ಹಳ್ಳಿ ಮಕ್ಕಳಲ್ಲಿನ ಸಂವಹನ ಕೌಶಲ ಅಭಿವೃದ್ಧಿಗಾಗಿ ‘ನಮ್ದೂ ಒಂದು ರೇಡಿಯೊ’ ಎಂಬ ‘ದ್ವಿಮುಖ ಸಂವಹನ’ದ ರೇಡಿಯೊ ಕೇಂದ್ರ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ರಮದ ಅಡಿ ತುಮಕೂರು ಜಿಲ್ಲೆಯ ದುರ್ಗದಹಳ್ಳಿಯಲ್ಲಿ ಮಕ್ಕಳೇ ನಡೆಸುವ ‘ನಮ್ ಸ್ಕೂಲ್ ರೇಡಿಯೊ’ ಕೇಂದ್ರದ ಪರಿಚಯ ಇಲ್ಲಿದೆ.

ಹಲೋ ನಮಸ್ತೆ, ನನ್ನೆಸ್ರು ಇಂದ್ರಾಣಿ. ನಮ್ಮೂರ್ ದುರ್ಗ್ದಳ್ಳಿ, ನಾನ್ ಸವೆನ್ತ್ ಸ್ಟೂಡೆಂಟ್. ನಾನಿವತ್ತು ನಿಮ್ಗೆಲ್ಲ ನಮ್ಮೂರ್ ಬಗ್ಗೆ ಪರ್ಚಯ ಮಾಡ್ಬೇಕು ಅಂತಿದಿನಿ. ನಮ್ಮೂರ್ ಸುತ್ತಾ ಬೆಟ್ಟಗಳಿವೆ. ಬೆಳಿಗ್ಗೆ ಎದ್ದು ನೋಡ್ದಾಗ ಮೋಡಗಳೆಲ್ಲ ಬೆಟ್ಟಗಳ ಸಾಲಿನ ಜತೆ ಮಾತಾಡ್ತಿದಾವೆ ಅನ್ಸುತ್ತೆ. ಮತ್ತೇನ್ ಗೊತ್ತಾ...

ನಮಸ್ಕಾರ... ನೀವ್ ಕೇಳ್ತಿದಿರಾ ‘ನಮ್ದೂ ಒಂದ್ ರೇಡಿಯೊ ನಮ್ ಸ್ಕೂಲ್ ರೇಡಿಯೊ... ನಾನ್ ನಿಮ್ ಪ್ರೀತಿಯ ಮನೆಮಗ್ಳು ವರ್ಷಾ. ನಾನಿವತ್ತು ಜೀವಜಗತ್ತು ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕನ ಬಗ್ಗೆ ತಿಳಿಸಿಕೊಡ್ತೀನಿ...

ದುರ್ಗ್ದಳ್ಳಿ ಸ್ನೇಹಿತ್ರೆ ಎಲ್ರಿಗೂ ನಮಸ್ಕಾರ, ನಾನಿವ್ರಿಬ್ರು ಸ್ನೇಹಿತ್ರು... ಒಂದೇ ಬೆಂಚ್ನಲ್ಲಿ ಕೂತ್ಕಳದ್ಕಣ್ರೀ. ನಾನು ಇವ್ರ್ ಜತೆ ಸೇರ್ಕಂಡ್ ಇವತ್ತು ನಾಕ್ ಗಿಡ ನೆಟ್ಟಿದೀನ್ ಕಣ್ರೀ...

ಇವು ಯಾವುದೊ ಎಫ್ಎಂ ರೇಡಿಯೊದಲ್ಲಿ ಪ್ರಸಾರವಾಗುವ ರೇಡಿಯೊ ಜಾಕಿಗಳ ಮಾತುಗಳಲ್ಲ.ತುಮಕೂರು ಸಮೀಪದ ಹಳೇಕೋಟೆಯಲ್ಲಿ ದುರ್ಗದಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ನಡೆಸುತ್ತಿರುವ ‘ನಮ್ಮ ಹಳ್ಳಿ ರೇಡಿಯೊ’ದ ನಮ್ ಸ್ಕೂಲ್ ರೇಡಿಯೊದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು. ತುಮಕೂರಿನಿಂದ ದೇವರಾಯನದುರ್ಗಕ್ಕೆ ಹೋಗುವ ದಾರಿ ಯಲ್ಲಿರುವ ದುರ್ಗದಹಳ್ಳಿ ಬಳಿ ಈ ಹಳೇಕೋಟೆ ಗ್ರಾಮವಿದೆ. ಗ್ರಾಮದ ರಸ್ತೆ ಬದಿಯಲ್ಲಿರುವ ಕಲ್ಲಿನ ಕುಟೀರವೇ ‘ನಮ್ಮ ಹಳ್ಳಿ ರೇಡಿಯೊ ಕೇಂದ್ರ’.

ಈ ಕೇಂದ್ರ ಹೊಕ್ಕರೆ, ತಾಂತ್ರಿಕ ಉಪಕರಣಗಳ ಸಾಲುಗಳು ಕಾಣುತ್ತವೆ. ಮಧ್ಯೆ ನೆಲದ ಮೇಲೆ ಒಂದು ಮೈಕ್, ಅದರ ಸುತ್ತ ಸುತ್ತುವರಿದಿರುವ ಮಕ್ಕಳು. ಒಬ್ಬಳು ತಲೆಗೆ ಹೆಡ್‌ಸೆಟ್ ಹಾಕಿಕೊಂಡು ಮಾತಿನಲ್ಲಿ ಮಗ್ನಳಾಗಿದ್ದರೆ, ಇನ್ನುಳಿದವರು ಆಕೆಗೆ ಸಾಥ್ ನೀಡುತ್ತಿರುತ್ತಾರೆ. ಒಟ್ಟಾರೆ ಪುಟ್ಟ ರೇಡಿಯೊ ಸ್ಟೇಷನ್ ನೋಡಿದ ಅನುಭವವಾಗುತ್ತದೆ.

ಹಳ್ಳಿ ಮಕ್ಕಳಿಗೆ ಸಂವಹನ ಕಲೆ ಕಲಿಸಬೇಕು. ಎಲ್ಲ ರಂಗಗಳಲ್ಲೂ ಅವರನ್ನು ಮುಖ್ಯವಾಹಿನಿಗೆ ತರಬೇಕು. ಜತೆ ಜತೆಗೆ ಮಾಹಿತಿ ಹಂಚಿಕೆ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ ದೂರ ಮಾಡಬೇಕು ಎಂಬ ಉದ್ದೇಶದೊಂದಿಗೆ ಈ ರೇಡಿಯೊ ಕೇಂದ್ರ ಆರಂಭಿಸಲಾಗಿದೆ. ‘ಈ ರೇಡಿಯೊ ಸ್ಟೇಷನ್ ಮಕ್ಕಳ ವಾಕ್ಚಾತುರ್ಯ ಅಭಿವ್ಯಕ್ತಿಗೆ ಉತ್ತಮ ವೇದಿಕೆಯಾಗಿದೆ’ ಎನ್ನುತ್ತಾರೆ ರೇಡಿಯೊ ಕೇಂದ್ರದ ರೂವಾರಿ ಹಾಗೂ ಪ್ರಗತಿ ಫೌಂಡೇಶನ್ ಮುಖ್ಯಸ್ಥ ಗಿರೀಶ್.

ಈ ಹಿಂದೆ ಹಲವು ಕನ್ನಡದ ವಾಹಿನಿಗಳಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದ ಗಿರೀಶ್, ಅದರಿಂದ ಹೊರಬಂದು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಕೈಗೆ ಸಿಗುವ ಸಣ್ಣ ಪುಟ್ಟ ತಾಂತ್ರಿಕ ಉಪಕರಣಗಳನ್ನೇ ಬಳಸಿಕೊಂಡು ರೇಡಿಯೊ ಕೇಂದ್ರ ಸಿದ್ಧಪಡಿಸಿದ್ದಾರೆ. ‘ಇದು ಹಳ್ಳಿ ಮಕ್ಕಳ ಧ್ವನಿ’ ಆಗಬೇಕು ಎಂಬುದು ಅವರ ಮಹದಾಸೆ. ಗಿರೀಶ್ ಅವರ ಈ ಕಾರ್ಯಕ್ಕೆ ಗೆಳೆಯರಾದ ಮುಕುಂದರಾವ್, ಗೋಪಿ, ಜನಸ್ತು ಸಂಸ್ಥೆಯ ದಿನೇಶ್ ಹಾಗೂ ರೋಟರಿ ಸಂಸ್ಥೆಯವರು ಕೈಜೋಡಿಸಿದ್ದಾರೆ.

ಹಳ್ಳಿಯ ಸರ್ಕಾರಿ ಶಾಲೆಗಳ ಮಕ್ಕಳನ್ನೇ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಓದಿನಲ್ಲಿ ಹಿಂದುಳಿದಿ ರುವ ಮಕ್ಕಳಿಗೆ ಆದ್ಯತೆ ನೀಡಿದ್ದಾರೆ. ಇವರೆಲ್ಲರಿಗೂ ಸ್ಕ್ರಿಪ್ಟ್ ರಚನೆ, ಸಂದರ್ಶನ ಮಾಡುವುದು, ಅದನ್ನು ಮೈಕ್ ಎದುರು ನಿಂತು ಪ್ರಸ್ತುತಪಡಿಸುವ ವಿಧಾನವನ್ನು ಕಾರ್ಯಾಗಾರದ ಮೂಲಕ ತರಬೇತಿ ನೀಡುತ್ತಿದ್ದಾರೆ. ಸದ್ಯ ದುರ್ಗದಹಳ್ಳಿ ಆಸುಪಾಸಿನ ತಿಮ್ಮನಾಯ್ಕನಹಳ್ಳಿ, ಅನುಪನಹಳ್ಳಿ, ಸೇಟುಪಾಳ್ಯದ 40ಕ್ಕೂ ಹೆಚ್ಚಿನ ಮಕ್ಕಳು ಗಿರೀಶ್ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂವಹನ ವಾಕ್ಚಾತುರ್ಯದ ಕೌಶಲ ವೃದ್ಧಿಸಿಕೊಂಡಿದ್ದಾರೆ.

ಗ್ರಾಮ್ಯ ಭಾಷೆಯೇ ಜೀವಾಳ…

‘ಸಾಂಪ್ರದಾಯಿಕ ಶೈಲಿಯ ಸ್ಕ್ರಿಪ್ಟ್ ರಚನೆಗಿಂತ, ಆ ಮಕ್ಕಳಿಗೆ ತಿಳಿದಿರುವ ಭಾಷೆಯ ಶೈಲಿಯಲ್ಲೇ (ಆಡು ಮಾತು ಅಥವಾ ಗ್ರಾಮ್ಯ ಭಾಷೆ) ಸಂಭಾಷಣೆ ನಡೆಸುವಂತೆ ತರಬೇತಿ ನೀಡುತ್ತೇನೆ. ಸಂದರ್ಶನ, ಹಾಡುಗಳನ್ನು ರೆಕಾರ್ಡ್ ಮಾಡುವುದನ್ನು ಹೇಳಿಕೊಟ್ಟಿದ್ದೇನೆ. ಪಾಕೆಟ್ ಸೈಜ್‌ನ ಪರಿಕರವನ್ನು ಕೈಯಲ್ಲಿ ಹಿಡಿದು ಅಡ್ಡಾಡುತ್ತಾ, ಅವರೇ ರೆಕಾರ್ಡ್ ಮಾಡಿಕೊಂಡು ಬರುತ್ತಾರೆ. ನಿರೂಪಣೆಯನ್ನೂ ಮಾಡುತ್ತಾರೆ’ ಎನ್ನುತ್ತಾ ತರಬೇತಿಯ ಸ್ವರೂಪ ಮತ್ತು ಮಕ್ಕಳಲ್ಲಿರುವ ಕೌಶಲ ಕುರಿತು ವಿವರಿಸುತ್ತಾರೆ ಗಿರೀಶ್.

ತರಬೇತಿ ಪಡೆದ ಮಕ್ಕಳು ಹಾಡು, ಕತೆ ಜನಪದ ಗೀತೆ, ಹಳ್ಳಿಯ ಇತಿಹಾಸ, ದಾರ್ಶನಿಕರ ಬದುಕಿನ ಕಿರು ಪರಿಚಯ ಮಾಡಿಕೊಡುತ್ತಾರೆ. ಸಾಧಕ ರೈತರ ಸಂದರ್ಶನ ಮಾಡುತ್ತಾರೆ. ರೈತರ ಹೊಲಗಳಿಗೆ ಹೋಗಿ, ಅಲ್ಲೇ ಕುಳಿತು ರೈತರ ಅನುಭವವನ್ನು ಧ್ವನಿ ಮುದ್ರಿಸಿಕೊಂಡು ಬಂದು, ಕೇಂದ್ರದಲ್ಲಿ ಪ್ರಸ್ತುತಪಡಿಸುತ್ತಾರೆ. ಪ್ಲಾಸ್ಟಿಕ್ ಅಪಾಯ, ಪರಿಸರ ಜಾಗೃತಿಯಂತಹ ವಿಶೇಷ ಕಾರ್ಯಕ್ರಮಗಳನ್ನು ಮಕ್ಕಳೇ ಸಿದ್ಧಪಡಿಸುತ್ತಾರೆ. ತಾವೇ ಮೈಕ್ ಮುಂದೆ ಕುಳಿತು ಅರಳು ಹುರಿದಂತೆ ಮಾತನಾಡುತ್ತಾರೆ. ಮಕ್ಕಳ ಸಂಭಾಷಣೆ ಆಡುಭಾಷೆಯ ಶೈಲಿಯಲ್ಲೇ ಇರುವುದರಿಂದ ಕೇಳುಗರಿಗೆ ಇವರ ಧ್ವನಿ ಅತ್ಯಾಪ್ತವೆನಿಸುತ್ತದೆ. ಅಲ್ಲದೇ ಗ್ರಾಮೀಣ ಸೊಗಡಿನ ಭಾಷೆಯೇ ರೇಡಿಯೊದಲ್ಲಿ ಬರುವುದರಿಂದ ಗ್ರಾಮದ ಹಿರಿಯರಿಗೂ ಖುಷಿ ನೀಡುತ್ತದೆ.

ಶಾಲೆಯಲ್ಲಿ ಕಲಿತ ಪಾಠವೂ ಈ ಚಟುವಟಿಕೆಯ ಭಾಗವಾಗುವುದರಿಂದ, ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಪೂರಕವಾಗಿದೆ.

‘ಈ ಮುಂಚೆ ನಾನು ಮಾತನಾಡುವುದಕ್ಕೆ ಅಂಜುತ್ತಿದ್ದೆ. ಆದರೆ, ಈ ರೇಡಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರದಿಂದ ಮುಕ್ತವಾಗಿ ಮಾತಾಡುವುದನ್ನು ಕಲಿತಿದ್ದೇನೆ. ಯಾರೇ ಪ್ರಶ್ನಿಸಿದರೂ ಧೈರ್ಯವಾಗಿ ಉತ್ತರಿಸುತ್ತಿದ್ದೇನೆ. ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಹಾಗೂ ಕಲಿಕಾಗುಣ ಹೆಚ್ಚಿದೆ’ ಎನ್ನುತ್ತಾರೆ ಕೇಂದ್ರದ ವಿದ್ಯಾರ್ಥಿನಿ ರಮ್ಯಾ.

ಕಾರ್ಯಕ್ರಮ ಪ್ರಸಾರ ಹೇಗೆ?

ಈ ರೇಡಿಯೊ ಕೇಂದ್ರದಲ್ಲಿ ರೇಡಿಯೊ ಬೂತ್, ಡೆಸ್ಕ್ ಟಾಪ್ ಪೈ, ಪರ್ಸನಲ್ ಪೈ, ಪಾಕೆಟ್ ಪೈ ಹೀಗೆ ಮೂರರಿಂದ ನಾಲ್ಕು ಬಗೆಯ ರೇಡಿಯೊ ಸೆಟ್‌ಗಳಿವೆ. ಇವೆಲ್ಲ ವೈಫೈ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತವೆ. ರಾಸ್ಬೆರಿ ಪೈ(Rasberry pi) ಎಂಬ ಮೈಕ್ರೋ ಕಂಪ್ಯೂಟರ್ ಬಳಸಿಕೊಂಡು ರೇಡಿಯೊವೊಂದನ್ನು ತಯಾರಿಸಿ ಕಾಯಿನ್ ಬೂತ್ ಅಳವಡಿಸಿದ್ದಾರೆ. ಬಾಕ್ಸ್‌ಗಳ ಮೇಲೆ ಸ್ಪೀಕರ್ ಇಟ್ಟಿದ್ದಾರೆ.

ಕಾರ್ಯಕ್ರಮಗಳನ್ನು ಸಿದ್ಧಪಡಿಸಿ, ಕೇಂದ್ರದಲ್ಲಿರುವ ಸರ್ವರ್‌ಗೆ ಅಪ್‌ಲೋಡ್ ಮಾಡಿರುತ್ತಾರೆ. ಒಂದೊಂದು ಕಾರ್ಯಕ್ರಮಕ್ಕೆ ಒಂದೊಂದು ಸಂಖ್ಯೆ ಇರುತ್ತದೆ. ಟೆಲಿಫೋನ್ ಬಾಕ್ಸ್ ಡಯಲ್‌ನಲ್ಲಿರುವ ಒಂದೊಂದು ನಂಬರ್ ಒತ್ತಿದರೆ, ಒಂದೊಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ‘ಕೆಲವೊಮ್ಮೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿದ್ದೇವೆ. ಆದರೆ ಹೆಚ್ಚು ಧ್ವನಿಮುದ್ರಿತ ಕಾರ್ಯಕ್ರಮಗಳೇ ಹೆಚ್ಚು ಪ್ರಸಾರವಾಗುತ್ತವೆ’ ಎನ್ನುತ್ತಾರೆ ಗಿರೀಶ್.

ಕೆಲಸ ಮಾಡದ ಕಾಯಿನ್ ಬೂತ್‌ಗಳನ್ನೇ ರೇಡಿಯೊ ಬೂತ್‌ಗಳಾಗಿ ಪರಿವರ್ತಿಸಿದ್ದಾರೆ. ಇವುಗಳನ್ನು ಅರಳಿಕಟ್ಟೆ, ಅಂಗಡಿ, ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇಡುತ್ತಾರೆ. ಸದ್ಯಕ್ಕೆ ದುರ್ಗದಹಳ್ಳಿಯಲ್ಲಿ ಎರಡು ಕಡೆ ಈ ರೇಡಿಯೊ ಬೂತ್‌ಗಳನ್ನು ಇರಿಸಲಾಗಿದೆ. ‘ಪಕ್ಕದಲ್ಲಿರುವ ಅಂಗಡಿ
ಯವರಿಗೆ, ಕೆಲವು ಗ್ರಾಮಸ್ಥರಿಗೆ ಈ ಬೂತ್ ಬಳಸುವ ಬಗ್ಗೆ ಮಾಹಿತಿ ನೀಡಿದ್ದೇವೆ. ಹಾಗಾಗಿ, ತಮಗೆ ಬೇಕೆನಿಸಿದಾಗ, ಈ ಬಾಕ್ಸ್‌ನಲ್ಲಿರುವ ಬಟನ್ ಒತ್ತಿ ಕಾರ್ಯಕ್ರಮ ಕೇಳುತ್ತಾರೆ’ ಎಂದು ಗಿರೀಶ್, ರೇಡಿಯೊ ಕೇಳುವ ಬಗೆಯನ್ನು ವಿವರಿಸುತ್ತಾರೆ.

ಸಾಮಾನ್ಯವಾಗಿ ರೇಡಿಯೊಗಳಲ್ಲಿ ಕಾರ್ಯಕ್ರಮಗಳನ್ನು ಕೇಳಬಹುದು. ಆದರೆ, ಈ ‘ನಮ್ ಹಳ್ಳಿ ರೇಡಿಯೊ’ದಲ್ಲಿ ಕಾರ್ಯಕ್ರಮ ಕೇಳಿ, ನಂತರ, ಬಾಕ್ಸ್‌ನಲ್ಲಿರುವ ನಿಗದಿತ ಗುಂಡಿಯನ್ನು ಒತ್ತಿ, ರಿಸೀವರ್ ಮೂಲಕ ಕೇಳುಗರು ಕಾರ್ಯ ಕ್ರಮದ ಬಗ್ಗೆ ಪ್ರತಿಕ್ರಿಯಿಸಬಹುದು‘ ಎನ್ನುತ್ತಾರೆ ಗಿರೀಶ್. ಇಂಥ ಟೆಲಿಫೋನ್ ಬಾಕ್ಸ್ ಅನ್ನು ರೇಡಿಯೊ ಆಗಿ ಪರಿವರ್ತಿಸಲು ₹ 20 ಸಾವಿರದಿಂದ ₹25 ಸಾವಿರ ವೆಚ್ಚವಾಗುತ್ತದೆಯಂತೆ.

ಬೇರೆ ಬೇರೆ ಕಡೆಯೂ ಇದೆ..

ಇಂಥ ರೇಡಿಯೊ ಕೇಂದ್ರ ಒಂದು ಹಳ್ಳಿಗೆ ಮಾತ್ರ ಸೀಮಿತವಲ್ಲ. ಜನಸ್ತು ಸಂಸ್ಥೆ ಪ್ರೋತ್ಸಾಹದಿಂದ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳಲ್ಲಿ ತಾತ್ಕಾಲಿಕ ರೇಡಿಯೊ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೆಲವು ಶಾಲೆಗಳಲ್ಲಿ ರೇಡಿಯೊ ಕಾರ್ಯಕ್ರಮವನ್ನು ಪಠ್ಯೇತರ ಚಟುವಟಿಕೆಯಾಗಿ ಅಳವಡಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯದ ಸುಮಾರು 60ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕಾರ್ಯಾಗಾರ ನಡೆಸಲಾಗಿದೆ. ದುರ್ಗದಹಳ್ಳಿಯ ಈ ರೇಡಿಯೊ ಕೇಂದ್ರಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಶಾಲಾ ಮಕ್ಕಳು ಭೇಟಿ ನೀಡುತ್ತಿದ್ದಾರೆ.

ದುರ್ಗದಹಳ್ಳಿ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಕ್ಕಳು ನಡೆಸುತ್ತಿರುವ ರೇಡಿಯೊ ಕಾರ್ಯಕ್ರಮಗಳನ್ನು ಈ ಜಾಲತಾಣಕ್ಕೂ ಅಪ್‌ಲೋಡ್ ಮಾಡುತ್ತಾರೆ. ಹೀಗಾಗಿ, ಅಂತರ್ಜಾಲದ ನೆರವಿನಿಂದ https://www.namdu1radio.com/durgadahalli-radio ಈ ಲಿಂಕ್ ಮೂಲಕ ರೇಡಿಯೊ ಕಾರ್ಯಕ್ರಮಗಳನ್ನು ಕೇಳಬಹುದು.

ಜಾಗತಿಕ ಚಳವಳಿಯಾಗಿ ರೇಡಿಯೊ

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ರೇಡಿಯೊ ಒಂದು ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು ಎಂದು ನಾವು ನಂಬಿದ್ದೇವೆ. ಕೆಲವೊಮ್ಮೆ ಅಲ್ಪ ಧ್ವನಿಗಳೂ ಹೇಳಲು ದೊಡ್ಡಸಂಗತಿಗಳನ್ನು ಹೊಂದಿರುತ್ತವೆ. ಅದು ರೇಡಿಯೊದಿಂದ ಮಾತ್ರ ಸಾದ್ಯ. ರೇಡಿಯೊ ಕುತೂಹಲ ತಣಿಸುವ,ಸಾಮಾಜಿಕಅರಿವು ನೀಡುವ ಹಾಗೂ ಮನರಂಜನೆಯ ಮಾಧ್ಯಮವಾಗಿದೆ. ಈ ಮೂಲಕ ಅಭಿವ್ಯಕ್ತಿಯಹೊಸ ಚಾನಲ್‍ಗಳನ್ನು ತೆರೆಯಲು ನಾವು ಬಯಸುತ್ತೇವೆ. ಇದಕ್ಕೆ ವಿದ್ಯಾರ್ಥಿಗಳೇ ಮುಖ್ಯಕಾರಣವಾಗಿದ್ದಾರೆ’ ಎನ್ನುವರು ಗಿರೀಶ್.

ನಮ್ಮ ಹಳ್ಳಿ ರೇಡಿಯೊವು ಹೆಣ್ಣುಮಕ್ಕಳ ವಿಷಯದಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ.ದೇಶದ ಪರಂಪರೆಗೆ ಮಾರುಹೋಗಿ ಕೆಲವು ಗ್ರಾಮಗಳು ಹೆಣ್ಣುಮಗುವಿನ ಧ್ವನಿಯನ್ನುಕಡೆಗಣಿಸಿವೆ. ಅಥವಾ ಪ್ರಜ್ಞಾ ಪೂರ್ವಕವಾಗಿ ನಾಶ ಮಾಡಲಾಗುತ್ತಿವೆ. ನಮ್ಮರೇಡಿಯೊ ಆಕೆಯ ಧ್ವನಿಗೆ ವೇದಿಕೆ ನೀಡಿ ತಾಂತ್ರಿಕ ತಿಳುವಳಿಕೆಯನ್ನೂನೀಡುತ್ತಿದೆ ಎನ್ನುತ್ತ ಗಿರೀಶ್.

ಮಕ್ಕಳು ತಮಗೆ ಅಗತ್ಯವಿರುವ ಯಾವುದೇ ಸಹಾಯ,ಮಾಹಿತಿಯನ್ನು ಈ ಮೂಲಕ ಪಡೆಯಬಹುದಾಗಿದೆ.ಹಾಗಾಗಿ,ನಮ್ಮ ಹಳ್ಳಿ ರೇಡಿಯೊ ಕೇವಲ ರೇಡಿಯೊ ಮಾತ್ರವಲ್ಲ ಅದೊಂದು ಜಾಗತಿಕಚಳುವಳಿಯಾಗಿದೆ.

ವಿದೇಶಗಳಲ್ಲೂ ರೇಡಿಯೊ

ಆಫ್ರಿಕಾದ ಹಳ್ಳಿಗಳಲ್ಲಿ ಈಗಲೂ ಸಂವಹನಕ್ಕೆ ರೇಡಿಯೊ ಅವಲಂಬಿಸಿದ್ದಾರೆ. ಅಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ರೇಡಿಯೊ ಪ್ರಮುಖ ಸಂವಹನ ಮಾಧ್ಯಮವಾಗಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ಗಿರೀಶ್ ಅಳವಡಿಸಿರುವ ‘ದ್ವಿಮುಖ ಸಂವಹನ’ದ ರೇಡಿಯೊ ಕೇಂದ್ರ ಈಗ ಆಫ್ರಿಕಾಕ್ಕೂ ವಿಸ್ತರಿಸಿದೆ. ಅಲ್ಲಿನ ಸಂಸ್ಥೆಗಳ ಆಹ್ವಾನದ ಮೇರೆಗೆ ಗಿರೀಶ್ ಅವರು ಆಫ್ರಿಕಾಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕೆಲವು ಹಳ್ಳಿಗಳಲ್ಲಿ ರೇಡಿಯೊ ಕೇಂದ್ರಗಳನ್ನು ಆರಂಭಿಸಲು ತರಬೇತಿ ನೀಡಿ ಬಂದಿದ್ದಾರೆ.

ಇತ್ತೀಚೆಗೆ ಸಂವಹನ ಮತ್ತು ಅಂತರ್ಜಾಲ ಕುರಿತು ಥಾಯ್ಲೆಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಿರೀಶ್, ಅಲ್ಲಿ ‘ನಮ್ ಹಳ್ಳಿ ರೇಡಿಯೊ’ ಪರಿಕಲ್ಪನೆಯನ್ನೂ ಪ್ರಸ್ತುತಪಡಿಸಿದ್ದಾರೆ.

‘ನಮ್ ಹಳ್ಳಿ ರೇಡಿಯೊ’ ಕೇಂದ್ರ ಕುರಿತ ಮಾಹಿತಿಗಾಗಿ ಗಿರೀಶ್ ಅವರ ಸಂಪರ್ಕ ಸಂಖ್ಯೆ: 9353309616

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.