ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ: ಪಿಯಾನೊ ಚುಂಬಕ ಶಕ್ತಿ

Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ವಿಶ್ವ ವಾದ್ಯ ಪಿಯಾನೊ ನುಡಿಸಾಣಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಸಂಗೀತಪ್ರಿಯರ ಮನಗೆದ್ದ ‘ಬ್ರಿಲಾಂಟೆ ಪಿಯಾನೊ ಉತ್ಸವ, ಸಂಗೀತದ ಚುಂಬಕ ಶಕ್ತಿಯನ್ನು ಅನಾವರಣಗೊಳಿಸಿದೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದ ಪಿಯಾನೊ ಉತ್ಸವದಲ್ಲಿ 18 ದೇಶಗಳ ಹಾಗೂ ಭಾರತದ 16 ರಾಜ್ಯಗಳ ಕಲಾವಿದರು ನಡೆಸಿದ ವಾದ್ಯಗೋಷ್ಠಿ ದೇಶ–ದೇಶಗಳ ನಡುವೆ ಸಂಗೀತ ಸೌಹಾರ್ದವನ್ನು ಬೆಸೆಯಿತು.

ಸಂಗೀತ ಹೃದಯದ ಭಾಷೆ. ಇದರ ಸುನಾದ ಜಗತ್ತಿನ ಸಹೃದಯರನ್ನು ಒಂದುಗೂಡಿಸುತ್ತದೆ, ಬಾಂಧವ್ಯ ಬೆಸೆಯುತ್ತದೆ. ವಾದ್ಯಗಳ ಮಟ್ಟಿಗೆ ಹೇಳುವುದಾದರೆ ಪಿಯಾನೊ ಎಂಬ ವಾದ್ಯ ಇಡೀ ವಿಶ್ವದಾದ್ಯಂತ ಕಾಣಸಿಗುವ ವಾದ್ಯ. ಇದನ್ನು ಪಾಶ್ಚಾತ್ಯ ಸಂಗೀತದಲ್ಲಿ ಅದರಲ್ಲೂ ಜಾಸ್‌ ಪ್ರಕಾರದಲ್ಲಿ ನುಡಿಸುವುದು ಹೆಚ್ಚು. ಬಹಳ ಪ್ರಾಚೀನ ವಾದ್ಯವಾದ ಪಿಯಾನೊ ನಾದ ಚುಂಬಕ ಶಕ್ತಿ ಹೊಂದಿದೆ. ಅಂದಹಾಗೆ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಫೋರಂನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಬ್ರಿಲಾಂಟೆ ಪಿಯಾನೊ ಉತ್ಸವದಲ್ಲಿ ಈ ವಾದ್ಯದ ನಾದ ಮಾಧುರ್ಯ ಎಷ್ಟಿದೆ, ನಾದಝರಿ ಎಷ್ಟೊಂದು ಆಪ್ಯಾಯಮಾನ ಎಂಬುದನ್ನು ಸಾಬೀತುಪಡಿಸಿತು.

ಈ ಬ್ರಿಲಾಂಟೆ ಪಿಯಾನೊ ಉತ್ಸವದಲ್ಲಿ ಜಾಗತಿಕ ಮಟ್ಟದ ನೂರಾರು ಕಲಾವಿದರು ಭಾಗವಹಿಸಿ ಪಾಶ್ಚಾತ್ಯ ಸಂಗೀತದ ಘಮಲನ್ನು ಹರಡಿ ಸಭಾಂಗಣದೊಳಗೆ ಕಿಕ್ಕಿರಿದು ನೆರೆದ ಸಂಗೀತ ಪ್ರೇಮಿಗಳ ಹೃದಯ ತಟ್ಟಿದರು, ಕೇಳುಗರನ್ನು ಸಂಗೀತ ಲೋಕದಲ್ಲಿ ಭಾವಪರವಶರನ್ನಾಗಿ ಮಾಡಿದರು.

ಈ ಉತ್ಸವದ ಐದನೇ ಆವೃತ್ತಿಯಲ್ಲಿ ಕೊಡೈಕೆನಾಲ್‌ ಇಂಟರ್‌ನ್ಯಾಷನಲ್ ಸ್ಕೂಲ್‌ನ ‌ಕಲಾವಿದರು ಪ್ರಸ್ತುತಪಡಿಸಿದ ಸಂಗೀತ ಝಲಕ್ ಮನಮೋಹಕವಾಗಿತ್ತು. ಪಿಯಾನೊ ಕಛೇರಿಯ ಮತ್ತೊಂದು ಆಕರ್ಷಣೆ ಎಂದರೆ ಅಂಗವಿಕಲ ಕಲಾವಿದರು ಭಾಗಿಯಾಗಿ ಸಂಗೀತ ಉತ್ಸವಕ್ಕೆ
ಹೆಚ್ಚಿನ ಕಳೆ ಕಟ್ಟಿರುವುದು. ಈ ಕಲಾವಿದರ ಪ್ರತಿ ನುಡಿಸಾಣಿಕೆಯೂ ಕೇಳುಗರಲ್ಲಿ ವಿಶಿಷ್ಟ ಅನುಭೂತಿ ಸೃಷ್ಟಿಸಿತು.

ಕಲಾವಿದರಾದ ಲಿಡಿಯನ್ ನಾದಸ್ವರಮ್, ಮನೋಜ್ ಜಾರ್ಜ್, ರಾಧಾ ಥಾಮಸ್, ಪ್ರೊ.ಮಾರೂವಾನ್ ಬನಾಬ್ದಲ್ಲಾ, ಡಾ. ಆಡಮ್ ಜೆ. ಗ್ರೆಗ್, ಅಮನ್ ಮಹಾಜನ್, ಅಮೃತವಾಶಿನಿ, ಕೆಐಎಸ್ ಕಾಯಿರ್, ನಾಲಾಯಕ್, ಸುನೆಪ್ಸಾಂಗ್ಲಾ, ಜೆಂಟಿಜಂಗ್ ತ್ರಿಶನಾ ಐಯರ್, ಅನಿವೊ ಕುವೋಟ್ಸು, ನೌನೆ ಕುವೋಟ್ ಪಿಯಾನೊದಲ್ಲಿ ಸಂಗೀತದ ಹೊನಲನ್ನು ಹರಿಸಿದರು. ನೌನೆ ನಾಗಿ ಹೋಪ್ ಅಕಾಡೆಮಿ ದಿಮಾಪುರ್, ಉಲಿಕ್ರೇ ಜಾನಪದ ಕಲಾವಿದರು ನುಡಿಸಿದ ಗುಂಪು ಪಿಯಾನೊ ನುಡಿಸಾಣಿಕೆ ಕೂಡ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು. ಇಲ್ಲಿ ಬರೀ ವಾದ್ಯ ನುಡಿಸಾಣಿಕೆ ಮಾತ್ರವಲ್ಲದೆ, ಗುಂಪು ಗಾಯನವೂ ನಡೆದು ಸಂಗೀತದ ವಿವಿಧ ಪ್ರಕಾರಗಳೂ ಅನಾವರಣಗೊಂಡವು. ಒಟ್ಟು 18 ದೇಶಗಳ ಮತ್ತು ನಮ್ಮ ದೇಶದ 16 ರಾಜ್ಯಗಳ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.

‘ಸಂಗೀತದ ಮೂಲಕ ವಿಶ್ವದ ಜನರನ್ನು ಒಟ್ಟುಗೂಡಿಸಬಹುದು ಎನ್ನುವುದಕ್ಕೆ ಈ ಪಿಯಾನೊ ಉತ್ಸವವೇ ಸಾಕ್ಷಿ’ ಎಂದು ನಾಗಾಲ್ಯಾಂಡ್‌ ಮೂಲದ ಬ್ರಿಲಾಂಟೆ ಉತ್ಸವದ ಸಂಸ್ಥಾಪಕ ಮತ್ತು ನಿರ್ದೇಶಕ ಖಯೊಚಾನೊ ಟಿಸಿಕೆ ಹೇಳಿದ್ದು ಅಕ್ಷರಶಃ ಸತ್ಯ ಎಂಬುದನ್ನು ನೆರೆದವರೆಲ್ಲ ಒಪ್ಪಿಕೊಳ್ಳುವಂತಾಯಿತು.

ಪಿಯಾನೊ ವಿದೇಶಿ ವಾದ್ಯವಾದರೂ ನಮ್ಮ ದೇಶದ ಕಲಾವಿದರು ಕೂಡ ಈ ವಾದ್ಯವನ್ನು ಕಲಿತು, ಪರಿಶ್ರಮದಿಂದ ಸಾಣೆ ಹಿಡಿದು ನಮ್ಮ ನೆಲಕ್ಕೂ ಒಗ್ಗಿಸಿಕೊಂಡಿದ್ದಾರೆ. ಈ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವ ಕಲಾವಿದರೂ ನಮ್ಮೊಂದಿಗಿದ್ದಾರೆ.

ಪಾಶ್ಚಾತ್ಯ ಸಂಗೀತಕ್ಕೆ ಪಿಯಾನೊ ಚೆನ್ನಾಗಿ ಒಪ್ಪುತ್ತದೆ. ಇದರಲ್ಲಿ ಸೋಲೊ ಕಛೇರಿ ಕೂಡ ಕೊಡಬಹುದು. ಇಟಲಿ, ಜರ್ಮನಿ ಮತ್ತು ಜಪಾನಿನಲ್ಲಿ ಪಿಯಾನೊ ಬಳಕೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು. ದೇಶ ವಿದೇಶಗಳ ಸಂಗೀತ ರಸಿಕರನ್ನು ಸೆಳೆಯುವ ಪಿಯಾನೊ ಯುವಜನರ ಮೆಚ್ಚಿನ ವಾದ್ಯವೂ ಆಗಿದೆ.

ಪಿಯಾನೊ ನುಡಿಸುತ್ತಿರುವ ನಾಗಾಲ್ಯಾಂಡ್‌ನ ಟಾಕೊಸಂಗ್ಬಾ ಪೊಂಗೆನ್‌

ಪಿಯಾನೊ ನುಡಿಸುತ್ತಿರುವ ನಾಗಾಲ್ಯಾಂಡ್‌ನ ಟಾಕೊಸಂಗ್ಬಾ ಪೊಂಗೆನ್‌

ಏನಿದು ಬ್ರಿಲಾಂಟೆ?

ಸಂಗೀತ, ವಾದ್ಯ ಸಂಗೀತ, ನೃತ್ಯ... ಹೀಗೆ ವಿವಿಧ ಲಲಿತಕಲೆಗಳ ಮೂಲಕ ಮನಸ್ಸಿಗೆ ಖುಷಿ ಹಾಗೂ ನೆಮ್ಮದಿ ನೀಡುವ ಸಲುವಾಗಿ ಆ ಮೂಲಕ ಜಗತ್ತಿನ ಜಂಜಡ, ಏಕತಾನತೆಯನ್ನು ಮರೆಸಿ ಸೌಹಾರ್ದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ನಾಗಾಲ್ಯಾಂಡ್‌ ಮೂಲದ ಬ್ರಿಲಾಂಟೆ ಸಂಗೀತ ಉತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಬೇರೆ ಬೇರೆ ಭಾಗಗಳಲ್ಲಿ ಏರ್ಪಡಿಸುತ್ತಾ ಬಂದಿರುವ ಈ ಪಿಯಾನೊ ಉತ್ಸವ ಬೆಂಗಳೂರಿನಲ್ಲಿ ನಡೆದದ್ದು ಇದೇ ಮೊದಲು.
ಬ್ರಿಲಾಂಟೆ ಸಂಗೀತ, ನೃತ್ಯ ಮಾತ್ರವಲ್ಲದೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸ್ಪರ್ಧೆಗಳು, ಶಿಕ್ಷಣ ಶಾಸ್ತ್ರದ ಕುರಿತ ಮಾಹಿತಿಯನ್ನೂ ನೀಡುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬ್ರಿಲಾಂಟೆಯ ಹೆಚ್ಚುಗಾರಿಕೆ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT