ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರುಸೇತುವೆ ಶಿಥಿಲ: ಸಂಚಾರಕ್ಕೆ ಸಂಚಕಾರ

Published : 7 ಅಕ್ಟೋಬರ್ 2024, 7:08 IST
Last Updated : 7 ಅಕ್ಟೋಬರ್ 2024, 7:08 IST
ಫಾಲೋ ಮಾಡಿ
Comments

ಶಿರಸಿ: ಶಿರಸಿ ತಾಲ್ಲೂಕಿನ ಅಮ್ಮಿನಳ್ಳಿ- ಹೆಗ್ಗರಣಿ ಹಾಗೂ ಸಿದ್ದಾಪುರದ ಹೇರೂರು– ಗೋಳಿಮಕ್ಕಿ ರಸ್ತೆ ಸಂಪರ್ಕಕ್ಕೆ ಪೂರಕವಾಗಿದ್ದ ನಡಿಮನೆ ಕಿರುಸೇತುವೆ ಶಿಥಿಲಗೊಂಡು ಸಂಚಾರಕ್ಕೆ ಸಂಚಕಾರ ತಂದಿದೆ. ಹೀಗಾಗಿ ಇದರ ಮೇಲೆ ಜನತೆ ಓಡಾಡಲು ಆತಂಕ ಪಡುವಂತಾಗಿದೆ. 

ಶಿರಸಿ ವಿಧಾನಸಭಾ ಕ್ಷೇತ್ರದ ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಮನೆ ಎಂಬಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ  ಈ ಸೇತುವೆಯಿದೆ. ಇಲ್ಲಿಯ ನಡಿಮನೆ, ಕೊಂಡಲಗಿ, ಹುಲ್ಲುಜಡ್ಡಿ, ಕ್ಯಾತನಮನೆ, ಅಂಬೆಗಾರ ಸೇರಿದಂತೆ ಹಲವು ಹಳ್ಳಿಗಳ ಸಂಪರ್ಕಕ್ಕೆ ಈ ಸೇತುವೆ ಸಹಕಾರಿ.

ಜೀಪ್ ಮತ್ತು ಬೈಕ್ ದಾಟಬಹುದಾದ ಮಾದರಿಯ ಸಣ್ಣ ಸೇತುವೆ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ ಅಘನಾಶಿನಿ ನದಿಯ ಪ್ರವಾಹದ ಅಬ್ಬರಕ್ಕೆ ವರ್ಷಗಳ ಹಿಂದೆ ಸೇತುವೆಯ ಇಕ್ಕೆಲಗಳ ಭದ್ರತಾ ಕಂಬಗಳು ಮುರಿದುಹೋಗಿ ಬೈಕ್ ದಾಟಿಸಲೂ ಭಯವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ
ಸೇತುವೆಯ ಮಧ್ಯ ಭಾಗದ ಕಂಬ ಶಿಥಿಲಗೊಂಡು ಸೇತುವೆ ಮೇಲೆ ಸಂಚರಿಸಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದರು. ಆದರೆ  ಗ್ರಾಮಸ್ಥರ ಬೇಡಿಕೆಗೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ. 

‘ಕಳೆದ ವರ್ಷ ಮರಳು ಚೀಲಗಳನ್ನು ಕಂಬಗಳಿಗೆ ಅಡ್ಡವಿಟ್ಟು ಸೇತುವೆಯ ಶಿಥಿಲ ಕಂಬಗಳನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಒಟ್ಟಾಗಿ ಶ್ರಮಿಸಿದ್ದರು. ಆದರೆ ಹಳೆಯ ಸೇತುವೆಯಾದ ಕಾರಣ ವರ್ಷವೂ ನೀರ ಅಬ್ಬರಕ್ಕೆ ಶಿಥಿಲವಾಗುತ್ತಿದೆ. ಕಂಬಗಳು ಪುಡಿಗಟ್ಟುತ್ತಿವೆ. ಮಳೆಗಾಲದಲ್ಲಿ ಈ ಹಳ್ಳ ತುಂಬಿ ಹರಿಯುವುದರಿಂದ ಸೇತುವೆಯ ಒಂದು ಭಾಗದಲ್ಲಿ ಕಟ್ಟಿರುವ ಪಿಚ್ಚಿಂಗ್ ಕೂಡ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಮಳೆಯಿಂದಾಗಿ ಸೇತುವೆಯ ಮೇಲೆ ನೀರು ತುಂಬಿ ಹರಿದ ಪರಿಣಾಮ ಸೇತುವೆಯ ಎರಡೂ ಕಡೆ ಇರುವ ಕಂಬ ಹಾಗೂ ಹಿಡಿಕೆಗಳು ನೀರು ಪಾಲಾಗಿವೆ. ಇನ್ನು ಈ ಸೇತುವೆ ಮೇಲೆ ಓಡಾಡಲು ಭಯ ಕಾಡುತ್ತದೆ’ ಎನ್ನುತ್ತಾರೆ ಸ್ಥಳಿಕರಾದ ಗಣೇಶ ಹೆಗಡೆ. 

‘ಕಿರುಸೇತುವೆ ನಂಬಿ 150ಕ್ಕೂ ಹೆಚ್ಚು ಕುಟುಂಬಗಳು ಜೀವಿಸುತ್ತಿವೆ. ಸುಮಾರು 50 ಅಡಿಗಿಂತಲೂ ಹೆಚ್ಚು ಉದ್ದವಿರುವ ಈ ಸೇತುವೆ ಶಿಥಿಲಗೊಂಡಿರುವುದರಿಂದ ಈ ಭಾಗದ ನಾಗರಿಕರಿಗೆ ಸಂಚಾರಕ್ಕೂ ಆತಂಕ ಉಂಟಾಗಿದೆ. ಈ ಭಾಗದ ಜನತೆಗೆ ಸೇತುವೆ ಬಹಳ ಮುಖ್ಯವಾಗಿರುವುದರಿಂದ ಇದನ್ನು ದುರಸ್ತಿ ಮಾಡುವ ಬದಲು ಇಲ್ಲಿಯೇ ದೊಡ್ಡ ಸೇತುವೆ ನಿರ್ಮಿಸುವುದು ಉತ್ತಮ. ಇದರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ ಅವರು.

‘ಸೇತುವೆಯ ಮೇಲೆ ಯಾವುದೇ ವಾಹನ ಚಲಾಯಿಸಲು ಕಷ್ಟಸಾಧ್ಯ. ಆದ್ದರಿಂದ ಇಲ್ಲಿ ಶಾಶ್ವತವಾದ ದೊಡ್ಡ ಸೇತುವೆ ಅವಶ್ಯಕತೆ ಇದೆ. ಈ ಹಿಂದಿನ ಶಾಸಕರು ಸಾಕಷ್ಟು ಭರವಸೆ ನೀಡಿ ಸೇತುವೆ ನಿರ್ಮಿಸದೆ ಹಾಗೆಯೇ ಕಾಲ ಕಳೆದರು. ಈಗಿನ ಶಾಸಕರಾದ ಭೀಮಣ್ಣ ನಾಯ್ಕ ಅವರು ಹೊಸಸೇತುವೆ ಮಂಜೂರಿ ಬಗ್ಗೆ ಪ್ರಯತ್ನಶೀಲರಾಗುತ್ತಾರೆಂಬ ವಿಶ್ವಾಸವಿದೆ. ಹಾಗಾಗಿ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಸಂಚಾರ ಜೀವಾಪಾಯ ತರುವ ಸಾಧ್ಯತೆಯಿದೆ. ಹೀಗಾಗಿ ಶೀಘ್ರದಲ್ಲಿ ಹೊಸ ಸೇತುವೆ ಮಂಜೂರಿ ಮಾಡುವ ಅಗತ್ಯತೆ ಇದೆ
ಮಂಜುನಾಥ ಹೆಗಡೆ ಗ್ರಾಮಸ್ಥ
ಶಿಥಿಲವಾದ ನಡಿಮನೆ ಕಿರು ಸೇತುವೆ ಬದಲಿ ಹೊಸ ಸೇತುವೆ ನಿರ್ಮಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು ಮಂಜೂರಿ ಕುರಿತಂತೆ ಗಂಭೀರ ಪ್ರಯತ್ನ ಮಾಡಲಾಗುತ್ತಿದೆ. ನಿಶ್ಚಿತವಾಗಿ ನೂತನ ಸೇತುವೆ ಮಂಜೂರಾಗುತ್ತದೆ ಎಂಬ ವಿಶ್ವಾಸವಿದೆ
ಭೀಮಣ್ಣ ನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT