ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ತುಂಗಭದ್ರಾ ಜಲಾಶಯ: ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ

ತುಂಗಭದ್ರಾ ಜಲಾಶಯದಿಂದ ರಭಸವಾಗಿ ಹರಿದು ಹೋಗುತ್ತಿದೆ ನೀರು, ನಿಲ್ಲಿಸಲು ಸರ್ವಪ್ರಯತ್ನ
Published : 13 ಆಗಸ್ಟ್ 2024, 5:41 IST
Last Updated : 13 ಆಗಸ್ಟ್ 2024, 5:41 IST
ಫಾಲೋ ಮಾಡಿ
Comments

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್‌ ಒಡೆದು ಹೋಗಿ ಎರಡು ದಿನಗಳೇ ಕಳೆದಿದ್ದು ಈಗಾಗಲೇ 10 ಟಿಎಂಸಿ ಅಡಿಗಿಂತಲೂ ಹೆಚ್ಚಿನ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಇದು ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿಸಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.19 ಲಕ್ಷ ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಗಂಗಾವತಿ, ಕಾರಟಗಿ ಭಾಗದಲ್ಲಿ ಅಧಿಕವಾಗಿ ಬೆಳೆಯುವ ಭತ್ತವೇ 62 ಸಾವಿರ ಹೆಕ್ಟೇರ್‌ ಪ್ರದೇಶವಿದೆ. ಇದರಲ್ಲಿ ಕೆಲ ರೈತರಷ್ಟೇ ಪಂಪ್‌ಸೆಟ್‌ ನೀರಿನ ಮೇಲೆ ಅವಲಂಬನೆಯಾಗಿದ್ದರೆ, ಇನ್ನುಳಿದ ಬಹುತೇಕ ರೈತರು ಜಲಾಶಯದ ನೀರಿನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿತ್ಯ 25ರಿಂದ 35 ಸಾವಿರ ಕ್ಯುಸೆಕ್‌ ಒಳಹರಿವು ಇದ್ದು, ಗೇಟ್‌ ಅಳವಡಿಸಲು ನೀರನ್ನು ಹೊರಬಿಡುವ ಪ್ರಕ್ರಿಯೆಯನ್ನೂ ಹಂತಹಂತವಾಗಿ ಹೆಚ್ಚಿಸಲಾಗುತ್ತಿದೆ.

ಕಳೆದ ವರ್ಷ ಮಳೆ ಕೊರತೆ ಕಾಡಿದ್ದರಿಂದ ರೈತರಿಗೆ ಒಂದು ಬೆಳೆಯೂ ಸರಿಯಾಗಿ ಬಂದಿರಲಿಲ್ಲ. ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಗಿಂತಲೂ ಶೇ. 54ರಷ್ಟು ಹೆಚ್ಚು ಮಳೆಯಾಗಿತ್ತು. ಜುಲೈನಲ್ಲಿ ಶೇ. 25ರಷ್ಟು ಮಳೆ ಕೊರತೆ ಕಾಡಿದೆ. ಆದರೆ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲಾಶಯ ಅವಧಿಗಿಂತಲೂ ಮೊದಲೇ ತುಂಬಿದ್ದು ಈಗಾಗಲೇ ಕಾಲುವೆಗಳಿಗೆ ನೀರು ಕೂಡ ಹರಿಸಲಾಗಿದೆ. ಆದರೆ, ಈಗ ಎದುರಾದ ಗೇಟ್‌ ಹಾಳಾದ ಅನಿಶ್ಚಿತತೆ ರೈತರನ್ನು ಆತಂಕಕ್ಕೆ ದೂಡಿದೆ.

‘ಜಲಾಶಯಕ್ಕೆ ಉತ್ತಮವಾಗಿ ನೀರು ಹರಿದುಬಂದಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಈಗ ಆದ ಆಘಾತ ಬರಕ್ಕಿಂತಲೂ ಹೆಚ್ಚು ಕಷ್ಟ ಕೊಡುತ್ತಿದೆ. ಕಣ್ಣೆದುರೇ ನೀರು ಹರಿದು ಹೋಗುತ್ತಿದ್ದರೂ ಹಿಡಿದಿಡಲು ಸಾಧ್ಯವಾಗದ ಅಸಹಾಯಕತೆ ತಲುಪಿದ್ದೇವೆ’ ಎಂದು ತಾಲ್ಲೂಕಿನ ಹೊಸಳ್ಳಿ ಗ್ರಾಮದ ರೈತ ಬಸವರಾಜ ಬೇಸರ ವ್ಯಕ್ತಪಡಿಸಿದರು.

‘ಹಿಂದಿನ ವರ್ಷ ಜಲಾಶಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ನೀರು ಇಲ್ಲದಾಗ ಅದರ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಮಾಡಿದ್ದಕ್ಕೆ ಈಗ ಗೇಟ್‌ ಕೊಚ್ಚಿ ಹೋಗುವ ದುಸ್ಥಿತಿ ಬರುತ್ತಿರಲಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಕ್ಕೆ ದಾಖಲಿಸಬೇಕು’ ಎಂದು ಸಿಪಿಐಎಂಎಲ್‌ ಮಾಸ್‌ ಲೈನ್‌ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ಎಚ್‌. ಪೂಜಾರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್‌ ಆಗ್ರಹಿಸಿದ್ದಾರೆ.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕಡೇಬಾಗಿಲು ಬಳಿ ಭತ್ತದ ಸಸಿ ನಾಟಿ ಮಾಡಿರುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕಡೇಬಾಗಿಲು ಬಳಿ ಭತ್ತದ ಸಸಿ ನಾಟಿ ಮಾಡಿರುವುದು

‘ರೈತರ ಹಿತಕ್ಕಾಗಿ ಸರ್ವರ ಸಭೆ ಕರೆಯಿರಿ’

ಕೊಪ್ಪಳ: ಈ ಭಾಗದ ಜೀವನದಿ ತುಂಗಭದ್ರಗೆ ಕಟ್ಟಿರುವ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿರುವ ಘಟನೆ ದುರದೃಷ್ಟಕರವಾಗಿದ್ದು ಈ ಹಿಂದೆ ಇದೇ ರೀತಿಯ ಘಟನೆಯಿಂದ ಪಾಠ ಕಲಿಯದೆ ಇರುವುದು ಸರಿಯಲ್ಲ. ಈಗಿನ ಘಟನೆ ಬಗ್ಗೆ ಚರ್ಚಿಸಲು ಸರ್ವರ ಸಭೆ ಕರೆಯಬೇಕು ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯರ ಸಿ.ವಿ. ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನ ಇದರಲ್ಲಿ ಎದ್ದು ಕಾಣುತ್ತಿದೆ. ಆದರೆ ಇದು ಆರೋಪ ಮಾಡುವ ಸಂದರ್ಭ ಅಲ್ಲ. ಈ ಕೂಡಲೇ ಈ ಭಾಗದ ರೈತರು ವಿವಿಧ ಸಂಘಟನೆಗಳು ಎಲ್ಲಾ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ರೈತರ ಹಾಗೂ ಬೆಳೆಗಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಿರುವ ಕ್ರಮಗಳನ್ನು ಅಂತಿಮಗೊಳಿಸಬೇಕು’ ಎಂದು ಹೇಳಿದ್ದಾರೆ.

‘ಮುಂದಿನ ದಿನಗಳಲ್ಲಿ ನೀರಿಲ್ಲದೆ ರೈತರಿಗೆ ನಷ್ಟವಾಗುವಂತಿದ್ದರೆ ಅದಕ್ಕೆ ಪರಿಹಾರ ನೀಡಬೇಕು. ನನೆಗುದಿಗೆ ಬಿದ್ದಿರುವ ನವಲಿ ಸಮಾನಾಂತರ ಜಲಾಶಯದ ನಿರ್ಮಾಣದ ತ್ವರಿತವಾಗಿ ಆರಂಭಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಗರಿಷ್ಠ ಪ್ರಮಾಣದಲ್ಲಿ ನೀರು ಜಲಾಶಯದಲ್ಲಿಯೇ ಉಳಿಸಿ ಗೇಟ್‌ ಅಳವಡಿಸಲು ತ್ವರಿತಗತಿಯಲ್ಲಿ ಕೆಲಸ ನಡೆಯುತ್ತಿದೆ. ರೈತರ ಹಿತ ಕಾಯುವುದು ಅವರಿಗೆ ನೀರು ಒದಗಿಸುವುದಕ್ಕೆ ಆದ್ಯತೆ ನೀಡುವೆ.
–ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT