನಷ್ಟು ನೀರನ್ನು ಹತ್ತು ಎಕರೆ ಭೂಮಿಗೆ ಹನಿ ನೀರಾವರಿಯಲ್ಲಿ ನೀಡುವುದೂ ದುಸ್ತರವಾಗಿತ್ತು.

ಆಗ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರಿನ ಗುರುಲಿಂಗಪ್ಪ ಅವರಿಗೆ ಹೊಳೆದದ್ದು ಶೂನ್ಯ ಕೃಷಿ. ಕಾರ್ಮಿಕರು ಹಾಗೂ ನೀರಿನ ಕೊರತೆಯ ಸಮಸ್ಯೆಗೆ ಪರಿಹಾರ ಇರುವುದೇ ನೈಸರ್ಗಿಕ ಕೃಷಿಯಲ್ಲಿ ಅನ್ನುವ ಅರಿವಾದದ್ದು ಅವರಿಗೆ ಆಗಲೇ. ಅಂದಿನ ನಿರ್ಧಾರದಿಂದಾಗಿ ಇಂದಿನ ಮಳೆ ಹಾಗೂ ವಿದ್ಯುತ್ ಅಭಾವದಲ್ಲೂ ನೀರಿನ ಸಮಸ್ಯೆ ಇವರನ್ನು ಬಾಧಿಸಿಲ್ಲ.

ಇವರ ಹತ್ತು ಎಕರೆಯ ತೋಟದಲ್ಲಿ ಅಡಿಕೆ, ತೆಂಗು ಹಾಗೂ ಬಾಳೆಗೆ ಪ್ರಥಮ ಸ್ಥಾನ. `ಪ್ರತಿಸಾರಿ ಉಳುಮೆಗೆ ಐವತ್ತು ಲೀಟರ್ ಡೀಸೆಲ್ ಖರ್ಚಾಗುತ್ತಿತ್ತು. ವರ್ಷಕ್ಕೆ ಮೂರು ಬಾರಿ ಉಳುಮೆ ಮಾಡ್ತಿದ್ದೆ. ಇನ್ನು ಬುಡ ಕುಕ್ಕಿಸಲು, ಗೊಬ್ಬರ ಗೋಡಿಗಾಗಿ ವಿಪರೀತ ಹಣದ ಖರ್ಚಿನೊಂದಿಗೆ ಕಾರ್ಮಿಕರ ಸಮಸ್ಯೆಯೂ ಹೆಚ್ಚಿತು. ಈಗ ಈ ಎಲ್ಲ ವೆಚ್ಚಗಳ ಉಳಿತಾಯವಾಗಿದೆ' ಎನ್ನುತ್ತಾರೆ ಗುರುಲಿಂಗಪ್ಪ. ವಯಸ್ಸು 73 ಆದರೂ ಕೃಷಿಯಲ್ಲಿ ಹೊಸ ಪ್ರಯೋಗಗಳತ್ತ ಹುಮ್ಮಸ್ಸು ಇವರಿಗೆ. ಇದಕ್ಕೆ ಮಗ ಲಿಂಗಣ್ಣನ ಸಹಕಾರ.

ಹಸಿರಿನಿಂದ ನಳನಳಿಸಿದ ತೋಟ
`ಪ್ರತಿ ಮರದಿಂದಲೂ ಅಂದಾಜು ನೂರೈವತ್ತು ಕೆ.ಜಿಯಷ್ಟು ತ್ಯಾಜ್ಯ ದೊರೆಯುತ್ತದೆಂದು ತಿಳಿದಾಗ ಅದರ ಸದ್ವಿನಿಯೋಗಕ್ಕೆ ಮೊದಲು ಆದ್ಯತೆ ನೀಡಿದೆ' ಎನ್ನುವ ಅವರು ಇದಕ್ಕಾಗಿ ಸ್ವತಃ ಚಾಪ್ ಕಟರ್ ತಯಾರಿಸಿದರು. ತೋಟದ ಯಾವುದೇ ಕಳೆಗಳನ್ನು ತೆಗೆಯದೆ ದ್ವಿದಳ ಮುಚ್ಚಿಗೆ ಬೆಳೆಗಳನ್ನು ಬೆಳೆದರು. ಇದರೊಂದಿಗೆ ಜೀವಾಮೃತವನ್ನೂ ನೀಡಲಾರಂಭಿಸಿದರು. ರಸಗೊಬ್ಬರದ ಬಳಕೆ ನಿಲ್ಲಿಸಿದ ಮೊದಲ ವರ್ಷ ಸ್ವಲ್ಪ ಹೆಚ್ಚಿನ ಪ್ರಮಾಣದ ಕೋಳಿಗೊಬ್ಬರ ನೀಡಿದರು. ಇಳುವರಿಯಲ್ಲಿ ಕುಸಿತ ಕಾಣದೆ ತೋಟ ಮೊದಲಿಗಿಂತಲೂ ಹಸಿರಾಯಿತಂತೆ.

ಆರಂಭದಲ್ಲಿ ಎರಡು ವರ್ಷವಷ್ಟೇ ಜೀವಾಮೃತವನ್ನು ನೀಡಿದ್ದಾರೆ. ನಂತರದಲ್ಲಿ ಕೊಟ್ಟಿಗೆ ಗೊಬ್ಬರದೊಂದಿಗೆ ಕೋಳಿಗೊಬ್ಬರವನ್ನು ನೀಡುತ್ತಿದ್ದಾರೆ. ತ್ಯಾಜ್ಯವನ್ನು ಕತ್ತರಿಸಿ ಹಾಕುವುದು ವ್ಯರ್ಥವೆಂದು ಶೂನ್ಯ ಕೃಷಿಯನ್ನು ಅಳವಡಿಸಿಕೊಂಡ ಐದು ವರ್ಷಗಳಲ್ಲಿ ಮನಗಂಡರು. ಅಲ್ಲಿಯವರೆಗೆ ಇದ್ದ ಹನಿ ನೀರಾವರಿ ಪದ್ಧತಿಯನ್ನು, ತುಂತುರು ನೀರಾವರಿಗೆ ಬದಲಾಯಿಸಿ ತೋಟದ ತ್ಯಾಜ್ಯ ಅಲ್ಲಿಯೇ ಕಳಿಯಲು ಬಿಟ್ಟರು.

ಈ ಸಮಯದಲ್ಲೇ ಕೆರೆಗಳು ಹೇಮಾವತಿ ನಾಲೆಯ ನೀರಿನಿಂದ ತುಂಬಿದ್ದರಿಂದ ಅಂತರ್ಜಲದ ಮಟ್ಟವೂ ಏರಿತು. ನಂತರದಲ್ಲಿ ಒಂದೇ ಕೊಳವೆಬಾವಿಯ ನೀರು ತೋಟಕ್ಕೆ ಸಾಲುತ್ತಿದ್ದರೂ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿಲ್ಲ. ವಿದ್ಯುತ್ ಸಮಸ್ಯೆಯಿಂದ ಜನರೇಟರನ್ನು ಅವಲಂಬಿಸಬೇಕಿತ್ತು. ಇದಕ್ಕೆ ಪರಿಹಾರ ಮಾರ್ಗವಾಗಿ ಕೊಳವೆಬಾವಿಯಿಂದ ನೀರನ್ನು ನೇರವಾಗಿ ತುಂತುರು ನೀರಾವರಿಗೆ ನೀಡದೆ ಒಂದು ತೊಟ್ಟಿಯಲ್ಲಿ ಸಂಗ್ರಹಿಸಿ ನಂತರ ನೀಡಲಾರಂಭಿಸಿದರು. ಐದು ವರ್ಷಗಳ ಹಿಂದಿನ ಈ ವ್ಯವಸ್ಥೆಯಿಂದಾಗಿ ತೋಟಕ್ಕೆ ಸಂತೃಪ್ತ ಪ್ರಮಾಣದ ನೀರನ್ನು ನೀಡಲು ಸಾಧ್ಯವಾಗಿದೆ.

ಉಪಬೆಳೆಗಳಿಂದಲೂ ಲಾಭ
ಉಪಬೆಳೆಗಳಾಗಿ ಅರಿಶಿನ, ಕೊಕೊ, ಮೆಣಸು ಬೆಳೆಯುತ್ತಿದ್ದಾರೆ. ಕೊಕೊ ಸಂಸ್ಕರಣೆ ಹೆಚ್ಚಿನ ಕಾರ್ಮಿಕರನ್ನು ಬೇಡುವಂತದ್ದು. ಇಲಿ ಹಾಗೂ ನವಿಲಿನ ಕಾಟದಿಂದಾಗಿ ಕೈಗೆ ಸಿಗುವ ಬೆಳೆಯೂ ಅಲ್ಪ. ಹಾಗಾಗಿ ಕೊಕೊವನ್ನು ಗೊಬ್ಬರಕ್ಕಾಗಿ ಬೆಳೆಸಿದರೆ, ಅರಿಶಿನವನ್ನು ಮರಗಳ ಆರೋಗ್ಯಕ್ಕಾಗಿ ಬೆಳೆಸಿದ್ದಾರೆ.

ಗುರುಲಿಂಗಪ್ಪ ಮರವೊಂದರಿಂದ ಸರಾಸರಿ ನೂರ ಇಪ್ಪತ್ತು ತೆಂಗಿನ ಇಳುವರಿ ಪಡೆಯುತ್ತಿದ್ದರು. ಆದರೆ ಎರಡು ವರ್ಷದ ಹಿಂದೆ ಈ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ಕಪ್ಪು ತಲೆ ಹುಳುವಿನ ರೋಗಕ್ಕೆ ಇವರ ತೋಟವೂ ತುತ್ತಾಯಿತು. ಇಳುವರಿ ಕುಂಠಿತಗೊಂಡಿದೆ. ಮರವೊಂದಕ್ಕೆ ಐದು ಕೆ.ಜಿಯಷ್ಟು ಬೇವಿನಹಿಂಡಿ ಹಾಕಿದ್ದಾರೆ. ತೋಟಗಾರಿಕಾ ಇಲಾಖೆಯವರು ರಾಸಾಯನಿಕ ನೀಡುವುದರಿಂದ ಇನ್ಯಾವುದೇ ಉಪಚಾರ ಇವರು ಮಾಡಿಲ್ಲ. `ಏನನ್ನೂ ಮಾಡದೆ ಪ್ರಕೃತಿಗೆ ಬಿಟ್ಟೆವು. ರಾಸಾಯನಿಕ ಸಿಂಪಡನೆ ಇಲ್ಲದ್ದರಿಂದ ಬೆಳಗಿನ ಜಾವ ಹಕ್ಕಿಗಳು ಹುಳು ತಿನ್ನುತ್ತಿವೆ' ಎನ್ನುತ್ತಾರೆ ಗುರುಲಿಂಗಪ್ಪ.

ವೆಲ್ಡಿಂಗ್‌ಮೆನ್ ಬಳಸಿ ಕಾಯಿ ಅಟ್ಟ ಹಾಗೂ ಕೊಟ್ಟಿಗೆಯನ್ನು ಸ್ವತಃ ನಿರ್ಮಿಸಿಕೊಂಡಿದ್ದಾರೆ. ಕೊಟ್ಟಿಗೆಯ ಛಾವಣಿಯ ತಗಡು ಅಡಿಕೆ ಫಸಲಿನಲ್ಲಿ, ಅಡಿಕೆ ಒಣಗಿಸಲು ಬಳಕೆಯಾಗುತ್ತವೆ. ಒಮ್ಮೆ ತೆಳುವಾಗಿ ಬೇಯಿಸಿದ ಅಡಿಕೆ ಉಂಡೆ ಹರಡಿದರೆ ಒಣಗಲು ನಾಲ್ಕು ದಿನಗಳು ಸಾಕು. ಮಳೆ ಬಂದರೆ ಪ್ಲಾಸ್ಟಿಕ್ ಹಾಳೆ ಮುಚ್ಚುವುದಷ್ಟೇ ಕೆಲಸ. ಕಾರ್ಮಿಕರ ಸಮಸ್ಯೆಯಿಂದಾಗಿ ಅಡಿಕೆ ಗೊನೆ ಬಡಿಯಲು, ಸುಲಿಯಲು, ಹೀಗೆ ಸಾಧ್ಯವಿರುವಲ್ಲೆಲ್ಲಾ ಯಂತ್ರಗಳನ್ನು ಬಳಸುತ್ತಿದ್ದಾರೆ.

ವರ್ಷಕ್ಕೆರಡು ಬಾರಿ ಕಳೆಕೊಚ್ಚು ಯಂತ್ರದಿಂದ ತೋಟದ ಕಳೆನಿಯಂತ್ರಣ ಮಾಡಬೇಕಿತ್ತು ಗುರುಲಿಂಗಪ್ಪ. ತೋಟದಲ್ಲಿ ಹಸು, ಎಮ್ಮೆ ಮೇಯಿಸಿದರೆ ಕಳೆನಿಯಂತ್ರಣವಾಗುತ್ತಿತ್ತಾದರೂ ಮಧ್ಯಮ ಮುಚ್ಚಿಗೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗುತ್ತಿತ್ತು. ರಾಸುಗಳ ನಿರ್ವಹಣೆಯ ವೆಚ್ಚ ಏರುತ್ತಿರುವುದರಿಂದ ಕುರಿ ಸಾಕಣೆಯತ್ತ ಚಿಂತಿಸಿದರು. `ಹುಲ್ಲು ನಿಯಂತ್ರಣವಾಗುತ್ತೆ, ಗೊಬ್ಬರವೂ ದೊರೆಯುತ್ತೆ ಹಾಗೂ ಸಾಕಷ್ಟು ಆದಾಯ ಇದೆ. ನಿರ್ವಹಣಾ ವೆಚ್ಚ ತೀರಾ ಕಡಿಮೆ' ಎನ್ನುವ ಲಿಂಗಣ್ಣ ಕುರಿಸಾಕಣೆಯನ್ನು ತಿಂಗಳಿಂದ ಪ್ರಾರಂಭಿಸಿದ್ದಾರೆ. ಸದ್ಯ ಇವರ ಬಳಿ ಮೂವತ್ತು ನಾಟಿ ತಳಿಯ ಕುರಿಮರಿಗಳಿವೆ.

ಅಡುಗೆಗೆ ತಮ್ಮದೇ ಕೊಬ್ಬರಿಯ ಎಣ್ಣೆ ಬಳಸುವ ಈ ಕುಟುಂಬ, ಕುಡಿಯಲು ಹಾಗೂ ಅಡುಗೆಗೆ ಬಳಸುವುದು ಮಳೆ ನೀರನ್ನು. ಮನೆ ಬಳಕೆಗೆ ಅಲ್ಪ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಿದ್ದ ಇವರು ಈಗ ತರಕಾರಿಯಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗಬೇಕೆಂದು ಪೂರ್ಣಪ್ರಮಾಣದಲ್ಲಿ ಬೆಳೆಯುವತ್ತ ಆಸಕ್ತರಾಗಿದ್ದಾರೆ. ಗುರುಲಿಂಗಪ್ಪ ಸಾಧ್ಯವಾದಲ್ಲೆಲ್ಲಾ ಶ್ರಮ ಹಗುರಾಗಿಸಿ ಕೃಷಿ ವೆಚ್ಚ ಮತ್ತು ನೀರಿನ ಅಗತ್ಯ ಕಡಿತಗೊಳಿಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಗುರುಲಿಂಗಪ್ಪರ ಸಂಪರ್ಕ ಸಂಖ್ಯೆ 99002 73231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.