ನಂದಿನಿ ತುಪ್ಪಕ್ಕೂ ವ್ಯಾಪಕ ಬೇಡಿಕೆ
ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟವು ತುಪ್ಪ ಮಾರಾಟದಲ್ಲೂ ಹೊಸ ಮೈಲಿಗಲ್ಲು ನಿರ್ಮಿಸಿದೆ. ದಸರಾ–ದೀಪಾವಳಿ ಅವಧಿಯಲ್ಲಿ ಬರೋಬ್ಬರಿ 23 ಟನ್‌ಗಳಷ್ಟು ತುಪ್ಪವನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಕ್ಕೂಟವು 13 ಟನ್‌ಗಳಷ್ಟು ತುಪ್ಪ ಮಾರಾಟ ಮಾಡಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ 10 ಟನ್ ಅಧಿಕ ತುಪ್ಪವನ್ನು ಮಾರಾಟ ಮಾಡಿದೆ. 2023–24ರ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಒಕ್ಕೂಟದಿಂದ 105 ಟನ್‌ಗಳಷ್ಟು ತುಪ್ಪ ಮಾರಾಟವಾಗಿತ್ತು. 2024–25ನೇ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ 140 ಟನ್‌ಗಳಷ್ಟು ತುಪ್ಪ ಮಾರಾಟವಾಗಿದ್ದು ಶೇ 35ರಷ್ಟು ಪ್ರಗತಿ ಸಾಧಿಸಿದೆ. ‘ಎಮ್ಮೆ ಹಾಲು ಪ್ರತ್ಯೇಕ ಶೇಖರಣೆ ಅದಕ್ಕೆ ಒಕ್ಕೂಟದಿಂದ ಹೆಚ್ಚುವರಿ ಬೆಂಬಲ ಬೆಲೆ ನೀಡುತ್ತಿರುವ ಫಲವಾಗಿ ಉತ್ಕೃಷ್ಟ ಗುಣಮಟ್ಟದ ಎಮ್ಮೆ ಹಾಲು ಯಥೇಚ್ಛವಾಗಿ ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಅದರಿಂದ ಸಹಜವಾಗಿಯೇ ತುಪ್ಪ ಉತ್ಪಾದನೆಯೂ ಏರಿಕೆ ಕಂಡಿದೆ. ಮೊದಲಿನಿಂದಲೂ ನಂದಿನಿ ತುಪ್ಪಕ್ಕೆ ಸಾಕಷ್ಟು ಬೇಡಿಕೆ ಇತ್ತು. ಈ ನಡುವೆ ತಿರುಪತಿ ಲಾಡು ವಿವಾದದ ಬಳಿಕ ನಂದಿನಿ ತುಪ್ಪದ ಗುಣಮಟ್ಟದ ಬಗೆಗಿನ ಜನರಲ್ಲಿ ಭರವಸೆ ಮೂಡಿದ್ದು ಅದರಿಂದ ತುಪ್ಪಕ್ಕೆ ಮತ್ತಷ್ಟು ಬೇಡಿಕೆ ವ್ಯಕ್ತವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.