ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಯಾಮ್ಸಂಗ್‌ ತಯಾರಿಕಾ ಘಟಕದಲ್ಲಿ ನೌಕರರ ಮುಷ್ಕರ; ಉಪಕರಣಗಳ ಉತ್ಪಾದನೆಗೆ ಧಕ್ಕೆ!

Published : 9 ಸೆಪ್ಟೆಂಬರ್ 2024, 16:00 IST
Last Updated : 9 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಚೆನ್ನೈ: ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿಗೆ ಸೇರಿದ ಚೆನ್ನೈನಲ್ಲಿರುವ ಗೃಹೋಪಯೋಗಿ ಉಪಕರಣಗಳ ತಯಾರಿಕಾ ಘಟಕದಲ್ಲಿ ನೌಕರರು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟು ಸೋಮವಾರದಿಂದ ಮುಷ್ಕರ ಆರಂಭಿಸಿದ್ದಾರೆ. 

ವೇತನ ಹೆಚ್ಚಳ ಬೇಡಿಕೆಗೆ ಸಂಬಂಧಿಸಿದಂತೆ ಕಂಪನಿಯ ವ್ಯವಸ್ಥಾಪನಾ ಮಂಡಳಿಯೊಂದಿಗಿನ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಅತಿ ದೊಡ್ಡ ಕಾರ್ಮಿಕರ ಒಕ್ಕೂಟ ಹೊಂದಿರುವ ಸ್ಯಾಮ್ಸಂಗ್ ಕಂಪನಿಯ ಕಾರ್ಮಿಕರ ಸಂಘವು, ಕಳೆದ ಆಗಸ್ಟ್‌ನಲ್ಲಿ ನಾಲ್ಕು ದಿನಗಳ ಮುಷ್ಕರ ಕೈಗೊಂಡಿತ್ತು. 

ಇದರ ಬೆನ್ನಲ್ಲೇ, ತಮಿಳುನಾಡಿನ ಶ್ರೀಪೆರಂಬದರೂರ್‌ನಲ್ಲಿರುವ ಕಂಪನಿಯ ಘಟಕದಲ್ಲಿರುವ ಕಾರ್ಮಿಕರೂ ಸೋಮವಾರದಿಂದ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ರೆಫ್ರಿಜರೇಟರ್‌ ಹಾಗೂ ವಾಷಿಂಗ್ ಮಷಿನ್‌ಗಳಂತ ಗೃಹೋಪಯೋಗಿ ಉಪಕರಣಗಳ ಉತ್ಪಾದನೆಗೆ ಧಕ್ಕೆಯಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಸ್ಯಾಮ್ಸಂಗ್ ಇಂಡಿಯಾ ಕಾರ್ಮಿಕರ ಒಕ್ಕೂಟದ ಮುಖಂಡ ಇ. ಮುತ್ತುಕುಮಾರ್ ಪ್ರತಿಕ್ರಿಯಿಸಿ, ‘ವೇತನ ಹೆಚ್ಚಳ ಮತ್ತು ಉತ್ತಮ ಕೆಲಸದ ವಾತಾವರಣ ಬೇಡಿಕೆ ಇಟ್ಟು ಕಾರ್ಮಿಕರು ಕಂಪನಿಯ ಹೊರಭಾಗದಲ್ಲಿ ಸಮವಸ್ತ್ರದಲ್ಲಿ ಕುಳಿತು ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಇದು ಹೀಗೇ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಯಾಮ್ಸಂಗ್ ಇಂಡಿಯಾದ ವಕ್ತಾರ, ‘ಕಂಪನಿಯ ಕಾನೂನು ಹಾಗೂ ನಿಬಂಧನೆಗೆ ಒಳಪಟ್ಟು ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಎಲ್ಲಾ ರೀತಿಯ ಕ್ರಮ ವಹಿಸುವ ಪ್ರಯತ್ನ ಮುಂದುವರಿದಿದೆ. ಆದರೆ ಗ್ರಾಹಕರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆಯೂ ಕ್ರಮ ವಹಿಸಲಾಗಿದೆ’ ಎಂದಿದ್ದಾರೆ.

ಕಾರ್ಮಿಕರು ಮುಷ್ಕರ ಆರಂಭಿಸುತ್ತಿದ್ದಂತೆ ಗುತ್ತಿಗೆ ಆಧಾರದ ನೌಕರರ ಮೂಲಕ ಉತ್ಪಾದನೆಯನ್ನು ಕಂಪನಿ ಮುಂದುವರಿಸಿದೆ. ಆ ಮೂಲಕ ಹಬ್ಬದ ಸಂದರ್ಭದಲ್ಲಿನ ಗ್ರಾಹಕರ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿನ ಉತ್ತಮ ವಹಿವಾಟಿನಿಂದಾಗಿ 2007ರಲ್ಲಿ ಸ್ಯಾಮ್ಸಂಗ್‌, ಶ್ರೀಪೆರಂಬದೂರಿನಲ್ಲಿ ತಯಾರಿಕಾ ಘಟಕ ಆರಂಭಿಸಿತು. ನಂತರ ಉತ್ತರ ಪ್ರದೇಶದ ನೊಯಿಡಾದಲ್ಲಿ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ ಆರಂಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT