ದಶಕಗಳ ಹಿಂದೆ ದೊಡ್ಡ ಮನೆ ಕಟ್ಟಿಸಿದ ಹಿರಿಜೀವಗಳಿಗೆ ಈಗ ಬೇಕಿರುವುದು ಮನ ಮುದಗೊಳಿಸುವ ಹೃದಯವೈಶಾಲ್ಯ. ಸೌಕರ್ಯ ಎಲ್ಲಿ ಸಲೀಸೋ ಅಲ್ಲಿಯೇ ಸುರಕ್ಷೆ. ಹೀಗಾಗಿಯೇ ದೊಡ್ಡ ಮನೆಯಿಂದ ಬೆಚ್ಚಗಿನ ಚಿಕ್ಕ ಅಪಾರ್ಟ್‌ಮೆಂಟ್‌ಗೆ ‘ಡೌನ್‌ಸೈಜಿಂಗ್’ ಮಾಡತೊಡಗಿದ್ದಾರೆ ಸಂಜೆ ಬದುಕಿನ ಸ್ವಾಭಿಮಾನಿಗಳು.

ದೊಡ್ಡದಾದ ಚೌಕಿ ಮನೆ. ಅದರೊಳಗೆ ವಿಶಾಲವಾದ ಪ್ರಾಂಗಣದಲ್ಲಿ ಆರಾಮ ಚೇರಿನಲ್ಲಿ ಕೂತು ವೃತ್ತಪತ್ರಿಕೆ ಓದುತ್ತಿರುವ ಮನೆಯ ಹಿರಿಯ. ಅದೇ ಹಳೆಯ ಗಾಂಭೀರ್ಯ ಮುಖದ ಮೇಲಿದ್ದರೂ ದೂರದಲ್ಲಿ ಆಡುತ್ತಿರುವ ಮೊಮ್ಮಕ್ಕಳನ್ನು ಕನ್ನಡಕದ ಅಂಚಿನಿಂದಲೇ ನೋಡುತ್ತಾ ಸುಖಿಸುತ್ತಿದ್ದಾರೆ. ಅನತಿ ದೂರದಲ್ಲಿ ಕೂತಿರುವ ಹಿರಿಯ ಮಹಿಳೆ, ಮನೆಗೆ ಬಂದ ಸಂಬಂಧಿಕರ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಅಡುಗೆ ಕೋಣೆಯಲ್ಲಿರುವ ಸೊಸೆ ಚಹಾ ಮಾಡುತ್ತಿದ್ದಾರೆ. ಕಚೇರಿಗೆ ತಡವಾಗಿದೆ ಎಂದು ಗಡಿಬಿಡಿ ಮಾಡುತ್ತಲೇ ಕಡತ ಹುಡುಕುತ್ತ ಅತ್ತಿಂದಿತ್ತ, ಇತ್ತಿಂದತ್ತ ಮಗ ಓಡಾಡುತ್ತಿದ್ದಾನೆ. ಶಾಲೆಗೆ ಹೊರಡಲು ಅವರ ದೊಡ್ಡ ಮಗ ಸಜ್ಜಾಗಿದ್ದಾನೆ. ಅಣ್ಣನನ್ನು ಕಳುಹಿಸಲು ತಾನೂ ಅಣಿಯಾಗಿರುವ ಪುಟ್ಟ ತಂಗಿಯ ಸಂಭ್ರಮ. ಭಾರತೀಯ ಕುಟುಂಬ ಎಂದರೆ ಹೀಗೆ ಎನ್ನುವ ಪರಿಕಲ್ಪನೆ ಈಗಲೂ ಬಹುತೇಕರ ಮನದಲ್ಲಿ ಉಳಿದಿದೆ.

ಕಾಲ ಬದಲಾದಂತೆ ಈ ಚಿತ್ರಣಗಳೂ ಬದಲಾಗಿವೆ. 40 ವರ್ಷಗಳ ಹಿಂದೆ ಹಳ್ಳಿಯೊಂದರಲ್ಲಿ ಕಷ್ಟಪಟ್ಟು ಓದಿದ ವ್ಯಕ್ತಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡರು. ಇದೀಗ ಅವರ ಮಕ್ಕಳು ತಮ್ಮ ಬದುಕು ಹುಡುಕುತ್ತಾ ಮತ್ತೊಂದು ಮಹಾನಗರದಲ್ಲಿ ನೆಲೆಸಿದ್ದಾರೆ. ವಯಸ್ಸಿನಲ್ಲಿರುವಾಗ ಹುಮ್ಮಸ್ಸಿನಿಂದ ಕಟ್ಟಿಸಿದ ಕನಸಿನ ಮನೆಯೇ ಈಗ ಹೊರೆ ಎನ್ನಿಸತೊಡಗಿದೆ. ವರ್ಷಕ್ಕೊಮ್ಮೆ ಅಥವಾ ಯಾವುದೋ ಒಂದೆರೆಡು ಹಬ್ಬಗಳಿಗೆಂದು ಬಂದು ಹೋಗುವ ಮಕ್ಕಳಿಗಾಗಿ ಕಾದು ಕೂರುವ ಹಿರಿಯರಿಗೆ ಸದಾಕಾಲ ಅಷ್ಟು ದೊಡ್ಡ ಮನೆಯನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ.

ಅಕ್ಕಪಕ್ಕದಲ್ಲಿದ್ದವರು ಮನೆಯನ್ನು ಮಾರಾಟ ಮಾಡಿದ್ದಾರೆ. ಆ ಜಾಗದಲ್ಲಿ ದೊಡ್ಡ ಕಟ್ಟಡಗಳು ತಲೆಎತ್ತಿವೆ. ಅಲ್ಲಿ ಇಲ್ಲಿ ವೃದ್ಧ ದಂಪತಿಯ ಕೊಲೆ, ನಗನಾಣ್ಯ ಲೂಟಿ ಎಂಬ ಸುದ್ದಿಗಳು ಬೇರೆ. ಇವೆಲ್ಲದರಿಂದ ಮನೆಯಲ್ಲೇ ಇರುವ ಹಿರಿಯರ ಆತಂಕ ಹೆಚ್ಚಾಗಿದೆ.

‘ಹೆಲ್ಪ್ ಏಜ್ ಇಂಡಿಯಾ’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು 2014ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಐಟಿ ನಗರಗಳಲ್ಲಿ ಒಂಟಿಯಾಗಿರುವ ಹಿರಿಯರ (ಒಬ್ಬೊಂಟಿಯಾಗಿ ಅಥವಾ ಸಂಗಾತಿಯೊಂದಿಗೆ) ಸಂಖ್ಯೆ
ಶೇ 15ರಷ್ಟು ಎಂದು ಹೇಳಲಾಗಿತ್ತು. ಒಂಬತ್ತು ವರ್ಷಗಳ ಬಳಿಕ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ನಂಬಿಕಸ್ಥ ಮನೆಗೆಲಸದವರು ಸಿಗುವುದು ಕಷ್ಟ. ಅವರ ಖರ್ಚು ನೋಡಿಕೊಳ್ಳುವುದು ಇಳಿವಯಸ್ಸಿನವರಿಗೆ ದುಬಾರಿಯೂ ಆಗಿದೆ.

ಬೇಕೆನ್ನುವವರಲ್ಲಿ ಹಲವು ಹಿನ್ನೆಲೆಯವರು

ವೇಗದ ಯುಗದಲ್ಲಿರುವ ಇಂದಿನ ಯುವಜನತೆಗೆ ಹಿರಿಯರ ಕಡೆಗೆ ಲಕ್ಷ್ಯ ಕೊಡುವ ವ್ಯವಧಾನ ಕಡಿಮೆಯೇ. ಹೀಗಾಗಿ ಘನತೆಯ ಬದುಕು ಸಾಗಿಸಲು ಹಿರಿಯರಿಗೆ ನೆರವಾಗುವ ಉದ್ದೇಶದಿಂದ ವಿದೇಶದಲ್ಲಿ ದಶಕಗಳ ಹಿಂದೆಯೇ ಇದ್ದ ‘ಡೌನ್‌ಸೈಜಿಂಗ್’ ಪರಿಕಲ್ಪನೆ ಈಗ ನಮ್ಮಲ್ಲೂ ನಿಧಾನಕ್ಕೆ ಕಾಲುಚಾಚಿಕೊಳ್ಳುತ್ತಿದೆ. ಬೆಂಗಳೂರಿನ ಮಲ್ಲೇಶ್ವರ, ಜಯನಗರ, ವಿಜಯನಗರ ಹೀಗೆ ಹಳೇ ಬಡಾವಣೆಗಳಲ್ಲಿ 4,000 ಅಥವಾ 2,400 ಚದರಡಿ ಜಾಗದಲ್ಲಿ ಮನೆ ಹೊಂದಿದ್ದವರು, ಈಗ ಅದನ್ನು ಮಾರಿಯೋ ಅಥವಾ ಭೋಗ್ಯಕ್ಕೆ ನೀಡಿಯೋ, 650ರಿಂದ 800 ಚದರಡಿಯ ಚಿಕ್ಕದಾದ ಹಾಗೂ ಚೊಕ್ಕದಾದ ಸಮುದಾಯ ಸಮುಚ್ಚಯಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇವರಿಗಾಗಿಯೇ ಪ್ರತಿಷ್ಠಿತ ಬಿಲ್ಡರ್‌ಗಳು ‘ಸೀನಿಯರ್ ಲಿವಿಂಗ್’ ನಿರ್ಮಿಸುತ್ತಿದ್ದಾರೆ. ಇದನ್ನು ಹಿರಿಯರ ಆಶ್ರಯ ತಾಣ ಎಂದಾದರೂ ಕರೆಯಬಹುದು ಅಥವಾ ಇಳಿ ವಯಸ್ಸಿನಲ್ಲಿರುವವರಿಗೆ ಹಿತವೆನಿಸುವ ಹೊಸ ವಾತಾವರಣ ಎಂದೂ ಕರೆಯಬಹುದು.

‘ವಿದೇಶಗಳಲ್ಲಿ ನೆಲೆಸಿರುವ ಮಕ್ಕಳ ಪಾಲಕರು, ಕೇವಲ ಹೆಣ್ಣುಮಕ್ಕಳನ್ನು ಹೊಂದಿರುವ ಅನೇಕರು, ಮಕ್ಕಳ ಮದುವೆ ನಂತರ ಸ್ವತಂತ್ರವಾಗಿ ಇರಲು ಬಯಸುವವರು, ಮಕ್ಕಳೊಂದಿಗೆ ಹೊಂದಾಣಿಕೆ ಆಗದವರು, ಬಾಳ ಸಂಗಾತಿಯನ್ನು ಕಳೆದುಕೊಂಡು ಮಕ್ಕಳೊಂದಿಗೂ ಬದುಕಲು ಇಷ್ಟವಿಲ್ಲದವರು... ಹೀಗೆ ಡೌನ್‌ಸೈಜಿಂಗ್ ಬಯಸಿ ಸೀನಿಯರ್ ಲಿವಿಂಗ್‌ಗೆ ತೆರಳುವವರಲ್ಲಿ ಹಲವು ರೀತಿಯ ಹಿನ್ನೆಲೆ ಹೊಂದಿರುವವರಿದ್ದಾರೆ’ ಎನ್ನುತ್ತಾರೆ ‘ಮನಸ್ವಂ ಸೀನಿಯರ್ ಲಿವಿಂಗ್’ನ ಕುಶಲ್ ರಮೇಶ್.

ಪುರುಷರಿಗೆ ತಮ್ಮ ವೃತ್ತಿಯಿಂದ 60ಕ್ಕೆ ಬಿಡುಗಡೆ ಸಿಗುತ್ತದೆ. ಆದರೆ ಮಹಿಳೆಯರಿಗೆ ವಯಸ್ಸು 80 ಆದರೂ ಮನೆಗೆಲಸದಿಂದ ಬಿಡುಗಡೆ ಸಿಗದು. ಸೀನಿಯರ್ ಲಿವಿಂಗ್‌ನಲ್ಲಿ ಇಬ್ಬರೂ ಆರಾಮವಾಗಿರಬಹುದು. ಮನೆಗೆಲಸ, ಊಟೋಪಚಾರ, ತಿರುಗಾಟ, ವೈದ್ಯಕೀಯ ಆರೈಕೆ, ಪ್ರವಾಸ, ಭದ್ರತೆ ಹೀಗೆ ಎಲ್ಲವೂ ಇಲ್ಲಿ ಸಿಗುತ್ತವೆ.

ಇಷ್ಟೆಲ್ಲ ಸೌಕರ್ಯ ಉಂಟು

‘ಜಿಗಣಿ ಬಳಿ ಒಂದು ಎಕರೆಯಲ್ಲಿ 110 ಮನೆಗಳನ್ನು ನಿರ್ಮಿಸಿದ್ದೆವು. ಅದೇ ನಮ್ಮ ಮೊದಲ ಯೋಜನೆ. ಬಹಳಷ್ಟು ಜನ ಅಲ್ಲಿ ನೆಲೆಸಿದ್ದಾರೆ. ಗೋದ್ರೆಜ್ ರಾಯಲ್ ವುಡ್ಸ್‌ನಲ್ಲಿ ಇದೇ ಯೋಜನೆ ಪರಿಚಯಿಸಲಾಗುತ್ತಿದೆ. ಇಲ್ಲಿ 1,600ಕ್ಕೂ ಹೆಚ್ಚು ಮನೆಗಳಿವೆ. ಆ ಪೈಕಿ ಸುಮಾರು 200ರಷ್ಟನ್ನು ಹಿರಿಯರಿಗೆ ಮೀಸಲಿಟ್ಟಿದ್ದೇವೆ. ಕಿರಿಯರೊಂದಿಗೆ ಹಿರಿಯರು ಬೆರೆತು ಬದುಕು ಇನ್ನಷ್ಟು ಹಸಿರಾಗಿರಬೇಕು ಎಂಬುದು ನಮ್ಮ ಉದ್ದೇಶ. ಎಲ್ಲದರಲ್ಲೂ ದಿನದ 24 ಗಂಟೆಗಳ ಕಾಲ ಶುಶ್ರೂಷಕಿಯರು ಇರುತ್ತಾರೆ. ಆಂಬುಲೆನ್ಸ್ ಕೂಡ ಆವರಣದಲ್ಲೇ ಇರುತ್ತದೆ. ಔಷಧಾಲಯವಿರುತ್ತದೆ. ಅಗತ್ಯ ಬಿದ್ದರೆ ವೈದ್ಯರೂ ತಕ್ಷಣವೇ ಭೇಟಿ ನೀಡುವ ವ್ಯವಸ್ಥೆಗಳಿವೆ’ ಎಂದು ಇಲ್ಲಿನ ವಾತಾವರಣವನ್ನು ಅವರು ಪರಿಚಯ ಮಾಡಿಕೊಟ್ಟರು.

ಬೆಳಿಗ್ಗೆ ಯೋಗ, ಸಂಜೆ ಭಜನೆ, ಕ್ರಿಯಾಶೀಲರಾಗಿರಲು ಒಂದಷ್ಟು ಆಟ, ಹರಟೆ, ಪ್ರವಾಸ ಈ ಎಲ್ಲವೂ ಸೀನಿಯರ್ ಲಿವಿಂಗ್‌ನಲ್ಲಿವೆ. ಅಂಚೆ ಕಚೇರಿ, ಬ್ಯಾಂಕ್, ಅಂಗಡಿ, ದೇವಾಲಯ, ಏರ್‌ಪೋರ್ಟ್ ಹೀಗೆ ನಿತ್ಯ ಹಲವೆಡೆಗೆ ಓಡಾಡುವವರಿಗೆ ಉಚಿತವಾಗಿ ವಾಹನ ವ್ಯವಸ್ಥೆ ಇರುತ್ತದೆ. ತಿಂಗಳಿಗೊಮ್ಮೆ ಸಮೀಪದ ಊರುಗಳಿಗೆ ಕಿರುಪ್ರವಾಸ, ವರ್ಷಕ್ಕೊಂದು ಹೊರ ರಾಜ್ಯ ಅಥವಾ ಹೊರದೇಶಗಳಿಗೆ ಪ್ರವಾಸಗಳನ್ನೂ ಇಂಥ ಕೇಂದ್ರಗಳು ಆಯೋಜಿಸುತ್ತವೆ.

ಬೆಂಗಳೂರಿನ ಹೊರವಲಯಗಳಲ್ಲಿ ಇಂಥ ಹಿರಿಯರ ಕೇಂದ್ರಗಳ ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದೆ. 620 ಚದರಡಿಯಲ್ಲಿ ಹಾಲ್, ಬೆಡ್‌ರೂಂ, ಅಡುಗೆ ಕೋಣೆ ಇರುತ್ತದೆ. ಖರೀದಿಗಾದರೆ ಇದಕ್ಕೆ ₹35 ಲಕ್ಷದಿಂದ ₹60ಲಕ್ಷದವರೆಗೂ ಬೆಲೆ ಇದೆ. ಈ ದರ ಅಲ್ಲಿ ಸಿಗುವ ಸೌಕರ್ಯಗಳನ್ನು ಅವಲಂಬಿಸಿರುತ್ತದೆ. ಇಂಥ ಮನೆಗಳು ಬಾಡಿಗೆಗೂ ಲಭ್ಯ. ಎಲ್ಲಾ ಸೌಕರ್ಯಗಳನ್ನೂ ಪಡೆಯಲು ಮಾಸಿಕ ₹50 ಸಾವಿರವಾದರೂ ಬೇಕು ಎನ್ನುವುದು ಈ ಕ್ಷೇತ್ರದಲ್ಲಿರುವವರ ಮಾತು.

ಇಂಥ ಸೀನಿಯರ್ ಲಿವಿಂಗ್ ಆಯ್ದುಕೊಂಡವರು ದಾವಣಗೆರೆ ಮೂಲದವರು ಹಿರಿಯ ದಂಪತಿ ರಾಜಾರಾಮ್ ಹಾಗೂ ಲತಾ (ಹೆಸರು ಬದಲಿಸಲಾಗಿದೆ). ಇತ್ತೀಚೆಗೆ ಲತಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಇಬ್ಬರು ಗಂಡುಮಕ್ಕಳು ಬಂದು, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ ಸ್ವತಂತ್ರ ಬದುಕು ನಡೆಸಬೇಕು ಎಂದು ಬಯಸಿದ ಈ ಹಿರಿಯರು, ಸೀನಿಯರ್ ಲಿವಿಂಗ್ ಆಯ್ಕೆ ಮಾಡಿಕೊಂಡರು. ‘ಅಲ್ಲಿದ್ದ ಮನೆ ಮಾರಿ, ಬಂದ ಹಣದಲ್ಲಿ ಇದನ್ನು ಖರೀದಿಸಿದ್ದೇವೆ. ಉಳಿದದ್ದನ್ನು ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದೇವೆ. ಅಲ್ಲಿ ಮಕ್ಕಳೂ ಅವರ ಜೀವನ ನಡೆಸುತ್ತಿದ್ದಾರೆ. ಇಲ್ಲಿ ನಮಗೂ ಸಮಯ ಕಳೆಯುತ್ತಿದೆ. ಆಗಾಗ ಅವರು ಇಲ್ಲಿಗೆ, ನಾವು ಅಲ್ಲಿಗೆ ಹೋಗಿ ಬರುತ್ತಿರುತ್ತೇವೆ’ ಎಂದು ದಂಪತಿ ಖುಷಿ ಹಂಚಿಕೊಂಡರು.

ಅಗತ್ಯಕ್ಕೆ ತಕ್ಕಂತೆ ವಿಂಗಡಣೆ

ಇಂಥ ಸಮುಚ್ಚಯಗಳಲ್ಲಿ ವಾಸಿಸುವವರ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯಕ್ಕೆ ತಕ್ಕಂತೆ ಅಪಾರ್ಟ್‌ಮೆಂಟ್‌ಗಳನ್ನು ವಿಂಗಡಿಸಿರುತ್ತಾರೆ.

ಸ್ವತಂತ್ರವಾಗಿ ಬದುಕು ನಡೆಸಬಲ್ಲ ಹಿರಿಯರ ವಿಭಾಗದಲ್ಲಿ ಸಹಾಯಕರ ಅಗತ್ಯ ಇರುವುದಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಲ್ಪ ದಿನಗಳ ವಿಶ್ರಾಂತಿ ಅಗತ್ಯ ಇರುವವರು ನೆರವನ್ನು ಪಡೆಯಬಹುದು. ಇಲ್ಲಿ ಆಗಾಗ ಶುಶ್ರೂಷಕರು ಬಂದು ಆರೈಕೆ ಮಾಡುತ್ತಾರೆ. ನಿರಂತರವಾಗಿ ವೈದ್ಯಕೀಯ ನೆರವು ಅಗತ್ಯ ಇರುವವರಿಗೆ ದಿನದ ಬಹುಪಾಲು ಶುಶ್ರೂಷಕರು, ಸಹಾಯಕರು ಇದ್ದೇ ಇರುತ್ತಾರೆ. ವೈದ್ಯರಿಂದ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಕೊನೆಯ ವಿಭಾಗಕ್ಕೆ ಒಂದು ಇಡೀ ಯೋಜನೆಯ ಶೇ 10ರಷ್ಟು ಮಾತ್ರ ಮೀಸಲಿರುತ್ತದೆ.

ಕೆಲವೊಮ್ಮೆ ದೈಹಿಕವಾಗಿ ಸಮರ್ಥರಾಗಿದ್ದರೂ, ಮರೆಗುಳಿತನ ಅಥವಾ ಗೀಳು ರೋಗದ ಸಮಸ್ಯೆಯಿಂದ ಕೆಲವರು ಬಳಲುತ್ತಿರುತ್ತಾರೆ. ಇಂಥವರನ್ನು ಈ ಮೊದಲು ನಿಮ್ಹಾನ್ಸ್‌ಗೆ ದಾಖಲಿಸಲಾಗುತ್ತಿತ್ತು. ಆದರೆ ಈಗ ಇವರಿಗಾಗಿಯೂ ‘ವಿಲಾಸಿ ಸೀನಿಯರ್ ಹೋಂಗಳು’ ತಲೆಎತ್ತಿವೆ.

ಹುಟ್ಟು ಹೇಗಾದರೂ ಇರಲಿ, ಆದರೆ ಜೀವನದ ಕೊನೆಯ ಹಂತದವರೆಗೂ ಬದುಕು ಘನತೆಯಿಂದಿರಬೇಕು ಎಂದೇ ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕೆ ಇಂತಹ ವಸತಿ ಸಮುಚ್ಚಯಗಳು ಆಶಾದೀಪಗಳಂತಿವೆ.

ನಿರ್ದಿಷ್ಟ ಆದಾಯ ಅಗತ್ಯ

ವೃದ್ಧಾಶ್ರಮಗಳು ಈ ಮೊದಲೇ ಇದ್ದವು. ಆದರೆ ಅದಕ್ಕಿಂತ ಭಿನ್ನವಾದ ‘ಸೀನಿಯರ್ ಲಿವಿಂಗ್’ ಅನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಗರಿಗರ ಸಂಖ್ಯೆ ಬೆಳೆಯುತ್ತಲಿದೆ. ಇದಕ್ಕೆ ಪ್ರತಿ ತಿಂಗಳೂ ನಿರ್ದಿಷ್ಟ ಆದಾಯ ಅಗತ್ಯ. ಹಾಗಿದ್ದಲ್ಲಿ ಮಧ್ಯಮ ವರ್ಗದ ಬದುಕಿನಿಂದ ಹಿಡಿದು ವಿಲಾಸಿ ಬದುಕು ನಡೆಸುವವರೆಗೆ ಸಕಲ ಸೌಕರ್ಯಗಳನ್ನೂ ನೀಡುವ ಬಹಳಷ್ಟು ತಾಣಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸೃಷ್ಟಿಯಾಗಿವೆ.

ಅತುಲ್ಯಾ, ಪ್ರಬುದ್ಧಾಲಯ, ಪ್ರೈಮಸ್ ಹೀಗೆ ಬೆಂಗಳೂರಿನಲ್ಲಿ ಹಲವು ಬಗೆಯ ಸೀನಿಯರ್ ಆರೈಕೆ ಕೇಂದ್ರಗಳಿವೆ. ಇದರ ಮುಂದುವರಿದ ಭಾಗವಾಗಿ, ಉತ್ತರ ಭಾರತದ ದೆಹಲಿ, ರಾಜಸ್ಥಾನ, ಗುಜರಾತ್‌ನ ಹಲವು ಹಿರಿಯರು, ಬೇಸಿಗೆಯನ್ನು ಬೆಂಗಳೂರಿನಲ್ಲಿ ಕಳೆಯುವ ಸಲುವಾಗಿ ಇಲ್ಲಿನ ಸೀನಿಯರ್ ಹೋಂಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆಯನ್ನು ಇಲ್ಲಿ ಕಳೆದು, ನಂತರ ಮರಳಿ ತಾವು ಇರುವಲ್ಲಿಗೆ ಹೋಗುತ್ತಾರೆ. ಇಲ್ಲಿನ ಹವೆ ಹಿಡಿಸಿದ ಕೆಲವರು, ಇಲ್ಲಿಯೇ ಕಾಯಂ ನೆಲೆಸಿರುವ ಉದಾಹರಣೆಗಳೂ ಇವೆ.

‘ಡೌನ್‌ಸೈಜಿಂಗ್’ ಬಯಸುವವರು ಇಲ್ಲಿ ಕೇಳಿ...

*ಹೋಗುವ ಮನೆ ಹೇಗಿರಬೇಕು, ವಸ್ತುಗಳ ಶೇಖರಣೆಗೆ ವ್ಯವಸ್ಥೆ, ಮಾಲೀಕತ್ವ ಇತ್ಯಾದಿ ಕುರಿತು ಜೊತೆಗೆ ನಿಂತು ನಿರ್ವಹಿಸುವ ನಂಬಿಕಸ್ತ ಆರ್ಗನೈಸರ್ ಒಬ್ಬರನ್ನು ಹೊಂದುವುದು ಸೂಕ್ತ

*ಹೊಸ ಗೂಡು ಸೇರುವ ಮೊದಲು ಉಯಿಲು ಪತ್ರ, ವೈದ್ಯಕೀಯ ದಾಖಲೆಗಳು, ವಿಮಾ ಪಾಲಿಸಿ, ನಿವೃತ್ತಿ ನಂತರದ ಯೋಜನೆಗಳು, ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಸಮರ್ಪಕವಾಗಿ ಜೋಡಿಸಿಟ್ಟುಕೊಳ್ಳಬೇಕು. ಹೊಸ ಸ್ಥಳದಲ್ಲಿ ಅವುಗಳು ಸುರಕ್ಷಿತವಾಗಿರುವಂತೆ ಮತ್ತು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳುವ ವ್ಯವಸ್ಥೆ ಇರಬೇಕು.

*ಪಾಲಕರನ್ನು ‘ಡೌನ್‌ಸೈಜಿಂಗ್’ಗೆ ಕಳುಹಿಸುವ ಮೊದಲು ಹಾಗೂ ನಂತರ ಅವರೊಂದಿಗೆ ಉತ್ತಮ ಸಮಯ ಕಳೆಯಲು ಮಕ್ಕಳು ಆಗಾಗ ಬಿಡುವು ಮಾಡಿಕೊಳ್ಳುವುದು ಉತ್ತಮ

*ಭವಿಷ್ಯದ ಹಿರಿಯರು ಈಗಲೇ ಇಂಥದ್ದೊಂದು ಯೋಜನೆ ಹೊಂದುವುದೂ ಮುಖ್ಯ. ಆ ನಂತರದಲ್ಲಿ ಭಾವನಾತ್ಮಕ ಸವಾಲುಗಳು ಎದುರಾಗುವ ಮೊದಲೇ ಮಾನಸಿಕವಾಗಿ ಸಿದ್ಧರಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.