ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿಯ ಕನಸಿನ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್‌ ಇದಾಗಿದೆ: HDK

Published 23 ಜುಲೈ 2024, 14:10 IST
Last Updated 23 ಜುಲೈ 2024, 14:10 IST
ಅಕ್ಷರ ಗಾತ್ರ

ಬೆಂಗಳೂರು: ಸತತ 7ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್‌ ಇದಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಬಜೆಟ್‌ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ‘ನಾರಿಶಕ್ತಿ’ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ ಅನುದಾನ ನೀಡಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ನೀಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್‌ನಲ್ಲಿದೆ’ ಎಂದಿದ್ದಾರೆ.

‘ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್ ಆಗಿದೆ. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆಗೂ ಗಮನ ಕೊಡಲಾಗಿದೆ. ಬೆಂಗಳೂರು - ಚೆನ್ನೈ, ಹೈದರಾಬಾದ್ - ಬೆಂಗಳೂರು, ಬೆಂಗಳೂರು ಸೇರಿ ಒಟ್ಟು 12 ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ಅಭಿವೃದ್ಧಿಗೆ ಬೃಹತ್ ಕೊಡುಗೆ ನೀಡಲಿದೆ’ ಎಂದು ತಿಳಿಸಿದ್ದಾರೆ.

‘ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಜೆಟ್ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್ ಸಮೀಕ್ಷೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಿಸುವುದು ಸ್ವಾಗತಾರ್ಹ. ಮೇಲಾಗಿ ಸಹಜ ಕೃಷಿಗೆ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್‌ನಲ್ಲಿ ಅತಿಹೆಚ್ಚು ಒತ್ತು ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡುವುದು ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮವಾಗಿದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ನೀಡುವ ಘೋಷಣೆ ಸ್ವಾಗತಾರ್ಹ. ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್ ಆಗಿದೆ ಎನ್ನುವುದು ನನ್ನ ಭಾವನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT