ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ ನಿರ್ಮಾಣಕ್ಕೆ ಕನ್ನಡಿಗನ ಸಾರಥ್ಯ

Published : 6 ಅಕ್ಟೋಬರ್ 2024, 5:01 IST
Last Updated : 6 ಅಕ್ಟೋಬರ್ 2024, 5:01 IST
ಫಾಲೋ ಮಾಡಿ
Comments

ಚಿಂಚೋಳಿ: ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ರೈಲು ಸೇವೆ ಒದಗಿಸುವ ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ’ ನಿರ್ಮಾಣದ ಸಾರಥ್ಯವನ್ನು ತಾಲ್ಲೂಕಿನ ಕುಗ್ರಾಮ ಬೆನಕೆಪಳ್ಳಿಯ ಸಿವಿಲ್ ಎಂಜಿನಿಯರ್ ಶರಣಪ್ಪ ಯಲಾಲ ವಹಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. 

ಭಾರತದ ಅತಿ ಉದ್ದದ ಖಡಿಸುಂಬಾರ (12.7 ಕಿ.ಮೀ) ಮತ್ತು ಪೀರಪಂಜಾಲ (11.2 ಕಿ.ಮೀ) ಉದ್ದದ ರೈಲು ಸುರಂಗ ಮಾರ್ಗ ನಿರ್ಮಾಣದ ಯೋಜನಾ ಮುಖ್ಯಸ್ಥರಾಗಿ ಶರಣಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.

272 ಕಿ.ಮೀ ಉದ್ದದ ರೈಲು ಮಾರ್ಗದ ಜತೆಗೆ ಸರ್ವಋತು ರಸ್ತೆಯನ್ನೂ ನಿರ್ಮಿಸಲಾಗಿದೆ. 111 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಒಟ್ಟು 55 ಸುರಂಗಗಳನ್ನು ನಿರ್ಮಿಸಲಾಗಿದ್ದು ಖಡಿಸುಂಬಾರ, ಪೀರಪಂಜಾಲ ರೈಲು ಸುರಂಗ ಮಾರ್ಗ ಅತ್ಯಂತ ಪ್ರಮುಖವಾಗಿವೆ.

ಮುಂಬೈನ ಹಿಂದೂಸ್ಥಾನ್‌ ಕನ್‌ಸ್ಟ್ರಕ್ಷನ್‌ ಕಂಪನಿ ‘ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ’ ನಿರ್ಮಾಣದ ಹೊಣೆ ಹೊತ್ತಿದೆ. ₹ 10 ಸಾವಿರ ಕೋಟಿ ಮೊತ್ತದ 5 (ಪ್ಯಾಕೇಜ್) ಯೋಜನೆಗಳ ಅನುಷ್ಠಾನದ ಯೋಜನಾ ಮುಖ್ಯಸ್ಥರಾಗಿ ಶರಣಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯಲ್ಲೂ ಸೇವೆ ಸಲ್ಲಿಸಿದ್ದ ಶರಣಪ್ಪ ಅವರು, ಡೆಲ್ಟಾ ಕನ್‌ಸ್ಟ್ರಕ್ಷನ್‌ ಕಂಪನಿ (ಡಿಸಿಸಿ)ಯಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ನಂತರ ಶಹಾಪುರ ಕಿರು ವಿದ್ಯುತ್ ಯೋಜನೆ, ನಾಗಾಲ್ಯಾಂಡ್‌ನ ‘ಡುಯಾಂಗ ಜಲ ವಿದ್ಯುತ್ ಯೋಜನೆ’ಯಲ್ಲಿ ಕಾರ್ಯನಿರ್ವಹಿಸಿ, ಪ್ರತಿಭೆಯಿಂದ ಉನ್ನತ ಸ್ಥಾನಕ್ಕೇರಿದ್ದರು.

ಡಿಸಿಸಿ ಕಂಪನಿ ವತಿಯಿಂದ ಭೂತಾನ್ ದೇಶದ ‘ಕುರಿಚು’ ಜಲವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ತೆರಳಿದ್ದ ಶರಣಪ್ಪ ಅವರು, ಯೋಜನೆ ಪೂರ್ಣಗೊಂಡ ಬಳಿಕ ಡಿಸಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಭೂತಾನ್ ದೇಶದ ಸರ್ಕಾರ ಇವರಿಗೆ ‘ತಾಲಾ’ ಜಲ ವಿದ್ಯುತ್ ಯೋಜನೆ ಹೊಣೆ ವಹಿಸಿದ್ದರಿಂದ 6 ವರ್ಷ ಭೂತಾನ್‌ನಲ್ಲಿ ಸರ್ಕಾರಿ ಕೆಲಸ ಮಾಡಿ, ಬಳಿಕ ಸ್ವದೇಶಕ್ಕೆ ಮರಳಿ ಹಿಂದೂಸ್ಥಾನ್‌ ಕನ್‌ಸ್ಟ್ರಕ್ಷನ್‌ ಕಂಪನಿ (ಎಚ್‌ಸಿಸಿ) ಸೇರಿದರು. 

ಸ್ವಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಐನಾಪುರದಲ್ಲಿ ಪ್ರೌಢಶಿಕ್ಷಣ ಪಡೆದ ಶರಣಪ್ಪ ಅವರು ಬೀದರ್‌ನಲ್ಲಿ ಡಿಪ್ಲೊಮಾ ಸಿವಿಲ್ (ತಾಂತ್ರಿಕ) ಶಿಕ್ಷಣ ಮುಗಿಸಿ ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಬಿಟೆಕ್ ಪದವಿ ಪಡೆದಿದ್ದಾರೆ.

ಶರಣಪ್ಪ ಅವರಿಗೆ ಎಚ್‌ಸಿಸಿ ಕಂಪನಿ ಹಾಗೂ ರೈಲು ಮಂಡಳಿ ಹಾಗೂ ಇಂಡಿಯನ್ ಟನೆಲ್ ಅಸೋಸಿಯೇಷನ್ ಗೌರವಿಸಿವೆ. ವರ್ಲ್ಡ್‌ ಟನೆಲ್ ಕಾಂಗ್ರೆಸ್‌ನಲ್ಲಿ ಹಲವು ಬಾರಿ ಪ್ರಬಂಧ ಮಂಡಿಸಿರುವ ಇವರು, ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆ.30ರಂದು ಕೇಂದ್ರದ ರೈಲು ಮಂತ್ರಾಲಯದ ರೈಲ್ವೆ ಮಂಡಳಿ ಸದಸ್ಯ ಅನಿಲಕುಮಾರ ಖಂಡೆಲವಾಲಾ ಪ್ರಶಂಸಾ ಪತ್ರವನ್ನೂ ನೀಡಿ ಗೌರವಿಸಿದ್ದಾರೆ.

ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗದ ಪ್ರವೇಶ ದ್ವಾರದ ಮುಂದೆ ಶರಣಪ್ಪ ಯಲಾಲ
ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗದ ಪ್ರವೇಶ ದ್ವಾರದ ಮುಂದೆ ಶರಣಪ್ಪ ಯಲಾಲ
ಸುರಂಗ ಮಾರ್ಗ ನಿರ್ಮಾಣ ಸವಾಲಿನ ಕೆಲಸ. ಗುಡ್ಡಗಳನ್ನು ಕೊರೆದಾಗ ನೀರು ಚಿಮ್ಮುತ್ತದೆ. ಪ್ರಾಣದ ಹಂಗುತೊರೆದು ನೀರಿನ ರಭಸ ನಿಯಂತ್ರಿಸಿ ಕೆಲಸ ಮಾಡಿರುವುದು ಮರೆಯಲು ಸಾಧ್ಯವಿಲ್ಲ
ಶರಣಪ್ಪ ಯಲಾಲ ಸುರಂಗ ಮಾರ್ಗದ ಮುಖ್ಯಸ್ಥ ಎಚ್‌ಸಿಸಿ ಮುಂಬೈ
300 ಮೀಟರ್ ಬಾಕಿ
‘ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ’ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಖಾಜಿಕುಂಡದ ಬಳಿ ಸುರಂಗದಿಂದ ಭಾರಿ ಪ್ರಮಾಣದಲ್ಲಿ ನೀರು ಉಕ್ಕೇರಿ ಹರಿಯುತ್ತಿರುವುದರಿಂದ 300 ಮೀಟರ್ ಮಾತ್ರ ಕಾಮಗಾರಿ ಬಾಕಿಯಿದ್ದು 2–3 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ಶರಣಪ್ಪ ಯಲಾಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT