ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ: ನಿಮ್ಹಾನ್ಸ್‌ ಸಲಹೆ ಕೋರಿದ ಇಸ್ರೊ

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ, ನಿರ್ವಹಣೆಗೆ ತಯಾರಿ
Published : 3 ಅಕ್ಟೋಬರ್ 2024, 19:46 IST
Last Updated : 3 ಅಕ್ಟೋಬರ್ 2024, 19:46 IST
ಫಾಲೋ ಮಾಡಿ
Comments

ಬೆಂಗಳೂರು: ‘ಭಾರತವು ಶೀಘ್ರದಲ್ಲಿ ಸ್ವಂತ ಅಂತರಿಕ್ಷ ನಿಲ್ದಾಣ ನಿರ್ಮಿಸಲಿದೆ. ಆದ್ದರಿಂದ ದೀರ್ಘ ಕಾಲ ಅಲ್ಲಿ ಇರಬೇಕಾದ ಗಗನಯಾನಿಗಳು ಎದುರಿಸುವ ಮಾನಸಿಕ ಒತ್ತಡ ನಿರ್ವಹಣೆ ಕುರಿತು ನಿಮ್ಹಾನ್ಸ್‌ ಸಲಹೆ ನೀಡಬೇಕು’ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್‌ ಮನವಿ ಮಾಡಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) 27ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ, ಮಾತನಾಡಿದ ಅವರು, ‘ನಮ್ಮದೇ ಆದ ಭಾರತೀಯ ಅಂತರಿಕ್ಷ ನಿಲ್ದಾಣ ನಿರ್ಮಾಣವಾಗಲಿದ್ದು, ಅಲ್ಲಿ ದೀರ್ಘ ಕಾಲವಿದ್ದು ಕೆಲಸ ಮಾಡಬೇಕಾದ ಅನಿವಾರ್ಯ ಇರಲಿದೆ’ ಎಂದರು.

‘ಎಂಟು ದಿನಕ್ಕೆಂದು ಬಾಹ್ಯಾಕಾಶಕ್ಕೆ ತೆರಳಿದ ಅಮೆರಿಕದ ಗಗನಯಾನಿಗಳು ಎಂಟು ತಿಂಗಳಾದರೂ ಅಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಎದುರಾಗಬಹುದಾದ ಮಾನಸಿಕ ಒತ್ತಡ ನಿರ್ವಹಣೆ ಮಾಡುವುದು ಹೇಗೆ? ಭೂಮಿಗೆ ಮರಳಿದ ಬಳಿಕ ಯಾವ ರೀತಿ ಮನಸ್ಥಿತಿ ಇರುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಇಸ್ರೊ ಈ ನಿಟ್ಟಿನಲ್ಲಿ ನಿಮ್ಹಾನ್ಸ್‌ನಿಂದ ಸಲಹೆ ಬಯಸುತ್ತದೆ’ ಎಂದು ಹೇಳಿದರು.

‘ಇತ್ತೀಚೆಗೆ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡವು ಹೆಚ್ಚುತ್ತಿದ್ದು, ಇದರ ನಿರ್ವಹಣೆಯು ಸವಾಲಾಗಿ ಪರಿಣಮಿಸಿದೆ. ಕೋವಿಡ್‌ ಕಾಣಿಸಿಕೊಂಡಾಗ ಮನೆಯಿಂದಲೇ ಕಾರ್ಯನಿರ್ವಹಿಸಬೇಕಾದ್ದರಿಂದ ಜನರು ವಿವಿಧ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಕೋವಿಡ್ ನಿಯಂತ್ರಣದ ನಂತರ ಕಚೇರಿಗಳು ಪುನರಾರಂಭವಾದ್ದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ. ದೈನಂದಿನ ಜೀವನದಲ್ಲಿ ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ಮನೋವೈದ್ಯರು ಪರಿಹಾರೋಪಾಯ ಒದಗಿಸಬೇಕಿದೆ’ ಎಂದು ಹೇಳಿದರು. 

ನಿಮ್ಹಾನ್ಸ್ ಉಪಾಧ್ಯಕ್ಷರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ‘ರಾಜ್ಯದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ‘ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್’ ಕಾರ್ಯಕ್ರಮದ ಮೂಲಕ ನರ ವಿಜ್ಞಾನ ಸೇವೆ ಒದಗಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಮಿದುಳು ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಕ್ಯಾಸನಹಳ್ಳಿಯಲ್ಲಿ ನಿಮ್ಹಾನ್ಸ್‌ನ ಮತ್ತೊಂದು ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅತ್ಯಾಧುನಿಕ ಪಾಲಿಟ್ರಾಮಾ ಕೇಂದ್ರಕ್ಕೆ ಹಣ ಮಂಜೂರು ಮಾಡುವಂತೆಯೂ ನಿಮ್ಹಾನ್ಸ್‌ ಅಧ್ಯಕ್ಷರಾದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಇದಕ್ಕೆ ಅನುಮತಿ ಸಿಗುವ ವಿಶ್ವಾಸವಿದೆ’ ಎಂದರು. 

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ‘ಆರೋಗ್ಯ ಕ್ಷೇತ್ರದ ಗಮನಾರ್ಹ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರತಿಷ್ಠಿತ ನೆಲ್ಸನ್‌ ಮಂಡೇಲಾ ಪ್ರಶಸ್ತಿಯನ್ನು ಸಂಸ್ಥೆ ಈ ವರ್ಷ ಪಡೆದಿದೆ. ಗುಣಮಟ್ಟದ ವೈದ್ಯಕೀಯ ಸೇವೆ, ರೋಗಿಗಳ ಸುರಕ್ಷತೆ ಹಾಗೂ ಸೇವೆಯಲ್ಲಿನ ಸಮರ್ಪಣಾ ಭಾವದಿಂದಾಗಿ ಮತ್ತೊಮ್ಮೆ ಎನ್‌ಎಬಿಎಚ್ (ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿದೆ. ‘ಟೆಲಿ ಮನಸ್’ ಸಹಾಯವಾಣಿಯ ಮೂಲಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರೋಪಾಯ ಒದಗಿಸಲಾಗುತ್ತಿದೆ. ಈಗಾಗಲೇ ದೇಶದ ವಿವಿಧೆಡೆಯಿಂದ 14 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ’ ಎಂದು ಹೇಳಿದರು. 

471 ವಿದ್ಯಾರ್ಥಿಗಳಿಗೆ ಪದವಿ
ಘಟಿಕೋತ್ಸವದಲ್ಲಿ 572 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪದವಿ ಪಡೆಯಲು ಅರ್ಹರಾಗಿದ್ದರು. ಅವರಲ್ಲಿ ಉಪಸ್ಥಿತರಿದ್ದ 471 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 39 ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗೆ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಎಸ್. ಸೋಮನಾಥ್‌ ಹಾಗೂ ಡಾ. ಶರಣಪ್ರಕಾಶ ಪಾಟೀಲ ಅವರೇ ಪದವಿ ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT