ನಗರಗಳಲ್ಲಿ ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಪ್ರಕೃತಿಯೊಂದಿಗಿನ ಸಂಪರ್ಕ ಸಾಧಿಸುವ ಸರಳ ಮತ್ತು ಆನಂದದಾಯಕ ಮಾರ್ಗವಾಗಿ ಬಹಳಷ್ಟು ಜನ ಪರಿಗಣಿಸುತ್ತಾರೆ. ಹೀಗಾಗಿ ಅವರು ನಿಯಮಿತವಾಗಿ ಅವುಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಂತೂ ಮುಂಜಾನೆ ವ್ಯಾಯಾಮ ಮತ್ತು ವಿಹಾರಕ್ಕೆಂದು ಬರುವವರಿಗೆ ಇದು ಒಂದು ಪ್ರಮುಖ ಚಟುವಟಿಕೆಯಾಗಿದೆ. ಇದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿ ಕಬ್ಬನ್ ಪಾರ್ಕ್ ಪಕ್ಕದಲ್ಲೇ ಇರುವ ಕರ್ನಾಟಕ ಹೈಕೋರ್ಟ್ ಹಲವಾರು ಬಾರಿ ಈ ಚಟುವಟಿಕೆಗೆ ನಿರ್ಬಂಧವನ್ನು ಹೇರಿದೆ.

ಹೀಗೆ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದು ಸರಿಯಲ್ಲ ಎಂದು ಪರಿಸರದ ಸಮತೋಲನದ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಹಾಗಾದರೆ ಪಾರಿವಾಳಗಳಿಗೆ, ಕೋತಿಗಳಿಗೆ ಅಥವಾ ಬೀದಿ ನಾಯಿಗಳಿಗೆ ಆಹಾರ ನೀಡುವುದು ತಪ್ಪೇ? ಹೌದು ಎನ್ನುತ್ತಾರೆ ಕೆಲ ವಿಜ್ಞಾನಿಗಳು. ಹೀಗೆ ಪ್ರಾಣಿ ಪಕ್ಷಿಗಳಿಗೆ ನಾವು ಆಹಾರ ನೀಡುವುದರಿಂದ ಪರಿಸರದ ಸಮತೋಲನದಲ್ಲಿ ಏರುಪೇರು ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇನ್ನು ನಗರಗಳಲ್ಲಿ ಹೀಗೆ ಪಾರಿವಾಳಗಳಿಗೆ ಆಹಾರ ನೀಡುವುದು ಆಗಲೇ ಹಲವೆಡೆ ಗುಬ್ಬಿಚ್ಚಿಗಳು–ಮೈನಾ ತರಹದ ಪಕ್ಷಿಗಳ ಮೇಲೆ ಪರಿಣಾಮ ಬೀರಿದೆ.

ಮೇಲ್ನೋಟಕ್ಕೆ ಇದು ಏನೂ ತೊಂದರೆ ಉಂಟುಮಾಡದ ಚಟುವಟಿಕೆ ಎನಿಸದರೂ, ಸ್ವಲ್ಪ ವಿಸ್ತೃತವಾಗಿ ಅವಲೋಕಿಸಿದರೆ ಇದು ಪರಿಸರ ಮತ್ತು ಮನುಷ್ಯನ ಯೋಗಕ್ಷೇಮಕ್ಕೆ ಹಾನಿಕರ ಎಂದು ತಿಳಿಯುತ್ತದೆ. ಈ ಚಟುವಟಿಕೆಯು ಪರಿಸರದಲ್ಲಿ ಗಮನಾರ್ಹ ಮತ್ತು ಇನ್ನಿತರ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗೆ ಆಹಾರ ನೀಡುವುದರಿಂದ ಅವುಗಳ ಸಂತಾನೋತ್ಪತ್ತಿ ಹೆಚ್ಚಾಗುವುದಲ್ಲದೆ ಅವುಗಳಲ್ಲಿ ಆಕ್ರಮಣಕಾರಿ ನಡವಳಿಕೆ ಉಂಟಾಗುವುದು. ಅವುಗಳ ಹಿಕ್ಕೆ ಕಟ್ಟಡಗಳಿಗೆ-ಸ್ಮಾರಕಗಳಿಗೆ
ಹಾಗೂ ಪ್ರತಿಮೆಗಳಿಗೂ ಹಾನಿಕರ. ಹೆಚ್ಚಿನ ಪಾರಿವಾಳಗಳಿಂದ ರೋಗ ಹರಡುವಿಕೆ ಸಾಧ್ಯತೆ ಇದೆ ಮತ್ತು ಇತರೆ ವನ್ಯಜೀವಿಗಳಿಗೂ ಸಮಸ್ಯೆಯಾಗಿದೆ.

ಪರಿಸರದ ವ್ಯವಸ್ಥೆಯಲ್ಲಿ ಅಡಚಣೆ

ಪಾರಿವಾಳಗಳು ಬಹು ಸುಲಭವಾಗಿ ಹೊಂದಿಕೊಳ್ಳುವ ಪಕ್ಷಿಗಳು. ಹಾಗಾಗಿ ನಗರ ಪರಿಸರದಲ್ಲಿ ಸಮೃದ್ಧಿಯಾಗಿ ಕಾಣುತ್ತೇವೆ. ನಾವು ನಿಯಮಿತವಾಗಿ ಆಹಾರವನ್ನು ಒದಗಿಸುವುದರಿಂದ, ಅದರ ಮೇಲೆಯೇ ಅವು ಅವಲಂಬಿತವಾಗುತ್ತವೆ. ಇದು ಪಾರಿವಾಳಗಳ ಸಂಖ್ಯಾಸಮೃದ್ಧಿಗೆ ಕಾರಣವಾಗುತ್ತದೆ. ಅವುಗಳ ಸಂಖ್ಯೆಯು ಹೆಚ್ಚಾದಂತೆ, ಪಾರಿವಾಳಗಳು ನಗರ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುತ್ತವೆ.

ನಗರ ಪರಿಸರಗಳು ಈಗಾಗಲೇ ವನ್ಯಜೀವಿಗಳಿಗೆ ಹಲವಾರು ಸವಾಲುಗಳನ್ನು ಒಡ್ಡುತ್ತಿವೆ. ಹೀಗಿರುವಾಗ ಪಾರಿವಾಳಗಳಿಗೆ ಆಹಾರ ನೀಡುವುದು ಈ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಇತರ ಪಕ್ಷಿ ಪ್ರಭೇದಗಳು, ಸಸ್ತನಿಗಳು ಮತ್ತು ಕೀಟಗಳ ನೈಸರ್ಗಿಕ ನಡವಳಿಕೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳು ಅಡ್ಡಿಪಡಿಸಬಹುದು. ಇದು ಪಾರಿಸರಿಕ ಅಡಚಣೆಗಳನ್ನೂ ಉಂಟುಮಾಡುತ್ತದೆ. ಪಾರಿವಾಳಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸಂಪನ್ಮೂಲಗಳನ್ನು ಏಕಸ್ವಾಮ್ಯಗೊಳಿಸಿಕೊಂಡಾಗ, ಇತರ ಜೀವಿಗಳು ಆಹಾರ, ನೀರು ಮತ್ತು ಆಶ್ರಯವನ್ನು ಹುಡುಕಲು ಹೆಣಗಾಡುತ್ತವೆ. ಹೀಗಾಗಿ ಪಾರಿವಾಳಗಳಿಂದ ಬೇರೆ ಜೀವಿಗಳ ಉಳಿವು ಮತ್ತು ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಇದು ಮೈನಾ, ಗುಬ್ಬಚ್ಚಿಯಂತಹ ಇತರ ಪಕ್ಷಿ ಪ್ರಭೇದಗಳನ್ನು ಹೊರಹಾಕುತ್ತವೆ. ಮೈನಾ-ಗುಬ್ಬಚ್ಚಿ ತರಹದ ಪಕ್ಷಿಗಳು ಹುಳ-ಹುಪ್ಪಟೆಗಳನ್ನೂ ಸೇವಿಸುತ್ತವೆ. ಆದರೆ ಅವುಗಳ ಇರುವಿಕೆ ಇಲ್ಲವಾದಾಗ ಸೊಳ್ಳೆ ಮತ್ತು ಇತರೆ ಕೀಟಗಳು ಹೆಚ್ಚಾಗುತ್ತವೆ ಮತ್ತು ಅದೇ ಸಂಪನ್ಮೂಲಗಳನ್ನು ಅವಲಂಬಿಸಿರುವ ಇತರ ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಪರಿಸರ ವ್ಯವಸ್ಥೆಯ ನೈಸರ್ಗಿಕ ಸಮತೋಲನವನ್ನು ಏರುಪೇರು ಮಾಡುತ್ತದೆ. ಇನ್ನು ಅಲ್ಲಿಯ ಜೀವವೈವಿಧ್ಯದಲ್ಲಿಯೂ ತೊಡಕು ಉಂಟಾಗುವುದು.

ರೋಗ ಹರಡುವಿಕೆ

ಪಾರಿವಾಳಗಳಿಗೆ ಆಹಾರ ನೀಡುವುದು ರೋಗ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಸ್ವಾಭಾವಿಕವಾಗಿ ಆಹಾರ ನೀಡುವುದರಿಂದ ರೋಗ ಹರಡದಿರಬಹುದು, ಆದರೆ ಪಾರಿವಾಳಗಳು ಏವಿಯನ್ ಇನ್ಫ್ಲುಯೆನ್ಸ ಮತ್ತು ಸಾಲ್ಮೊನೆಲ್ಲಾಗಳಂತಹ ರೋಗಕಾರಕಗಳ ವಾಹಕಗಳು. ಮಾನವರೊಂದಿಗಿನ ನಿಕಟ ಸಂಪರ್ಕವು ಸಂಭಾವ್ಯ ಆರೋಗ್ಯದ ಅಪಾಯವಾಗಿದೆ. ಹೆಚ್ಚಿದ ಪಾರಿವಾಳಗಳ ಸಂಖ್ಯೆ ಪಕ್ಷಿ-ಸಂಬಂಧಿತ ಝೂನೋಟಿಕ್ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಆತಂಕಕಾರಿಯಾದ ಚಟುವಟಿಕೆ. ಇನ್ನು ಮಕ್ಕಳು ಮತ್ತು ವೃದ್ಧರಂತಹ ದುರ್ಬಲ ಗುಂಪುಗಳಿಗೆ ಇದು ಚಿಂತೆ ಮಾಡುವ ವಿಷಯವೇ.

ಆಹಾರವನ್ನು ಹುಡುಕುವ ಪಾರಿವಾಳಗಳ ಹಿಂಡುಗಳ ನಡುವೆ ಸ್ಪರ್ಧೆ ಮತ್ತು ಆಕ್ರಮಣಕಾರಿ ನಡವಳಿಕೆಗೆ ಕಾರಣವಾಗಬಹುದು. ಸೀಮಿತ ಸಂಪನ್ಮೂಲಗಳಿಗಾಗಿ ಅವು ಸ್ಪರ್ಧಿಸುವುದರಿಂದ, ಪಾರಿವಾಳಗಳ ನಡುವೆ ಮಾತ್ರವಲ್ಲದೆ ಇತರ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ಆ ವಾತಾವರಣದಲ್ಲಿ ಸಂಘರ್ಷ ಉಂಟಾಗಬಹುದು. ಹೆಚ್ಚುವರಿಯಾಗಿ, ಆಕ್ರಮಣಕಾರಿ ಪಾರಿವಾಳಗಳು ಆಹಾರದ ಹುಡುಕಾಟದಲ್ಲಿ ಮನುಷ್ಯರನ್ನು ಸಂಪರ್ಕಿಸಬಹುದು. ಇದರಿಂದ ಸಂಭಾವ್ಯ ದಾಳಿಯ ಅಪಾಯವನ್ನೂ ಹೆಚ್ಚಿಸಬಹುದು. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳೊಂದಿಗೆ ಸಂವಹನ ನಡೆಸುವಾಗ ಎಚ್ಚರಿಕೆಯಿಂದ ಇರಬೇಕಿದೆ.

ಮನುಷ್ಯರು ಸೇವಿಸುವ ಆಹಾರ ಧಾನ್ಯಗಳು, ಚಿಪ್ಸ್, ಬಿಸ್ಕತ್, ಮತ್ತು ಇತರೆ ಸಂಸ್ಕರಿಸಿದ ತಿಂಡಿಗಳನ್ನು ಪಾರಿವಾಳಗಳಿಗೆ ನೀಡುವುದು ಅಸಮರ್ಪಕ ಪೋಷಣೆಯನ್ನು ಉಂಟುಮಾಡುತ್ತದೆ. ಇದರಿಂದ ಪಕ್ಷಿಗಳ ಆರೋಗ್ಯಕ್ಕೆ ಹಾನಿಯಾಗುವುದು. ಇದಲ್ಲದೆ, ಸಾರ್ವಜನಿಕ ಪ್ರದೇಶಗಳಲ್ಲಿ ಆಹಾರ ನೀಡುವುದರಿಂದ, ಆ ಪ್ರಕ್ರಿಯೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಿದಂತೆ. ಇನ್ನು ಇದರಿಂದ ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ನಲ್ಲಿ ಸರಿಯಾಗಿ ಶುಚಿತ್ವವನ್ನು ಕಾಪಾಡುವುದು ಮೇಲ್ವಿಚಾರಕರು ಮತ್ತು ಅಧಿಕಾರಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ.

ಅಕಸ್ಮಾತ್ತಾಗಿ ಉಳಿಸಿದ ಆಹಾರವು ಹುಳ-ಹುಪ್ಪಟ್ಟೆ, ಇಲಿ, ಹೆಗ್ಗಣಗಳಿಗೂ ಆಶ್ರಯವಾಗುವುದು. ಇದರಿಂದ ಸಾರ್ವಜನಿಕ ಪ್ರದೇಶದ ಸ್ವಾಭಾವಿಕ ಸೌಂದರ್ಯಕ್ಕೆ ಧಕ್ಕೆಯಾಗುವುದು. ಇಂತಹ ಪ್ರದೇಶದ ಗುಣಮಟ್ಟದ ಮೇಲೆ ಒಟ್ಟಾರೆ ಪರಿಣಾಮ ಬೀರುತ್ತದೆ.

ಇನ್ನೊಂದೆಡೆ, ಈ ರೀತಿ ಕಸವು ಬೀದಿ ವ್ಯಾಪಾರಿಗಳಿಂದಲೂ ಆಗುತ್ತದೆ ಎಂದು ಕೆಲವರು ಆಕ್ಷೇಪಿಸದರೂ, ಬೀದಿ ವ್ಯಾಪಾರಿಗಳ ಚಟುವಟಿಕೆಯಿಂದ ಉಂಟಾಗುವ ಕಸವನ್ನು ಸೂಕ್ತವಾಗಿ ನಿರ್ವಹಿಸಬಹುದು. ಆದರೆ ಎಲ್ಲಂದರೆಲ್ಲಿ ಹಿಕ್ಕೆ ಹಾಕುವ ಪಾರಿವಾಳಗಳನ್ನು ಹೇಗೆ ನಿರ್ವಹಿಸುವುದು?

ಆಹಾರ ಕೊಟ್ಟರೆ ಬರುವುದು ತೊಂದರೆ

ಇನ್ನು ಪಾರಿವಾಳಗಳಿಗೆ ಆಹಾರ ನೀಡುವುದು ಗಮನಾರ್ಹ ತೊಂದರೆ ಉಂಟು ಮಾಡುತ್ತದೆ. ಕಟ್ಟಡಗಳು, ಸ್ಮಾರಕಗಳು ಮತ್ತು ಪ್ರತಿಮೆಗಳ ಮೇಲೆ ಅವು ಹಾನಿ ಉಂಟುಮಾಡುತ್ತವೆ. ಕೆಲ ಎತ್ತರದ ಕಟ್ಟಗಳಲ್ಲಿ ಈ ಪಾರಿವಾಳಗಳನ್ನು ತಡೆಯಲು ಜಾಲಿ ಪರದೆಯನ್ನು ಹಾಕುತ್ತಿದ್ದಾರೆ. ನಿಯಮಿತವಾಗಿ ಆಹಾರ ನೀಡುವುದರಿಂದ ಪಾರಿವಾಳಗಳ ಸಂಖ್ಯೆಯು ಹೆಚ್ಚಾಗುತ್ತಿದ್ದಂತೆ, ಕಟ್ಟಡ ಮಾಲೀಕರು ಮತ್ತು ನಗರ ಅಧಿಕಾರಿಗಳಿಗೆ ಸಮಾನವಾಗಿ ಕಟ್ಟಡ-ಸ್ಮಾರಕಗಳಿಗಾಗುವ ಹಾನಿ ಮತ್ತು ನಿರ್ವಹಣೆ ವೆಚ್ಚಗಳು ಹೆಚ್ಚಾಗುತ್ತವೆ.

ಅಂದಹಾಗೆ, ಆಸ್ಟ್ರಿಯಾ ದೇಶದ ವೆನೀಸ್ ನಗರದಲ್ಲಿ ಈ ರೀತಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಹಾಗೆ ಆಹಾರ ನೀಡಿದವರಿಗೆ ದಂಡ ವಿಧಿಸುತ್ತಿದ್ದಾರೆ. ಈ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿ ಅವುಗಳ ಹಿಕ್ಕೆಗಳು ಅಲ್ಲಿನ ಸ್ಮಾರಕಗಳಿಗೆ ಹಾನಿಯುಂಟುವಾಡುತ್ತಿರುವುದೇ ಇದಕ್ಕೆ ಕಾರಣ. ಇದಲ್ಲದೆ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರು ಯಾವುದೇ ಆಹಾರ ಸೇವಿಸದಂತೆ ಕೂಡ ನಿರ್ಬಂಧ ಹಾಕಿದ್ದಾರೆ. ವೆನೀಸ್ ನಗರದಲ್ಲಿ ಪಾರಿವಾಳಗಳ ನಿರ್ವಹಣೆ ಮಾಡತೊಡಗಿ ಈಗಾಗಲೇ ಮೂರು ದಶಕಗಳೇ ಕಳೆದಿದೆ. ಆದರೂ ಇವುಗಳಿಂದ ಮುಕ್ತಿ ಸಿಕ್ಕಿಲ್ಲ.

ಪಾರಿವಾಳಗಳಿಗೆ ಆಹಾರ ನೀಡುವುದು ಒಂದು ರೀತಿಯ ದಯೆ ಮತ್ತು ಸಹಾನುಭೂತಿಯ ಸೂಚಕವಾಗಿ ಕಂಡುಬಂದರೂ, ಅದು ತರುವ ಸಂಭಾವ್ಯ (ನಕಾರಾತ್ಮಕ) ಪರಿಣಾಮಗಳನ್ನು ತಿಳಿಯುವುದು ಅನಿವಾರ್ಯ. ಮಿತಿಮೀರಿದ ಪಾರಿವಾಳಗಳ ಸಂಖ್ಯೆ, ರೋಗ ಹರಡುವಿಕೆ, ಕಟ್ಟಡ-ಸ್ಮಾರಕಗಳಿಗಾಗುವ ಹಾನಿ, ಆಕ್ರಮಣಕಾರಿ ನಡವಳಿಕೆ, ಮಾಲಿನ್ಯ ಮತ್ತು ವನ್ಯಜೀವಿಗಳಿಗೆ ತೊಂದರೆಗಳು ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಸಂಭವಿಸುವ ಗಂಭೀರ ಸಮಸ್ಯೆಗಳು.

ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಎದುರಾಗುವ ಸಮಸ್ಯೆಗಳಿಗೆ ಪ್ರತಿಯಾಗಿ ನಗರ ಪ್ರದೇಶಗಳಲ್ಲಿ ಅಧಿಕಾರಿಗಳು ಈ ಅಭ್ಯಾಸವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಜಾರಿಗೆ ತರಬೇಕಿದೆ. ಅಧಿಕಾರಿಗಳು ಬಳಸುವ ಪ್ರಾಥಮಿಕ ಕಾರ್ಯತಂತ್ರವೆಂದರೆ, ಸಾರ್ವಜನಿಕ ಜಾಗೃತಿ ಅಭಿಯಾನಗಳು. ಈ ಅಭಿಯಾನಗಳು ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಪಾರಿವಾಳಗಳಿಗೆ ಆಹಾರ ನೀಡುವುದರೊಂದಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳು, ಕಟ್ಟಗಳಿಗೆ ಹಾನಿ ಮತ್ತು ಪರಿಸರದ ಪರಿಣಾಮಗಳನ್ನು ಎತ್ತಿ ತೋರಿಸುವ ಮೂಲಕ, ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವವರಲ್ಲಿ ಇದನ್ನು ತಡೆಯಲು ಪ್ರಯತ್ನಿಸಬೇಕಿದೆ.

ಜಾಗೃತಿ ಅಭಿಯಾನಗಳಿಗೆ ಪೂರಕವಾಗಿ, ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕಗಳು ಮತ್ತು ಮಾಹಿತಿ ಫಲಕಗಳ ಮೂಲಕ ಪಾರಿವಾಳಗಳಿಗೆ ಆಹಾರ ನೀಡುವ ಉತ್ಸಾಹ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ದೃಶ್ಯ ಜ್ಞಾಪನೆಗಳನ್ನು ಪಾರಿವಾಳಗಳು ಹೆಚ್ಚಾಗಿ ಇರುವ ಪ್ರದೇಶಗಳ ಸುತ್ತಮುತ್ತ ಹಾಕಬೇಕಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಬೈಲಾಗಳು ಅಥವಾ ಆಡಳಿತಾತ್ಮಕ ಆದೇಶಗಳ ಮೂಲಕ ಹೀಗೆ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಬಹುದು. ಹೀಗೆ ಜಾರಿಗೊಳಿಸಿದ ನಿಷೇಧಗಳನ್ನು ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡುತ್ತಿರುವ ವ್ಯಕ್ತಿಗಳಿಗೆ ದಂಡ ಅಥವಾ ಎಚ್ಚರಿಕೆಗಳನ್ನು ನೀಡಲು ಅಧಿಕಾರಿಗಳಿಗೆ ಅಧಿಕಾರ ನೀಡಬಹುದು.

ಪಾರಿವಾಳಗಳಿಗೆ ಆಹಾರವನ್ನು ನೀಡಬೇಕು ಎಂದೆನಿಸುವವರು ಪಕ್ಷಿ ಸಂರಕ್ಷಣಾ ಸಂಸ್ಥೆಗಳನ್ನು ಬೆಂಬಲಿಸಬಹುದು ಮತ್ತು ಎಲ್ಲಾ ಪಕ್ಷಿ ಪ್ರಭೇದಗಳಿಗೆ ಸೂಕ್ತವಾದ ಆಹಾರ, ನೀರು ಮತ್ತು ಆಶ್ರಯದೊಂದಿಗೆ ಪಕ್ಷಿಸ್ನೇಹಿ ಸ್ಥಳಗಳನ್ನು ರಚಿಸಬಹುದು. ಜವಾಬ್ದಾರಿಯುತ ಕ್ರಮಗಳನ್ನು ಉತ್ತೇಜಿಸುವ ಮೂಲಕ ಮತ್ತು ಪಾರಿವಾಳಗಳನ್ನು ಪೋಷಿಸುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ನಾವು ಪಕ್ಷಿಗಳು ಮತ್ತು ಅವು ವಾಸಿಸುವ ನಗರ ಪರಿಸರ ವ್ಯವಸ್ಥೆಯ ಸೂಕ್ಷ್ಮ ಸಮತೋಲನ ಎರಡನ್ನೂ ರಕ್ಷಿಸಬಹುದು.

ಪಕ್ಷಿಗಳಿಗೆ ಆಹಾರ... ಸುಪ್ರೀಂ ಕೋರ್ಟ್ ನಕಾರ

ಪಕ್ಷಿಗಳಿಗೆ ಆಹಾರ ನೀಡುವುದು ಸಹಾನುಭೂತಿಯ ಕಾರ್ಯವಾಗಿದ್ದು, ಇದು ಅತ್ಯಂತ ಶ್ಲಾಘನೀಯವಾಗಿದೆ. ಆದರೆ, ಅಂತಹ ಕಾರ್ಯವು ಮನುಷ್ಯರಿಗೆ, ವಿಶೇಷವಾಗಿ ನೆರೆಹೊರೆಯವರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿಂದೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಕುಟುಂಬದವರು ತಮ್ಮ ವಸತಿ ಸೊಸೈಟಿಯಲ್ಲಿನ ಅಪಾರ್ಟ್ಮೆಂಟ್ನ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ನೆರೆಹೊರೆಯವರಿಗೆ ತೊಂದರೆ ಉಂಟುಮಾಡುತ್ತದೆ ಎಂದೂ, ಹೀಗೆ ಆಹಾರ ನೀಡಬಾರದು ಎಂದೂ ಬಾಂಬೆ ಹೈಕೋರ್ಟ್ ಆದೇಶಿಸಿತ್ತು.

ಈ ವಿಚಾರವಾಗಿ ಬಾಂಬೆ ಹೈಕೋರ್ಟ್ನ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಕೋರಲಾಗಿತ್ತು. ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಈ ಕುಟುಂಬದವರು ತಮ್ಮ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದನ್ನು ನಿರ್ಬಂಧಿಸುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಬಾಂಬೆ ಹೈಕೋರ್ಟ್ನ ಆದೇಶದಂತೆ ಪಕ್ಷಿಗಳಿಗೆ ಆಹಾರ ನೀಡದಂತೆ ನೀಡಿದ್ದ ಆದೇಶವನ್ನು ಸುಪ್ರಿಂ ಕೋರ್ಟ್ ಎತ್ತಿಹಿಡಿಯಿತು.

ಹಿನ್ನಲೆ: 2011 ರಲ್ಲಿ, ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್ಮೆಂಟ್ ಒಂದರ 10 ನೇ ಮಹಡಿಯಲ್ಲಿ ವಾಸಿಸುತ್ತಿದ್ದ ದಿಲೀಪ್ ಸುಮನ್ಲಾಲ್ ಶಾ ಮತ್ತು ಮೀನಾ ಶಾ, 14 ನೇ ಮಹಡಿಯಲ್ಲಿ ವಾಸಿಸುವ ಠಾಕೋರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಿವಿಲ್ ನ್ಯಾಯಾಲಯದ ಮೊರೆಹೋಗಿದ್ದರು. ಶಾ ಕುಟುಂಬವು ಠಾಕೋರ್ ಕುಟುಂಬದ ವಿರುದ್ಧ ತಡೆಯಾಜ್ಞೆಯನ್ನು ಕೋರಿತು. ಶಾ ಕುಟುಂಬದವರಿಗೆ ಮತ್ತು ಕಟ್ಟಡದ ಇತರ ನಿವಾಸಿಗಳಿಗೆ ಅವರ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ನೀಡುವುದರಿಂದ ತೊಂದರೆಯಾಗುತ್ತಿದೆ ಎನ್ನುವುದೇ ಇದಕ್ಕೆ ಕಾರಣ. 20 ಅಂತಸ್ತಿನ ಸಹಕಾರಿ ಹೌಸಿಂಗ್ ಸೊಸೈಟಿಯವರು ಕೂಡ ಠಾಕೋರ್ ಕುಟುಂಬದ ವಿರುದ್ಧ ನ್ಯಾಯಾಲಯದ ಮೊರೆಹೋಗಿದ್ದರು. ತಮ್ಮ ಫ್ಲಾಟ್ನ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡದಂತೆ ನಿರ್ದೇಶನ ನೀಡುವಂತೆ ಕೋರಿದ್ದರು.

ನಂತರ 2013ರ ಸೆಪ್ಟೆಂಬರ್ 27ರಂದು ಬಾಂಬೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ಇಂಜಂಕ್ಷನ್ (ತಡೆಯಾಜ್ಞೆ) ನೀಡಿತ್ತು. ಠಾಕೋರ್ ಅವರ ಫ್ಲ್ಯಾಟ್ನ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರವನ್ನು ನೀಡುವುದನ್ನು ನಿರ್ಬಂಧಿಸಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತ್ತು. ಸಿವಿಲ್ ಕೋರ್ಟ್ನ ಈ ಆದೇಶವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ, ಅದು ಮಧ್ಯ ಪ್ರವೇಶಿಸಲು ನಿರಾಕರಿಸಿತು ಮತ್ತು ಜುಲೈ 12, 2016ರಂದು ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಮಧ್ಯಂತರ ಇಂಜಂಕ್ಷನ್ ಅನ್ನು ಸಂಪೂರ್ಣ ತಡೆಯಾಜ್ಞೆಯನ್ನಾಗಿ ಮಾರ್ಪಡಿಸಿ (ಶಾಶ್ವತವಾಗಿ ನಿರ್ಬಂಧಿಸಿ), ಆದೇಶ ಹೊರಡಿಸಿತು.

ಪಾರಿವಾಳಗಳಿಗೆ ಆಹಾರ ನೀಡದಂತೆ ಇತ್ತೀಚಿಗೆ ಪುಣೆ ಮಹಾನಗರ ಪಾಲಿಕೆ ಕೂಡ ಆದೇಶ ಹೊರಡಿಸಿದೆ ಮತ್ತು ಹಾಗೆ ಆಹಾರ ನೀಡುವವರ ವಿರುದ್ಧ ದಂಡ ವಿಧಿಸಲು ಮುಂದಾಗಿದೆ. ಈಗಾಗಲೇ ಮುಂಬೈನ ಥಾಣೆ ಮುನಿಸಿಪಲ್ ಕಾರ್ಪೊರೇಷನ್ ಕೂಡ ಪಾರಿವಾಳಗಳಿಗೆ ಆಹಾರ ನೀಡುವವರಿಗೆ ₹500 ದಂಡ ವಿಧಿಸುವುದಾಗೆ ನೋಟಿಸ್ ಜಾರಿ ಮಾಡಿದೆ. ಪಾರಿವಾಳಗಳಿಂದ ಈ ಮಹಾನಗರಗಳಲ್ಲಿ ಆಗಲೇ ಸಮಸ್ಯೆ ತಾರಕಕ್ಕೆ ಏರಿರುವುದರಿಂದ, ನಮ್ಮ ನಗರಗಳಲ್ಲಿ ಇದನ್ನೇ ಈಗಲೇ ನಿರ್ವಹಿಸುವುದು ಸೂಕ್ತ.

ಲೇಖನ– ಎಚ್.ಎಸ್. ಸುಧೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.