ರಾಮಕೃಷ್ಣ ಪರಮಹಂಸರು ಆಗತಾನೇ ತಮ್ಮ ಒಲವಿನ ದೇವತೆ ಕಾಳೀ ಮಾತೆಯ ಧ್ಯಾನವನ್ನು ಮುಗಿಸಿ ಹೊರಗೆ ಬಂದು ಕೂತಿದ್ದರು. ಅವರು ಹಾಗೆ ಬಿಡುವಾಗಿ ಕೂತಿದ್ದನ್ನು ಕಂಡು ಅನೇಕ ಭಕ್ತಾದಿಗಳು ಅಲ್ಲಿ ಬಂದು ಅವರ ಸುತ್ತಲೂ ಕೂತರು. ತಮ್ಮನ್ನು ನಂಬುವ ಮತ್ತು ಪ್ರೀತಿಸುವ ಮುಗ್ಧಜನರ ಸಮಸ್ಯೆಗಳಿಗೆ ಉತ್ತರ ಹೇಳುವುದು, ಪ್ರಿಯವಾಗಿ ಮಾತನಾಡುವುದು ಇವೆಲ್ಲ ಪರಮಹಂಸರಿಗೂ ಇಷ್ಟವಾದ ವಿಚಾರಗಳೇ!

ಅಲ್ಲಿ ಸೇರಿದ್ದವರ ಬಗೆಬಗೆಯ ಪ್ರಶ್ನೆಗಳಿಗೆ ರಾಮಕೃಷ್ಣರು ಉತ್ತರ ಹೇಳಿದರು. ಅವರುಗಳ ತೊಂದರೆಗಳಿಗೆ ನಿವಾರಣೆ ಸೂಚಿಸಿದರು. ತನ್ನ ಮಗನನ್ನು ಸತತವಾಗಿ ಬಾಧಿಸುತ್ತಿರುವ ಹೊಟ್ಟೆನೋವಿಗೆ ಸಲಹೆ ಕೇಳಲು ಬಂದಿದ್ದಳು ಒಬ್ಬ ಅಮ್ಮ. ಇನ್ನೊಬ್ಬ ಗೃಹಸ್ಥನಿಗೆ ಎಷ್ಟೇ ಶ್ರದ್ಧೆಯಿಂದ ಕೂತರೂ, ಧ್ಯಾನದಲ್ಲಿ ಮನಸ್ಸು ನಿಲ್ಲುತ್ತಿರಲಿಲ್ಲ! ಮತ್ತೊಬ್ಬ ವ್ಯಕ್ತಿಗೆ ಸಂಸಾರದ ತಾಪತ್ರಯಗಳೇ ಸಾಕುಸಾಕಾಗಿದೆ! ಹೀಗೆ ಪ್ರತಿಯೊಬ್ಬರಿಗೂ ರಾಮಕೃಷ್ಣರಿಂದ ಸಲಹೆ–ಸಮಾಧಾನ ಬೇಕು. ಅದಕ್ಕಾಗಿಯೇ ಅವರಲ್ಲಿಗೆ ಜನ ಓಡೋಡಿ ಬರುತ್ತಾರೆ. ರಾಮಕೃಷ್ಣರು ಎಲ್ಲರಿಗೂ ನೆಮ್ಮದಿ ಸಿಗುವ ಹಾಗೆ ಸರಳವಾದ ಪರಿಹಾರಗಳನ್ನು ಹೇಳುತ್ತಾರೆ. ‘ದೇವರನ್ನು ಹೃದಯ ಪೂರ್ವಕವಾಗಿ ನಂಬಿರಿ: ನಿಷ್ಠೆಯಿಂದ ಬದುಕಿರಿ’ ಎಂದು ಬೋಧಿಸುತ್ತಾರೆ.

ಅವತ್ತೂ ಕೂಡ ಹಾಗೆಯೇ ಎಲ್ಲರ ಸಮಸ್ಯೆಗಳಿಗೆ ಸಮಾಧಾನ ಹೇಳಿದ ಮೇಲೆ, ರಾಮಕೃಷ್ಣರು ನಗುನಗುತ್ತಾ ಅಂದರು.
‘ಈಗ ನಾನು ಒಂದು ಪ್ರಶ್ನೆ ಕೇಳುತ್ತೇನೆ. ನಿಜವಾದ ದೈವ ಪೂಜೆ ಯಾವುದು? ಯಾರು ಹೇಳುತ್ತೀರಿ?’
ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನಿದ್ದರು. ಆ ಮೇಲೆ ತಮತಮಗೆ ತೋಚಿದಂತೆ ಉತ್ತರ ಹೇಳತೊಡಗಿದರು.

‘ಬೆಳಗಾದ ಕೂಡಲೇ ಶುಭ್ರವಾಗಿ ಸ್ನಾನ ಮಾಡಿ, ದೇವರ ವಿಗ್ರಹ ತೊಳೆಯುವುದೇ ನಿಜವಾದ ಪೂಜೆ!’.
‘ಸುಂದರವಾದ ಹೂವುಗಳಿಂದ ದೇವರನ್ನು ಅಲಂಕರಿಸಿ, ಅರಿಶಿನ, ಕುಂಕುಮ ಏರಿಸುವುದೇ ಸರಿಯಾದ ಆರಾಧನೆ’.

‘ಪೂಜೆ ಅಂದರೆ, ಸಮೃದ್ಧವಾಗಿ ಪ್ರಸಾದವನ್ನು ತಯಾರಿಸಿ, ಭಕ್ತರೆಲ್ಲರಿಗೂ ಹಂಚುವುದು’.
‘ಹಾಗಲ್ಲ. ಪೂಜೆ ಅಂದರೆ, ನಾವೊಬ್ಬರೇ ಏಕಾಂತದಲ್ಲಿ ಕೂತು ದೇವರಧ್ಯಾನ ಮಾಡುವುದು’.
ಹೀಗೆ ಪ್ರತಿಯೊಬ್ಬರೂ ಹೇಳಿದ ಮೇಲೆ, ಸ್ವಲ್ಪ ಹೊತ್ತು ಯೋಚಿಸಿ, ಮಹಿಳೆಯೊಬ್ಬಳು ಹೇಳಿದಳು.

‘ಮನೆ ಮಂದಿಗೆ ಹಸಿವೆಯೇ ತಿಳಿಯದಂತೆ ಕಷ್ಟ ಪಟ್ಟು ದುಡಿದು, ಹೊತ್ತುಹೊತ್ತಿಗೆ ಅವರೆಲ್ಲರ ಹೊಟ್ಟೆ ತುಂಬಿಸುವುದೇ ಸರಿಯಾದ ಅರ್ಚನೆ!’.

ಪರಮಹಂಸರು ಉದ್ದಕ್ಕೂ ಮುಗುಳ್ನಗುತ್ತಲೇ ಇದ್ದರು. ಎಲ್ಲರ ಮಾತು ಮುಗಿದ ಮೇಲೆ ನಿಧಾನವಾಗಿ ಅವರು ಹೇಳಿದರು.
‘ನೀವೆಲ್ಲ ಹೇಳುವುದೂ ಸರಿಯೇ. ತಪ್ಪು ಅನ್ನಲಾಗದು. ಇವೆಲ್ಲವೂ ಪೂಜೆಯ ಬಗ್ಗೆ ನಾವುಗಳು ಇರಿಸಿಕೊಂಡಿರುವ ಬೇರೆ ಬೇರೆ ನಂಬಿಕೆಗಳು. ಇನ್ನು ನನ್ನ ಪ್ರಕಾರ ಹೇಳುವುದಾದರೆ, ಯಾವ ಮನುಷ್ಯ ಬೇರೆಯವರಿಗೆ ಸ್ವಲ್ಪವೂ ನೋವನ್ನು ಕೊಡದೆಯೇ ಬಾಳುತ್ತಾನೋ, ಅವನೇ ನಿಜವಾದ ದೈವಭಕ್ತ. ಅವನ ಇಂಥ ಜೀವನವೇ ಸರ್ವಶ್ರೇಷ್ಠ ಪೂಜೆ!’. ರಾಮಕೃಷ್ಣರ ಈ ಮಾತುಗಳನ್ನು ಜನ ಒಪ್ಪಿದರು. ಕೈ ಮುಗಿದು ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.