ಹಾಸ್ಯಾಸ್ಪದವಾಗಿರುವ ‘ಜನಸ್ಪಂದನ’
ನಗರದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನದಲ್ಲಿ ಅನಧಿಕೃತ ಕೋಚಿಂಗ್ ಕೇಂದ್ರಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ದೂರು ಸಲ್ಲಿಸಿದ್ದರು. ಸ್ಥಳದಲ್ಲೇ ಇದ್ದ ಜಿ.ಪಂ ಸಿಒಇ ಗರಿಮಾ ಪನ್ವಾರ ಅವರು ‘ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಇವತ್ತಿಗೂ ಕ್ರಮಕೈಗೊಂಡಿಲ್ಲ. ಜನಸ್ಪಂದನ ಎಂಬುದು ಹಾಸ್ಯಾಸ್ಪದವಾಗಿದೆ ಎನ್ನುತ್ತಾರೆ ದೂರುದಾರರು. ಸ್ಥಳೀಯ ರಾಜಕೀಯ ಮುಖಂಡರ ರಕ್ಷಣೆ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ನಮ್ಮ ಕರ್ನಾಟಕ ಸೇನೆ ಸಂಘಟನೆಯು ಹೋರಾಟ ಹಾಗೂ ಧರಣಿ ನಡೆಸಿದ್ದವು. ಅಲ್ಲದೆ ಧರಣಿ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರು. ಎಚ್ಚೆತ್ತುಕೊಂಡ ಅಧಿಕಾರಿಗಳು ನಗರದ ನಾಲ್ಕು ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಅಗಸ್ಟ್ 5ರಂದು ಬಂದ್ ಮಾಡಿ ಪತ್ರಿಕೆಗಳ ಮೂಲಕ ಹೇಳಿಕೆ ನೀಡಿದ್ದರು. ಕೆಲ ದಿನದಲ್ಲಿ ಮತ್ತೆ ಮೂರು ಕೋಚಿಂಗ್ ಕೇಂದ್ರ ಆರಂಭವಾಗಿವೆ. ಇದಕ್ಕೆ ಸ್ಥಳೀಯ ರಾಜಕೀಯ ಮುಖಂಡರು ರಕ್ಷಾಕವಚವಾಗಿ ನಿಂತಿರುವುದು ನಾಚಿಕೆಗೇಡು ಸಂಗತಿ ಎಂದು ಶಿಕ್ಷಣ ಪ್ರೇಮಿಯೊಬ್ಬರು ಬೇಸರ ವ್ಯಕ್ತಪಡಿಸಿದರು.