ನಾಪೋಕ್ಲು: ಮುಂಗಾರು ಮಳೆಯಲ್ಲಿ ಬಂಡೆಗಳಿಂದ ಜಲಧಾರೆಯಾಗಿ ಧುಮ್ಮಿಕ್ಕಿ ಭೋರ್ಗರೆಯುವ ನಾಲ್ಕುನಾಡಿನ ಜಲಪಾತಗಳು ಇದೀಗ ಮುಂಗಾರಿಗೂ ಮುನ್ನವೇ ಮೈದುಂಬಿಕೊಳ್ಳುತ್ತಿವೆ.

ಅಲ್ಲಲ್ಲಿ ಬಂಡೆಗಳ ಮೇಲೆ ಹರಿಯುತ್ತಿರುವ ನೀರು ನಿಸರ್ಗದ ಬಿಳಿ ರೇಷ್ಮೆ ಸೀರೆಯ ಸೆರಗು ಹಾಕಿದಂತೆ ಭಾಸವಾಗುತ್ತಿದೆ. ಈಗ ಜಲಧಾರೆಗಳು ಹರಿಯತೊಡಗಿದ್ದು, ಪ್ರಕೃತಿ ಪ್ರಿಯರಿಗೆ ಖುಷಿ ಕೊಡುತ್ತಿವೆ.

ಕೆಲವೇ ದಿನಗಳ ಹಿಂದೆ ನೀರಿಲ್ಲದೇ ಸೊರಗಿದ ಜಲಪಾತಗಳು ಅಲ್ಲಲ್ಲಿ ಕೇವಲ ಕರಿಬಂಡೆಗಳ ದರ್ಶನ ಮಾಡಿಸುತ್ತಿದ್ದವು. ಇದೀಗ ಬಂಡೆಗಳ ಮೇಲೆ ನೀರಿನ ಸೆಲೆ ಹರಿಯುತ್ತಿದೆ. ಕೆಲವು ದಿನಗಳಿಂದ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಬೆಟ್ಟಗುಡ್ಡಗಳಲ್ಲಿ ನೀರು ಹರಿಯುತ್ತಿದ್ದು, ಜಲಪಾತಗಳಿಗೆ ಜೀವಕಳೆ ತಂದಿದೆ.

ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಹಲವು ಜಲಪಾತಗಳ ಚೆಲುವು ವರ್ಣಿಸಲು ಅಸಾಧ್ಯ. ಸೊಗಸಾದ ಈ ಸೌಂದರ್ಯ ರಾಶಿಯನ್ನು ವೀಕ್ಷಿಸಲೆಂದೇ ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ.

ರಜಾದಿನಗಳಲ್ಲಿ ಜಲಪಾತದ ನಯನಮನೋಹರ ದೃಶ್ಯದ ಸೊಬಗು ಸವಿದು ಸಂತಸಪಡುತ್ತಾರೆ. ಬಿರುಬಿಸಿಲಿನ ಹೊಡೆತಕ್ಕೆ ಈ ಬಾರಿ ಎಲ್ಲಾ ಜಲಪಾತಗಳು ಸೊರಗಿದ್ದವು. ತುಂತುರು ಧಾರೆ ಇರಲಿ ಹನಿ ನೀರೂ ಇಲ್ಲದೇ ಕಳೆಗುಂದಿದ್ದವು. ಇವು ಬೋರ್ಗರೆವ ಜಲಪಾತಗಳೇ ಎಂದು ಸಂಶಯಪಡುವಷ್ಟರ ಮಟ್ಟಿಗೆ ಬರಿದಾಗಿದ್ದವು. ಆದರೆ, ಮೇ ತಿಂಗಳ ಮಧ್ಯಭಾಗದಲ್ಲಿ ಸುರಿದ ಮಳೆ ಕಾಡಿನ ಜಲಧಾರೆಗಳಿಗೆ ಚೆಲುವು ತಂದಿತ್ತಿದೆ. ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೇಲಾವರ ಮತ್ತು ಏಮೆಪಾರೆ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆಯುತ್ತಿದ್ದವು.

ಜಿಲ್ಲೆಯ ಅತೀ ಎತ್ತರ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದಿಂದ ಕಾವೇರಿ ನದಿ ಉಗಮಿಸಿದರೆ ತಡಿಯಂಡಮೋಳ್ ಶಿಖರದ ಸರಹದ್ದಿನ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನ ನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ.

ಅಲ್ಲಿಂದ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿ ಸೇರುತ್ತವೆ. ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಜಲಪಾತಗಳಲ್ಲಿ ಚೇಲಾವರ ಜಲಪಾತ ವಿಶೇಷ ಆಕರ್ಷಣೆ. ಈಗ ಈ ಜಲಪಾತಗಳೂ ಜನರನ್ನು ಆಕರ್ಷಿಸುತ್ತಿವೆ.

ಇನ್ನು ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ, ಕಬ್ಬಿನಕಾಡಿನ ಚಿಂಗಾರ ಜಲಪಾತ, ಯವಕಪಾಡಿಯ ಮಾದಂಡ ಅಬ್ಬಿ, ಪೇರೂರು ಗ್ರಾಮದ ಸರಣಿ ಜಲಪಾತಗಳು, ದೇವರಗುಂಡಿ ಜಲಪಾತಗಳೂ ನಿಸರ್ಗದ ಸೌಂದರ್ಯಕ್ಕೆ ಸಾಕ್ಷಿಯಾಗುತ್ತಿವೆ.

ಬ್ರಹ್ಮಗಿರಿಯಿಂದ ಹೊರಟು ಕೆಲ ಕಿಲೋಮೀಟರ್ ದೂರ ತಿರುವು ರಸ್ತೆಗಳಲ್ಲಿ ಸಾಗಿದರೆ ಎಡಬದಿಯಲ್ಲಿ ತಲಕಾವೇರಿ ರಕ್ಷಿತಾರಣ್ಯ ಮತ್ತು ಬ್ರಹ್ಮಗಿರಿ ಶಿಖರ ಶ್ರೇಣಿ ಕಾಣಸಿಗುತ್ತದೆ. ನಿಸರ್ಗದ ಸೌಂದರ್ಯ ನಡುವೆ ಮತ್ತಷ್ಟು ದೂರ ಸಾಗಿದರೆ ತಿರುವಿನಲ್ಲಿ ರಸ್ತೆಗೆ ಬೀಳುವ ಜಲಧಾರೆ ಕಾಣಸಿಗುತ್ತದೆ. ಎರಡು ಕವಲುಗಳಾಗಿ ಕಾಡಿನ ನಡುವಿನಿಂದ ಹರಿದು ಬರುವ ಈ ಸಣ್ಣ ಜಲಪಾತ ರಸ್ತೆಯ ಬದಿ ಮೋರಿಯಲ್ಲಿ ನಿಂತರೆ ಕೈಗೆಟುಕುವ ಅದ್ಭುತ ಧಾರೆ.

ಅಲ್ಲಿಂದ ಮುಂದೆ ಸಾಗಿದರೆ ಕಿಲೋಮೀಟರಿಗೊಂದೊಂದು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಿಟಿಜಿಟಿ ಮಳೆ ನಡುವೆ ಮೈದುಂಬಿ ಸಾಗಿ ಬರುವ ಬೆಳ್ನೊರೆಗಳು ಕೆಲವೊಂದನ್ನು ಕಾಡಿನ ನಡುವೆ ಸದ್ದು ಆಲಿಸಿ ಹಾದಿ ಹಿಡಿದು ಹುಡುಕಬೇಕು. ಈ ರಸ್ತೆಯಲ್ಲಿ ಸಾಗಿದರೆ 30ಕ್ಕೂ ಅಧಿಕ ಜಲಪಾತಗಳು ಕಾಣಸಿಗುತ್ತವೆ.

ಮುಂಗಾರು ಮಳೆ ಸುರಿಯುತ್ತಿದ್ದಂತೆ ಇವೆಲ್ಲಾ ಮೈದುಂಬಿ ನಿಸರ್ಗಪ್ರಿಯರ ಮನತಣಿಸುತ್ತವೆ. ಮೇ ತಿಂಗಳಲ್ಲಿ ಸುರಿದ ಮಳೆ ಜಲಪಾತಗಳ ಚೆಲುವಿಗೆ ಮುನ್ನುಡಿ ಬರೆದಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.