ಉಸ್ಸಪ್ಪಾ, ಮೈದಾನದಲ್ಲಿ ನಾಲ್ಕು ಸುತ್ತು ವಾಕಿಂಗ್ ಮುಗಿಸಿದ ನನ್ನೊಳಗಿಂದ ನನಗರಿವಿಲ್ಲದೆಯೇ ಆಯಾಸದ ನಿಡುದನಿ ಹೊರಬಂದಿತ್ತು. ನನ್ನ ಮಗನನ್ನು ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ಗೆಂದು ಬಿಟ್ಟು, ಅಲ್ಲೇ ಪಕ್ಕದಲ್ಲಿರುವ ಚಿಕ್ಕದಾದ ಮೈದಾನವೊಂದರಲ್ಲಿ ಒಂದಷ್ಟು ಹೊತ್ತು ವಾಕಿಂಗ್ ಮಾಡುವುದು ನನ್ನ ಅಭ್ಯಾಸ. ಆದರೆ, ಯಾವತ್ತೂ ಇಷ್ಟೊಂದು ಆಯಾಸವಾಗಿರಲಿಲ್ಲ. ಇತ್ತೀಚೆಗೆ ನನ್ನ ದೇಹ ಅತಿಯಾಗಿ ದಪ್ಪವಾಗುತ್ತಿದೆ. ಅದರ ಪರಿಣಾಮವೇ ಇದು ಎಂದು ನನಗೆ ಅನಿಸತೊಡಗಿತು.

ಅಲ್ಲೇ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರತ್ತ ನೋಡಿದೆ. ಹೆಚ್ಚು ಕಡಿಮೆ ನನ್ನ ಮಗನ ವಯಸ್ಸಿನವರೇ. ಎಷ್ಟು ಹುರುಪಿನಿಂದಿದ್ದಾರೆ! ಆಯಾಸದ ಲವಲೇಶವೂ ಅವರಲ್ಲಿಲ್ಲ. ಬಾಲ್ಯದಲ್ಲಿ ನಾನೂ ಹೀಗೆಯೇ ಇದ್ದೆ. ಶಾಲೆ ಬಿಟ್ಟು ಮನೆಗೆ ಬಂದವನೇ ಕ್ರಿಕೆಟ್ ಆಡಲು ಮನೆ ಪಕ್ಕದ ಮೈದಾನಕ್ಕೆ ಹೋಗುತ್ತಿದ್ದೆ. ನಾನು ಬ್ಯಾಟು ಹಿಡಿದೆನೆಂದಾದರೆ ಕಡಿಮೆಗೆ ಔಟಾಗುವವನಲ್ಲ.

ಶಾಲೆಯಲ್ಲಿಯೂ ಹಾಗೆಯೇ. ಕೊನೆಯ ಪಿರಿಯಡ್ಗಾಗಿಯೇ ಕಾಯುತ್ತಿದ್ದೆ. ಗೆಲುವು ನಾನಿದ್ದ ಟೀಮ್ನದ್ದೇ ಆಗಿರುತ್ತಿತ್ತು. ಶಾಲಾ ವಾರ್ಷಿಕೋತ್ಸವದ ನಿಮಿತ್ತ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಬಹುಮಾನ ಗಳಿಸಿಕೊಂಡಿದ್ದೆ. ಇದಾದ ಮೇಲಂತೂ ನನ್ನಲ್ಲಿದ್ದ ಕ್ರಿಕೆಟ್ ಹುಚ್ಚು ಮತ್ತಷ್ಟು ಜಾಸ್ತಿಯಾಗಿತ್ತು. ವಿಶ್ವಕಪ್ ಸಮಯದಲ್ಲಂತೂ ದಿನವಿಡೀ ಕ್ರಿಕೆಟ್ ಧ್ಯಾನ. ದಿನವಿಡೀ ಕ್ರಿಕೆಟ್ ಆಡಿ ಮನೆಗೆ ಬಂದು ಟಿ.ವಿ.ಎದುರು ಕಣ್ಣು ಮಿಟುಕಿಸದೆ ಕುಳಿತುಬಿಡುತ್ತಿದ್ದೆ, ಅಪ್ಪನ ಕಣ್ಣುತಪ್ಪಿಸಿ! ಅಪ್ಪನಿಗೆ ನಾನು ಕ್ರಿಕೆಟ್ ಆಡುವುದು, ನೋಡುವುದು ಎರಡೂ ಇಷ್ಟವಿರಲಿಲ್ಲ. ಟಿ.ವಿ. ಎದುರು ಕುಳಿತಿದ್ದಾಗ ಬೆನ್ನು ಹುಡಿಯಾಗುವಂತೆ ಏಟು ತಿಂದದ್ದು ಅದೆಷ್ಟು ಸಲವೋ!

ಆ ದಿನವನ್ನಂತೂ ನಾನು ಮರೆಯಲು ಸಾಧ್ಯವೇ ಇಲ್ಲ. ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ನಾನು ಆಯ್ಕೆಯಾಗಿದ್ದೆ. ಇಷ್ಟು ದಿನ ನನ್ನ ಕ್ರಿಕೆಟ್ ಪ್ರೇಮವನ್ನು ವಿರೋಧಿಸುತ್ತಿದ್ದ ತಂದೆ ಈ ವಿಷಯ ತಿಳಿದ ಮೇಲಾದರೂ ಬದಲಾಗುತ್ತಾರೆ ಎಂಬ ಸಂತಸದಲ್ಲಿಯೇ ವಿಷಯ ತಿಳಿಸಿದೆ. ಅಪ್ಪ ಅಂದು ಹೇಳಿರುವ ಮಾತುಗಳು ಇನ್ನೆಂದೂ ಮರೆತುಹೋಗದಂತೆ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡಿವೆ.

‘ಕ್ರಿಕೆಟ್ಟಂತೆ ಕ್ರಿಕೆಟ್ಟು! ಅದೇನು ಅನ್ನ ಕೊಡುತ್ತದಾ? ಅದೆಲ್ಲ ಕೆಲಸವಿಲ್ಲದವರಿಗೆ. ಕ್ರಿಕೆಟ್ ಅಂತ ಇನ್ನು ಮುಂದೆ ಮಾತನಾಡಿದರೆ ಜಾಗ್ರತೆ. ಓದುವುದರ ಕಡೆಗೆ ಗಮನಕೊಡು...’ ಅಪ್ಪ ಆಡಿದ್ದ ಈ ಮಾತುಗಳ ಬಗೆಗೆ ನನ್ನಲ್ಲಿ ಅಂದು ಹಲವು ಪ್ರಶ್ನೆಗಳು ಮೂಡಿದ್ದವು. ಕ್ರಿಕೆಟ್ ಅನ್ನ ನೀಡುವುದಿಲ್ಲ ಎಂದಾದರೆ ಅಷ್ಟೊಂದು ಜನ ಏಕೆ ಆಡುತ್ತಾರೆ? ಅವರೆಲ್ಲ ಕೆಲಸವಿಲ್ಲದವರಾ? ಸಚಿನ್ ತೆಂಡೂಲ್ಕರ್ ಕೋಟಿ ಬೆಲೆ ಬಾಳುವ ಮನೆ ಕಟ್ಟಿದ್ದಾನೆ ಅಂತ ಮೊನ್ನೆ ಪೇಪರಲ್ಲಿ ಬಂದಿತ್ತಲ್ಲ, ಅದು ಸುಳ್ಳಾ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡವು. ಅಂತಿಮವಾಗಿ ಅಪ್ಪನ ಹಠದ ಮುಂದೆ ನನ್ನ ಆಸೆ ಮೊಣಕಾಲೂರಿತ್ತು. ಅಷ್ಟೆಲ್ಲಾ ಖರ್ಚು ಮಾಡಲಿಕ್ಕೆ ನನ್ನಲ್ಲಿ ಹಣವೂ ಇಲ್ಲ. ಹೊಳೆಗೆ ಹಣ ಸುರಿಯುವ ಮನಸ್ಸೂ ನನಗಿಲ್ಲ.

ಅಪ್ಪನ ಈ ಮಾತು ನನ್ನ ಭವಿಷ್ಯವನ್ನೇ ಬದಲಾಯಿಸಿತ್ತು. ಕ್ರಿಕೆಟ್ ಮೈದಾನ, ನಾನು ಸಿಡಿಸಿದ ಶತಕ, ಅಭಿಮಾನಿಗಳ ಶಿಳ್ಳೆ- ಕೇಕೆ... ಎಲ್ಲವೂ ಬರೀ ಕನಸುಗಳಾಗಿಯೇ ಉಳಿದವು.

ಹೇ! ಔಟ್ಔಟ್, ಮಕ್ಕಳ ಕೇಕೆ ನನ್ನನ್ನು ನೆನಪಿನ ಅಂಗಣದಿಂದ ಪೆವಿಲಿಯನ್ ಸೇರಿಸಿತ್ತು. ಔಟಾದ ಹುಡುಗ ಇನ್ನಿಲ್ಲದ ನಿರಾಸೆಯಿಂದ ನನ್ನ ಪಕ್ಕದಲ್ಲೇ ಬಂದು ಕುಳಿತ. ಅಂದು ನನ್ನ ಮುಖದಲ್ಲಿಯೂ ಇದೇ ರೀತಿಯ ನಿರಾಸೆ ಮನೆ ಮಾಡಿತ್ತು. ಒಂದರ್ಥದಲ್ಲಿ ಅಂದು ನಾನೂ ಔಟಾದವನೇ ಆಗಿದ್ದೆ... ನನ್ನ ಆಸೆಯಿಂದ, ನನ್ನ ಗುರಿಯಿಂದ, ನನ್ನ ಸಾಧನೆಯಿಂದ ಹೀಗೆ ಎಲ್ಲದರಿಂದಲೂ ನಾನಂದು ಔಟಾಗಿದ್ದೆ. ಮತ್ತೊಮ್ಮೆ ಬ್ಯಾಟ್ ಹಿಡಿಯಲೂ ಅವಕಾಶವಿಲ್ಲದಂತೆ. ಔಟ್ ಮಾಡಿದವರು ನನ್ನ ತಂದೆಯೇ! ಅಪ್ಪನ ಹಠಕ್ಕೆ ಕಟ್ಟುಬಿದ್ದು ಆಮೇಲೆ ಉಪನ್ಯಾಸಕನಾದೆನೇನೋ ನಿಜ. ಆದರೆ, ಅದು ಸಂತೋಷದಿಂದ ನಾನೇ ಸ್ವೀಕರಿಸಿದ ವೃತ್ತಿಯಲ್ಲ. ಅನಿವಾರ್ಯತೆಯ ಪರಾಕಾಷ್ಠೆ ಅಷ್ಟೆ.

ಕ್ರಿಕೆಟ್ನಲ್ಲಿ ಆನಂದ ಪಡೆಯುತ್ತಿದ್ದ ಆ ಮಕ್ಕಳ ಕಡೆಗೊಮ್ಮೆ ನೋಡಿದೆ. ಮಕ್ಕಳನ್ನು ಅವರಿಷ್ಟಕ್ಕೆ ತಕ್ಕಂತೆ ಇರಲು ಬಿಟ್ಟರೆ ಎಷ್ಟು ಸಂತಸವಾಗಿರುತ್ತಾರಲ್ಲ ಎನಿಸಿತು. ತಂದೆ ನನ್ನ ಆಸೆಗೆ ಅಡ್ಡಿ ಬರದಿರುತ್ತಿದ್ದರೆ? ಮನಸ್ಸು ಪದೇ ಪದೇ ಯೋಚಿಸಿತು. ಇರಲಿ ನಾನು ಕ್ರಿಕೆಟ್ ಆಟಗಾರನಾಗದಿದ್ದರೂ ಪರವಾಗಿಲ್ಲ. ನನ್ನ ಮಗನಿಗೆ ಕ್ರಿಕೆಟ್ ತರಬೇತಿ ಕೊಡಿಸುತ್ತಿದ್ದೇನೆ. ಈಗ ಅವನಿಗೆ ಹದಿನಾರು ವರ್ಷ. ಇನ್ನೊಂದೆರಡು ವರ್ಷಗಳಲ್ಲಿ ಅವನು ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರನಾಗಿ ರೂಪುಗೊಂಡಿರುತ್ತಾನೆ. ಮಗನ ಸಾಧನೆಯಲ್ಲಿಯೇ ನನ್ನ ಸಾಧನೆಯನ್ನು ಕಂಡುಕೊಳ್ಳುತ್ತೇನೆ. ಯೋಚನೆಯು ಮನಸ್ಸಿಗೊಂದಿಷ್ಟು ನಿರಾಳತೆ ನೀಡಿತು.

ಮರುದಿನ ಭಾನುವಾರ. ಬೆಳಿಗ್ಗೆಯೇ ಮಗನನ್ನು ಕ್ರಿಕೆಟ್ ತರಬೇತಿಗೆ ಬಿಟ್ಟ ನಾನು ಶಿಬಿರವೊಂದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಹೋದೆ. ಮಕ್ಕಳು ಮತ್ತು ಹೆತ್ತವರನ್ನು ಉದ್ದೇಶವಾಗಿರಿಸಿಕೊಂಡು ಆಯೋಜಿಸಿದ ಶಿಬಿರ ಅದಾಗಿತ್ತು. ನನ್ನ ಮನಸ್ಸಿನಲ್ಲಿರುವ ಬೇಸರವನ್ನೆಲ್ಲಾ ಹೊರಹಾಕಲು ಮತ್ತು ಮಕ್ಕಳನ್ನು ಅವರವರ ಗುರಿಯಲ್ಲೇ ಚಲಿಸುವಂತೆ ಮಾರ್ಗದರ್ಶನ ಮಾಡಲು ಇದೊಂದು ಉತ್ತಮ ಅವಕಾಶ ಎನ್ನುವುದು ನನ್ನ ಭಾವನೆಯಾಗಿತ್ತು.

ನನ್ನ ಭಾಷಣದ ಸರದಿ ಬಂತು. ಸುಮಾರು ಮುನ್ನೂರು ಕಣ್ಣುಗಳು ನನ್ನನ್ನೇ ದಿಟ್ಟಿಸುತ್ತಿದ್ದವು. ಮಾತು ಆರಂಭಿಸಿದ ನಾನು ನನ್ನ ಅನುಭವವನ್ನೇ ಅವರ ಮುಂದಿರಿಸಿದೆ. ದೂರದ ಚೀನಾದಲ್ಲಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕ್ರಮವನ್ನೂ ವಿವರಿಸಿದೆ. ಭಾಷಣ ಮುಗಿಸಿದಾಗ ಪ್ರತಿ ಹೆತ್ತವರ ಕೈಗಳಿಂದಲೂ ಚಪ್ಪಾಳೆಯ ಸದ್ದು. ಮುಖದಲ್ಲಿ ಅಭಿಮಾನದ ನಗು. ನಾನಂತೂ ನಿರಾಳನಾಗಿದ್ದೆ. ಇದುವರೆಗೂ ನನ್ನೊಳಗೆ ಕಾಡುತ್ತಿದ್ದ ನೋವನ್ನು ಹಂಚಿಕೊಂಡ ಸಂತೃಪ್ತಿ ನನ್ನೊಳಗೆ.

ಮಧ್ಯಾಹ್ನದ ಊಟವನ್ನು ಮುಗಿಸಿದ ನಾನು ಅಲ್ಲೇ ಕುರ್ಚಿಯೊಂದರಲ್ಲಿ ಕುಳಿತು ಪುಸ್ತಕ ಓದುತ್ತಿದ್ದೆ. ಹುಡುಗನೊಬ್ಬ ಪಕ್ಕದಲ್ಲಿಯೇ ಬಂದು ಕುಳಿತುಕೊಂಡ. ಸರಿಸುಮಾರು ನನ್ನ ಮಗನ ವಯಸ್ಸಿನವನೇ. ಮಾತಾಡಲೋ ಬೇಡವೋ ಎಂಬ ಸಂದೇಹದಲ್ಲಿಯೇ ಮಾತು ಆರಂಭಿಸಿದ.

‘ಸಾರ್, ನೀವು ತುಂಬಾ ಚೆನ್ನಾಗಿ ಮಾತಾಡಿದ್ರಿ’

ಸಹಜವಾಗಿಯೇ ಸಂತಸವಾಯಿತು. ‘ನಾನು ಹೇಳಿದ್ದೆಲ್ಲಾ ನಿನಗೆ ಅರ್ಥವಾಗಿದೆಯಾ?’ ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿತ್ತು.

‘ಹ್ಞೂ, ಅರ್ಥವಾಗಿದೆ. ಆದರೆ, ಮಕ್ಕಳನ್ನು ಅವರ ಇಷ್ಟದ ಹಾಗೆ ಇರಲಿಕ್ಕೆ ಬಿಡದಿದ್ರೆ ನೀವೇನು ಮಾಡ್ತೀರಿ?’ ಆತನ ಪ್ರಶ್ನೆಗೆ ನನ್ನಲ್ಲಿ ತಕ್ಷಣಕ್ಕೆ ಉತ್ತರ ಹೊಳೆಯಲಿಲ್ಲ. ಅದರ ಕುರಿತಾಗಿ ನಾನು ಯೋಚಿಸಿರಲೇ ಇಲ್ಲ.

‘ಯಾಕಪ್ಪಾ? ನಿನ್ನ ತಂದೆ– ತಾಯಿ ನಿನ್ನ ಇಷ್ಟದ ಹಾಗೆ ಇರಲಿಕ್ಕೆ ಬಿಡ್ತಿಲ್ವಾ?’ ಪ್ರಶ್ನೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ.

‘ನನಗಲ್ಲ ಸರ್. ನನ್ನ ಫ್ರೆಂಡ್ ಒಬ್ಬ ಇದ್ದಾನೆ. ಅವನ ಇಷ್ಟವನ್ನು ಅವನ ತಂದೆ ಕೇಳಿಯೇ ಇಲ್ಲ. ಅವನಿಗೆ ಡ್ರಾಯಿಂಗ್ ಅಂದ್ರೆ ತುಂಬಾ ಇಷ್ಟ. ಆದ್ರೆ ಅಪ್ಪನ ಹತ್ರ ಹೇಳ್ಲಿಕ್ಕೆ ಭಯ. ಏನು ಮಾಡ್ಬೋದು ಸರ್?’

ನನ್ನ ಮೆದುಳು ಲೆಕ್ಕಾಚಾರದಲ್ಲಿ ತೊಡಗಿತ್ತು. ಹುಡುಗನೊಬ್ಬನ ಬದುಕನ್ನು ಸರಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ಅಪ್ಪನ ಆಸೆಯೆದುರು ಸೋತು ಹೋದ ನನ್ನಂತೆ ಆ ಹುಡುಗ ಸೋತು ಹೋಗಬಾರದು. ದೃಢವಾಗಿ ನಿಶ್ಚಯಿಸಿದ ನಾನು ಮುಂದಿನ ವಾರ ಸ್ನೇಹಿತನನ್ನು ಮತ್ತು ಸಾಧ್ಯವಾದರೆ ಆತನ ತಂದೆಯನ್ನೂ ಕರೆದುಕೊಂಡು ನನ್ನ ಮನೆಗೆ ಬರುವಂತೆ ನನ್ನೆದುರು ಕುಳಿತಿದ್ದ ಹುಡುಗನಿಗೆ ಸೂಚಿಸಿದೆ. ಮನೆಯ ವಿಳಾಸವನ್ನು ಕೊಟ್ಟೆ.

ಒಂದು ವಾರ ಕಳೆಯಿತು. ಮಗನನ್ನು ತರಬೇತಿಗೆ ಬಿಟ್ಟ ನಾನು, ಬೇಗನೇ ಮನೆ ತಲುಪಿದ್ದೆ. ಹುಡುಗನೊಬ್ಬನ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆ ನನ್ನಲ್ಲಿ ತೀವ್ರವಾಗಿತ್ತು. ದಿನಪತ್ರಿಕೆ ಓದುತ್ತಿದ್ದೆನಾದರೂ ಮನಸ್ಸಿನ ತುಂಬ ಆ ಹುಡುಗನದ್ದೇ ಯೋಚನೆ.

ಅಲ್ಲ, ಈ ಹೆತ್ತವರು ಹೀಗೇಕೆ ಮಾಡುತ್ತಾರೋ? ತಮ್ಮಿಷ್ಟದ ಪ್ರಕಾರವೇ ಮಕ್ಕಳು ಬದುಕಬೇಕೆಂಬ ಅಹಂಕಾರ ಇವರಿಗೆ. ಮಕ್ಕಳ ಭವಿಷ್ಯ ಕರಟಿ ಹೋದರೂ ಚಿಂತೆಯಿಲ್ಲ. ತಮ್ಮ ಆಸೆ ನೆರವೇರಬೇಕು ಇವರಿಗೆ. ಇಲ್ಲ, ಈ ಹುಡುಗನ ಬದುಕು ಹಾಗಾಗಬಾರದು. ನಾನು ಈ ಹುಡುಗನ ತಂದೆಯ ಮನಃಸ್ಥಿತಿಯನ್ನು ಬದಲಿಸಿಯೇ ಸಿದ್ಧ. ನನ್ನ ಯೋಚನೆಗೆ ಒಪ್ಪಿಗೆಯ ಸೂಚಕವೇನೋ ಎನ್ನುವಂತೆ ಗೇಟಿನ ಸದ್ದಾಯಿತು.

ಗೇಟಿನತ್ತ ನೋಡಿದೆ. ಕಳೆದ ವಾರ ನನ್ನ ಜೊತೆಗೆ ಮಾತನಾಡಿದ ಅದೇ ಹುಡುಗ. ಪಕ್ಕದಲ್ಲಿಯೇ ಅವನ ಸ್ನೇಹಿತ. ಅರೇ ಅವನು ನನ್ನ ಮಗನಂತಿದ್ದಾನಲ್ಲ. ಮಗನಂತೆ ಏನು? ನನ್ನ ಮಗನೇ! ಇವನ್ಯಾಕೆ ಆ ಹುಡುಗನ ಜೊತೆಗಿದ್ದಾನೆ? ಅಂದರೆ, ತನ್ನ ಆಸೆಯನ್ನು ಅದುಮಿಟ್ಟುಕೊಂಡು ತಂದೆಯ ಆಸೆಗೆ ಅನುಗುಣವಾಗಿ ಬದುಕುತ್ತಿರುವ ಆ ಹುಡುಗ ನನ್ನ ಮಗನೇ?! ನಾನು ಇವನ ಆಸೆಗೆ ಅಡ್ಡಿಬಂದಿದ್ದೇನೆಯೇ?! ನನ್ನ ಮುಷ್ಟಿ ಬಿಗಿಗೊಳ್ಳಲಾರಂಭಿಸಿತು.

‘ಅಪ್ಪಾ, ನನಗೆ ಡ್ರಾಯಿಂಗ್ ಎಂದರೆ ಇಷ್ಟ. ಆದರೆ, ನೀವು ಯಾವತ್ತೂ ನನ್ನ ಇಷ್ಟ ಕೇಳಲೇ ಇಲ್ಲ. ಕ್ರಿಕೆಟ್ಗೆ ಸೇರಿಸಿದ್ರಿ. ನನ್ನ ಇಷ್ಟವನ್ನು ನಿಮ್ಮ ಹತ್ರ ಹೇಳುವ ಧೈರ್ಯವೂ ನನಗಿರಲಿಲ್ಲ. ಇಲ್ಲಿಗೆ ಬರುವುದಕ್ಕೆ ಮೊದಲೇ ನನ್ನ ಫ್ರೆಂಡ್ ಹೇಳಿದ ವ್ಯಕ್ತಿ ನೀವೇ ಅಂತ ನನಗೆ ಗೊತ್ತಾಗಿತ್ತು. ಆದರೂ ಬಂದಿದ್ದೇನೆ. ಇಷ್ಟು ದಿನ ಹೇಳದ ವಿಷಯವನ್ನು ನಿಮಗೆ ತಿಳಿಸಬೇಕೂಂತ. ನನ್ನಿಂದಾಗಿ ನಿಮಗೆ ಅವಮಾನವಾಗಿದ್ದರೆ ಕ್ಷಮಿಸಿ.’

ಮಾತು ಮುಗಿಸಿದ ಮಗನ ಮುಖದಲ್ಲಿ ಆತಂಕದ ಛಾಯೆ ತುಂಬಿತ್ತು. ಬಿಗಿದಿದ್ದ ನನ್ನ ಮುಷ್ಟಿ ಸಡಿಲಗೊಳ್ಳಲಾರಂಭಿಸಿತು. ಹೌದಲ್ಲಾ! ನಾನ್ಯಾವತ್ತೂ ನನ್ನ ಮಗನ ಇಷ್ಟವನ್ನೇ ಕೇಳಲಿಲ್ಲವಲ್ಲ. ನಾನು ಸಾಧಿಸಲಾಗದ ಕ್ರಿಕೆಟನ್ನು ಮಗನ ಮೂಲಕ ಸಾಕಾರಗೊಳಿಸಹೊರಟೆ. ಊರೆಲ್ಲಾ ಭಾಷಣ ಬಿಗಿದ ನಾನು ನನ್ನ ಮಗನ ಆಸೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲವಲ್ಲ!

ನನಗೂ, ನನ್ನಪ್ಪನಿಗೂ ವ್ಯತ್ಯಾಸವಾದರೂ ಏನಿದೆ? ನನ್ನಪ್ಪನ ಮುಖವಾಡವನ್ನು ನಾನು, ಬಾಲ್ಯದ ನನ್ನ ಮುಖವಾಡವನ್ನು ನನ್ನ ಮಗ ಧರಿಸಿಕೊಂಡಿದ್ದಾನೆ ಅಷ್ಟೆ. ಸಾಕು. ಇಷ್ಟು ದಿನ ನನ್ನ ಮಗನನ್ನು ನನ್ನಿಷ್ಟದ ಮುಖವಾಡದ ಹಿಂದೆ ಮರೆಯಾಗಿ ಬದುಕುವಂತೆ ಮಾಡಿದ್ದೇ ಸಾಕು. ಇನ್ನಾದರೂ ಅವನು ಸ್ವಂತಿಕೆಯಿಂದ ಬದುಕಲಿ. ಮುಖವಾಡದ ಬದುಕೇನಿದ್ದರೂ ನನ್ನ ಕಾಲಕ್ಕೇ ಕೊನೆಗೊಳ್ಳಲಿ. ಯೋಚಿಸಿದ ನನ್ನ ಕೈಗಳು ಮಗನನ್ನು ಬಾಚಿ ತಬ್ಬಿಕೊಂಡಿದ್ದವು. ಮುಖವಾಡ ಕಳಚಿ ನೆಲವನ್ನಪ್ಪಿತ್ತು.

ನಾನು ಬ್ಯಾಟು ಹಿಡಿದೆನೆಂದಾದರೆ ಕಡಿಮೆಗೆ ಔಟಾಗುವವನಲ್ಲ. ಶಾಲೆಯಲ್ಲಿಯೂ ಹಾಗೆಯೇ. ಕೊನೆಯ ಪಿರಿಯಡ್ಗಾಗಿಯೇ ಕಾಯುತ್ತಿದ್ದೆ. ಶಾಲಾ ವಾರ್ಷಿಕೋತ್ಸವದ ನಿಮಿತ್ತ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಬಹುಮಾನ ಗಳಿಸಿಕೊಂಡಿದ್ದೆ. ಇದಾದ ಮೇಲಂತೂ ನನ್ನಲ್ಲಿದ್ದ ಕ್ರಿಕೆಟ್ ಹುಚ್ಚು ಮತ್ತಷ್ಟು ಜಾಸ್ತಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.