ಚೆನ್ನೈ: ರಾಜಕೀಯ, ಸಿನಿಮಾ ರಂಗ ಒಂದಕ್ಕೊಂದು ಬಿಡಿಸಲಾಗದ ನಂಟು ಹೊಂದಿರುವ ನೆರೆಯ ತಮಿಳುನಾಡಿನಲ್ಲಿ ಸಿನಿಮಾ ಹಿನ್ನೆಲೆಯ ಮತ್ತೊಬ್ಬ ನಟನ ರಾಜಕಾರಣದ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ.

ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರ ಪುತ್ರ ಹಾಗೂ ಸೂಪರ್ ಸ್ಟಾರ್ ದಳಪತಿ ವಿಜಯ್ (ಜೋಸೆಫ್ ವಿಜಯ್ ಚಂದ್ರಶೇಖರ್) ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವ ಮೂಲಕ ಪ್ರಾದೇಶಿಕ ಪಕ್ಷಗಳೇ ವಿಜೃಂಭಿಸುತ್ತಿರುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಆಖಾಡವನ್ನು ಸಜ್ಜುಗೊಳಿಸಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ನೋಂದಣಿ, ವೆಬ್ಸೈಟ್, ಬೈಲಾ, ಇತರೆ ತಯಾರಿಗಳನ್ನು ಮಾಡಿಕೊಂಡೇ ವಿಜಯ್ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಜನವರಿ 25 ರಂದೇ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅವರು ಅರ್ಜಿ ಸಲ್ಲಿಸಿದ್ದಾರೆ.

49 ವರ್ಷ ವಯಸ್ಸಿನ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಎಂಬ ಹೊಸ ಪಕ್ಷ ಘೋಷಿಸುತ್ತಿದ್ದಂತೆ ಅವರ ಅಭಿಮಾನಿಗಳು ಭಾರಿ ಸಂಭ್ರಮ ವ್ಯಕ್ತಪಡಿಸಿದ್ದು, ಇದನ್ನು ‘ದಳಪತಿ 2.0’ ಎಂದು ಕೊಂಡಾಡಿದ್ದಾರೆ.

ಇನ್ನೂ ವಿಶೇಷವೆಂದರೆ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ವಿಜಯ್, ತಮಿಳುನಾಡು ಸೇರಿದಂತೆ ದೇಶದ ಜನರಿಗೆ ಈ ಅಚ್ಚರಿ ನೀಡಿದ್ದಾರೆ.

ಅಂದಹಾಗೇ ‘ತಮಿಳಿಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡಿನ ವಿಜಯದ ಪಕ್ಷ’ ಎಂಬರ್ಥವನ್ನು ಇದು ಸೂಚಿಸುತ್ತದೆ. ವಿಜಯ್ ಅವರೇ ಈ ಪಕ್ಷದ ಅಧ್ಯಕ್ಷರು.

ವಿಜಯ್ ಹೇಳಿದ್ದೇನು?

‘ಆಡಳಿತದಲ್ಲಿನ ಅವನತಿ, ವ್ಯಾಪಕ ಭ್ರಷ್ಟಾಚಾರ ಹಾಗೂ ಮತಕ್ಕಾಗಿ ಜನರ ವಿಭಜನೆಗಳನ್ನು ತೊಡೆದು ಹಾಕಲು ತಾವು ರಾಜಕೀಯ ಪ್ರವೇಶಿಸುತ್ತಿರುವುದಾಗಿ’ ವಿಜಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಯಾವುದೇ ಪಕ್ಷದೊಂದಿಗೆ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳದೇ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸುತ್ತೇವೆ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜನತೆ ಬಯಸಿದ ರಾಜಕೀಯ ಬದಲಾವಣೆಯನ್ನು ತರುವುದೇ ನಮ್ಮ ಪ್ರಮುಖ ಗುರಿ’ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.

‘ಪಕ್ಷದ ಚಿಹ್ನೆ, ಧ್ವಜ ಹಾಗೂ ನೀತಿಗಳನ್ನು ಶೀಘ್ರವೇ ಪ್ರಕಟಿಸುತ್ತೇವೆ. ಬರುವ ಲೋಕಸಭಾ ಚುನಾವಣೆ ಮುಕ್ತಾಯದ ನಂತರ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತೇವೆ’ ಎಂದಿರುವ ಅವರು, ‘ಅಲ್ಲಿವರೆಗೂ ಪಕ್ಷದ ಸಂಘಟನೆ, ಹಣಕಾಸು ಕ್ರೋಡೀಕರಣ, ವಿವಿಧ ಘಟಕಗಳ ರಚನೆ, ಅವುಗಳಿಗೆ ಪದಾಧಿಕಾರಿಗಳ ನೇಮಕ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜಕೀಯ ಎನ್ನುವುದು ವೃತ್ತಿಯಲ್ಲ, ಇದು ಜನರ ಸೇವೆ ಮಾಡಲು ಇರುವ ಪವಿತ್ರ ಮಾರ್ಗ’ ಎಂದು ಹೇಳಿರುವ ಅವರು, ‘ಹವ್ಯಾಸಕ್ಕಾಗಿ ಇದನ್ನು ಆಯ್ಕೆ ಮಾಡಿಕೊಂಡಿಲ್ಲ, ಪೂರ್ಣ ಮನಸ್ಸಿನಿಂದ ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ’ ಎಂದು ಕೆಲವರ ಅನುಮಾನಗಳಿಗೆ ಮೊದಲೇ ತೆರೆ ಎಳೆದಿದ್ದಾರೆ.

ಸಿನಿಮಾಗಳಿಗೆ ಗುಡ್ಬೈ!

ಇದರ ಜೊತೆಗೆ ವಿಜಯ್ ಅವರು ರಾಜಕಾರಣದ ಪ್ರವೇಶದ ಮೂಲಕ ತಮ್ಮ ನೆಚ್ಚಿನ ಸಿನಿಮಾ ರಂಗಕ್ಕೆ ವಿದಾಯ ಹೇಳುವ ಮಾತುಗಳನ್ನೂ ಆಡಿದ್ದಾರೆ.

ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಪ್ರೊಜೆಕ್ಟ್ಗಳನ್ನು ಪೂರ್ಣಗೊಳಿಸಿ, ಅಲ್ಲಿಂದ ಸಂಪೂರ್ಣವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸದ್ಯ ವಿಜಯ್ ಅವರು, ನಿರ್ದೇಶಕ ವೆಂಕಟ್ ಪ್ರಭು ಅವರ ‘GOAT’ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 1984 ರಲ್ಲಿ ವೆಟ್ರಿ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ವಿಜಯ್, ಇದುವರೆಗೆ 65 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಬಹುತೇಕ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿದ್ದಲ್ಲದೇ ಅನೇಕ ಭಾಷೆಗಳಿಗೆ ರಿಮೇಕ್ ಆಗಿವೆ.

ಅನೇಕರು ವಿಜಯ್ ಅವರ ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಹಲವರು, ಅವರು ಇನ್ಮುಂದೆ ಸಿನಿಮಾಗಳಿಗೆ ಬಣ್ಣ ಹಚ್ಚುವುದಿಲ್ಲ ಎಂಬುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಲ್ಪಮಟ್ಟಿಗೆ ಅವಿಭಜಿತ ಆಂಧ್ರಪ್ರದೇಶ ಹೊರತುಪಡಿಸಿದರೇ, ಭಾರತದ ಯಾವುದೇ ರಾಜ್ಯಗಳಲ್ಲಿ ಕಾಣದ ಸಿನಿಮಾ–ರಾಜಕೀಯ ಸಂಬಂಧ ತಮಿಳುನಾಡಿನಲ್ಲಿ ಬೆಸೆದುಕೊಂಡಿದ್ದು, ದಿವಂಗತ ನಟರಾದ ಎಂ.ಜಿ. ರಾಮಚಂದ್ರನ್, ಜಯಲಲಿತಾ, ವಿಜಯಕಾಂತ್ ಅಲ್ಲಿನ ರಾಜಕಾರಣದಲ್ಲಿ ಯಶಸ್ಸು ಕಂಡವರು. ಪ್ರಸ್ತುತ ಕಮಲ್ ಹಾಸನ್ ಅವರೂ ಮಕ್ಕಳ ನಿಧಿ ಮಯಂ ಪಕ್ಷ ಸ್ಥಾಪಿಸಿ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

.ಕ್ಯಾನ್ಸರ್ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ.ಮಾದಕ ಚಿತ್ರಗಳಿಂದಲೇ ಸುದ್ದಿಯಾಗುತ್ತಿದ್ದ ಪೂನಂ ಪಾಂಡೆ ಸುತ್ತುವರಿದ ವಿವಾದಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.