ಒಮ್ಮೆ ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಬಿಬಿಸಿಯಲ್ಲಿ ಉಪನ್ಯಾಸ ನೀಡಬೇಕಿತ್ತು. ಬಿಬಿಸಿ ಕಚೇರಿಗೆ ಹೋಗಲು ಅವರು ಒಂದು ಟ್ಯಾಕ್ಸಿ ಹುಡುಕುತ್ತಿದ್ದರು. ಸುಮಾರು ಹೊತ್ತು ಹುಡುಕಿದರೂ ಯಾವುದೇ ಟ್ಯಾಕ್ಸಿ ಸಿಗಲಿಲ್ಲ. ನಂತರ ಒಬ್ಬ ಸಿಕ್ಕ. ಅವನಿಗೆ ‘ಬೇಗ ಬಾರಪ್ಪ, ಬಿಬಿಸಿಗೆ ಹೋಗಬೇಕು’ ಎಂದರು. ಅದಕ್ಕೆ ಟ್ಯಾಕ್ಸಿ ಚಾಲಕ ಮುಖ ಸಿಂಡರಿಸಿಕೊಂಡು ‘ಆಗಲ್ಲ. ಇನ್ನು ಕೆಲವೇ ಸಮಯದಲ್ಲಿ ಬಿಬಿಸಿಯಲ್ಲಿ ನಮ್ಮ ನಾಯಕ ಚರ್ಚಿಲ್ ಭಾಷಣ ಮಾಡಲಿದ್ದಾರೆ. ನಾನು ಅದನ್ನು ಕೇಳಬೇಕು’ ಎಂದ. ಅದಕ್ಕೆ ಚರ್ಚಿಲ್ ‘ನಾನು ಎರಡರಷ್ಟು ಬಾಡಿಗೆ ಕೊಡುತ್ತೇನೆ. ಬರುತ್ತೀಯಾ’ ಎಂದು ಕೇಳಿದರು. ಎರಡರಷ್ಟು ಬಾಡಿಗೆ ಎಂದು ಕೇಳಿದ್ದೇ ತಡ ಚಾಲಕ ‘ಆಯ್ತು ಸ್ವಾಮಿ ಬನ್ನಿ. ಆ ಚರ್ಚಿಲ್ ಮತ್ತು ಅವರ ಭಾಷಣ ಹಾಳಾಗಲಿ’ ಎಂದು ಹೊರಟ.

ನಮ್ಮ ರಾಜ್ಯದ ಶಾಸಕರೂ ಆ ಚಾಲಕನಂತೆಯೇ ಕಾಣುತ್ತಾರೆ. ಆ ಚಾಲಕನಿಗೆ ಚರ್ಚಿಲ್ ಬಗ್ಗೆ ಗೌರವ ಕಡಿಮೆ ಇರಲಿಲ್ಲ. ಆದರೆ ಹೆಚ್ಚು ಹಣ ಸಿಗುತ್ತದೆ ಎಂದರೆ ಅವರ ಮೇಲಿನ ಗೌರವವನ್ನು ಕಡೆಗಣಿಸಲು ಆತ ಸಿದ್ಧ. ಹಾಗೆಯೇ ನಮ್ಮ ಶಾಸಕರು. ಅವರಿಗೂ ಪಕ್ಷದ ಮೇಲೆ ಪ್ರೀತಿ ಇಲ್ಲ ಎಂದಲ್ಲ. ಆದರೆ ಯಾರಾದರೂ ಹೆಚ್ಚು ಹಣ ಕೊಡುತ್ತಾರೆ ಎಂದರೆ ಮತ್ತೊಂದು ಪಕ್ಷಕ್ಕೆ ಹೋಗಲು ಅವರು ರೆಡಿ. ಆದರೆ ಆ ಚಾಲಕನಿಗೆ ಅದು ಹೊಟ್ಟೆಪಾಡು. ಶಾಸಕರಿಗೆ ರಾಜಕೀಯ ಹೊಟ್ಟೆಪಾಡು ಅಲ್ಲ. ಅಥವಾ ಹೊಟ್ಟೆಪಾಡು ಆಗಬಾರದು. ಈಗ ಅದು ಹೊಟ್ಟೆಪಾಡು ಆಗಿದ್ದೇ ಎಲ್ಲ ಸಮಸ್ಯೆಗಳ ಮೂಲ.

ಕಳೆದ ಒಂದು ವಾರದಿಂದ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸಿ. ‘ನಾವು 18 – 20 ಶಾಸಕರನ್ನು ಕರೆದುಕೊಂಡು ಮುಂಬೈಗೆ ಹೋಗುತ್ತೇವೆ. ಅವರೆಲ್ಲಾ ಒಟ್ಟಾಗಿ ಬಂದು ರಾಜೀನಾಮೆ ನೀಡುತ್ತಾರೆ. ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ’ ಎಂದು ಬಿಜೆಪಿಯ ಕೆಲವು ಮುಖಂಡರು ಹೇಳುತ್ತಾರೆ. ಅದಕ್ಕೆ ಕಾಂಗ್ರೆಸ್ ನವರು ‘ಆಪರೇಷನ್ ಮಾಡಲು ಬರುವುದು ಬಿಜೆಪಿಯವರಿಗೆ ಮಾತ್ರ ಅಲ್ಲ. ನಮಗೂ ಗೊತ್ತಿದೆ. ನಮ್ಮ ಜೊತೆಯೂ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ’ ಎಂದು ಹೇಳುತ್ತಾರೆ. ತಾವೇನು ಕಡಿಮೆ ಎಂದು ಜೆಡಿಎಸ್ ಮುಖಂಡರು ಕೂಡ, ‘ನಾವೂ ಆಪರೇಷನ್ ಜೆಡಿಎಸ್ ಗೆ ಸಿದ್ಧ’ ಎನ್ನುತ್ತಾರೆ. ಅಂದರೆ ನಮ್ಮ ಶಾಸಕರಿಗೆ ಯಾವ ಸಿದ್ಧಾಂತವೂ ಇಲ್ಲ. ಹಣ, ಅಧಿಕಾರ ಸಿಗುತ್ತದೆ ಎಂದರೆ ಅವರು ಯಾವುದಕ್ಕೂ ಸಿದ್ಧರಾಗುತ್ತಾರೆ ಎಂದು ಜನರು ಅಂದುಕೊಂಡರೆ ತಪ್ಪೇನು?

‘ನನ್ನ ಬಳಿ ರಾಜ್ಯ ಸರ್ಕಾರವೇ ಇದೆ ಹುಷಾರ್’ ಎಂದು ಮುಖ್ಯಮಂತ್ರಿ ಹೇಳಿದರೆ ವಿರೋಧ ಪಕ್ಷದ ಮುಖಂಡರು ‘ನನ್ನ ಬಳಿ ಕೇಂದ್ರ ಸರ್ಕಾರ ಇದೆ’ ಎನ್ನುತ್ತಾರೆ. ‘ನಮ್ಮ ಸರ್ಕಾರವನ್ನು ಬೀಳಿಸಿದರೆ ಜನರು ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್ಚರಿಸಿದರೆ ವಿರೋಧ ಪಕ್ಷದವರು ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ದಂಗೆ ಸೃಷ್ಟಿಸುತ್ತಾರೆ. ಜನರನ್ನು ಕೆರಳಿಸಿ ಪ್ರತಿಭಟನೆಗೆ ಸಜ್ಜುಗೊಳಿಸಿದರೆ ಅದನ್ನು ದಂಗೆ ಎಂದು ಕರೆಯಲಾಗದು. ಯಾವುದಾದರೂ ಭಾರೀ ಅನ್ಯಾಯದ ವಿರುದ್ಧ ಜನರೇ ಸ್ವಯಂ ಪ್ರೇರಣೆಯಿಂದ ಭಾರೀ ಪ್ರತಿಭಟನೆಗೆ ಮುಂದಾದರೆ ಅದನ್ನು ದಂಗೆ ಎಂದು ಹೇಳಬಹುದು. ನಮ್ಮ ರಾಜಕಾರಣಿಗಳು ‘ಆಯಾರಾಂ ಗಯಾರಾಂ’ ರಾಜಕಾರಣ ಮುಂದುವರಿಸಿದರೆ ನಿಜವಾಗಿಯೂ ಜನರು ದಂಗೆ ಏಳುವ ಕಾಲ ಬರುತ್ತದೆ.

‘ನಾನು ಎರಡು ಬಾರಿ ಶಾಸಕನಾಗಿದ್ದೇನೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಅದಕ್ಕಾಗಿ ನನಗೆ ಸಚಿವ ಸ್ಥಾನ ಸಿಗಬೇಕು. ನಾನು ಈ ಜಾತಿಯಿಂದ ಬಂದವನು. ಜಾತಿ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಸಿಗಲೇ ಬೇಕು’ ಎಂದು ಶಾಸಕರು ಬಂಡಾಯ ಏಳುತ್ತಾರೆ. ಆದರೆ ಯಾವುದೇ ಶಾಸಕ ಸಚಿವನಾಗುವುದಕ್ಕೆ ತನ್ನ ಅರ್ಹತೆ ಏನು ಎನ್ನುವುದನ್ನು ಸಾಬೀತು ಮಾಡುವುದೇ ಇಲ್ಲ. ಜನರ ಸಂಕಷ್ಟ ಅವರ ಕಣ್ಣಿಗೆ ಕಾಣುವುದೇ ಇಲ್ಲ. ಪ್ರವಾಹದಿಂದ ಕೆಲವು ಜಿಲ್ಲೆಗಳು ತತ್ತರಿಸಿವೆ. ಬರಗಾಲದಿಂದ ಇನ್ನು ಕೆಲವು ಜಿಲ್ಲೆಗಳಲ್ಲಿ ಜನಜೀವನ ದುಸ್ತರವಾಗಿದೆ. ಇವೆಲ್ಲ ನಮ್ಮ ಶಾಸಕರ ಕಣ್ಣಿಗೆ ಬೀಳುವುದಿಲ್ಲ. ಕರುಳಿಗೂ ತಾಗುವುದಿಲ್ಲ.

ಈಗ ಕಾರ್ಪೊರೇಟ್ ಯುಗ. ಎಲ್ಲವೂ ಕಾರ್ಪೊರೇಟ್ ಶೈಲಿಯಲ್ಲಿಯೇ ನಡೆಯುತ್ತದೆ. ನಮ್ಮ ಯಾವುದೇ ಶಾಸಕ ರಾಜ್ಯದ ಅಭಿವೃದ್ಧಿಯ ಬಗ್ಗೆ ತನ್ನ ಕಲ್ಪನೆ ಏನು? ಯೋಜನೆಗಳು ಏನೇನು? ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಯೋಜನೆ ಅನುಷ್ಠಾನ ಹೇಗೆ ಎಂದು ಹೇಳುವುದಿಲ್ಲ. ನಿಜವಾಗಿ ಇವರೆಲ್ಲ ಇಂತಹ ವಿಷಯಗಳ ಮೇಲೆ ಜನರ ಮುಂದೆ ಪಿಪಿಟಿ ಪ್ರೆಸೆಂಟೇಷನ್ ಮಾಡಬೇಕು. ಅಂಗೈಯಲ್ಲಿ ಸ್ವರ್ಗ ತೋರಿಸದೆ, ಕಾರ್ಯಗತಗೊಳಿಸುವ ಯೋಜನೆಯನ್ನು ಜನರ ಮುಂದಿಟ್ಟರೆ ಅವರೂ ಅದನ್ನು ಒಪ್ಪಿಕೊಳ್ಳಬಹುದು. ಆಗ ಜನರೇ ಮುಂದೆ ನಿಂತು ಅವರಿಗೆ ಸಚಿವ ಸ್ಥಾನ ಸಿಗುವಂತೆ ಮಾಡುತ್ತಾರೆ. ಇಲ್ಲವಾದರೆ ಇಂತಹ ವ್ಯಕ್ತಿಗಳಿಗೆ ಮತ ಹಾಕಿದ ತಪ್ಪಿಗೆ ಇದು ಪ್ರಾಯಶ್ಚಿತ್ತ ಎಂದು ತಲೆ ತಲೆ ಬಡಿದುಕೊಳ್ಳುತ್ತಾರೆ. ಯಾಕೆಂದರೆ ನಮ್ಮ ರಾಜಕಾರಣಿಗಳು ಹೀಗೆಲ್ಲಾ ನಡೆದುಕೊಳ್ಳುವುದಕ್ಕೆ ಅವರಷ್ಟೇ ಕಾರಣ ಅಲ್ಲ. ಅವರನ್ನು ಗೆಲ್ಲಿಸಿದ ನಾವು, ಮತದಾರರೂ ಕಾರಣ. ನಾವು ಜಾತಿ, ಹಣದ ಆಮಿಷಕ್ಕೆ ಒಳಗಾಗಿ ಓಟು ಹಾಕಿದ್ದರಿಂದ ಅವರು ಗೆದ್ದು ಬಂದ ಮೇಲೆ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ.

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಉತ್ತರ ಪ್ರದೇಶದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದಾಗ ಅವರ ಮನೆಗೆ ಹವಾನಿಯಂತ್ರಣ ಯಂತ್ರ ಅಳವಡಿಸಲು ಅಲ್ಲಿನ ಸರ್ಕಾರ ಆದೇಶಿಸಿತು. ಯಂತ್ರವೂ ಮನೆಗೆ ಬಂತು. ಹೊರಗೆ ಹೋಗಿದ್ದ ಶಾಸ್ತ್ರಿಗಳು ಮನೆಗೆ ಬಂದು ಈ ಯಂತ್ರವನ್ನು ನೋಡಿ ‘ಇದೇನು’ ಎಂದು ಕೇಳಿದರು. ಅದಕ್ಕೆ ಅವರ ಪತ್ನಿ ಲಲಿತಾ ಶಾಸ್ತ್ರಿ, ‘ಇನ್ನೇನು ಬೇಸಿಗೆ ಶುರುವಾಗುತ್ತದಲ್ಲ. ಭಾರೀ ಸೆಕೆ. ಅದಕ್ಕೇ ಹವಾನಿಯಂತ್ರಣ ಯಂತ್ರವನ್ನು ಸರ್ಕಾರ ಕಳಿಸಿಕೊಟ್ಟಿದೆ. ನಾವೇನು ಕೇಳಿದ್ದಲ್ಲ. ಅವರೇ ಕೊಟ್ಟಿದ್ದಾರೆ’ ಎಂದರು. ತಕ್ಷಣವೇ ಶಾಸ್ತ್ರಿಗಳು ‘ಇದೆಲ್ಲ ಬೇಕಾಗಿಲ್ಲ. ಈ ಸಚಿವ ಪದವಿ ಶಾಶ್ವತವೂ ಅಲ್ಲ. ಇನ್ನು ಕೆಲವೇ ದಿನಗಳಲ್ಲಿ ನಾವು ಮತ್ತೆ ಅಲಹಾಬಾದಿನ ನಮ್ಮ ಸಣ್ಣ ಮನೆಗೇ ಹೋಗಬೇಕಾಗುತ್ತದೆ. ಈಗ ಇಲ್ಲಿ ಹವಾನಿಯಂತ್ರಣ ವ್ಯವಸ್ಥೆ ನಮಗೆ ಅಭ್ಯಾಸವಾಗಿಬಿಟ್ಟರೆ ಅಲ್ಲಿಗೆ ಹೋದ ಮೇಲೆಯೂ ಅದೇ ಬೇಕು ಅನ್ನಿಸುತ್ತದೆ. ಆಗ ಅದನ್ನು ತರಲು ಹಣ ಎಲ್ಲಿದೆ. ಅದಕ್ಕೆ ಈ ವೈಭೋಗವೇ ಬೇಡ’ ಎಂದು ಹವಾನಿಯಂತ್ರಣ ಯಂತ್ರವನ್ನು ವಾಪಸ್ ಕಳಿಸಿದರು.

ಈಗ ನಮ್ಮ ಶಾಸಕರಿಗೂ ಹಾಗೆಯೇ ಆಗಿದೆ. ಮೊದಮೊದಲು ಅವರು ಕೇಳದೇ ಹಣ ಸಿಕ್ಕಿತು. ಈಗ ಹಣ ಇಲ್ಲದೆ ಬದುಕುವುದು ಕಷ್ಟ ಎನ್ನುವಂತಾಗಿದೆ. ಅದಕ್ಕೇ ಅವರೇ ಹಣ ಕೇಳಲು ತೊಡಗಿದ್ದಾರೆ. ಹಣ ಕೊಟ್ಟಷ್ಟೂ ಸಾಕಾಗುತ್ತಿಲ್ಲ. ಅದು ಬಕಾಸುರನ ಹೊಟ್ಟೆಯ ಹಾಗೆ ಆಗಿದೆ. ಮತದಾರರೂ ಹಾಗೆ. ಅವರಿಗೆ ಮೊದಲು ಹಣ ಕೊಟ್ಟು ಕಲಿಸಲಾಯಿತು. ಅವರು ಈಗ ಹಣ ಇಲ್ಲದೆ ಮತಕೇಂದ್ರಗಳಿಗೆ ಬರುವುದಿಲ್ಲ ಎನ್ನುವ ಸ್ಥಿತಿ ತಲುಪಿದ್ದಾರೆ. ಇದಕ್ಕೆ ಯಾರನ್ನು ದೂಷಿಸುವುದು? ಅಯ್ಯೋ ಅಯ್ಯೋ ರಾಮ ಎಂದು ಹೇಳುತ್ತಿದ್ದರೆ ಸಮಸ್ಯೆ ಪರಿಹಾರ ಆಗಲ್ಲ. ರಾಮಬಾಣ ಸಿಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.