ಶ್ರಾವಣದ ಸಂಜೆ. ಧೋ ಎಂದು ಸುರಿದ ಮಳೆ ಕೆಲವೇ ನಿಮಿಷಗಳಲ್ಲಿ ಗತಿ ಬದಲಿಸಿ ಸೋನೆಯಾಗಿ ಜಿನುಗತೊಡಗಿತ್ತು. ಅಷ್ಟರಲ್ಲಿ ಮೋಡ ಕಪ್ಪಿಟ್ಟು ಮತ್ತೊಂದು ಜಲಧಾರೆಗೆ ಸಿದ್ಧತೆ ನಡೆಸಿತ್ತು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಫಾದರ್ ಎಲ್.ಎಫ್.ರಸ್ಕಿನ್ಹ ಸಭಾಂಗಣದಲ್ಲಿ ಮೋಹಕ ಆಲಾಪವು ‘ಜೋಡ್’ನಲ್ಲಿ ಲಯವನ್ನು ಸಂಧಿಸಿ ‘ಜಾಲಾ’ದತ್ತ ಜಾರಿತ್ತು. ತಾಳದ ಜಾಡು ಹಿಡಿಯಲು ಸಜ್ಜಾಗಿದ್ದ ಶ್ರೋತೃಗಳು ರಸಯಾತ್ರೆಗೆ ಮನಸನ್ನು ಶ್ರುತಿಗೊಳಿಸುತ್ತಿದ್ದರು.

ಮಂಗಳೂರಿನ ಸಂಗೀತ್ ಭಾರತಿ ಫೌಂಡೇಷನ್, ಇತ್ತೀಚೆಗೆ ಆಯೋಜಿಸಿದ್ದ ವಾದನ ಮತ್ತು ಗಾಯನ ಕಾರ್ಯಕ್ರಮ ‘ರಿಮ್‌ಜಿಮ್’ ತಣ್ಣಗಿನ ಸಂಜೆಯಲ್ಲಿ ಮಳೆರಾಗಗಳ ಬಿಸುಪು ನೀಡಿ ರಸಿಕರನ್ನು ಪುಳಕಗೊಳಿಸಿತು. ಸಂತೂರ್‌ನಲ್ಲಿ ಮುಂಬೈಯ ಸತ್ಯೇಂದ್ರ ಸಿಂಗ್ ಅವರು ರಾಗ್ ಮೇಘ್ ನುಡಿಸಿ ಕೋಮಲ–ಶುದ್ಧ ಸ್ವರಗಳ ಲಾಲಿತ್ಯ ಪರಿಚಯಿಸಿದರು. ಗಾಯನ ಪ್ರಸ್ತುತಪಡಿಸಿದ ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿ ಅವರು ಮಿಯಾ ಮಲ್ಹರ್ ಹಾಡಿ ಶುದ್ಧ ನಿಶಾದದಲ್ಲಿ ಮೂಡುವ ಚೆಲುವನ್ನು ಬಿಂಬಿಸಿದರು.

ಅಜ್ರಾಡ ಘರಾಣೆಯ ಕುಡಿ ಸತ್ಯೇಂದ್ರ ಸಿಂಗ್ ಹಿರಿಯ ಸಹೋದರ ರಾಮೇಂದ್ರ ಸಿಂಗ್ ಸೋಳಂಕಿ ಅವರ ತಬಲಾ ಸಾಥ್ ಕಛೇರಿಯ ರಂಗು ಹೆಚ್ಚಿಸಿತು. ಸುಜಯೀಂದ್ರ ಅವರಿಗೂ ರಾಮೇಂದ್ರ ಅವರದೇ ಸಾಥ್. ಹಾರ್ಮೋನಿಯಂನಲ್ಲಿ ಮೋಡಿ ಮಾಡಲು ತೇಜಸ್ ಕಾಟೋಟಿ ಇದ್ದರು. ನಾಲ್ವರು ಯುವ ಕಲಾವಿದರು ಅವಿಸ್ಮರಣೀಯವಾಗಿಸಿದ ಆ ಸಂಜೆ ಕೆಲಕಾಲ ಮೆಲುಕು ಹಾಕಲು ಸಂಗೀತಪ್ರಿಯರಿಗೆ ಲಭಿಸಿದ ಅಪರೂಪದ ಉಡುಗೊರೆ.

ರಾಗರಸದ ಅನುಭವ ದಕ್ಕಿಸಿದ ಸಂತೂರ್

ಒಂದು ತಾಸು ಸಂತೂರ್‌ನಲ್ಲಿ ಲಯಲಾಸ್ಯವಾಡಿದ ಸತ್ಯೇಂದ್ರ ಸಿಂಗ್, ಮೇಘರಾಗದ ರಸವನ್ನು ಸಂಪೂರ್ಣ ಮೊಗೆದುಕೊಟ್ಟರು. ಶತತಂತಿ ವೀಣೆ ಎಂದೇ ಹೆಸರಾಗಿರುವ ಸಂತೂರ್‌ನಲ್ಲಿ ಸ್ವರದಿಂದ ಸ್ವರಕ್ಕೆ ಜಾರುವ ಸಂದರ್ಭ ಅತ್ಯಂತ ಕ್ಲಿಷ್ಟ ಎಂಬುದು ಸಂಗೀತಜ್ಞರ ಅಭಿಪ್ರಾಯ. ಅದು ಶ್ರೋತೃಗಳ ಅನುಭವಕ್ಕೆ ಬಾರದಂತೆ ಶ್ರುತಿಯೊಂದಿಗೆ ಲೀನವಾಗಿ ಲಯಕಾರಿ ಶೈಲಿಯನ್ನು ನುಡಿಸಿದ ಸತ್ಯೇಂದ್ರ ಸಿಂಗ್ ಸಾಂಪ್ರದಾಯಿಕ ಆಲಾಪ್, ಜೋಡ್ ಮತ್ತು ಜಾಲಾದ ಮೂಲಕವೇ ಕೃತಿಗಳಿಗೆ ಪ್ರವೇಶ ಮಾಡಿದರು.

ಆಲಾಪ್‌ನಲ್ಲಿ ಸೂಕ್ಷ್ಮ ನುಡಿಸಾಣಿಕೆಯ ಮೂಲಕ ಕಲ್ಪನಾ ಸ್ವರಗಳನ್ನು ವಿಸ್ತರಿಸಿ ಮಳೆಯ ಹನಿಗಳು ಜಿನುಗಿದಂಥ ಸನ್ನಿವೇಶ ಸೃಷ್ಟಿಸಿದ ಅವರು ಜಪ್ ತಾಳ್ ಮತ್ತು ತೀನ್ ತಾಳ್‌ನಲ್ಲಿ ಕೃತಿಗಳ ಪ್ರಸ್ತುತಿ ವೇಳೆ ತಂತಿಗಳ ಮೇಲೆ ಕಲಂ ಬೀಸುವಿಕೆಯ ನೈಪುಣ್ಯ ಪ್ರದರ್ಶಿಸಿ ಬಿರುಮಳೆ ಸುರಿದ ಅನುಭವ ನೀಡಿದರು.

ತಬಲಾ ಮತ್ತು ಗಿಟಾರ್ ಕಲಾವಿದರೂ ಆಗಿರುವ ಸುಜಯೀಂದ್ರ ಕುಲಕರ್ಣಿ ಫ್ಯೂಷನ್ ಸಂಗೀತದ ಮೂಲಕ ಗಮನ ಸೆಳೆದಿದ್ದಾರೆ. ‘ಈಗ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತಕ್ಕೇ ಸಮಯ ಮೀಸಲಿಟ್ಟಿದ್ದೇನೆ’ ಎಂದು ಅವರು, ಮಳೆರಾಗ ಮಿಯಾ ಮಲ್ಹಾರ್‌ನಲ್ಲಿ ಸಾಂಪ್ರದಾಯಿಕ ಶೈಲಿ ಮುರಿದು ಚೋಟಾ ಖ್ಯಾಲ್ ಮಾತ್ರ ಪ್ರಸ್ತುತಪಡಿಸಿದರು. ಮಧುರ ಆಲಾಪದಲ್ಲೇ ಶ್ರೋತೃಗಳ ಮೇಲೆ ರಾಗದ ಹನಿ ಚೆಲ್ಲಿದ ಅವರು ಧೃತ್ ಗತ್‌ನಲ್ಲಿ ಎರಡು ಕೃತಿಗಳನ್ನು ಪ್ರಸ್ತುತಪಡಿಸಿದರು. ತೀನ್ ತಾಳ್‌ನಲ್ಲಿ ಹಾಡಿದ ‘ಘರ್ ಆಯೇ ಬಾದರ್‌ವಾ...’ ಲಯಬದ್ಧವಾಗಿ ಸುರಿಯುವ ಮಳೆಯ ಅನುಭವ ನೀಡಿದರೆ ಅತಿಧೃತ್‌ನಲ್ಲಿದ್ದ ‘ಅತ ಧೂಮರೆ ಅತ ಆಯಿ ಬದರಿಯಾ...’ ಮತ್ತೊಮ್ಮೆ ಬಿರುಸು ಮಳೆಯಂತೆ ಆವರಿಸಿಕೊಂಡಿತು.

ಸುಜಯೀಂದ್ರ ಅವರು ಮಾಲ್ಕೌನ್ಸ್ ಮತ್ತು ಭೈರವಿಯ ರಸಾನುಭವವನ್ನೂ ನೀಡಿದ್ದರು. ತಡರಾತ್ರಿಯ ರಾಗ ಮಾಲ್ಕೌನ್ಸ್‌ನ ಪಾರಂಪರಿಕ ಬಂದಿಶ್ ‘ಪಗ್ ಲಾಗನ್ ದೆ...’ ಪ್ರಸ್ತುತಪಡಿಸಿದ ನಂತರ ಧೃತ್ ಗತ್‌ನಲ್ಲಿ ‘ಸೂರತ್ ಆಜ್...’ ಮತ್ತು ‘ಆಜ್ ಮೋರೆ ಘರ್ ಆಯೆ ನ ಬಲಮಾ...’ದ ಮೂಲಕ ಸಂಜೆಯಲ್ಲೂ ರಾತ್ರಿಯ ರಂಗು ಮೂಡಿಸಿದರು. ಭೈರವಿ ರಾಗದ ದಾಸರ ಪದದೊಂದಿಗೆ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿಯೇ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.