ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಅಂಗನವಾಡಿ ಚಾವಣಿ ಪದರು ಕುಸಿದು ಮಕ್ಕಳಿಗೆ ಗಾಯ

ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ, ಅಧಿಕಾರಿ ಭೇಟಿ, ಪರಿಶೀಲನೆ
Published : 23 ಸೆಪ್ಟೆಂಬರ್ 2024, 14:25 IST
Last Updated : 23 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ಗಂಗಾವತಿ: ನಗರದ 7ನೇ ವಾರ್ಡ್‌ನ ಮೆಹಬೂಬ ನಗರದಲ್ಲಿರುವ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್‌ ಪದರು ಬಿದ್ದು ನಾಲ್ವರು ಮಕ್ಕಳು ಗಾಯಗೊಂಡಿದ್ದು, ಪೋಷಕರು ಆತಂಕ ವ್ಯಕ್ತ ಪಡಿಸಿದ್ದಾರೆ.

ಮಕ್ಕಳು ಎಂದಿನಂತ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಯಲ್ಲಿ ಭಾಗವಹಿಸಿದ್ದಾಗ, ಏಕಾಏಕಿ ಅಂಗನಾಡಿ ಕೇಂದ್ರದ ಚಾವಣಿ ಪದರು ಕುಸಿದಿದೆ. ಅದರ ಪರಿಣಾಮ ಇಬ್ಬರು ಮಕ್ಕಳಿಗೆ ಕಾಲು ಹಾಗೂ ತಲೆಗೆ ತೀವ್ರ ಪೆಟ್ಟಾಗಿದ್ದರೆ, ಇನ್ನಿಬ್ಬರಿಗೆ ಸಾಧಾರಣ ಪೆಟ್ಟುಗಳಾಗಿವೆ. ಕೂಡಲೇ ಮಕ್ಕಳನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆ ಗೆ ಚಿಕಿತ್ಸೆ ಕರೆತಂದಿದ್ದು, ಇಬ್ಬರು ಮಕ್ಕಳಿಗೆ ಕಾಲು ಮತ್ತು ತಲೆಗೆ ಹೊಲಿಗೆ ಹಾಕಿ, ಇನ್ನಿಬ್ಬರೂ‌ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.

ಪಾಲಕರಿಂದ ತರಾಟೆ: ಅಂಗನವಾಡಿ ಕೇಂದ್ರದಲ್ಲಿ ಚಾವಣಿ ಪದರು ಕುಸಿದು ಮಕ್ಕಳು ಗಾಯಗೊಂಡಿರುವ ವಿಷಯ ತಿಳಿದ ಮಕ್ಕಳ ಪಾಲಕರು, ಕೇಂದ್ರಕ್ಕೆ ಭೇಟಿ ನೀಡಿ, ಘಟನೆಯಿಂದ ಮಕ್ಕಳಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ ಎಂದು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಕಟ್ಟಡ ಆರೋಪ: ಅಂಗನವಾಡಿ ಕೇಂದ್ರವು 2016-17ರಲ್ಲಿ ಸ್ವರ್ಣ ಜಯಂತಿ ರೋಜಗಾರ್ ಯೋಜನೆಯಡಿ ನಿರ್ಮಿಸಲಾಗಿದೆ. ಕಟ್ಟಡದ ಗುಣಮಟ್ಟ ಕಳಪೆಯಾಗಿದ್ದರಿಂದ ಚಾವಣಿಯ ಪದರು ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆ ಅಧ್ಯಕ್ಷ, ಪೌರಾಯುಕ್ತರ ಭೇಟಿ: ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಅಧ್ಯಕ್ಷ ಮೌಲಾಸಾಬ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ವಿರೋಧಪಕ್ಷದ ನಾಯಕ ಮನೋಹರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಪಡೆದರು.

ನಂತರ ಅಧ್ಯಕ್ಷ ಮೌಲಸಾಬ ಮಾತನಾಡಿ, ‘ಗಂಗಾವತಿ ನಗರದ ಹಲವು ವಾರ್ಡ್‌ಗಳಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಮೊದಲು ಕಟ್ಟಡಗಳ ಗುಣಮಟ್ಟತೆ ಪರಿಶೀಲಿಸಿ,‌ ಮಕ್ಕಳನ್ನು ಕೂಡಿಸಬೇಕೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸಬೇಕು’ ಎಂದು ಹೇಳಿದರು.

‘ಇಂತಹ ಘಟನೆಗಳು ಮರುಕಳಿಸಿದರೆ, ಪಾಲಕರು ಸುಮ್ಮನಿರಲ್ಲ. ಕೂಡಲೇ ಕಳಪೆ ಅಂಗನವಾಡಿ ಕೇಂದ್ರಗಳ ಮಾಹಿತಿ ತರಿಸಿಕೊಂಡು, ಮಕ್ಕಳಿಗೆ ಪರ್ಯಾಯ ಅಂಗನವಾಡಿ ಕೇಂದ್ರಗಳ ವ್ಯವಸ್ಥೆ ಕಲ್ಪಿಸಬೇಕು. ಸದ್ಯ ಮೆಹಬೂಬ ನಗರದ ಅಂಗನವಾಡಿ ಕೇಂದ್ರ ನಿರ್ಮಾಣ ಗುತ್ತಿಗೆದಾರರ ವಿರುದ್ಧ ಕ್ರಮಜರುಗಿಸಬೇಕು’ ಎಂದು ಸೂಚಿಸಿದರು.

ನಗರಸಭೆ ಸದಸ್ಯರಾದ ರಮೇಶ ಚೌಡ್ಕಿ, ನೀಲಕಂಠ ಕಟ್ಟಿ ಮನಿ, ಉಪಾಧ್ಯಕ್ಷೆ ಪಾರ್ವತಮ್ಮ, ನಗರಸಭೆ ಸದಸ್ಯರಾದ ನವೀನ್ ಪಾಟೀಲ, ಉಸ್ಮಾನ್, ಕಂಮ್ಲಿಬಾಬಾ ಭಾಗವಹಿಸಿದ್ದರು.

ಗಂಗಾವತಿ ನಗರದ ಮೆಹಬೂಬ ನಗರದ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಪದರು ಕುಸಿದು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
ಗಂಗಾವತಿ ನಗರದ ಮೆಹಬೂಬ ನಗರದ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಪದರು ಕುಸಿದು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
ಚಾವಣಿ ಕುಸಿದು ಗಾಯಗೊಂಡಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕಟ್ಟಡವನ್ನು ಶಿಶು ಅಭಿವೃದ್ಧಿಇಲಾಖೆಗೆ ಹಸ್ತಾಂತರಿಸಲಾಗಿದೆಯೇ ಎಂಬುದರ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು
ಜಯಶ್ರೀ ಸಿಡಿಪಿಒ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT