ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಹೊಲಗಳಲ್ಲಿನ ಬೆಳೆಗಳು ಹಾಳು: ‘ಕರಡಿಗಳ ಕುಣಿತ’ಕ್ಕೆ ನಲುಗಿದ ರೈತರು

Published 15 ಜುಲೈ 2024, 6:12 IST
Last Updated 15 ಜುಲೈ 2024, 6:12 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಮನುಷ್ಯರ ಮೇಲೆ ಪದೇ ಪದೇ ‘ಕರಡಿ ಕುಣಿತ’ವಾಗುತ್ತಿದೆ. ಈ ಪ್ರಾಣಿಗಳು ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರು ಮತ್ತು ಬೆಳೆಗಳ ಮೇಲೆಯೂ ದಾಳಿ ಮಾಡುತ್ತಿವೆ. ಇದು ರೈತರಲ್ಲಿ ಆತಂಕ ಉಂಟು ಮಾಡುತ್ತಿದೆ.

ಮೂರು ತಿಂಗಳ ಹಿಂದೆ ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಹಲವರ ಮೇಲೆ ಕರಡಿ ದಾಳಿ ನಡೆದಿದ್ದು, ಚಿರತೆಗಳು ಕೂಡ ಆಗಾಗ್ಗೆ ದನಗಳನ್ನು ಎತ್ತುತ್ತಿವೆ. ಈ ಕಾಡು ಪ್ರಾಣಿಗಳು ಆಗಾಗ್ಗೆ ಹೊಲಗಳಿಗೂ ಲಗ್ಗೆ ಇಡುತ್ತಿರುವ ಪರಿಣಾಮ ರಾತ್ರಿ ಹೊತ್ತಿನಲ್ಲಿ ಹೊಲಗಳಿಗೆ ಹೋಗಲು ಭಯಪಡುವ ಸ್ಥಿತಿ ಎದುರಾಗಿದೆ. ಇದು ಬೆಳೆಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತಿದೆ.  

ಹಲವಾರು ನೈಸರ್ಗಿಕ ಗುಹೆಗಳು, ಬೆಟ್ಟಗಳು ಇರುವ ಜಿಲ್ಲೆಯ ಹಲವು ಕಡೆ ಕರಡಿಗಳು, ಚಿರತೆಗಳು, ತೋಳಗಳಿವೆ. ಇವು ಪ್ರಾಣಿಗಳ ‘ಹೆರಿಗೆ ವಾರ್ಡ್‌’ಗಳಂತೆ ಇದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸುತ್ತಲಿನ ಮತ್ತು ಕೊಪ್ಪಳ ತಾಲ್ಲೂಕಿನ ಬಂಡಿ ಹರ್ಲಾಪುರ ಸುತ್ತಲಿನ ಗ್ರಾಮಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯೂ ಈ ಪ್ರಾಣಿಗಳು ಮನುಷ್ಯರ ಮೇಲಿನ ದಾಳಿಗೆ ಕಾರಣವಾಗುತ್ತಿವೆ ಎನ್ನುವ ಆರೋಪವಿದೆ. ಕಲ್ಲು ಒಡೆಯಲು ಸ್ಫೋಟಕಗಳನ್ನು ಬಳಸುವುದರಿಂದ ಕಾಡು ಪ್ರಾಣಿಗಳು ಮನೆಗಳು, ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ನಾಡಿಗೆ ಬರುತ್ತಿವೆ. ಜನನಿಬಿಡ ಪ್ರದೇಶದಲ್ಲಿಯೂ ‘ಕರಡಿ ಕುಣಿತ’ ಜೋರಾಗಿದೆ.

ಕೊಪ್ಪಳ ತಾಲ್ಲೂಕಿನ ಸೂಳಿಕೇರಿ, ಹಾಸಗಲ್ಲ, ಚಿಲಕಮುಖಿ, ಇರಕಲ್ಲಗಡ ಪ್ರದೇಶದ ವ್ಯಾಪ್ತಿಯಲ್ಲಿರುವ ಗುಡ್ಡ ಮತ್ತು ಅರಣ್ಯಪ್ರದೇಶದಲ್ಲಿ ಕರಡಿಗಳಿದ್ದು, ಅವುಗಳು ಆಹಾರ ಹುಡುಕಿಕೊಂಡು ಹೊಲಗಳಿಗೆ ನುಗ್ಗಿ ಬೆಳೆ ತಿಂದು ಹಾಕುತ್ತಿವೆ. ಇದರಿಂದ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ಸವಾಲಾಗಿದೆ. ‘ಪ್ರತಿವರ್ಷ ಯಾರಾದರೊಬ್ಬರ ಹೊಲದಲ್ಲಿ ಈ ರೀತಿಯ ನಷ್ಟವಾಗುವುದು ಸಾಮಾನ್ಯ ವಾಗಿದೆ. ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂಬುದು ರೈತರ ಮಾತು. ಕಲ್ಲಂಗಡಿ, ಸೌತೆಕಾಯಿ, ಹಿರೇಕಾಯಿ, ಮೆಣಸಿನಕಾಯಿ, ಟೊಮೊಟೊ, ಹಾಗಲಕಾಯಿ, ಬದನೆಕಾಯಿ, ಸಜ್ಜೆ,ಜೋಳ, ಹೆಸರು ಬೆಳೆ ಹಾಳಾಗುತ್ತಿವೆ. ಗಂಗಾವತಿ ತಾಲ್ಲೂಕಿನ ವೆಂಕಟಗಿರಿ, ಹಿರೇಬೆಣಕಲ್‌ ಭಾಗದಲ್ಲಿ ಕರಡಿ ದಾಳಿಯ ಪ್ರಕರಣಗಳು ನಡೆದಿವೆ.

ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮುನ್ನ ಹೊರಗೆ ಹೋಗುವುದು ತುಂಬಾ ಕಷ್ಟಕರವಾಗಿದೆ ಎಂದು ಒಂದೆರಡು ವರ್ಷಗಳ ಹಿಂದೆ ಕರಡಿ ದಾಳಿಗೆ ಒಳಗಾಗಿದ್ದ ಚಿಲಕಮುಖಿ ಗ್ರಾಮದ ನಿವಾಸಿ ಗುಂಡಪ್ಪ ಕೆ., ‘ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಗಾಯಗೊಂಡಿದ್ದಾರೆ. ಕರಡಿಗುಡ್ಡ ಬೆಟ್ಟವು ಕರಡಿಗಳಿಗೆ ನೆಲೆಯಾಗಿದೆ. ಬೆಟ್ಟದ ಪಕ್ಕದಲ್ಲಿರುವ ಬಯಲು ಮತ್ತು ಬಂಜರು ಭೂಮಿಗಳ ಫಸಲಿನ ಮೇಲೆ ದಾಳಿ ಮಾಡುತ್ತವೆ’ ಎಂದರು.

ಬೆಳೆ ರಕ್ಷಣೆಗಾಗಿ ಹೊಲದಲ್ಲಿ ಕಾಯಲು ಹೋದರೆ ಜೀವ ಭಯ ಕಾಡುತ್ತಿದೆ. ಕರಡಿಗಳೊಂದಿಗೆ ಸಣ್ಣ ಮರಿಗಳಿರುವುದರಿಂದ ಓಡಿಸಲು ಎಷ್ಟೇ ಪ್ರಯತ್ನಪಟ್ಟರೂ ಅವುಗಳು ಮರು ದಾಳಿ ಮಾಡುತ್ತವೆ. ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯೂ ಘಟನೆ ಹೆಚ್ಚಲು ಕಾರಣವಾಗುತ್ತಿವೆ.

ಯಲಬುರ್ಗಾ ತಾಲ್ಲೂಕಿನ ಗುನ್ನಾಳ, ಹುಣಸಿಹಾಳ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರು ಕಲ್ಲಂಗಡಿ ಬೆಳೆಯುತ್ತಿದ್ದು, ಕರಡಿಗಳ ದಾಳಿಯಿಂದ ಬೆಳೆ ಸಂಪೂರ್ಣ ಹಾಳಾಗಿವೆ. ಈ ಭಾಗದಲ್ಲಿ ಹಣ್ಣಿನ ಬೆಳೆಯು ಕರಡಿ ತುತ್ತಾಗುತ್ತಿರುವುದೇ ಹೆಚ್ಚಾಗುತ್ತಿದೆ. ಕನಕಗಿರಿ ತಾಲ್ಲೂಕಿನ ರಾಂಪುರ ಗ್ರಾಮದ ಹೊರವಲಯ ದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಸೆರೆ‌ ಹಿಡಿದಿದ್ದ ಕರಡಿ ಬೋನಿಗೆ ಹಾಕುವ ವೇಳೆ ದಾಳಿ ಮಾಡಿದ ಹುಡೇಜಾಲಿ ಗ್ರಾಮದ ವೃದ್ಧ ಚೆನ್ನಪ್ಪ ಮಡಿವಾಳ ಮೃತಪಟ್ಟಿದ್ದರು.

ಆದ್ದರಿಂದ ಇರಕಲ್ಲಗಡ ಹೋಬಳಿ ಭಾಗದಲ್ಲಿ ಕರಡಿ ಧಾಮ ನಿರ್ಮಿಸಲು ರೈತರು ಹಾಗೂ ಆ ಭಾಗದ ಜನಪ್ರತಿನಿಧಿಯೂ ಆದ ವಿಧಾನ ಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹಲವು ಬಾರಿ ಒತ್ತಾಯ ಮಾಡಿ ಹೋರಾಟವನ್ನೂ ಮಾಡಿದ್ದಾರೆ. ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಈ ಕುರಿತು ಸರ್ಕಾರದ ಗಮನ ಸೆಳೆದರೂ ಕರಡಿಧಾಮಕ್ಕೆ ಅನುಮತಿ ಲಭಿಸಿಲ್ಲ.

ರೈತರ ನಿದ್ರೆಗೆಡಿಸಿದ ಕರಡಿಗಳು!

ಕ‌ನಕಗಿರಿ: ಗುಡ್ಡಗಾಡಿನಿಂದ ಕೂಡಿರುವ ಈ ಭಾಗದಲ್ಲಿ ಕರಡಿ ಹಾಗೂ ಚಿರತೆ ಹಾವಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ.

ರಾಂಪುರ, ಪರಾಪುರ, ಬಸರಿಹಾಳ, ಇಂಗಳದಾಳ ಸೇರಿದಂತೆ ಪಟ್ಟಣದ ನೀರ್ಲೂಟಿ ಹಾಗೂ ಪ್ರವಾಸಿ ಮಂದಿರದ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿ ಆತಂಕ‌ ಮೂಡಿಸಿದೆ. ಸಮೀಪದ ಪರಾಪುರ ಗ್ರಾಮದ ಹೊಲದಲ್ಲಿದ್ದ ರೈತ ಶಂಕ್ರಪ್ಪ ಕುರಿ ಅವರ ಮೇಲೆ‌ ಕರಡಿ ದಾಳಿ ಮಾಡಿ ಗಂಭೀರವಾಗಿ ಗಾಯ ಮಾಡಿದೆ. ಘಟನೆ‌ ನೋಡಿದ ಕೆಲವರು ಕೂಗಾಟ ನಡೆಸಿದ್ದರಿಂದ ಕುರಿ ಅವರ ಪ್ರಾಣ‌ ಉಳಿದಿದೆ.

ತಾಲ್ಲೂಕಿನ ದೇವಲಾಪುರ, ಸೋಮಸಾಗರ, ಅಡವಿಬಾವಿ, ಅಡವಿಬಾವಿ ತಾಂಡ, ಬೈಲಕ್ಕುಂಪುರ ಇತರೆ ಗ್ರಾಮಗಳ ರೈತರು ಹೆಚ್ಚಾಗಿ ಹೊಲದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು‌ ಅಲ್ಲಿಯೇ ವಾಸಿಸುತ್ತಿದ್ದಾರೆ. ಊರಿನಲ್ಲಿ ವಾಸಿಸುವ ಜನರು ತಮಗೆ ನಿರಂತರ ವಿದ್ಯುತ್ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಯಾ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಿರಂತರ ವಿದ್ಯುತ್ ಸರಬರಾಜು ಜಾರಿಯಾದರೆ ಅರಣ್ಯ ಪ್ರದೇಶದ ಹೊಲದಲ್ಲಿ ವಾಸಿಸುವ ಜನರಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜು ಅಗುವುದಿಲ್ಲ.

‘ಕರಡಿ ಹಾವಳಿಯಿಂದಾಗಿ ರೈತರು ಆತಂಕದಲ್ಲಿದ್ದಾರೆ. ಜೀವದ ಜತೆಗೆ ಬೆಳೆ ಹಾನಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ಆಗುತ್ತಿಲ್ಲ. ಹೀಗಾಗಿ ರಾತ್ರಿ ಬದಲಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್‌ ಪೂರೈಕೆ ಮಾಡಿ ಎಂದು ಮನವಿ ಸಲ್ಲಿಸಿದ್ದೇವೆ’ ಎಂದು ರಾಜ್ಯ ರೈತ ಸಂಘದ ಹಸಿರುವ ಸೇನೆಯ ಹಾಗೂ ಹಸಿರು ಸೇನೆಯ ಕನಕಗಿರಿ ತಾಲ್ಲೂಕು ಅಧ್ಯಕ್ಷ ಭೀಮನಗೌಡ ಜೀರಾಳ ಆಗ್ರಹಿಸಿದ್ದಾರೆ.

ವರದಿ – ಮೆಹಬೂಬ ಹುಸೇನ

ಕರಡಿಧಾಮ ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬಂದರೆ ಕರಡಿ ಹಾವಳಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪ್ರಯತ್ನವೂ ನಡೆಯುತ್ತಿದೆ
ಮಹಾಂತೇಶ ಸಂಗಟಿ, ಇರಕಲ್ಲಗಡ ಭಾಗದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT