ಮಹಾಭಾರತದ ರಚಯಿತರಾದ ವ್ಯಾಸರನ್ನು ಈತ ‘ಚಿರಂಜೀವಿ’ ಎಂದು ಸಂಪ್ರದಾಯ ಭಾವುಕವಾಗಿ ನಂಬುತ್ತದೆ. ಮಹಾಭಾರತವೆಂಬ ಇತಿಹಾಸವಂತೂ ಚಿರಂಜೀವಿ ಎಂದು ಭಾವುಕವಾಗದೆಯೂ ಹೇಳಬಹುದು. ಈ ಚಿರಂಜೀವಿತೆಯು ಸಾಧಿತವಾಗುವ ರೀತಿಗಳು ಮಾತ್ರ ವಿಶಿಷ್ಟವಾಗಿವೆ. ಇಲ್ಲಿ ಭೀಷ್ಮನಂಥ ಪಾತ್ರವಿದೆ.

‘ಇಚ್ಛಾಮರಣ’ದಂಥ ಪರಿಕಲ್ಪನೆ ಇದೆ. ಇಚ್ಛಾಮರಣವೆಂದರೆ ತಾನು ಬಯಸಿದಂತೆ, ಬಯಸಿದಾಗ ಸಾವನ್ನು ಪಡೆಯುವುದು. ಸಾವು ಅನಿವಾರ್ಯವಾಗಿದೆ. ಆದರೆ ಈ ಅನಿವಾರ್ಯ ಘಟನೆಯು ಕೂಡ ಒಂದು ರೀತಿಯಲ್ಲಿ ತನ್ನ ಅಳವಿನಲ್ಲಿಯೇ ಇದೆ – ಎಂದಂತೆ. ಇಲ್ಲಿ ಸಾವಿನಂಥ ಸಾವು ಕೂಡ ವ್ಯಕ್ತಿಯ ಸಂಕಲ್ಪಕ್ಕೆ ತನ್ನನ್ನು ಒಗ್ಗಿಸಿಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. ಮರಣವು ನೈಸರ್ಗಿಕವಾದರೆ ಇಚ್ಛಾಮರಣವು ಚರಿತ್ರೆಯಾಗಿದೆ! ಇತಿಹಾಸವಾಗಿದೆ! ಇದು ಒಂದು ರೀತಿಯಲ್ಲಿ ಸಾವನ್ನು ಗೆದ್ದಂತೆ. ಈ ಅರ್ಥದಲ್ಲಿ ಇತಿಹಾಸವು ಚಿರಂಜೀವಿಯಾಗಲು ತುಡಿಯುತ್ತಿದೆ ಎನ್ನಬಹುದು. ಹೌದು; ಇಚ್ಛಾಮರಣವು ಭೀಷ್ಮನಿಗೆ ತಂದೆಯಾದ ಶಂತನು ನೀಡಿದ ವರವಲ್ಲವೆ? ಭೀಷ್ಮನು ದೊಡ್ಡ ತ್ಯಾಗವನ್ನು ಮಾಡಿರುವುದೇನೋ ಹೌದು; ಆದರೆ ಇಚ್ಛಾಮರಣವನ್ನು ಸಿದ್ಧಿಸಿಕೊಂಡಿರುವುದರಲ್ಲಿ ಭೀಷ್ಮನ ನೇರವಾದ ಪಾತ್ರವಿಲ್ಲವಲ್ಲ ಎನ್ನಬಹುದು. ಆದರೆ ನೇರವಲ್ಲದಿರುವುದರಲ್ಲೇ ನಿಜವಾದ ಸೊಗಸಿರುವುದು. ತಾನು ನಿಜವಾಗಿ ಬಯಸದೆ, ಆದರೆ ತಾನು ಮಾಡಿದ ಯಾವುದೋ ದೊಡ್ಡ ಕೆಲಸದ ಸಹಜ ಉಪಫಲವೆಂಬಂತೆ ಸಿದ್ಧಿಯೊಂದು ಒದಗಿಬರುವುದು – ಬದುಕು ತೆರೆದುಕೊಳ್ಳುವ ರೀತಿಯೇ ಇರಬಹುದು. ದೊಡ್ಡದೊಂದು ಬದುಕು, ಸಾವನ್ನು ತನ್ನದೇ ಸಾವಯವ ಭಾಗವೆಂಬಂತೆ, ತನ್ನ ಇಷ್ಟದಂತೆ ನಡೆಯುವ ಸೋದರನೆಂಬಂತೆ ನೋಡಬಯಸುವ ಚಿತ್ರವಿದು!

ಭೀಷ್ಮನು ಶರಶಯ್ಯೆಯಲ್ಲಿ ಒರಗಿ, ಕ್ಷತ–ವಿಕ್ಷತನಾಗಿ, ತನ್ನ ಸಾವಿನ ಕ್ಷಣಗಳನ್ನು ನಿರೀಕ್ಷಿಸುತ್ತ ಕಳೆದನೆಂಬುದು ಅವನ ತಂದೆಯ ‘ಶಂತನು’ ಎಂಬ ಹೆಸರಿನ ಅರ್ಥವನ್ನೇ ಒಮ್ಮೆ ಅಲ್ಲಾಡಿಸಿಬಿಡುತ್ತದೆ. ‘ಶಂ–ತನು’ ಎಂದರೆ ಮೈ ಸುಖೋಷ್ಣವಾಗಿರುವುದು, ಮೈ ತಂಪಾಗಿರುವುದು, ನೆಮ್ಮದಿಯ ಸುಖದಲ್ಲಿರುವುದು ಎಂದು. ಇಂಥ ಶಂತನು ಕೊಟ್ಟ ಇಚ್ಛಾಮರಣದ ವರವನ್ನು, ಭೀಷ್ಮ, ಯಾರೂ ಊಹಿಸದ ರೀತಿಯಲ್ಲಿ, ಶಂತನುವಂತೂ ಊಹಿಸಲೇ ಆಗದ ರೀತಿಯಲ್ಲಿ, ಬಾಣದ ಮೊನೆಗಳಿಗೆ ಮೈ ಊರಿ ಮಲಗಿ ಅನುಭವಿಸಿದ. ಮೈಯ ಇನ್ನೊಂದು ಸಾಧ್ಯತೆಯನ್ನು ತೋರಿಸಿದ. ಇದು ತನ್ನ ಮೈಯನ್ನು ತಾನೇ ಮೀರಿದಂತೆ. ಶಿಲುಬೆಯಲ್ಲಿ ತೂಗಿದ ಯೇಸುವಿನ ಚಿತ್ರ ಯಾಕೋ ನೆನಪಾಗುತ್ತದೆ. ಗೋವಿಂದ ಪೈ, ತಮ್ಮ ‘ಗೊಲ್ಗೊಥಾ’ದಲ್ಲಿ ಯೇಸುವನ್ನು ಬಣ್ಣಿಸುತ್ತ ‘ಮರಣವೃಕ್ಷದ – ಅಮೃತಫಲದಂತೆ’ ಎನ್ನುವರು! ಅದ್ಭುತ! ಯೇಸುವಿನದು ಪರಿಶುದ್ಧ ಆಧ್ಯಾತ್ಮಿಕ ವ್ಯಕ್ತಿತ್ವ. ಯೇಸು ತನ್ನ ಕಾಲದ ಆಳುವ ವರ್ಗದಿಂದ – ಕ್ಷತ್ರಿಯರಿಂದ – ಹಿಂಸೆಗೆ ಒಳಗಾದವನು. ಒಳಗಾಗಿಯೇ ತಾನು ಮೈಯನ್ನು ಮೀರಿದವನೆಂದು ಲೋಕಕ್ಕೆ ತೋರಿಸಿದವನು. ಭೀಷ್ಮನೋ ತಾನೇ ಕ್ಷತ್ರಿಯ. ಆದರೆ ಮೈಯಯನ್ನು ಮೀರಬೇಕಾದುದೇ ಕ್ಷತ್ರಿಯನ ಇತಿಹಾಸವೂ ಆಗಿದೆ ಎಂದು ತೋರಿಸಲೆಂಬಂತೆ ಬಾಣಗಳ ಮಂಚದಲ್ಲಿ ಪವಡಿಸಿದನು. ಹಾಗೆ ಮಲಗಿದ ಭೀಷ್ಮನ ತಲೆಯ ಭಾಗದಲ್ಲಿ ಮೂರು ಎತ್ತರದ ಬಾಣಗಳಿದ್ದುವಂತೆ! ಎಂಥ ವಿವರ! ಆ ಬಾಣಗಳ ಮೊನೆಗೆ ತಲೆಯೂರಿದನಂತೆ ಪಿತಾಮಹ. ತಾನು ತನ್ನ ಈ ಅಪೂರ್ವ ಶಯ್ಯೆಯಿಂದಲೇ ಲೋಕವನ್ನು ನೋಡಬೇಕಲ್ಲ ಮತ್ತು ಲೋಕವೂ ತಾನು ತಲೆ ಎತ್ತಿಯೇ ಇರುವುದನ್ನು ನೋಡಬೇಕಲ್ಲ!

ಇಲ್ಲಿನ ಇನ್ನೊಂದು ಆಶ್ಚರ್ಯವನ್ನು ನೋಡಿ. ಭೀಷ್ಮನಿಗೆ ಶರಶಯ್ಯೆಗೆ ಅಂಬೆಯೇ ಕಾರಣಳಾದಳು. ಅಥವಾ ಅಂಬೆಯೇ ಶರಶಯ್ಯೆಯಾದಳು! ತಾನು ಈ ಹೆಣ್ಣುಜನುಮದಲ್ಲಿ ಹೊತ್ತಿ ಉರಿದು ಈ ಜನುಮವನ್ನು ನೀಗಿಕೊಂಡು, ಮರಳಿ ಹೆಣ್ಣಾಗಿ ಹುಟ್ಟಿ ಗಂಡಾಗಿ ಬೆಳೆದು ಶಿಖಂಡಿಯಾಗಿ ಭೀಷ್ಮನ ಮರಣದ ಇಚ್ಛೆಯಾದಳು. ಮೂಲರೂಪದಲ್ಲಿ ಅಂಬೆ ‘ದ್ಯು’ ಎಂಬ ಹೆಸರಿನ ವಸುದೇವತೆಯ ಮಡದಿಯಾಗಿದ್ದಳು. ಆ ‘ದ್ಯು’ ನಾಮಕ ವಸುವೇ ಭೀಷ್ಮನಾಗಿ ಈ ಲೋಕದಲ್ಲಿ ಹುಟ್ಟಿದ್ದ. ಇದು ಆಧ್ಯಾತ್ಮಿಕವಾದ ವಿವರ. ಅಂದರೆ ಭೀಷ್ಮನ ಮಡದಿಯೇ ಆಗಿದ್ದವಳು ಅಂಬೆ! ಈ ಲೋಕದಲ್ಲಿ ಮಾತ್ರ ಭೀಷ್ಮನಿಗೆ ಶರಶಯ್ಯೆಯಾಗಿ ಪರಿಣಮಿಸಿದಳು! ಆ ಮೂಲದಿಂದ ಬಂದವಳು ಮರಳಿ ಮೂಲರೂಪಕ್ಕೆ ಹೋಗಬೇಕಾದರೆ ಹೋಗುವ ಮುನ್ನ ಹೆಣ್ಣು ಇಲ್ಲಿ ಸುಟ್ಟುರಿದುಕೊಳ್ಳಬೇಕು; ಗಂಡು ಶರಶಯ್ಯೆಯ ಮೇಲೆ ಒರಗಬೇಕು! ಇದು ಈ ಮಣ್ಣಿನ ಮೇಲೆ ನಡೆಯುವ ಇತಿಹಾಸದ ನಡೆ! ಅಲ್ಲದೆ, ಮೂಲರೂಪಗಳ ಆಧ್ಯಾತ್ಮಿಕ ವಿವರಗಳಿಗಿಂತಲೂ ಈ ಇತಿಹಾಸ ದರ್ಶನವೇ ಗಹನವಾದದ್ದಾಗಿ ಎದೆ ಕಲಕುವಂಥದ್ದಾಗಿ ಕಾಣಿಸುತ್ತದೆ. ಅಲ್ಲದೆ, ಆಧ್ಯಾತ್ಮಿಕ ಮತ್ತು ಲೌಕಿಕ ಇವೆರಡು ಇಜ್ಜೋಡಾಗಿ – ಪರಸ್ಪರ ವಿಮುಖವಾಗಿ ಕಾಣಿಸುತ್ತದೆ.

ಪಂಪ, ಭೀಷ್ಮನ ಶರಶಯನದ ಸಂದರ್ಭವನ್ನು ಬಣ್ಣಿಸುವಲ್ಲಿ ತನ್ನ ಪ್ರತಿಭೆಯ ಉಚ್ಚಾಂಕವನ್ನು ಮುಟ್ಟಿ ಅಲ್ಲಿ ಕೆಲಹೊತ್ತು ವಿಹರಿಸುತ್ತಿದ್ದನೆನಿಸುತ್ತದೆ. ಅಪ್ಪು ರಸೋತ್ಕಟವಾದ ಚಿತ್ರಣ. ಆ ಚಿತ್ರ ಹೀಗಿದೆ: ಭೀಷ್ಮನ ಮೈಯನ್ನು ಹಿಂಡು ಹಿಂಡಾಗಿ ಬಾಣಗಳು ನಾಟಿ ಅವನನ್ನು ನೆಲದಿಂದಲೇ ಮೇಲೆತ್ತಿವೆ – ‘ತಿಂತಿಣಿಯಾಗಿ ನಟ್ಟಕಣೆಯೊಳ್ ನೆಲಮುಟ್ಟದೆ’ – ಮೈಯಲ್ಲಿ ಎಲ್ಲೆಲ್ಲೂ ಹುಣ್ಣುಗಳಾಗಿ ಅವು ತೆರೆದುಕೊಂಡು ಕೊರೆದಿಟ್ಟ ಅಕ್ಷರಗಳಂತೆ ಹೊಳೆಯುತ್ತಿವೆ – ‘ಮೆಯ್ಯೊಳತ್ತಮಿತ್ತಂ ತೆರೆದಿರ್ದ ಪುಣ್ಗಳ್ ಎಸೆವಕ್ಕರದಂತಿರೆ’ – ಇದನ್ನು ನೋಡಿಯಾದರೂ ಕಲಿಯಬಾರದೆ ಎಂದು ವ್ಯಾಸಪೀಠದ ಮೇಲೆ ತೆರೆದಿಟ್ಟ ಪುಸ್ತಕದಂತೆ – ‘ನೋಡಿಕಲ್ಲಿಂ ಎಂಬಂತೆವೋಲ್ ಅಟ್ಟವಣೆ ಕೋಲ್ಗಳ ಮೇಲೆ ಎಸೆದಿರ್ದ ಪೊತ್ತಗೆಯಂತೆ’ – ಯಾವ ಬಗೆಯ ಪುಸ್ತಕವಿದು? ಎಂದರೆ ಎಂದೆಂದೂ ಹೇಡಿಗಳಲ್ಲದ ಸರ್ವಕಾಲದ ಕ್ಷತ್ರಿಯವೀರರ ಪೌರುಷತತ್ತ್ವಗಳನ್ನೇ ಶಾಸನವೆಂಬಂತೆ ಬರೆದಿರುವ ಹೊತ್ತಗೆ ಇದು – ‘ವೀರಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತೆ ಅಮರಾಪಗಾತ್ಮಜಂ’ – ಹೀಗಿದ್ದನಂತೆ ಶರಶಯನದಲ್ಲಿ ಗಾಂಗೇಯ!

ಅದ್ಭುತವಾದ ಈ ವೃತ್ತವನ್ನು ಬರೆಯುವಲ್ಲಿ ಪಂಪನಿಗೆ – ‘ನೆಲ ಮುಟ್ಟದೆ’ ಎಂಬ ಮಾತು ಒಮ್ಮೆ ಹೊಳೆದು, ಈ ಹೊಳಹು ನೆಲಮುಟ್ಟದೆ ಆಗಸದಲ್ಲಿ ವಿಹರಿಸುತ್ತ, ‘ನೆಲ ಮುಟ್ಟದೆ’ ಎಂಬ ಮಾತಿಗೆ ಇರುವ ವಿಶೇಷಾರ್ಥಗಳನ್ನು ಮತ್ತೆ ಮತ್ತೆ ಹೊಳೆಯಿಸತೊಡಗಿದೆ. ‘ಪ್ರತಿಭೆ’ ಎನ್ನುವ ಅಂತಃಕರಣದ ವಿದ್ಯಮಾನ ಕೂಡ ಎಲ್ಲಿಂದಲೋ ಒಂದು ಬಾಣ ನಾಟಿದಂತೆಯೇ ಇರಬಹುದು. ಅದು ನಾಟಿದ ಮೇಲೆ ನೆಲದಲ್ಲಿದ್ದರೂ ನೆಲ ಮುಟ್ಟದಂತೆ ಇರುವ ಅವಸ್ಥೆ! ಆದುದರಿಂದಲೇ ಪಂಪ, ‘ನೆಲಮುಟ್ಟದೆ’ ಎಂಬ ಮಾತನ್ನೇ ಕೇಂದ್ರವಾಗಿಟ್ಟುಕೊಂಡು ಇದರ ಒಡನಾಡಿಯಾಗಿ ಇನ್ನೊಂದು ವೃತ್ತವನ್ನು ರಚಿಸಿದ್ದಾನೆ. ಅದರಲ್ಲಿ ಹೇಳುತ್ತಾನೆ: ಭೀಷ್ಮನು ನೆಲಮುಟ್ಟದೆ ಇರುವಂತಾದುದೇಕೆ? ಏಕೆಂದರೆ ನೆಲವೆಂದರೆ ಹೆಣ್ಣಲ್ಲವೆ? ‘ನೆಲನದು ಪೆಣ್ಗಡ’. ಭೀಷ್ಮನ ಶೌಚಗುಣ ಪ್ರಸಿದ್ಧವಾದುದಲ್ಲವೆ? ‘ಅಂಕದ ಶೌಚಂ’. ಶೌಚಗುಣವೆಂದರೆ ಬ್ರಹ್ಮಚರ್ಯ. ಬಹು ಹಿಂದಿನಿಂದಲೇ ಬ್ರಹ್ಮಚರ್ಯವನ್ನು ಪಾಲಿಸಿಕೊಂಡು ಬಂದವನು ಭೀಷ್ಮ. ಈಗ ಬ್ರಹ್ಮಚರ್ಯದ ಆ ಔನ್ನತ್ಯವನ್ನು ತೋರಿಸಲೆಂಬಂತೆ ನೆಲಮುಟ್ಟದೆ ಶರಶಯ್ಯೆಯಲ್ಲಿ ಒರಗಿದನಂತೆ! ಪ್ರೊ. ಡಿ.ಎಲ್ಎನ್. ಈ ಪದ್ಯವನ್ನು ಭೀಷ್ಮನನ್ನು ಕುರಿತ ಚರಮಶ್ಲೋಕ – ಕೊನೆಯ ಮಾತು – ಎಂದು ಕೊಂಡಾಡಿದ್ದಾರೆ. ಭೀಷ್ಮ ತನ್ನ ಬಾಳಿನಲ್ಲಿ ಸ್ತ್ರೀಯನ್ನು ಮಾತ್ರವಲ್ಲ, ನಿಜಕ್ಕೂ ನೆಲವನ್ನೇ – ರಾಜ್ಯವನ್ನೇ – ಬಿಟ್ಟುಕೊಟ್ಟವನೆಂದೂ ಈ ಸಂದರ್ಭದಲ್ಲಿ ನೆನೆಯಬೇಕು.

ನನ್ನೊಳಗಾದರೋ ಈ ಮೊದಲ ವೃತ್ತವೇ ತುಂಬಿಬಿಟ್ಟಿದೆ. ಆ ಮಾತು! ಬಾಣಗಳು ಭೀಷ್ಮನ ಮೈಕೊರೆದು ಆದ ಹುಣ್ಣುಗಳು ಹೊಳೆವ ಅಕ್ಷರಗಳಂತಿವೆ ಎಂಬ ಮಾತು! ಈ ಮಾತು ಭೀಷ್ಮನಿಗೆ ಮಾತ್ರವಲ್ಲ, ಮಹಾಭಾರತವೆಂಬ ರಕ್ತಸಿಕ್ತ ಇತಿಹಾಸಕ್ಕೆ ಇಡಿಯಾಗಿ ಅನ್ವಯಿಸಬಹುದಾದ ಮಾತಾಗಿದೆ. ರಾಮಾಯಣದ ನೆನಪಾಗುತ್ತದೆ. ಕ್ರೌಂಚದುರಂತದ ನೆನಪು. ಬೇಡನೆಸೆದ ಕಣೆ ತಾಗಿ ಗಂಡುಹಕ್ಕಿ ಕೆಡೆದುಬಿದ್ದು, ಒಡನಾಡಿಯಾದ ಹೆಣ್ಣುಹಕ್ಕಿ ಭೋರೆಂದು ಅತ್ತಾಗ, ಆ ಅಳಲಿನಿಂದ ಉಂಟಾದ ಕರುಣರಸಾನುಭವ, ವಾಲ್ಮೀಕಿಯ ಒಳಗಿದ್ದ ರಾಮನ ಕಥೆಯನ್ನು ಇಡಿಯಾಗಿ ಆರ್ದ್ರವಾಗಿಸಿತು. ಕರುಣರಸದಲ್ಲಿ ನೆನೆದು ಕಥೆ ಹೊಸಜೀವಂತಿಕೆಯನ್ನು ಪಡೆಯಿತು. ಅಂದರೆ ಅಳಲಿಗೆ ಕಿವಿದೆರೆದುದರಿಂದ ಕಾವ್ಯ ಹುಟ್ಟಿತು. ಶೋಕದಿಂದ ಶ್ಲೋಕ. ಕಾಳಿದಾಸನು ಹೇಳುವಂತೆ ‘ರುದಿತಾನುಸಾರೀ ಕವಿಃ’. ಕವಿ, ಅಳಲನ್ನು ಅನುಸರಿಸುವನು ಎನ್ನುತ್ತಾನೆ. ಪಂಪನಾದರೋ ಬಾಣಗಳ ಗಾಯದಿಂದ ಉಂಟಾದ ಹುಣ್ಣುಗಳನ್ನು ಕೊರೆದಿಟ್ಟ ಅಕ್ಷರಗಳೆನ್ನುತ್ತಾನೆ. ಅ–ಕ್ಷರ ಎಂದಾಗ ಸವೆಯಲಾರದ್ದು ಎಂದೂ ಅರ್ಥ. ಮತ್ತೆ ಮತ್ತೆ ಹಸಿಗಾಯ ಎಂದೂ ಅರ್ಥ. ಮುಂದಿನ ಕವಿಗಳಿಗೆ ಇಲ್ಲಿದೆ ಇತಿಹಾಸಿಕವಾದ ಹಸಿ ಸಾಮಗ್ರಿ – ಕಚ್ಚಾ ಸಾಮಗ್ರಿ ಎಂದೂ ಅರ್ಥ. ಹುಣ್ಣುಗಳು ಎಸೆವಕ್ಷರಗಳಲ್ಲವೆ? ಅಂದರೆ ಹೊಳೆಯುತ್ತಿವೆಯಲ್ಲವೆ? ಹೊಳಹು ಹಸಿಹಸಿಯಲ್ಲವೆ! ಮುಂದಿನ ವಾಙ್ಮಯಗಳಿಗೆ ಸಾಮಗ್ರಿ ಇಲ್ಲಿದೆ ಎಂದಾಗ – ಇತಿಹಾಸ ಈ ಅರ್ಥದಲ್ಲಿ ಚಿರಂಜೀವಿ ಎಂದಾಯಿತಲ್ಲವೆ! ಪಂಪನ ಕೈಯಲ್ಲಿ ಭೀಷ್ಮನ ಮೈ, ಭೀಷ್ಮನ ಬಾಳು ತೆರೆದ ಪುಸ್ತಕವಾಗಿಬಿಟ್ಟಿತು. ಪಂಪ ಸ್ವಯಂ ಚಮೂಪತಿಯಾಗಿದ್ದನೆಂದು ನೆನೆದೆವಾದರೆ ತನ್ನ ಗಾಯಗಳನ್ನು ತಾನೇ ನೆಕ್ಕುವ ಹುಲಿಯಂತೆ, ತನ್ನ ಮೈಯ ಹಸಿ ಗಾಯಗಳನ್ನು ತಾನೇ ಓದುತ್ತಿದ್ದಿರಬೇಕು – ಪಂಪ! ವೀರನ ಮೈಯನ್ನೇ ಓದಬೇಕು – ತಿಳಿದವರು.

‘ವೀರಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತೆ – ಅಮರಾಪಗಾತ್ಮಜಂ’ ಎಂಬ ಮಾತು ಇನ್ನಷ್ಟು ಅರ್ಥಪೂರ್ಣವಾಗುವುದು, ಯುದ್ಧೋತ್ತರ ಶಾಂತಿಪರ್ವದಲ್ಲಿ; ಶರಶಯ್ಯೆಯಲ್ಲಿದ್ದುಕೊಂಡೇ ಭೀಷ್ಮನು ಆಗ ದೊರೆಯಾಗಿದ್ದ ಧರ್ಮರಾಜನಿಗೆ ರಾಜಧರ್ಮವನ್ನು ಸಮಗ್ರವಾಗಿ ಉಪದೇಶಿಸುವನು ಎಂಬುದರಿಂದ. ನಿಜ. ಈ ಭಾಗ ಪಂಪನಲ್ಲಿಲ್ಲ. ಅದು ಪಂಪನ ಉದ್ದೇಶವೂ ಅಲ್ಲ. ಆದರೆ ಮಹಾಭಾರತದಲ್ಲಿ ಮುಖ್ಯವಾದ ಶಾಂತಿಪರ್ವದ ಈ ಸಂದರ್ಭವನ್ನು ಪಂಪನ ಮಾತು ಸೂಚಿಸುತ್ತದೆ. ಏಕೆಂದರೆ ಶಾಂತಿಪರ್ವದಲ್ಲಿ, ವೀರ ಸಿದ್ಧಾಂತವನ್ನು ಅಂದರೆ ರಾಜಧರ್ಮವನ್ನು; ಕ್ಷತ್ರಿಯಧರ್ಮವನ್ನು ಭೀಷ್ಮನು ತೀವ್ರವಾಗಿ ಪ್ರತಿಪಾದಿಸುವನು. ಧರ್ಮರಾಜನಿಗಾದರೋ ರಾಜಧರ್ಮದ ಕುರಿತೇ ತೀವ್ರವಾದ ಜಿಹಾಸೆಯುಂಟಾಗಿತ್ತು.

ಯುದ್ಧೋತ್ತರ ವಿಷಾದ ಧರ್ಮಜನನ್ನು ಆವರಿಸಿತ್ತು. ಅಗೋಚರ ಶರ–ಶಯ್ಯೆಯಲ್ಲಿದ್ದಂತೆಯೇ ಧರ್ಮಜನು ತನ್ನೊಳಗೊಳಗೇ ಅಳಲುತ್ತಿದ್ದನು. ಬಳಲುತ್ತಿದ್ದನು. ಅವನ ಪಾಲಿಗೆ ಸಿಂಹಾಸನವೇ ಒಂದು ಶರಶಯ್ಯೆಯಾಗಿತ್ತು. ಯಾವ ದೊಡ್ಡವರ ಮಾತೂ ಧರ್ಮಜನಿಗೆ ಸಮಾಧಾನವನ್ನು ಊಡುತ್ತಿರಲಿಲ್ಲ. ಆಗ, ಕೃಷ್ಣನ ಸೂಚನೆಯಂತೆ, ಈ ಕುರುಪಿತಾಮಹ ಭೀಷ್ಮ, ತನ್ನ ಆಳವಾದ ಲೋಕಾನುಭವವನ್ನು ಧರ್ಮಜನಿಗೆ ಧಾರೆ ಎರೆಯುವನು. ಭೀಷ್ಮ–ಧರ್ಮಜರ ಈ ಮುಖಾಮುಖಿ ಆಳವಾದುದಾಗಿದೆ. ಒಂದೆಡೆ, ಶರಶಯ್ಯೆಯ ಮೇಲೆ ಪವಡಿಸಿ, ಮೈಯೆಲ್ಲ ಹುಣ್ಣಾಗಿ, ಸಾವಿನ ಹೊತ್ತನ್ನು ನಿರೀಕ್ಷಿಸುತ್ತ, ಮಹಾಯುದ್ಧವೊಂದು ಕಳೆದ ಮೇಲಿನ ಸ್ಮಶಾನನೀರವದಲ್ಲಿ, ಅದೇ ಕುರುಕ್ಷೇತ್ರದ ಒಂದೆಡೆಯಲ್ಲಿ, ಮತ್ತೆ ವೀರಧರ್ಮವನ್ನು ಸಮರ್ಥಿಸುತ್ತ, ಮತ್ತೆ ಕಟ್ಟುವ ಮಾತುಗಳಲ್ಲಿ ಬದುಕಿನ ಉತ್ಸಾಹವನ್ನು ಮಿಡಿಯುತ್ತಿರುವ ಭೀಷ್ಮ! ಇನ್ನೊಂದೆಡೆ, ಯುದ್ಧವನ್ನು ಗೆದ್ದೂ ಈ ಗೆಲವು ಸೋಲಿಗಿಂತಲೂ ಯಾತನಾಮಯವೆಂದು ಮರುಗುವ, ಇವೆಲ್ಲದರ ಅರ್ಥವೇನೆಂದು ಆಳದಲ್ಲಿ ಕಂಗೆಡುವ, ಮಕ್ಕಳನ್ನೂ ಬಂಧುಗಳನ್ನೂ ಗೆಳೆಯರನ್ನೂ ಕಳೆದುಕೊಂಡು ಕಾಡುವ ಈ ಕಟ್ಟೇಕಾಂತದಲ್ಲಿ ಸರ್ವಸಂಗ ಪರಿತ್ಯಾಗದ ಹೊಳಹನ್ನು ಕಾಣುವ ಧರ್ಮಜ! ಕಟ್ಟಿದ್ದೆಲ್ಲವೂ ಮುರಿದು ಬಿದ್ದಿರಲಾಗಿ, ಈ ಅವಶೇಷಗಳ ನಡುವೆ ದಿಗ್ಭ್ರಮಿತನಾಗಿ, ಎಲ್ಲೆಲ್ಲೂ ಶರಶಯ್ಯೆಯೇ ಕಂಡುಬಂದು, ಇಲ್ಲಿ ಮತ್ತೆ ಕಟ್ಟುವ ಮಾತುಗಳ ನೆಲೆ–ಬೆಲೆಗಳನ್ನು ಗೊತ್ತು ಮಾಡಿಕೊಳ್ಳಲಾಗದೆ, ಪೂಜ್ಯಪಿತಾಮಹನು ತನ್ನ ಮನಸ್ಸನ್ನೊಮ್ಮೆ ಆಳವಾಗಿ ಓದಿ ಬಿಡಲಿ ಎಂದು ನಿಡುಸುಯ್ಯುತ್ತಿರುವ ಮೊಮ್ಮಗ ಧರ್ಮಜ! ಕ್ಷತ್ರಿಯನ ಮೈಯನ್ನು ಓದಬೇಕೆನುತ್ತಾನೆ ಭೀಷ್ಮ! ಕ್ಷತ್ರಿಯ ಮನಸ್ಸನ್ನು ಓದಬೇಕೆನ್ನುತ್ತಾನೆ ಧರ್ಮಜ! ಈ ಮುಖಾಮುಖಿಯಲ್ಲಿ ‘ಶಾಂತಿಪರ್ವ’ದ ಆಳ–ಅಗಲಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.