ಕಣ್ಣೀರು ಹಾಕಿದ ಬಸವಲಿಂಗ ಪಟ್ಟದೇವರು
‘ಅಕ್ಕ’ ಅನ್ನಪೂರ್ಣ ತಾಯಿ ಅವರು ಬಸವತತ್ವದ ಪ್ರಚಾರ ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳನ್ನು ಮೆಲುಕು ಹಾಕುವಾಗ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ಕಣ್ಣೀರು ಹಾಕಿದರು. ಕೆಲ ಕ್ಷಣ ಅವರಿಂದ ಮಾತು ಹೊರಡಲಿಲ್ಲ. ಅಲ್ಲಿಯೇ ಇದ್ದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅವರಿಗೆ ಸಮಾಧಾನ ಹೇಳಿದರು. ದುಃಖದ ಸಂದರ್ಭದಲ್ಲಿ ಭಕ್ತಗಣ ಇನ್ನಷ್ಟು ದುಃಖಕ್ಕೆ ಒಳಗಾಯಿತು. ‘ಬಸವತತ್ವದ ಪ್ರಸಾರಕ್ಕಾಗಿ ಅಕ್ಕ ಅನ್ನಪೂರ್ಣ ತಾಯಿ ಮಾಡಿದ ಕಾರ್ಯ ಅಷ್ಟಿಷ್ಟಲ್ಲ. ‘ವಚನ ವಿಜಯೋತ್ಸವ’ ಕಾರ್ಯಕ್ರಮದ ಮೂಲಕ ನಾಡಿನ ಜನತೆಯನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಆ ಕಾರ್ಯಕ್ರಮ ನಿಂತಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಆ ಕಾರ್ಯಕ್ರಮಕ್ಕೆ ಪುನಃ ಚಾಲನೆ ಕೊಡಬೇಕಿದೆ’ ಎಂದು ಪಟ್ಟದ್ದೇವರು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.