ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ದುಡಿಯುತ್ತಿದ್ದ ಬಂಗಾಳದ ಈ ಸಾಹಿತಿಯನ್ನು ಸರ್ಕಾರ ಮೊನ್ನೆಯಷ್ಟೇ ಗ್ರಂಥಾಲಯಕ್ಕೆ ವರ್ಗಾಯಿಸಿದೆ. ಹೀಗಾಗಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ನೊಂದ ಪ್ರತೀ ವ್ಯಕ್ತಿಗೂ ಅವರ ಬದುಕು ಪ್ರೇರಣೆದಾಯಕ...

ಕೊರೊನಾ ಕಾರಣದಿಂದ ದಿಢೀರನೆ ಲಾಕ್ಡೌನ್ ಘೋಷಣೆಯಾದಾಗ, ದಿಕ್ಕುಗಾಣದೆ ನಿಂತನಿಲುವಿನಲ್ಲೇ ಗಂಟುಮೂಟೆ ಕಟ್ಟಿಕೊಂಡು ಹೊರಟುನಿಂತ ಅಪ್ಪ– ಅಮ್ಮನ ಬಗಲಿಗೆ ಆತು ಸಾಗಿದ ಮಗುವೊಂದರ ಮನಸ್ಸಿನಲ್ಲಿ ಏನೆಲ್ಲಾ ಭಾವನೆಗಳು ಮೂಡಿರಬಹುದು? ಭರವಸೆಯಿಲ್ಲದ ಬದುಕನ್ನು ಅರಸುತ್ತಾ ಸಾಗಿದ ಆ ಮಹಾವಲಸೆಯು ಗಮ್ಯ ತಲುಪಿತೇ ಅಥವಾ ಅರೆದಾರಿಯಲ್ಲಿ ಬದುಕಿನ ಪಯಣವನ್ನೇ ಮುಗಿಸಿತೇ? ಗುರಿ ತಲುಪಿದರೂ ಬಂದ ಭಾಗ್ಯವಾದರೂ ಏನು? ದೇಶದ ಸಂವೇದನಾಶೀಲರನ್ನು ಇಂದಿಗೂ ಕಾಡುತ್ತಿರುವ ಈ ಎಲ್ಲ ಪ್ರಶ್ನೆಗಳಿಗೆ ಸಜೀವ ಉತ್ತರದ ಪ್ರಾತಿನಿಧಿಕ ರೂಪದಂತಿದ್ದಾರೆ ಪಶ್ಚಿಮ ಬಂಗಾಳದ ಪ್ರಸಿದ್ಧ ಲೇಖಕ ಮನೋರಂಜನ್ ಬ್ಯಾಪಾರಿ!

ಇಂದಿನ ವಲಸಿಗರಿಗಾದರೋ ಆತುಕೊಳ್ಳಲು ಹುಟ್ಟೂರಿನ ನಂಟಾದರೂ ಕೈಬೀಸಿ ಕರೆಯುತ್ತಿತ್ತು. ಆದರೆ, ದೇಶ ವಿಭಜನೆ ನಂತರದ ವರ್ಷಗಳಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಹತ್ತುರಿದ ಕೋಮುದಳ್ಳುರಿಯಲ್ಲಿ, ಜೀವದುಳಿವಿಗಾಗಿ ಶುರುವಾದ ಆ ನಾಗಾಲೋಟಕ್ಕೆ ಗೊತ್ತು ಗುರಿಯೇ ಇರಲಿಲ್ಲ. ಉಟ್ಟಬಟ್ಟೆಯಲ್ಲಿಯೇ ದಿಕ್ಕಾಪಾಲಾಗಿ ಭಾರತದತ್ತ ಓಡಿ ಬಂದ ಲಕ್ಷಾಂತರ ಮಂದಿಯಲ್ಲಿ ಮನೋರಂಜನ್ ಅವರ ಹೆತ್ತವರೂ ಸೇರಿದ್ದರು. ಅವರ ಬಗಲಿಗೆ ಆತುಕೊಂಡು ಪಶ್ಚಿಮ ಬಂಗಾಳಕ್ಕೆ ಬಂದಿಳಿದ ಮಕ್ಕಳಲ್ಲಿ ಮನೋರಂಜನ್ ಮತ್ತು ಅವರ ಸಹೋದರಿಯೂ ಇದ್ದರು.

ಸಿಕ್ಕ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಸ್ಥಿತಿಯಲ್ಲೇನೂ ಇರದೆ, ಆಹಾರ ಕೊರತೆ, ನಿರುದ್ಯೋಗದ ಬಿಸಿಯಲ್ಲಿ ಅದಾಗಲೇ ನರಳುತ್ತಿದ್ದ ರಾಜ್ಯವೊಂದು, ತನ್ನ ತುತ್ತಿನ ಚೀಲಕ್ಕೆ ಕೈಚಾಚಿದ ಪರದೇಸಿಗರನ್ನು ಹೇಗೆ ನಡೆಸಿಕೊಳ್ಳಬಹುದು? ಅಂತಹುದೇ ಆತಿಥ್ಯ ಈ ಕುಟುಂಬಕ್ಕೂ ದಕ್ಕಿದ್ದು. ಬಂಕುರಾ ಜಿಲ್ಲೆಯ ಶಿರೋಮಣಿಪುರದಲ್ಲಿ ಇಡುಕಿರಿದಿದ್ದ ಆ ನಿರಾಶ್ರಿತರ ಶಿಬಿರದಲ್ಲಿ, ತುತ್ತು ಅನ್ನಕ್ಕೂ ಪರದಾಡುವಾಗ ಮನೋರಂಜನ್ ಅವರಿಗೆ ಭವಿಷ್ಯದ ಬಗ್ಗೆ ಕನಸು ಕಾಣುವಷ್ಟೂ ತ್ರಾಣವಿರಲಿಲ್ಲ. ಇನ್ನು ಅಕ್ಷರದ ನಂಟೆಲ್ಲಿಯದು? ಆದರೆ ಇಂದು ಬಂಗಾಳ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮನೋರಂಜನ್ ಒಬ್ಬ ಸೆಲೆಬ್ರಿಟಿ ಲೇಖಕ. ಅಷ್ಟೇ ಅಲ್ಲ, ಅತ್ಯಂತ ತಳಸ್ತರದಲ್ಲಿ ಗುರುತಿಸಿಕೊಂಡಿರುವ, ಈಗಲೂ ಎಷ್ಟೋ ಮಂದಿ ನಿರಕ್ಷರಕುಕ್ಷಿಗಳೇ ಆಗಿರುವ ತಮ್ಮ ‘ನಾಮಶೂದ್ರ’ ಸಮುದಾಯದ ಅಕ್ಷರ ರಾಯಭಾರಿ ಸಹ. ಇಂತಹ ಪವಾಡ ಸಾಧ್ಯವಾಗಿದ್ದಾದರೂ ಹೇಗೆ?

ಒಂದು ಡಜನ್ ಕಾದಂಬರಿಗಳು, ನೂರಾರು ಸಣ್ಣ ಕಥೆಗಳು, ಹತ್ತಾರು ಪ್ರಬಂಧಗಳ ಒಂದೊಂದು ಅಕ್ಷರದಲ್ಲೂ ಮನೋರಂಜನ್ ಅವರ ಬದುಕಿನ ಹೆಜ್ಜೆ ಗುರುತಿದೆ. ಸವರ್ಣೀಯರ ತಿರಸ್ಕಾರದ ನೋಟ, ಹಣದ ಥೈಲಿಯ ಅಟ್ಟಹಾಸ, ವಲಸಿಗರ ಬದುಕಿನೊಂದಿಗೆ ರಾಜಕಾರಣಿಗಳ ಕೈಗೊಂಬೆಯಾಟ, ಹಸಿವಿನ ಸಂಕಟದಲ್ಲಿ ಅದ್ದಿ ತೆಗೆದ ಅವರ ಜೀವನಾನುಭವದ ಕಥನವಿದೆ. ‘ನನ್ನ ಚಾಂಡಾಲ ಬದುಕಿನ ಆತ್ಮಾವಲೋಕನ: ದಲಿತನೊಬ್ಬನ ಆತ್ಮಕಥೆ’ (Interrogating my Chandal life: An Autobiography of a Dalit) ಮನುಷ್ಯ ಸಂಕುಲದ ಅಸ್ತಿತ್ವದ ಹುಡುಕಾಟದ ಮಹಾ ವಿಡಂಬನೆಯಂತೆ ಕಾಣುತ್ತದೆ. ಕೆಲವು ಪ್ರಶಸ್ತಿಗಳು, ಪುರಸ್ಕಾರಗಳು ಅವರನ್ನರಸಿ ಬಂದಿವೆ.

ನಿರಾಶ್ರಿತರ ಶಿಬಿರ ಅವರಿಗೆ ಬದುಕಿನ ಕಡುಕಷ್ಟಗಳ ಪರಿಚಯ ಮಾಡಿಕೊಟ್ಟರೆ, ಅಲ್ಲಿಂದ ಹೊರಬಿದ್ದ ಬೆರಗುಗಣ್ಣಿಗೆ ಕಂಡದ್ದು ಮನುಷ್ಯನ ನಾನಾ ಮುಖಗಳ ವಿಶ್ವರೂಪದರ್ಶನ. ಆ ನಿರಾಶ್ರಿತರ ಶಿಬಿರದಲ್ಲೂ ಇನ್ನಿಲ್ಲದ ರಾಜಕೀಯ. ವಲಸೆ ಬಂದವರು ತಳವೂರುವ ಲಕ್ಷಣಗಳು ಕಾಣುತ್ತಿದ್ದಂತೆಯೇ ಅಲ್ಲಿನ ರಾಜಕಾರಣಿಗಳಲ್ಲಿ ಸಂಚಲನ. ಅದರ ಫಲವಾಗಿ ಸವರ್ಣೀಯ ವಲಸಿಗರು ನೋಡನೋಡುತ್ತಿದ್ದಂತೆಯೇ ಕೋಲ್ಕತ್ತದ ಹೊರವಲಯದಲ್ಲಿ ಅನುಕೂಲಕರ ಶಿಬಿರಗಳಿಗೆ ಸ್ಥಳಾಂತರಗೊಂಡರೆ, ಮನೋರಂಜನ್ ಅವರಂತಹವರನ್ನು ದಂಡಕಾರಣ್ಯದ (ಇಂದಿನ ಛತ್ತೀಸಗಡಕ್ಕೆ ಸೇರಿದೆ) ನಿರಾಶ್ರಿತರ ಶಿಬಿರಕ್ಕೆ ಬಲವಂತವಾಗಿ ಸ್ಥಳಾಂತರಿಸಲಾಯಿತು. ಇದನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ ಕಾಲಿನ ಮೂಳೆ ಮುರಿಸಿಕೊಂಡ ಅಪ್ಪ, ಹೊಟ್ಟೆಗಿಲ್ಲದ ತಂಗಿ ನರಳಿ ಸತ್ತಿದ್ದನ್ನು ಕಂಡ ಆ ಹದಿಹರೆಯದ ಯುವಕನಿಗೆ ಇನ್ನು ಆ ಶಿಬಿರದಲ್ಲಿ ಇರಲಾಗಲಿಲ್ಲ. ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದಾಗ ಸದ್ದಿಲ್ಲದೇ ಅಲ್ಲಿ ನಡೆಯುತ್ತಿದ್ದ ನಕ್ಸಲ್ ಚಳವಳಿಯ ಕಾವನ್ನು ಅದಾಗಲೇ ಮೈಗೆ ಹತ್ತಿಸಿಕೊಂಡಿದ್ದ ಅವನಿಗೆ, ಅಲ್ಲಿನ ಚಟುವಟಿಕೆಗಳು ಹಸಿವಿಗಾಗಿ ನಡೆಯುತ್ತಿದ್ದ ತನ್ನ ಹೋರಾಟದ ಪ್ರತಿರೂಪದಂತೆ ಕಂಡಿದ್ದವು.

ಸಮೀಪದ ನಕ್ಸಲ್ಬಾರಿಯಲ್ಲಿ 1967ರ ಹೊತ್ತಿಗೆ ಆರಂಭವಾದ ‘ರೈತರ ದಂಗೆ’ ಪೂರ್ಣಪ್ರಮಾಣದಲ್ಲಿ ಕ್ರಾಂತಿಯ ಕಿಡಿಯನ್ನು ಅವನಲ್ಲಿ ಹೊತ್ತಿಸಿತ್ತು. ಅದೊಂದು ‘ಭಾವನಾತ್ಮಕ ದಂಗೆ’ ಎಂದು ಸ್ಮರಿಸುವ ಮನೋರಂಜನ್, ‘ನಿಜಕ್ಕೂ ಸಮಾನತೆ ಮತ್ತು ಬದಲಾವಣೆಯನ್ನು ಬಯಸಿದ್ದ ಆ ಹೋರಾಟಗಾರರಿಗೆ ಮಾವೊ ತ್ಸೆ ತುಂಗ್ ಯಾರೆಂಬುದು ಗೊತ್ತಿರಲಿಲ್ಲ, ಅಷ್ಟೇಕೆ, ದೆಹಲಿ ಎಲ್ಲಿದೆ, ಅಲ್ಲಿ ಅಧಿಕಾರದಲ್ಲಿರುವ ಪಕ್ಷ ಯಾವುದೆಂಬುದೂ ತಿಳಿದಿರಲಿಲ್ಲ. ಅವರಿಗೆ ತಿಳಿದಿದ್ದುದು ತಮ್ಮ ಮೇಲಾಗುತ್ತಿದ್ದ ದಬ್ಬಾಳಿಕೆ ಮತ್ತು ತಾವಿದ್ದ ಭೂಮಿಯನ್ನು ಕಸಿಯುತ್ತಿದ್ದ ವ್ಯವಸ್ಥೆಯ ಭಾಗವಾಗಿದ್ದವರನ್ನು ಬಗ್ಗುಬಡಿಯಬೇಕು ಎಂಬುದಷ್ಟೇ’ ಎನ್ನುತ್ತಾರೆ. ಆದರೆ ಸಿಪಿಎಂ ಕಾರ್ಯಕರ್ತನಾಗಿದ್ದ ತಮ್ಮ ಬಾಲ್ಯಸ್ನೇಹಿತನೊಬ್ಬ ನಕ್ಸಲೀಯರ ಕ್ರೋಧಕ್ಕೆ ಬಲಿಯಾದಾಗ, ಮನೋರಂಜನ್ ಅವರ ಕ್ರಾಂತಿಯ ಕಿಚ್ಚು ಜರ್ರನೆ ಇಳಿದಿತ್ತು. ಅಲ್ಲಿಂದೀಚೆಗೆ, ಹಿಂದಿನಂತೆ ಜೀವದ ಉಳಿವಿಗಾಗಿಯಲ್ಲದೆ ಜೀವನೋಪಾಯಕ್ಕಾಗಿ ಪುನರಾರಂಭವಾದ ಅವರ ಮಹಾವಲಸೆ, ಲಾರಿ ಕ್ಲೀನರ್, ಕುರಿಗಾಹಿ, ಚಾಯ್ವಾಲ, ಅಡುಗೆ ಸಹಾಯಕ, ಸ್ಮಶಾನದ ಕಾವಲುಗಾರ, ಕೂಲಿ, ರಿಕ್ಷಾ ಎಳೆಯುವವ, ಶೌಚಾಲಯ ಕಾರ್ಮಿಕ... ಹೀಗೆ ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿಗೋ ಕರೆದೊಯ್ದದ್ದು ಈಗ ಇತಿಹಾಸ.

ರಿಕ್ಷಾ ಎಳೆಯುವವರ ಸಂಘಟನೆಗಾಗಿ ನಡೆಸಿದ ಹೋರಾಟದಲ್ಲಿ ಜೈಲು ಸೇರಿದ 20ರ ಆಸುಪಾಸಿನ ಆ ಯುವಕ, ಎರಡು ವರ್ಷಗಳ ನಂತರ ಅಲ್ಲಿಂದ ಹೊರಬಂದಾಗ ಬೇರೆಯದೇ ವ್ಯಕ್ತಿಯಾಗಿದ್ದ. ಸಹ ಕೈದಿಯಾಗಿದ್ದ ಸುಶಿಕ್ಷಿತ ವ್ಯಕ್ತಿಯೊಬ್ಬರ ಒಡನಾಟ ಆತನಿಗೆ ಅಕ್ಷರಲೋಕದ ಪರಿಚಯ ಮಾಡಿಸಿತು. ‘ಶರತ್ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯೊಂದು ನನಗೆ ಹುಚ್ಚು ಹಿಡಿಸಿತು’ ಎಂದಾಗ ಅಚ್ಚರಿಯಿಂದ ಆತನನ್ನು ನೋಡಿದ್ದರು ಮನೋರಂಜನ್. ‘ಅದೋ ಅಲ್ಲಿ ನೋಡು. ಆ ಕಾಂಕ್ರೀಟ್ ಕಟ್ಟಡದ ಒಳಗಿನಿಂದಲೂ ಆಲದ ಮರವೊಂದು ಹೇಗೆ ಬೆಳೆದುನಿಂತಿದೆ. ಬದುಕೂ ಹಾಗೇ. ಉತ್ತಮ ಬೆಂಬಲ ಸಿಕ್ಕರೆ ಎಂತಹ ಕಡುಕಷ್ಟದಲ್ಲೂ ಅದು ಹೀಗೇ ಅರಳಿನಿಲ್ಲಬಲ್ಲದು’ ಎಂದು ಜೈಲಿನ ಆವರಣದಿಂದ ಕಾಣುತ್ತಿದ್ದ ಬೃಹತ್ ಗ್ರಂಥಾಲಯ ಕಟ್ಟಡದತ್ತ ಕೈತೋರಿ ಆತ ಹೇಳಿದ ಮಾತು, ಮನೋರಂಜನ್ ಅವರ ಮನೋಭೂಮಿಕೆಯಲ್ಲಿ ಅರಿವಿನ ಬೀಜವನ್ನು ಬಿತ್ತಿತ್ತು. ಅವರಿಗೆ ತಮ್ಮ ಬದುಕಿನ ದಾರಿ ನಿಚ್ಚಳವಾಗುತ್ತಾ ಹೋಯಿತು. ಆತನನ್ನೇ ಗುರುವಾಗಿ ಸ್ವೀಕರಿಸಿದ ಮನೋರಂಜನ್ ಅವರಿಗೆ ಸೆರೆಮನೆಯ ಗೋಡೆಗಳ ಮೇಲೆ ಅಕ್ಷರದ ಓಂನಾಮ ಆರಂಭವಾಯಿತು. ಎಲ್ಲ ಕೈದಿಗಳೂ ತಮ್ಮ ದುಡಿಮೆಯಿಂದ, ರಕ್ತದಾನದಿಂದ ಬಂದ ಹಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದರೆ, ತನಗೆ ಪೆನ್ನು, ಪುಸ್ತಕ ಬೇಕೆಂಬ ಬೇಡಿಕೆಯಿತ್ತ ಯುವಕನನ್ನು ಜೈಲಿನ ಅಧಿಕಾರಿಗಳು ಅಚ್ಚರಿಯಿಂದ ದಿಟ್ಟಿಸಿದ್ದರು.

ಅಕ್ಷರ ಕೈಹಿಡಿಯುತ್ತಿದ್ದಂತೆಯೇ ಆರಂಭವಾಗಿದ್ದು ಓದಿನ ಹಂಬಲ. ಜೈಲಿನಿಂದ ಹೊರಬಂದು ರಿಕ್ಷಾ ಎಳೆಯುವ ಕಾಯಕದಲ್ಲಿ ತೊಡಗಿದ್ದರೂ ಸದಾ ಓದಿನದೇ ಗುಂಗು. ಅಂತಹ ಒಂದು ಸುದಿನ ತನ್ನ ರಿಕ್ಷಾದಲ್ಲಿ ಕುಳಿತ ಸುಶಿಕ್ಷಿತ ಮಹಿಳೆಯೊಬ್ಬರು ಮಾತಿಗೆಳೆದಾಗ, ಅವರನ್ನು ಮನೋರಂಜನ್ ಕೇಳಿದ್ದು ಬಂಗಾಳಿಯ ‘ಜಿಜೀಬಿಷ’ (ಬದುಕಿಗಾಗಿ ಹಂಬಲ) ಎಂಬ ಪದದ ಅರ್ಥವನ್ನು. ಚಕಿತರಾಗಿ ಆತನ ಪೂರ್ವಾಪರ ವಿಚಾರಿಸಿದ ಆ ಮಹಿಳೆ ಖ್ಯಾತ ಲೇಖಕಿ ಮಹಾಶ್ವೇತಾದೇವಿ ಅವರಾಗಿದ್ದುದು ಕಾಕತಾಳೀಯ. ಓದಿನ ಬಗ್ಗೆ ರಿಕ್ಷಾವಾಲಾನಿಗಿದ್ದ ಆಸಕ್ತಿಯನ್ನು ಕಂಡ ಅವರು ತಮ್ಮ ‘ಬಾರ್ತಿಕಾ’ ನಿಯತಕಾಲಿಕದಲ್ಲಿ ಬರೆಯುವಂತೆ ಆಹ್ವಾನವಿತ್ತರು. ಹೀಗೆ 1981ರಲ್ಲಿ ‘ನಾನು ರಿಕ್ಷಾ ಎಳೆಯುತ್ತೇನೆ’ ಎಂಬ ಮೊದಲ ಲೇಖನ ಪ್ರಕಟವಾಗುವುದರೊಂದಿಗೆ ಆರಂಭವಾದ ಮನೋರಂಜನ್ ಅವರ ಅಕ್ಷರ ವಲಸೆ ಇಂದಿಗೂ ನಿಂತಿಲ್ಲ. ನಾನಾ ಪ್ರಕಾರಗಳಲ್ಲಿ ಸಾಗಿದ ಆಡುಮಾತಿನ ಶೈಲಿಯ ಅವರ ಬರವಣಿಗೆಯ ಓಘ, ಒಬ್ಬ ವಾಕ್ಪಟುವನ್ನಾಗಿಯೂ ಅವರನ್ನು ರೂಪಿಸಿದೆ. ಅವರ ಹಲವಾರು ಬರಹಗಳು ಇಂಗ್ಲಿಷ್ಗೆ ತರ್ಜುಮೆಗೊಂಡಿವೆ. ಸಾಹಿತ್ಯ ವಲಯದ ಮೇಲಿನ ಅಪಾರ ಪ್ರೀತಿಯ ದ್ಯೋತಕವಾಗಿ ತಮ್ಮ ಮಕ್ಕಳಿಗೆ ಮಹಾಶ್ವೇತಾ ಮತ್ತು ಮಾಣಿಕ್ (ತಮ್ಮ ನೆಚ್ಚಿನ ಲೇಖಕರಾದ ಮಹಾಶ್ವೇತಾ ದೇವಿ ಮತ್ತು ಮಾಣಿಕ್ ಬಂದೋಪಾಧ್ಯಾಯ ಅವರ ನೆನಪಿನಲ್ಲಿ) ಎಂದೇ ಹೆಸರಿಟ್ಟಿದ್ದಾರೆ ಅವರು.

‘ನೀವು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ನಿಮ್ಮ ಬಳಿ ಹಣವೂ ಇಲ್ಲದಿದ್ದರೆ ನಿಮ್ಮ ಹೋರಾಟ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಮಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಆರೋಗ್ಯ, ಆಶ್ರಯ ಮತ್ತು ಪ್ರಾಥಮಿಕ ಶಿಕ್ಷಣ. ದೇಶದಾದ್ಯಂತ ಯಾವುದಾದರೂ ದಲಿತ ಚಳವಳಿಗೆ ಇವು ಆದ್ಯತೆಯ ವಿಷಯಗಳಾಗಿವೆಯೇ? ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ಸುತ್ತಲೇ ಅವರ ಚರ್ಚೆಗಳು ಗಿರಕಿ ಹೊಡೆಯುತ್ತವೆ. ಪೀಳಿಗೆಗಳಿಂದಲೂ ಸವಲತ್ತುಗಳನ್ನು ಪಡೆದುಕೊಂಡು ಬಂದವರಷ್ಟೇ ಈ ಮೀಸಲಾತಿಗಳನ್ನು ಮತ್ತೆಮತ್ತೆ ದಕ್ಕಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಮಗ್ಗುಲಲ್ಲಿ, ಮಕ್ಕಳನ್ನು ಶಾಲೆಗೆ ಸೇರಿಸಲು ಹಣವಿಲ್ಲದೆ ಪರದಾಡುವ ಕೂಲಿ ಕಾರ್ಮಿಕ, ಉಳ್ಳವರ ಮನೆಗೆಲಸದಲ್ಲಿ ಜೀವ ಸವೆಸುವ ಅವನ ಪತ್ನಿ ಅದೇ ಸ್ಥಿತಿಯಲ್ಲೇ ಉಳಿಯುತ್ತಾರೆ. ಇಂತಹವರಿಗೆ ಈ ಮೀಸಲಾತಿಗಳಿಂದ ಪ್ರಯೋಜನವಾದರೂ ಏನು’ ಎಂದು ಅವರು ಪ್ರಶ್ನಿಸುತ್ತಾರೆ.

ಗುಹಾ ನಿಯೋಗಿಯವರಂತಹ ನಿಸ್ಪೃಹ ಕಾರ್ಮಿಕ ನಾಯಕನಿಂದ ಪ್ರಭಾವಿತರಾದ ಮನೋರಂಜನ್, ರಾಜಕೀಯ ಸೇರಬೇಕೆಂಬ ಪ್ರಲೋಭನೆಗೆ ಓಗೊಟ್ಟವರಲ್ಲ. ‘ಈಗಿನ ರಾಜಕೀಯ ನಾಯಕರೊಟ್ಟಿಗೆ ನಾನು ಕೆಲಸ ಮಾಡಲಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯವರನ್ನು ಜನ ಆಯ್ಕೆ ಮಾಡಿದರು. ಆದರೆ ನಂತರ ಜನ ಅವರಿಗೆ ಬೆನ್ನು ತಿರುಗಿಸಿದ್ದೇಕೆ? ಒಮ್ಮೆ ಆಯ್ಕೆಯಾದ ನಂತರ ತನ್ನ ಜನರಿಗಾಗಿ ಮಾಡಬೇಕಾದ್ದನ್ನು ಆಕೆ ಮಾಡಲೇ ಇಲ್ಲ’ ಎಂಬ ಅವರ ಮಾತುಗಳಲ್ಲಿ ದಲಿತ ಚಳವಳಿಯ ಆದ್ಯತೆಯೇ ಬದಲಾಗಬೇಕಾದ ಸೂಚ್ಯ ಧ್ವನಿಸುತ್ತದೆ.

ಎಲ್ಲ ಹೊಟ್ಟೆಪಾಡಿಗಾಗಿ...

ಸಾಹಿತ್ಯವನ್ನುನೆಚ್ಚಿಕೊಂಡರೆ ಮನಸ್ಸಿನ ಹಸಿವು ನೀಗಬಹುದೇ ಹೊರತು ಹೊಟ್ಟೆಯದ್ದಲ್ಲ ಎಂಬುದನ್ನು ಚೆನ್ನಾಗಿ ಅರಿತವರು ಮನೋರಂಜನ್ ಬ್ಯಾಪಾರಿ. ಹೀಗಾಗಿ, ಹೊಟ್ಟೆಪಾಡಿಗಾಗಿ ಕಳೆದ 23 ವರ್ಷಗಳಿಂದಲೂ ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕರಾಗಿ ಅವರು ದುಡಿಯುತ್ತಿದ್ದಾರೆ.

ಮಂಡಿನೋವಿನಿಂದ ಬೃಹತ್ ಪಾತ್ರೆಗಳನ್ನು ಎತ್ತಿಳುಕಲಾರದ ತಮ್ಮನ್ನು ಬೇರೆಡೆ ವರ್ಗಾಯಿಸಬೇಕೆಂಬ ಅವರ ಕೋರಿಕೆ ಮನ್ನಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಕ್ಷಿಣ 24 ಪರಗಣ ಜಿಲ್ಲೆಯ ಗ್ರಂಥಾಲಯವೊಂದಕ್ಕೆ ಅವರನ್ನು ವರ್ಗಾವಣೆ ಮಾಡಿದ್ದಾರೆ.

‘ಲಾಕ್ಡೌನ್ನಿಂದಾಗಿ ಕೆಲವು ತಿಂಗಳುಗಳಿಂದ ಸಂಬಳವೇ ಬಂದಿಲ್ಲ. ಗ್ರಂಥಾಲಯದಲ್ಲಿ ನನ್ನ ಕೆಲಸ ಇನ್ನೂ ನಿಗದಿಯಾಗಿಲ್ಲ. ನಾನೊಬ್ಬ ಡಿ ದರ್ಜೆ ನೌಕರ. ಗ್ರಂಥಪಾಲಕನ ಹುದ್ದೆ ಸಿಗಬಹುದು ಎಂದೇನೂ ನಾನು ಭಾವಿಸಿಲ್ಲ. ಬಹುಶಃ ಪುಸ್ತಕಗಳನ್ನು ಹೊತ್ತೊಯ್ಯುವ ಅಥವಾ ಅವುಗಳ ದೂಳು ತೆಗೆಯುವ ಕೆಲಸ ವಹಿಸಬಹುದು’ ಎನ್ನುವ ಅವರಿಗೆ, ಸರ್ಕಾರ ತಮ್ಮ ಮನವಿಗೆ ಓಗೊಟ್ಟ ಸಮಾಧಾನವಂತೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.