ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗವೈಕಲ್ಯ ಮೆಟ್ಟಿ ನಿಂತ ರೈತ ತೋಟಪ್ಪ; ಸಾವಯವ ಕೃಷಿಯಲ್ಲಿ ದುಪ್ಪಟ್ಟು ಆದಾಯ

ನಿಂಗಪ್ಪ ಹಮ್ಮಿಗಿ
Published 22 ಡಿಸೆಂಬರ್ 2023, 4:20 IST
Last Updated 22 ಡಿಸೆಂಬರ್ 2023, 4:20 IST
ಅಕ್ಷರ ಗಾತ್ರ

ಶಿರಹಟ್ಟಿ: ಆಧುನಿಕ ಜೀವನ ಶೈಲಿಗೆ ಮುಖ ಮಾಡಿ ಮಹಾನಗರಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಮಣ್ಣನ್ನೇ ನಂಬಿ ಬಂಡವಾಳ ಹಾಕಿ ಸಾಧನೆಯ ಕೃಷಿ ಹಾದಿಯತ್ತ ಸಾಗುತ್ತಿರುವ ರೈತ ತೋಟಪ್ಪ ಇತರರಿಗೆ ಮಾದರಿ.

ತಾಲ್ಲೂಕಿನ ಕಡಕೋಳ ಗ್ರಾಮದ ರೈತ ತೋಟಪ್ಪ ಸೊನ್ನದ ತನ್ನ ಒಂದು ಕಾಲು ಇಲ್ಲದಿದ್ದರೂ ಊರುಗೋಲನ್ನು‌ ಆಸರೆಯಾಗಿಸಿಕೊಂಡು ನಿತ್ಯ ಕೃಷಿಯಲ್ಲಿ ಮಗ್ನರಾಗಿದ್ದಾರೆ. ಗ್ಯಾಂಗ್ರಿನ್‌ದಿಂದ ಕಾಲು ಕಳೆದುಕೊಂಡ ತೋಟಪ್ಪ ತಮ್ಮ 10 ಎಕರೆ ಜಮೀನಿನಲ್ಲಿ 2 ಬೋರ್‌ವೆಲ್ ಬಳಸಿಕೊಂಡು ವಿವಿಧ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಲಿಂಬೆ ಬೆಳೆ: ತಮ್ಮ ಒಟ್ಟು ಜಮೀನಿನ ಪೈಕಿ 2 ಎಕರೆ ಜಮೀನಿನಲ್ಲಿ ಲಿಂಬೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿಯಿಂದ ಸಸಿಗೆ ಅಂತರ ಕಾಯ್ದುಕೊಂಡು ಹನಿ ನೀರಾವರಿ ಪದ್ದತಿಗೂ ಅಳವಡಿಕೆಯಾಗುವ ರೀತಿಯಲ್ಲಿ ನಾಟಿ ಮಾಡಿದ್ದು, ಸದ್ಯ ಫಸಲು ಪ್ರಾರಂಭವಾಗಿದೆ. ಒಂದು ಲಿಂಬೆ ಹಣ್ಣಿಗೆ ₹2 ರಿಂದ ₹3 ಮಾರಾಟ ಮಾಡಲಾಗುತ್ತಿದ್ದು, ನಿತ್ಯ 500 ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ದಿನಕ್ಕೆ 100 ಬಾಕ್ಸ್: 2.5 ಎಕರೆಯಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿ ನಿತ್ಯ ನೂರಕ್ಕೂ ಅಧಿಕ ಬಾಕ್ಸ್ ಇಳುವರಿ ಪಡೆಯುತ್ತಿದ್ದಾರೆ. ಸದ್ಯ ಒಂದು ಬಾಕ್ಸ್ ಟೊಮ್ಯಾಟೊ ಹಣ್ಣಿಗೆ ಸುಮಾರು ₹200 ರಿಂದ 300ವರೆಗೆ ಮಾರಾಟ ಮಾಡಲಾಗುತ್ತಿದೆ. 3 ಎಕರೆಯಲ್ಲಿ ಸುಮಾರು 400ರಿಂದ 500 ತೆಂಗಿನ ಸಸಿಗಳನ್ನು ನಾಟಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತೆಂಗಿನ ಗಿಡಗಳಿಂದಲೇ ವರ್ಷಕ್ಕೆ ಸುಮಾರು ₹ 8 ಲಕ್ಷ ಆದಾಯ ಬರಬಹುದೆಂಬ ನಿರೀಕ್ಷೆ ಇದೆ.

2 ಎಕರೆಯಲ್ಲಿ ಸುಗಂಧಿ ಹೂಗಳನ್ನು ನಾಟಿ ಮಾಡಿದ್ದು, ಉತ್ತಮ ಇಳುವರಿ ಪಡೆದಿದ್ದರು.

ಗೋವಿನಜೋಳ ಹಾಗೂ ಮೇವು: ತೋಟಗಾರಿಕೆ ಬೆಳೆಯನ್ನಲ್ಲದೇ ಒಣ ಬೇಸಾಯವನ್ನು ಮಾಡುತ್ತಿರುವ ರೈತ ತೋಟಪ್ಪ ಅವರು 3 ಜಮೀನಿನಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದಾರೆ. ಉತ್ತಮವಾಗಿ ಬೆಳೆದಿರುವ ಗೋವಿನಜೋಳ ಬೆಳೆಯಿಂದ ಅಧಿಕ ಫಸಲು ಹಾಗೂ ಮೇವು ದೊರೆಯುತ್ತದೆ. ಇದರಿಂದ ತೋಟದಲ್ಲಿನ ತಮ್ಮ ಎತ್ತುಗಳಿಗೆ ಮೇವಿನ ಕೊರತೆ ತಲೆದೂರುವುದಿಲ್ಲ‌ ಎಂಬುದು ಅವರ ಮಾತು.

ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ವಿಕಲ ಚೇತನ ರೈತ ತೋಟಪ್ಪ ತಾನು ಬೆಳೆದ ಲಿಂಬೆ ತೋಟದಲ್ಲಿ.
ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ವಿಕಲ ಚೇತನ ರೈತ ತೋಟಪ್ಪ ತಾನು ಬೆಳೆದ ಲಿಂಬೆ ತೋಟದಲ್ಲಿ.
ತೋಟಪ್ಪ ಅವರ ತೋಟದಲ್ಲಿ ಬೆಳೆದ ಟೊಮ್ಯಾಟೊ ಬೆಳೆ
ತೋಟಪ್ಪ ಅವರ ತೋಟದಲ್ಲಿ ಬೆಳೆದ ಟೊಮ್ಯಾಟೊ ಬೆಳೆ
ನನ್ನ ಹತ್ತಿರ 10 ವರ್ಷದಿಂದ ಕೆಲಸ ಮಾಡುತ್ತಿರುವ ಬಸವರಾಜ ತೋಟದ ನಿರ್ವಹಣೆ ಮಾಡುತ್ತಿದ್ದಾನೆ. ಅವನ‌ ಮಾರ್ಗದರ್ಶನದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ
–ತೋಟಪ್ಪ, ರೈತ

ಸಗಣಿ ಗೊಬ್ಬರ ಬಳಕೆ

ಸಾವಯವ ಕೃಷಿಗೆ ಅತೀ ಅವಶ್ಯವಿರುವ ಕಚ್ಚಾ ವಸ್ತು ಸಗಣಿ. ರಾಸಾಯನಿಕಗಳ ಗೋಜಿಗೆ ಹೋಗದೆ ದನಕರುಗಳನ್ನು ತಿಂಗಳುಗಟ್ಟಲೇ ಅವರ ಹೊಲದಲ್ಲಿ ಸಾಕುತ್ತಾರೆ. ಇದರಿಂದ ಸಗಣಿ ಗೊಬ್ಬರ ಹಾಗೂ ಗೋಮೂತ್ರ ಹೇರಳವಾಗಿ ದೊರೆಯುತ್ತಿದ್ದು ಇದನ್ನು ಬೆಳೆಗಳಿಗೆ ಬಳಸುವುದರಿಂದ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿ ಉತ್ತಮ ಇಳುವರಿ ಬರುತ್ತದೆ ಎಂಬುದು ರೈತ ತೋಟಪ್ಪ ಅವರ ಅನುಭವದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT