ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

Published : 19 ಡಿಸೆಂಬರ್ 2023, 23:30 IST
Last Updated : 19 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments
ಪ್ರ

ನಾನು ಈಗಾಗಲೇ ಅಟಲ್‌ ಪೆನ್ಶನ್ ಯೋಜನೆಯ ಫಲಾನುಭವಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಇದನ್ನು 2015ರಲ್ಲಿ ತೆರೆದಿದ್ದೇನೆ. ನನ್ನಲ್ಲಿ ಪಿ.ಆರ್.ಎ.ಎನ್ ಸಂಖ್ಯೆ ಇದೆ. ಪ್ರಸ್ತುತ ನಾನು ಎನ್‌ಪಿಎಸ್ ಖಾತೆ ತೆರೆಯಲು ಉದ್ದೇಶಿಸಿದ್ದೇನೆ. ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಹೊಸ ಪಿ.ಆರ್.ಎ.ಎನ್ ಸಂಖ್ಯೆ ಪಡೆದುಕೊಳ್ಳಬಹುದೇ ಹಾಗೂ ಎರಡು ಪಿ.ಆರ್.ಎ.ಎನ್ ಸಂಖ್ಯೆಗಳನ್ನು ಹೊಂದಿಕೊಳ್ಳಬಹುದೇ. ಈ ಬಗ್ಗೆ ತಿಳಿಸಿ.

-ಗಣೇಶ ಮೂರ್ತಿ, ಬೆಂಗಳೂರು

ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು. ಇವೆರಡೂ ಹೂಡಿಕೆಗಳು ಪಿಂಚಣಿ ಯೋಜನೆಗಳಾಗಿದ್ದರೂ, ಪ್ರತ್ಯೇಕ ವಯೋಮಾನ ಹಾಗೂ ಹೂಡಿಕೆಯ ವೈವಿಧ್ಯತೆಯನ್ನು ಹೊಂದಿವೆ. ಇವುಗಳ ನಿಯಮಾವಳಿ, ಲಾಭಗಳು ವ್ಯತ್ಯಾಸವಾಗಿವೆ. ಆದರೆ, ಎರಡು ಪಿ.ಆರ್.ಎ.ಎನ್ ಪಡೆಯುವ ಮೂಲಕ ಒಂದಕ್ಕಿಂತ ಅಧಿಕ ಎನ್‌ಪಿಎಸ್ ಖಾತೆಗಳಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಬಂಧಗಳಿವೆ.  

ಆದರೆ, ನಿಮ್ಮ ಪ್ರಶ್ನೆಯಂತೆ, ಯಾವುದೇ ಹೂಡಿಕೆದಾರ ಎರಡು ಪ್ರತ್ಯೇಕ ಯೋಜನೆಗಳಲ್ಲಿ ಹೂಡಿಕೆ ಮಾಡುವ ಕಾರಣ ಹೊಸ ಸಂಖ್ಯೆ ಹೊಂದುವುದರಲ್ಲಿ ತೊಂದರೆ ಇಲ್ಲ. ಇದನ್ನು ಎನ್‌ಪಿಎಸ್‌ಗೆ ಸಂಬಂಧಿಸಿದ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಇವರ ಪ್ರಶ್ನೋತ್ತರ ಮಾಲಿಕೆಯಲ್ಲೂ ವಿವರಿಸಲಾಗಿದೆ.

ADVERTISEMENT
ಪ್ರ

ನಾನು ಹಾಗೂ ನನ್ನ ಪತ್ನಿ ಉದ್ಯೋಗಿಗಳಾಗಿದ್ದೇವೆ. ನಮ್ಮ ವಯಸ್ಸು ಕ್ರಮವಾಗಿ 45 ಹಾಗೂ 40. ಇಬ್ಬರ ಒಟ್ಟು ವಾರ್ಷಿಕ ಆದಾಯ ಸುಮಾರು ₹25 ಲಕ್ಷ (ತೆರಿಗೆ, ಪಿಎಫ್ ಪಾವತಿ ಕಳೆದು). ಪ್ರಸ್ತುತ ಒಂದು ವರ್ಷದ ಹಿಂದೆ ನಾವು ₹50 ಲಕ್ಷ ಸಾಲ ಪಡೆದು ಮನೆ ಕಟ್ಟಿಸಿದ್ದೇವೆ. ಸಾಲ ಇನ್ನು 14 ವರ್ಷ ಪಾವತಿಗೆ ಬಾಕಿ ಇದೆ. ವರ್ಷದ ಜಂಟಿ ಇಎಂಐ ಸುಮಾರು ₹49 ಸಾವಿರ ಬರುತ್ತಿದೆ. ಇದನ್ನು ಇಬ್ಬರೂ ಸಮಾನವಾಗಿ ಕಟ್ಟಿ ತೀರಿಸುತ್ತಿದ್ದೇವೆ. ತಿಂಗಳ ಮನೆ ಖರ್ಚು ₹40 ಸಾವಿರ. ನಮಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಅವರ ವಯಸ್ಸು ಎಂಟು ಹಾಗೂ ಹತ್ತು. ಶಾಲಾ ಶುಲ್ಕ ₹2.50 ಲಕ್ಷ. ನಾವು ಸೆಕ್ಷನ್ 80ಸಿ ಇದರಡಿ ಇರುವ ಎಲ್ಲಾ ಹೂಡಿಕೆ ಮಾಡಿರುತ್ತೇವೆ. ಅಗತ್ಯವಿರುವ ಇನ್ಶೂರೆನ್ಸ್ ಪಡೆದಿದ್ದೇವೆ.

ನನ್ನ ಪ್ರಶ್ನೆ ಏನೆಂದರೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಣ ಹೇಗೆ ಉಳಿತಾಯ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲೂ ಖಾತೆ ತೆರೆದು ಒಬ್ಬೊಬ್ಬರ ಹೆಸರಲ್ಲಿ ತಿಂಗಳಿಗೆ ತಲಾ ₹10 ಸಾವಿರ ಹೂಡಿಕೆ ಮಾಡುತ್ತಿದ್ದೇವೆ. ಇದಕ್ಕೆ ನಿಖರ ಬಡ್ಡಿ ಬರುವ ಕಾರಣ ಮುಂದೆ ಈ ಮೊತ್ತ ನಮಗೆ ಸಾಕಾಗಬಹುದೇ? ಮನೆಯಲ್ಲಿ ತಂದೆ, ತಾಯಿ ಇದ್ದು ಅವರ ಹೆಸರಲ್ಲಿ ವರ್ಷಕ್ಕೆ ₹40 ಸಾವಿರದ ಇನ್ಶೂರೆನ್ಸ್ ಪಾವತಿಸುತ್ತಿದ್ದೇನೆ. ನಮ್ಮ ನಿವೃತ್ತಿ ಬಗ್ಗೆಯೂ ಹಣ ಹೂಡಿಕೆ ಮಾಡುವುದಿದ್ದರೆ ಹೇಗೆ ಮಾಡಬೇಕು ಹಾಗೂ ಎಲ್ಲಿ ತೊಡಗಿಸಿಕೊಳ್ಳಬೇಕು.

-ಗಂಗಾಧರ ಶಿರ್ಕೆ, ಬೆಂಗಳೂರು

ಬದುಕಿನ ವಿವಿಧ ಹಂತದ ಆರ್ಥಿಕ ಅಗತ್ಯಗಳನ್ನು ಸಮೀಕರಿಸಿ, ನಮ್ಮ ಅತ್ಯಗತ್ಯ ಖರ್ಚು, ಹೂಡಿಕೆ ಇವೆಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಹಸವೇ. ನೀವು ಕೊಟ್ಟ ಮಾಹಿತಿಯಂತೆ ನೀವು ವಾರ್ಷಿಕವಾಗಿ ₹5.88 ಲಕ್ಷದ ಸಾಲ ಮರುಪಾವತಿ ಹಾಗೂ ಇಬ್ಬರು ಮಕ್ಕಳ ಹೆಸರಲ್ಲಿ ನೀವು ಮಾಡುವ ಸುಕನ್ಯಾ ಸಮೃದ್ಧಿ ಹೂಡಿಕೆ, ಇನ್ಶೂರೆನ್ಸ್ ಹೂಡಿಕೆ ಇತ್ಯಾದಿ ಒಟ್ಟಾರೆ ಹೂಡಿಕೆ ₹3 ಲಕ್ಷ ಎಂದು ತಿಳಿಸಲಾಗಿದೆ. ಇದು ಸೆಕ್ಷನ್ 80ಸಿ ಅಡಿ ಸಿಗುವ ತೆರಿಗೆ ವಿನಾಯಿತಿ ಮೊತ್ತವಾಗಿದೆ. ಇನ್ನು ಮನೆಯ ಖರ್ಚು ₹4.80 ಲಕ್ಷ, ಶಾಲಾ ಶುಲ್ಕ ಸುಮಾರು ₹2.50 ಲಕ್ಷ. ಇದರೊಡನೆ ನಿಮ್ಮ ತಂದೆ, ತಾಯಿ ಹೆಸರಲ್ಲಿ ಪಾವತಿಸುವ ಇನ್ಶೂರೆನ್ಸ್‌ ಮೊತ್ತ ₹40 ಸಾವಿರ. ಇವೆಲ್ಲಾ ಪಾವತಿಸಿ ಉಳಿಯುವ ಮೊತ್ತ ₹8 ರಿಂದ ₹9 ಲಕ್ಷ ಎಂದು ಊಹಿಸಲಾಗಿದೆ.

ಈ ಉಳಿಕೆ ಮೊತ್ತವನ್ನು ದೀರ್ಘಾವಧಿ ಹಾಗೂ ಮಧ್ಯಮ ಅವಧಿಯ ಹೂಡಿಕೆಗಳಾಗಿ ವಿಭಜಿಸಿ ಹೂಡಿಕೆ ಮಾಡಿ. ಯಾವತ್ತೂ ಅನಿಶ್ಚಿತ ಅಗತ್ಯಗಳ ಹೊಂದಾಣಿಕೆಗೆ ಐದರಿಂದ ಹತ್ತು ಲಕ್ಷದ ನಿಧಿ ಮುಂದಿನ ಒಂದೆರಡು ವರ್ಷಗಳಲ್ಲಿ ಹಂತ ಹಂತವಾಗಿ ಹೊಂದಿಸಿ. ಇದು ಯಾವುದೇ ಸಮಯ ಹಿಂಪಡೆಯುವ ರೀತಿಯಲ್ಲಿ ಇರಲಿ. ಉಳಿದ ಮೊತ್ತವನ್ನು ನಿಮ್ಮ ಇಬ್ಬರ ಹೆಸರಲ್ಲಿ ಪ್ರತ್ಯೇಕವಾಗಿ ಎನ್‌ಪಿಎಸ್ ತೆರೆಯುವ ಮೂಲಕ ಹೂಡಿಕೆ ಮಾಡಿ. ಇದರಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಆಟೊ ಮೋಡ್ ಆಯ್ಕೆ ಮಾಡಿ ಹೂಡಿಕೆ ಮಾಡಿ. ಇದರಿಂದ ಮಾರುಕಟ್ಟೆ ವ್ಯತಿಯಾನಕ್ಕೆ ಸಂಬಂಧಿಸಿ ಎನ್‌ಪಿಎಸ್ ನಿರ್ವಾಹಕರು ಹೂಡಿಕೆದಾರರಿಗೆ ಲಾಭದಾಯಕವಾಗುವ ರೀತಿ ಖಾತೆಯ ಹಣ ನಿರ್ವಹಿಸುತ್ತಾರೆ. ಇದರಲ್ಲಿ ವರ್ಷಕ್ಕೆ ₹50 ಸಾವಿರ ತೊಡಗಿಸಿ. ಈ ಮೊತ್ತಕ್ಕೆ ಸೆಕ್ಷನ್ 80ಸಿಸಿಡಿ (1ಬಿ) ಇದರಡಿ ಹೆಚ್ಚುವರಿ ತೆರಿಗೆ ರಿಯಾಯಿತಿಯೂ ಸಿಗುತ್ತದೆ.  
       
ನಿವೃತ್ತಿ ಸಮಯಕ್ಕೆ ನಿಮಗಿಬ್ಬರಿಗೂ ಇನ್ನು 15 ರಿಂದ 20 ವರ್ಷಗಳಿವೆ ಹಾಗೂ ಮಕ್ಕಳ ಉನ್ನತ ಶಿಕ್ಷಣ - ವಿವಾಹ ಇತ್ಯಾದಿಯನ್ನು ಗಮನಿಸಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿರುವುದು ಸೂಕ್ತವೇ. ಇದಲ್ಲದೆ, ನೀವು ಶಿಕ್ಷಣಕ್ಕಾಗಿ ಅಗತ್ಯವಿರುವ ಹಣ ಕೂಡಿಡಲು ನಾಲ್ಕೈದು ಬಗೆಯ ಮ್ಯೂಚುವಲ್ ಫಂಡ್‌ಗಳಲ್ಲಿ ತಿಂಗಳಿಗೆ ₹25 ಸಾವಿರದಿಂದ ₹50  ಸಾವಿರ ಮೊತ್ತ ನಿಕ್ಷೇಪಿಸಿ. ಅರ್ಧದಷ್ಟು ಹಣ ಎಸ್ಐಪಿ ಮೂಲಕವೂ, ಉಳಿದ ಮೊತ್ತವನ್ನು ಮಾರುಕಟ್ಟೆ ಸೂಚ್ಯಂಕ 5 ರಿಂದ 10 ಶೇಕಡಾ ಕೆಳಕ್ಕೆ ಕುಸಿದಾಗ ಹಂತ ಹಂತವಾಗಿ ಹೂಡಿಕೆ ಮಾಡಿ. ನಿರ್ದಿಷ್ಟ ಫಂಡ್‌ಗಳ ಆಯ್ಕೆಗೆ ಅಗತ್ಯ ಮಾಹಿತಿ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಬ್ಯಾಲನ್ಸ್ಡ್ ಫಂಡ್, ಅಗ್ರೆಸ್ಸಿವ್ ಹೈಬ್ರಿಡ್ ಫಂಡ್, ಮಲ್ಟಿ ಅಸೆಟ್ ಫಂಡ್ ಇತ್ಯಾದಿಗಳ ಆಯ್ಕೆ ಉತ್ತಮ. ಇವು ದೀರ್ಘಕಾಲದ ನಿರಂತರ ಹೂಡಿಕೆಯಿಂದ ವರ್ಷಕ್ಕೆ ಸರಾಸರಿ 20ಕ್ಕೂ ಹೆಚ್ಚಿನ ಲಾಭ ನೀಡಿರುವ ನಿದರ್ಶನಗಳಿವೆ.

ಯಾವತ್ತೂ ಮುಂದಿನ ವರ್ಷಗಳ ವೆಚ್ಚ ಗಮನಿಸಿ ಅದನ್ನು ಸರಿದೂಗಿಸುವ ಹೂಡಿಕೆಗಳನ್ನು ಮಾಡಿದರಷ್ಟೇ ದಿನನಿತ್ಯದ ಹಣದುಬ್ಬರ ಪ್ರಮಾಣವನ್ನು ನಿಭಾಯಿಸಬಹುದು. ನಿಮಗೆ ಷೇರು ಮಾರುಕಟ್ಟೆಯ ಅನುಭವವಿದ್ದರೆ ವರ್ಷದಲ್ಲಿ ಒಂದೆರಡು ಲಕ್ಷ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡುವ ರೂಢಿ ಮಾಡಿಕೊಳ್ಳಿ. ಆಯ್ಕೆಯ ಕಂಪನಿಗಳು ಉತ್ತಮ ದರ್ಜೆಯದ್ದಾಗಿರಲಿ. ಇವು ಡಿವಿಡೆಂಡ್ ಕೊಡುವಂಥದಾಗಿರಲಿ, ಜೊತೆಗೆ ನಿಮ್ಮ ಬಂಡವಾಳವನ್ನು ವೃದ್ಧಿಸಿ ಲಾಭ ಗಳಿಸುವಲ್ಲಿ ನೆರವಾಗುವ ಗುಣಮಟ್ಟ ಹೊಂದಿರುವ ವಿಶ್ವಾಸಾರ್ಹ ಸಂಸ್ಥೆಗಳಾಗಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT