ಅರ್ಧ ಶತಮಾನದ ಹಿಂದಿನ ಪ್ರಸಂಗ: ಕಿರುಗುಟ್ಟುವ ಕಬ್ಬಿಣದ ಗೇಟನ್ನು ತಳ್ಳಿ ತುಸು ವಿಶಾಲವೆನ್ನಬಹುದಾದ ಅಂಗಳದಲ್ಲಿ ಎಡಗಡೆಗಿದ್ದ ಮೆಟ್ಟಿಲುಗಳನ್ನು ಹತ್ತಿ ಮೊದಲ ಮಜಲೆಯ ತೆರೆದ ಬಾಗಿಲಿನ ಒಂದು ಕೊಠಡಿಯ ಮುಂದೆ ನಿಂತಾಗ ನನಗೆ ಕಾಣಿಸಿದ್ದು ಲುಂಗಿ ಸುತ್ತಿಕೊಂಡು ಬರೀ ಬನಿಯನ್ನಿನಲ್ಲಿದ್ದ, ನೆಲದ ಮೇಲೆ ಕೂತು ಪತ್ರಿಕೆಯೊಂದನ್ನು ಓದುತ್ತಿದ್ದ ಒಬ್ಬ ವ್ಯಕ್ತಿ. ತುಸು ಉದ್ದವೆನ್ನಿಸುವಂತಿದ್ದರೂ ಚಚ್ಚೌಕನಾದ, ಕಣ್ಣು ಮೂಗು ಕೊರೆದಿಟ್ಟಂತಹ ಆಕರ್ಷಕ ಮುಖದ, ಕೂದಲಿಲ್ಲದೆ ಫಳಫಳನೆ ಹೊಳೆಯುವ ಮುಂದಲೆಯ ಆ ವ್ಯಕ್ತಿ ಕಾವ್ಯಕ್ಕೆ ಮೀಸಲಾದ ‘ಕವಿತಾ’ ಎಂಬ ಸಣ್ಣ ಪತ್ರಿಕೆ ಹೊರತರುತ್ತಿದ್ದ. ಅವನ ಹೆಸರು ಬಾ.ಕಿ.ನ. ಅರ್ಥಾತ್ ಬಾಲಕೃಷ್ಣ ಕಿ.ನ. ಅಂದು ನಾನಲ್ಲಿಗೆ ಹೋದದ್ದು ನನ್ನದೊಂದು ಕವನವನ್ನು ಕೊಡುವುದಕ್ಕಾಗಿ.

ಅವನ ರೂಮಿದ್ದ ಆ ಕಟ್ಟಡಕ್ಕೆ ಒಂದು ಹೆಸರಿತ್ತೋ ಇಲ್ಲವೋ ನನಗೆ ನೆನಪಿಲ್ಲ. ಅದು ಇದ್ದದ್ದು ಬೆಂಗಳೂರಿನ ಬಸವನಗುಡಿಯಲ್ಲಿ; ಈಗಿಲ್ಲದ ‘ಪ್ರಜಾಮತ’ ಪತ್ರಿಕಾ ಕಚೇರಿಯ ಪಕ್ಕದಲ್ಲಿ. ಆಗ ಅವನು ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟಿನಲ್ಲಿ ಮುದ್ರಣ ಕಲೆಯನ್ನು ಕಲಿಯುತ್ತಿದ್ದ. ಅಲ್ಲಿಂದ ಡಿಪ್ಲೊಮಾ ಪಡೆದ ಮೇಲೆ ಸಾಗರಕ್ಕೆ ಹೋಗಿ ಕೆ.ವಿ.ಸುಬ್ಬಣ್ಣ, ಪ್ರಭಾಕರ ಮೊದಲಾದವರು ಸ್ಥಾಪಿಸಿದ್ದ ಮುದ್ರಣಾಲಯವನ್ನು ಸೇರಿಕೊಂಡ. ಅಡಿಗರ ‘ಸಾಕ್ಷಿ’ ತ್ರೈಮಾಸಿಕವನ್ನಲ್ಲದೆ ಆ ಕಾಲದ ಅಕ್ಷರ ಪ್ರಕಾಶನದ ಅನೇಕ ಪುಸ್ತಕಗಳನ್ನು ಮುದ್ರಿಸಿದವನು ಅವನೇ. ಕನ್ನಡದಲ್ಲಿ ಅದುವರೆಗೆ ಪುಸ್ತಕಗಳು ಪ್ರಕಟವಾಗುತಿದ್ದದ್ದು ಕ್ರೌನ್ 1/8 ಆಕಾರದಲ್ಲಿ. ಅದನ್ನು ಇಂದು ಸರ್ವೇಸಾಧಾರಣವಾಗಿರುವ ಡೆಮಿ 1/8 ಆಕಾರಕ್ಕೆ ಬದಲಾಯಿಸಿದ ಕೀರ್ತಿ ಅಕ್ಷರ ಪ್ರಕಾಶನಕ್ಕೆ ಹೇಗೋ ಹಾಗೆ ಬಾ.ಕಿ.ನ.ನಿಗೂ ಸಲ್ಲಬೇಕು.

ಕೆಲವು ವರ್ಷಗಳಾದ ಮೇಲೆ ಅವನು ಮತ್ತೆ ಬೆಂಗಳೂರಿಗೇ ಬಂದ; ಪುತ್ತೂರಿನಿಂದ ಶಿವರಾಮ ಕಾರಂತರ ಮುದ್ರಣ ಯಂತ್ರವನ್ನು ಕೊಂಡು ತಂದ. ಅವನು ಮೊದಲು ವಾಸಮಾಡುತ್ತಿದ್ದ ರೂಮಿಗೆ ಅಷ್ಟೇನೂ ದೂರದಲ್ಲಿಲ್ಲದ, ಗಾಂಧಿ ಬಜಾರ್ ಬಳಿಯ ಬ್ಯೂಗಲ್ ರಾಕ್ ರಸ್ತೆಯಲ್ಲಿ, ಒಂದು ಶುಭ ಮುಹೂರ್ತದಲ್ಲಿ ‘ಲಿಪಿ ಮುದ್ರಣ’ ತಲೆಯೆತ್ತಿತು. ಮೊದಮೊದಲು ಆ ಪ್ರೆಸ್ಸಿಗೆ ಕೆಲಸ ಕೊಡುತ್ತಿದ್ದವರು ನಾಟಕದವರು, ಹೊಸ ಅಲೆಯ ಸಿನಿಮಾದವರು, ಸುಗಮ ಸಂಗೀತಗಾರರು, ಚಿತ್ರಗಳನ್ನು ರಚಿಸುತ್ತಿದ್ದ ಕಲಾವಿದರು. ಯಾಕೆಂದರೆ ಬಾ.ಕಿ.ನ.ನಿಗೆ ಬಹುಮಟ್ಟಿಗೆ ಪರಿಚಿತರಾಗಿದ್ದವರು ಅವರೇ.

ಆ ಕಾಲದಲ್ಲಿ ಗೋಪಾಲಕೃಷ್ಣ ಅಡಿಗರು ಹೆಚ್ಚು ಕಡಿಮೆ ಪ್ರತಿ ದಿನವೂ ಸಂಜೆ ಗಾಂಧಿ ಬಜಾರಿಗೆ ಬಂದವರು ಲಿಪಿ ಮುದ್ರಣಕ್ಕೂ ಬರುತ್ತಿದ್ದರು. ಅಮೆರಿಕದಿಂದ ಹಿಂತಿರುಗಿ ಬಂದು ನಿರುದ್ಯೋಗಿಯಾಗಿದ್ದ ಸುಮತೀಂದ್ರ ನಾಡಿಗರು ಗಾಂಧಿ ಬಜಾರಿನಲ್ಲೇ ಒಂದು ಪುಸ್ತಕದಂಗಡಿ ತೆರೆದಿದ್ದರು. ಅಡಿಗರನ್ನು ನೋಡುವುದಕ್ಕೋ ಲಿಪಿ ಮುದ್ರಣಕ್ಕೋ ಬರುತ್ತಿದ್ದ ಲೇಖಕರನ್ನು ಸೇರಿಸಿದರೆ ಅದೊಂದು ಬಹುದೊಡ್ಡ ಪಟ್ಟಿಯಾದೀತು. ಆ ಕಾಲದಲ್ಲಿ ನಾನೊಬ್ಬ ನಿರುದ್ಯೋಗಿ. ಬಾ.ಕಿ.ನ. ತನ್ನ ನೀಲಿ ಬಣ್ಣದ ಮೋಟರ್ ಬೈಕ್ ಹತ್ತಿಕೊಂಡು ಎಲ್ಲಿಗೋ ಹೊರಟನೆಂದರೆ ನಾನು ಅವನ ಪ್ರ‍್ರೆಸ್ಸಿನಲ್ಲೇ ಕಾಲ ಕಳೆಯುತ್ತಿದ್ದೆ.

ಲಂಕೇಶರು ತಮ್ಮ ಪತ್ರಿಕೆಯನ್ನು ಪ್ರಾರಂಭಿಸುವುದಕ್ಕೂ ಮುಂಚೆ ಒಂದು ವರ್ಷ ಒಂದು ದೀಪಾವಳಿ ವಿಶೇಷಾಂಕವನ್ನು ಹೊರತಂದರಷ್ಟೆ. ಅದರ ಹೆಸರು ‘ಪಾಂಚಾಲಿ’. ಆ ಸುದ್ದಿ ಕೇಳಿಸಿಕೊಂಡ ನಾಡಿಗರು ‘ನಾವೂ ಒಂದು ವಿಶೇಷಾಂಕ ತರೋಣ’ ಎಂದು ಬಾ.ಕಿ.ನ.ನನ್ನು ಪುಸಲಾಯಿಸಿದರು. ಅದರ ಫಲವಾಗಿ ಮೂಡಿಬಂದದ್ದು ‘ಕ್ಷಿತಿಜ’ ಎಂಬ ದೀಪಾವಳಿ ಸಂಚಿಕೆ. ಅದರಲ್ಲಿ ನನ್ನ ಕೆಲವು ಕಾರ್ಟೂನುಗಳೂ, ಕ್ಯಾರಿಕೇಚರುಗಳೂ ಇದ್ದವು. ಲಾಭಕ್ಕಿಂತ ನಷ್ಟವನ್ನೇ ಅನುಭವಿಸಿದ ಆ ವಿಶೇಷಾಂಕದಿಂದ ಬಾ.ಕಿ.ನ.ನೇನೂ ಎದೆಗುಂದಲಿಲ್ಲವೆನ್ನುವುದಕ್ಕೆ ಅವನು ಆಮೇಲೆ ಪ್ರಾರಂಭಿಸಿದ ‘ಲಿಪಿ ಪ್ರಕಾಶನ’ವೇ ಸಾಕ್ಷಿ. ಮೊದಲ ಕೃತಿಯಾಗಿ ಅವನು ಪ್ರಕಟಿಸಿದ್ದು ರಾಮಚಂದ್ರ ಶರ್ಮರ ‘ಹೇಸರಗತ್ತೆ’ ಎಂಬ ಕವನ ಸಂಕಲನ. ಪ್ರಸಿದ್ಧ ಕಲಾವಿದ ಎಸ್. ಜಿ. ವಾಸುದೇವ್ ಮುಖಪುಟ ರಚಿಸಿದ್ದ ಆ ಸಂಕಲನ ಇಂದಿಗೂ ತನ್ನ ಸೊಗಸಿನಿಂದ ಮನಸೂರೆಗೊಳ್ಳುವಂತಿದೆ. ನಂತರ ನಾಡಿಗರ ‘ಕಾರ್ಕೋಟಕ’, ನಿಸಾರ್ ಅಹಮದರ ‘ನಿತ್ಯೋತ್ಸವ’, ವೈಯೆನ್ಕೆಯವರ ‘ಜೋಕ್ ಫಾಲ್ಸ್’, ಎಂ.ಎಸ್.ಕೆ. ಪ್ರಭು ಅವರ ‘ಮುಖಾಬಿಲೆ’, ಕೆ.ಎಸ್.ನ. ಅವರ ‘ಮಲ್ಲಿಗೆಯ ಮಾಲೆ’, ಪು.ತಿ.ನ. ಅವರ ಸಮಗ್ರ ಕಾವ್ಯ’ ಅವನು ಪ್ರಕಟಿಸಿದ ಕೆಲವು ಮುಖ್ಯ ಕೃತಿಗಳು. 1976ರಲ್ಲಿ ಗೋಪಾಲಕೃಷ್ಣ ಅಡಿಗರು ತಮ್ಮ ಸಂಪೂರ್ಣ ಕವನಗಳನ್ನು ಪ್ರಕಟಿಸಬೇಕೆಂದು ನಿರ್ಧರಿಸಿದಾಗ ಬಾ.ಕಿ.ನ. ತೋರಿಸಿದ ಉತ್ಸಾಹವನ್ನು ಮರೆಯಲಾರೆ. ಅದಕ್ಕೆಂದೇ ಹೊಸದಾಗಿ ಅಚ್ಚಿನ ಮೊಳೆಗಳನ್ನು ಕೊಂಡು ತಂದ. ಕವನಗಳು ಸ್ಫುಟವಾಗಿ ಕಾಣಿಸಬೇಕೆಂದು ದಪ್ಪ ಕಾಗದವನ್ನು ಆಯ್ಕೆ ಮಾಡಿದ. ಅಡಿಗರು ತಮ್ಮ ಫೋಟೋ ಬೇಡವೇ ಬೇಡವೆಂದಾಗ ‘ಫೋಟೋಲಿತ್’ ತಂತ್ರವನ್ನು ಬಳಸಿಕೊಂಡು ಅವರು ಎದ್ದು ಕಾಣದಂಥ ಮುಖಪುಟವನ್ನು ವಿನ್ಯಾಸಗೊಳಿಸಿದ. ಹೀಗೆ ಅವನ ಮುತುವರ್ಜಿಯಿಂದ ಸಿದ್ಧವಾದದ್ದು ‘ಸಮಗ್ರ ಕಾವ್ಯ’. ಈ ಸಮಗ್ರ ಎಂಬ ಹೆಸರು ಅಂದಿನಿಂದ ಇಂದಿನವರೆಗೂ ನಮ್ಮ ಅನೇಕ ಲೇಖಕ ಲೇಖಕಿಯರ ಒಟ್ಟು ಕತೆ, ಕವನಗಳಿಗೆ ಸೂಕ್ತ ಶೀರ್ಷಿಕೆಯಾಗಿದೆ ಎಂಬುದನ್ನು ಗಮನಿಸಬೇಕು.

ನನ್ನ ಮೊದಲ ಕಥಾ ಸಂಕಲನ ‘ಇತಿಹಾಸ’ವನ್ನು ಪ್ರಕಟಿಸಿದವನು ಬಾ.ಕಿ.ನ. ಅದಕ್ಕೆ ನನ್ನ ಪರವಾಗಿ ಶಾಂತಿನಾಥ ದೇಸಾಯಿಯವರನ್ನು ವಿನಂತಿಸಿಕೊಂಡು ಅವರಿಂದ ಮುನ್ನುಡಿ ಬರೆಸಿದ. ನನ್ನ ‘ಆತ್ಮಚರಿತ್ರೆಯ ಕೊನೆಯ ಪುಟ’ ಕವನ ಸಂಕಲನವನ್ನು ಹೊರತಂದವನೂ ಅವನೇ. ಎರಡಕ್ಕೂ ಅವನದೇ ಮುಖಪುಟ ವಿನ್ಯಾಸ.

ಎಂಬತ್ತರ ದಶಕದಲ್ಲಿ ವೈಯೆನ್ಕೆಯವರ ಪ್ರೋತ್ಸಾಹದಿಂದ ಅವನು ಪ್ರಾರಂಭಿಸಿದ ಪತ್ರಿಕೆ ‘ಗಾಂಧಿ ಬಜಾರ್’ ಮೊದಲು ಟ್ಯಾಬ್ಲಾಯ್ಡ್ ಆಕಾರದಲ್ಲಿತ್ತು. ಕೆಲವು ಸಂಚಿಕೆಗಳ ನಂತರ ಹಣಕಾಸಿನ ಮುಗ್ಗಟ್ಟಿನಿಂದಾಗಿ ನಿಂತುಹೋಯಿತು. ಕಾಲಾನಂತರ ಅವನೇ ಅದನ್ನು ಮಾಸ ಪತ್ರಿಕೆಯಾಗಿ ಪರಿವರ್ತಿಸಿ ಸುಮಾರು 25 ವರ್ಷ ನಡೆಸಿದ. ಆಮೇಲೂ, ಹಣ ಮಾಡುವ ಆಸೆಯಿಲ್ಲದ, ನಷ್ಟವಾಯಿತೆಂದು ಕಂಗೆಡದ, ನಿರಾಶೆಯನ್ನು ಹತ್ತಿರ ಸೇರಿಸದ ಅವನು ಮಾತ್ರ ಅಂಥ ಬೇರೆ ಏನನ್ನು ಮಾಡಬೇಕೆಂದು ಯೋಚಿಸಿರಲಿಕ್ಕೆ ಸಾಕು.

‘ಚಂಡೆಮದ್ದಳೆ’ಯ ಸಾಲುಗಳು, ಎನ್. ನರಸಿಂಹಯ್ಯನವರ ಮೊದಮೊದಲ ಪತ್ತೇದಾರಿ ಕಾದಂಬರಿಗಳು, ಮಾಸ್ತಿಯವರ ಸಜ್ಜನಿಕೆ, ಶಿವರಾಮ ಕಾರಂತರ ಸಾಹಸಗಳು, ವೈಯೆನ್ಕೆಯವರ ಶ್ಲೇಷಾಪ್ರಾವೀಣ್ಯ, ಕೆ.ಕೆ. ಹೆಬ್ಬಾರ್, ಎಸ್.ಜಿ. ವಾಸುದೇವ್ ಅವರ ಪೇಂಟಿಂಗುಗಳು, ಮೂರ್ತಿಯವರ ವ್ಯಂಗ್ಯಚಿತ್ರ, ಸತ್ಯಜಿತ್ ರಾಯ್, ಸಂಗ್ಯಾ ಬಾಳ್ಯಾ, ಬಾಳಪ್ಪ ಹುಕ್ಕೇರಿ... ಇವರೆಲ್ಲ, ಇವೆಲ್ಲ ಅವನ ಮಾತುಗಳಲ್ಲಿ ಜೀವ ತಳೆಯುತ್ತಿದ್ದವು.

ಸುಮಾರು ಮೂರು ವರ್ಷಗಳ ಹಿಂದೆ ಬಾ.ಕಿ.ನ.ನ ನೆನಪಿನ ಶಕ್ತಿ ಕುಂದಿತು. ಫೋನಿನಿಂದ ದೂರವಿರತೊಡಗಿದವನಿಗೆ ಜನರ ಸಂಪರ್ಕವೂ ಇಲ್ಲದಾಯಿತು. ಬಹುದೊಡ್ಡ ಲೇಖಕರ ಜೊತೆ ಒಡನಾಡಿದ್ದವನು, ಒಳ್ಳೆಯ ಸಾಹಿತ್ಯ ಕೃತಿ ಪ್ರಕಟವಾದರೆ, ಅದು ತನ್ನದೇ ಕೃತಿಯೇನೋ ಎನ್ನುವ ಹಾಗೆ ಓದಿ ಸಂತೋಷಪಡುತ್ತಿದ್ದವನು, ಓದಿದ ಮೇಲೆ ಬರೆದವರು ಅನಾಮಿಕರಾಗಿದ್ದರೂ, ‘ನೋಡಯ್ಯ, ಎಷ್ಟು ಚೆನ್ನಾಗಿ ಬರೆದಿದ್ದಾರೆ’ ಎಂದು ಸ್ನೇಹಿತರ ಮುಂದೆ ಕೊಂಡಾಡುತ್ತಿದ್ದವನು ಸ್ವತಃ ಸ್ಮೃತಿ ಕಳೆದುಕೊಂಡ. ಮೊನ್ನೆ ಅವನು ತೀರಿಕೊಳ್ಳುವವರೆಗೂ ಸಾಹಿತ್ಯ, ಸಂಸ್ಕೃತಿ ಲೋಕದವರು ಅವನಿಗೆ ಸಂಬಂಧಿಸಿದಂತೆ ವಿಸ್ಮೃತಿಗೆ ಸರಿದುಬಿಟ್ಟದೊಂದು ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.