ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ: ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನಸಾಗರ

Published : 3 ಅಕ್ಟೋಬರ್ 2024, 16:12 IST
Last Updated : 3 ಅಕ್ಟೋಬರ್ 2024, 16:12 IST
ಫಾಲೋ ಮಾಡಿ
Comments

ಮೈಸೂರು: ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್‌ ದೀಪಾಲಂಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

ಇಲ್ಲಿನ ಸಯ್ಯಾಜಿರಾವ್‌ ರಸ್ತೆಯಲ್ಲಿನ ‘ಹಸಿರು ಚಪ್ಪರ’ದ ಆವರಣದಲ್ಲಿ ಗುರುವಾರ ಸಂಜೆ ಉದ್ಘಾಟಿಸಿದರು. ‘ಪವರ್‌ ಮ್ಯಾನ್‌’ಗಳ ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ರೂಪಿಸಲಾಗಿರುವ ‘ವಿದ್ಯುತ್‌ ರಥ’ಕ್ಕೂ ಚಾಲನೆ ನೀಡಲಾಯಿತು.

‘ಈ ಬಾರಿಯ ದೀಪಾಲಂಕಾರ ಆಕರ್ಷಕವಾಗಿದೆ’ ಎಂದು ಶಿವಕುಮಾರ್‌ ಶ್ಲಾಘಿಸಿದರು.

ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸೆಸ್ಕ್‌)ದಿಂದ ದಸರಾ ದೀಪಾಲಂಕಾರ ಮಾಡಲಾಗಿದೆ. ಕಂಗೊಳಿಸುತ್ತಿರುವ ರಸ್ತೆಗಳು ಹಾಗೂ ವೃತ್ತಗಳನ್ನು ಜನರು ವಾಹನಗಳಲ್ಲಿ ಸಂಚರಿಸುತ್ತಾ ವೀಕ್ಷಿಸಿದರು. ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಹಾಗೂ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಇದರಿಂದಾಗಿ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು. ಪ್ರಮುಖ ವೃತ್ತಗಳು ಸೇರಿದಂತೆ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಉಂಟಾಯಿತು.

130 ಕಿ.ಮೀ. ರಸ್ತೆಗೆ ದೀಪಾಲಂಕಾರ: ಈ ಬಾರಿ ನಗರದ 130 ಕಿ.ಮೀ. ರಸ್ತೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಅರಮನೆ ಸುತ್ತಲಿನ ರಸ್ತೆಗಳು, ಸಯ್ಯಾಜಿರಾವ್‌ ರಸ್ತೆ, ಬಿಎನ್‌ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್‌ ವಿಕ್ಟರ್‌ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಹೊರವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳೂ ಆಕರ್ಷಕ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೊಡ್ಡಕೆರೆ ಮೈದಾನ, ಕೆ.ಆರ್‌.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ (ಹಾರ್ಡಿಂಜ್‌), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್‌, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್‌ ದೀಪಗಳಿಂದಲೇ 65ಕ್ಕೂ ಹೆಚ್ಚು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

21 ದಿನಗಳ ಆಕರ್ಷಣೆ: ಈ ಬಾರಿ ಒಟ್ಟು 21 ದಿನಗಳವರೆಗೆ ದೀಪಾಲಂಕಾರ ಇರಲಿದೆ. ಇದಕ್ಕಾಗಿ ₹6.50 ಕೋಟಿ ವೆಚ್ಚವಾಗುತ್ತಿದ್ದು, 2,881 ಕಿಲೋ ವಾಟ್‌ ಅಂದಾಜು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಭಾರ ಹಾಗೂ 2,42,012 ಯೂನಿಟ್‌ ವಿದ್ಯುತ್‌ ಮಾಡಲಾಗುತ್ತಿದೆ.

ದಸರೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್.ಇ.ಡಿ. ಬಲ್ಪ್‌ಗಳನ್ನು ಅಳವಡಿಸಿರುವ 1,500 ಡೋನ್‌ಗಳನ್ನು ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸಲಾಗುವುದು. ಅ.6 ಹಾಗೂ 7ರಂದು ಮತ್ತು ಅ.11, 12ರಂದು ರಾತ್ರಿ 8ರಿಂದ 8.15ರವರೆಗೆ ಡ್ರೋನ್‌ ಪ್ರದರ್ಶನ ನಡೆಯಲಿದ್ದು, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ.6 ಮತ್ತು 7ರಂದು ಡ್ರೋನ್‌ ಶೋ ವೀಕ್ಷಿಸಲು ಉಚಿತ ಪ್ರವೇಶವಿರುತ್ತದೆ.

ವಿದ್ಯುತ್‌ ರಥ ಸಂಚಾರ: ‘ಪವರ್‌ ಮ್ಯಾನ್‌’ಗಳ ಕರ್ತವ್ಯ, ಗೃಹಜ್ಯೋತಿ, ಕೃಷಿ ಬಳಕೆಗೆ ಸೌರ ವಿದ್ಯುತ್, ವಿದ್ಯುತ್ ಸುರಕ್ಷತೆ ಹಾಗೂ ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡ ವಿದ್ಯುತ್ ರಥವನ್ನು ರೂಪಿಸಲಾಗಿದೆ. ಈ ರಥ ದಸರಾ ಉತ್ಸವದ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದೆ

ಸುರಕ್ಷತೆಗೆ ಆದ್ಯತೆ: ಈ ಬಾರಿಯ ವಿದ್ಯುತ್ ದೀಪಾಲಂಕಾರದಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವಿದ್ಯುತ್ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸೆಸ್ಕ್‌ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT