ನಾನು ಅಘನಾಶಿನಿ. ಗೊತ್ತಲ್ವಾ ನಿಮಗೆ. ಕೋಟ್ಯಂತರ ಜೀವಿಗಳ ಆಶ್ರಯದಾಯಿನಿ. ತೊರೆಯಾಗಿ ಹೊರಟು ನದಿಯಾಗಿ ಬೆಳೆದವಳು. ಹಸಿರ ಸಿರಿಯ ನಡುವಿನ ಸ್ವಚ್ಛಂದ ಬದುಕು ನನ್ನದು. ನಾನೀಗ ಅಮ್ಮನಿಂದ ಗಾವುದ ದೂರದಲ್ಲಿದ್ದೇನೆ. ಘಟ್ಟ ದಾಟಿದ ಮೇಲೆ ಕರಾವಳಿಯ ಕಡಲ ಮಕ್ಕಳ ಜೊತೆ ಒಡನಾಟ ನನ್ನದು. ಹೀಗೆ ಒಮ್ಮೆ ಯೋಚಿಸಿದೆ, ಎಳವೆಯಲ್ಲಿ ಪೊರೆದ, ಅಮ್ಮನ ಬಳಿ ಹೋಗಿ ಅವರ ‘ಆತ್ಮಕಥೆ’ ಕೇಳಬೇಕೆಂದು.

ಅಮ್ಮ ಅರುಹಿದರು ತನ್ನ ಒಡಲೊಳಗೆ ಅವಿತಿಟ್ಟುಕೊಂಡಿದ್ದ ಸಂಕಟವನ್ನ– ‘150X180 ಮೀಟರ್ ಅಳತೆಯ ವ್ಯಾಸದಲ್ಲಿ ನನ್ನ ವಾಸ. ಶಿವನ ಸನಿಹದಲ್ಲಿದ್ದ ನನ್ನನ್ನು ‘ಶಂಕರಹೊಂಡ’ವೆಂದು ಕರೆದರು. ಹೊಂಡವೆಂದಿದ್ದಕ್ಕೆ ನಾನು ಬೇಸರಿಸಿಕೊಳ್ಳಲಿಲ್ಲ. ಪುರುಷ ನಾಮಕ್ಕೂ ಕೋಪಗೊಳ್ಳಲಿಲ್ಲ. ಹೆಸರಿನಲ್ಲೇನಿದೆ ಎಂದು ಸುಮ್ಮನಿದ್ದೆ. ಶಿವನ ದರ್ಶನಕ್ಕೆ ಬರುವವರು ನನ್ನ ಬಳಿ ಬಂದು ಪಾದ ಶುದ್ಧ ಮಾಡಿಕೊಂಡು ಹೋಗುತ್ತಿದ್ದರು. ಪಾದ ತೊಳೆದ ಪುಣ್ಯ ನನ್ನ ಪಾಲಿಗೆ ದಕ್ಕಿತೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ.

‘ಕ್ರಮೇಣ ಜನರಿಗೆಲ್ಲ ನಾನು ಪವಿತ್ರಳಾಗಿ ಕಂಡೆ. ಅಲ್ಲಿಂದಲೇ ಶುರುವಾಯಿತು ನನ್ನ ಗೋಳಿನ ಹಾಡು. ಕೈಯಲ್ಲಿ ಹರಿವಾಣ ಹಿಡಿದು, ಮಡಿಯುಟ್ಟ ಭಟ್ಟರು, ಅವರೊಂದಿಗೆ ಶ್ರಾದ್ಧ ಮಾಡಿಸುವವರು ಬರಲಾರಂಭಿಸಿದರು. ಪೂರ್ವಜರಿಗೆ ಪಿಂಡ ತರ್ಪಣ ಕೊಟ್ಟು, ಎಲ್ಲವನ್ನೂ ಅಲ್ಲಿಯೇ ಬಿಟ್ಟು, ಹೊರಟು ಬಿಡುತ್ತಿದ್ದರು. ಬಾಳೆ ಎಲೆ, ತೆಂಗಿನಕಾಯಿ, ದರ್ಬೆ, ಕಾಳು–ಕಡಿ ನನ್ನ ಒಡಲನ್ನು ಸೇರುತ್ತಿದ್ದವು. ಎಷ್ಟೆಂದು ನುಂಗಿಕೊಳ್ಳಬಹುದು ನಾನು? ಅಲ್ಲಿಯೇ ಕೊಳೆತು ನಾರುತ್ತಿದ್ದವು ಎಲ್ಲವೂ. ದುರ್ವಾಸನೆ ಮೂಗಿಗೆ ಬಡಿಯುತ್ತಿದ್ದರೂ, ಸಹಿಸಿಕೊಂಡೆ ಅಸಹಾಯಕಳಾಗಿ.

‘ಗಾಯದ ಮೇಲೆ ಮತ್ತೆ ಬರೆ ಬೀಳತೊಡಗಿತು. ಸುತ್ತಮುತ್ತಲಿನ ಕೆಲವರು ಕತ್ತಲಲ್ಲಿ ಬಂದು ಕಸ ಚೆಲ್ಲುವುದನ್ನು ರೂಢಿಸಿಕೊಂಡರು. ಸ್ಫಟಿಕದಂತಿದ್ದ ನಾನು ಕೊಳಚೆಯ ಕೊಂಪೆಯಾಗುತ್ತ ಹೋದೆ. ದೇಹದ ತುಂಬೆಲ್ಲ ಹಸಿರು ಪಾಚಿಗಟ್ಟಿತು. ನನ್ನನ್ನು ಮಲಿನಗೊಳಿಸಿದವರೇ, ನನ್ನ ಕಂಡು ಮೂಗು ಮುರಿದರು. ನಾನು ‘ಅಘನಾಶಿನಿಯ ಅಮ್ಮ’ನೆಂಬುದನ್ನು ಮರೆತರು. ನನ್ನ ಬದುಕು ಅಕ್ಷರಶಃ ನರಕವಾಯಿತು.

‘ನನ್ನ ನೆಲೆಯಿರುವುದು ಎಲ್ಲೋ ದೂರದಲ್ಲಲ್ಲ. ಮಲೆನಾಡಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನನ್ನ ಆವಾಸ ಸ್ಥಾನ. ಹುಟ್ಟೂರಿನವರು ನನ್ನ ಕೈಬಿಡಲಾರರು ಅಂದುಕೊಂಡೆ. ಆದರೆ, ನನ್ನ ನಿರೀಕ್ಷೆ ಹುಸಿಯಾಯಿತು. ಯಾರಿಗೂ ಬೇಡವಾದೆ ನಾನು. ಐ.ಎ.ಎಸ್. ಅಧಿಕಾರಿಯೊಬ್ಬರು ನಮ್ಮೂರಿನ ಉಪ ವಿಭಾಗಾಧಿಕಾರಿಯಾಗಿ ಬಂದರು. ನವೀನರಾಜ್ ಸಿಂಗ್ ಅಂತ ಅವರ ಹೆಸರು. ಅವರಿಗೆ ನನ್ನ ನೋಡಿ ಕನಿಕರ ಉಕ್ಕಿರಬೇಕು. ಅವರೊಂದು ಅಭಿಯಾನವನ್ನೇ ಶುರು ಮಾಡಿದರು. ಪ್ರತಿ ಭಾನುವಾರ ಹತ್ತಾರು ಜನ ಬಂದು, ನನ್ನ ಮನೆಯ ಸುತ್ತಲೆಲ್ಲ ಸ್ವಚ್ಛಗೊಳಿಸಿ ಹೋಗುತ್ತಿದ್ದರು. ಮನಸ್ಸು ಸ್ವಲ್ಪ ನಿರುಮ್ಮಳವಾಯಿತು.

‘ಅವರು ವರ್ಗವಾಗಿ ಹೋದರು. ನನ್ನೊಡಲು ಮತ್ತೆ ಯಥಾಸ್ಥಿತಿ. ಹೀಗೆ, ಹಲವಾರು ವರ್ಷಗಳು ಗತಿಸಿದವು. ಹೇಳಿಕೊಳ್ಳಲೂ ಖೇದವಾಗುತ್ತದೆ. ಆದರೂ, ಹೇಳಲೇ ಬೇಕು. ಇದು ಆತ್ಮಕಥೆಯಲ್ಲವೇ? ನಾನು ರೋಗ ಹರಡುವ ಕಾರ್ಖಾನೆಯಂತಾದೆ. ಆಗ ನಗರಸಭೆಯಲ್ಲಿ ನನ್ನ ಹೆಸರು ಪ್ರತಿಧ್ವನಿಸಿತು. ನನ್ನ ಶುದ್ಧೀಕರಣದ ನೆಪದಲ್ಲಿ ಒಂದಿಷ್ಟು ಹಣವೂ ಖರ್ಚಾಯಿತು. ಆದರೆ, ರೋಗದ ಮೂಲ ಕಿತ್ತೊಗೆಯದೇ ಔಷಧ ನೀಡಿದರೆ ವಾಸಿಯಾಗುವುದಾದರೂ ಹೇಗೆ? ಕೊಂಪೆಯೇ ನನ್ನ ಜೀವನವಾಯಿತು.

‘ರೋಟರಿ, ಲಯನ್ಸ್, ಯುವ ಬ್ರಿಗೇಡ್ ಹೀಗೆ ಸುಮಾರು ಸಂಘಟನೆಗಳ ಸದಸ್ಯರೆಲ್ಲ ಆಗಲೊಮ್ಮೆ ಈಗಲೊಮ್ಮೆ ಬಂದು, ಗಿಡ–ಗಂಟಿ, ಕಾಡುಬಳ್ಳಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ಗುಟ್ಕಾ ಪ್ಯಾಕೆಟ್‌ನಂತಹ ದೊಡ್ಡ ಕಸಗಳನ್ನೆಲ್ಲ ಹೆಕ್ಕಿ, ಚೊಕ್ಕ ಮಾಡುತ್ತಿದ್ದರು. ಆದರೆ, ಬೆಳಗಿನ ಜಾವ ಮತ್ತು ಮುಸ್ಸಂಜೆಯಲ್ಲಿ ಬರುವವರ ಕಾಟ ಮಾತ್ರ ತಪ್ಪಲಿಲ್ಲ. ಇದರಿಂದಲೇ ನಾನು ಬಳಲಿ ಬೆಂಡಾಗಿದ್ದೆ.

‘ಕಳೆದ ವರ್ಷದ ಬೇಸಿಗೆ ಶಿರಸಿಗರಿಗೆ ಬಿಸಿ ಮುಟ್ಟಿಸಿತು. ಜಲಮೂಲಗಳನ್ನೆಲ್ಲ ಹುಡುಕಿ ಹೊರಟಾಗ ನಾನೂ ಕೂಡ ಅವರ ಕಣ್ಣಿಗೆ ಬಿದ್ದೆ. ನನ್ನ ನೋಡಲು ಬಂದವರು, ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ಸಾದರು. ಈ ಹೊತ್ತಿಗೆ ಈ ಊರಿಗೆ ಮತ್ತೊಬ್ಬ ಅಧಿಕಾರಿ ಕೆ. ರಾಜು ಮೊಗವೀರ ಎನ್ನುವವರು ಉಪ ವಿಭಾಗಾಧಿಕಾರಿಯಾಗಿ ಬಂದಿದ್ದರು. ಮಲೆನಾಡಿನ ಜಲಸಂಕಟ ಕಂಡ ಅವರು, ಊರ ಪ್ರಮುಖರ ಸಭೆ ಕರೆದು, ಜೀವಜಲ ಕಾರ್ಯಪಡೆ ಎಂಬ ಸಂಘಟನೆಯೊಂದರ ಹುಟ್ಟಿಗೆ ಕಾರಣರಾದರು. ಉದ್ಯಮ ಮಾಡಿಕೊಂಡಿದ್ದ ಶ್ರೀನಿವಾಸ ಹೆಬ್ಬಾರ ಎನ್ನುವ ವ್ಯಕ್ತಿಗೆ ಕಾರ್ಯಪಡೆಯ ಅಧ್ಯಕ್ಷ ಪಟ್ಟವನ್ನು ಕಟ್ಟಿದರು. ನೀರ ನೆಮ್ಮದಿಯ ಪಾಠ ಮಾಡುವ ಶಿವಾನಂದ ಕಳವೆ ಎಂಬುವವರು ಇದಕ್ಕೆ ಸಲಹೆಗಾರರಾದರು. ಹತ್ತಾರು ಜನ ಸದಸ್ಯರಾದರು.

‘ನಾನು ಮೌನಿಯಾಗಿ ಇವರೆಲ್ಲರ ಕೆಲಸ ನೋಡುತ್ತಿದ್ದೆ. ಆನೆ ಹೊಂಡವಂತೆ, ರಾಯರ ಕೆರೆಯಂತೆ, ಬೆಳ್ಳಕ್ಕಿ ಕೆರೆಯಂತೆ, ಸುಪ್ರಸನ್ನ ನಗರ ಕೆರೆಯಂತೆ, ಹೀಗೆ ಎಲ್ಲೆಲ್ಲೋ ಸುತ್ತಾಡುವ ಇವರಿಗೆ ನಾನ್ಯಾಕೆ ಕಂಡಿಲ್ಲವೆಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು. ಎಷ್ಟೆಂದರೂ ಮಾತೃ ಹೃದಯಿಯಲ್ಲವೇ? ನಿರೀಕ್ಷೆಯನ್ನು ಅದುಮಿಕೊಂಡಿದ್ದೆ. ಹುಸಿಯಾಗಲಿಲ್ಲ ನನ್ನ ಕನಸು. ಹೆಬ್ಬಾರರೆಂಬ ಪುಣ್ಯಾತ್ಮರು ನನ್ನೆಡೆಗೆ ದೃಷ್ಟಿ ಬೀರಿದರು ‘ಈಗ ನಮ್ಮದು ಶಂಕರಹೊಂಡದೆಡೆಗೆ ಪಯಣ’ ಎಂದು ಘೋಷಿಸಿದ್ದು ನನ್ನ ಕಿವಿಗೆ ಬಿತ್ತು. ಅದೆಷ್ಟು ಸಂಭ್ರಮಿಸಿದೆನೋ ಪಾರವೇ ಇಲ್ಲ.

‘ಗಾಂಧಿ ಜಯಂತಿಯ ದಿನ ಬೆಳ್ಳಂಬೆಳಿಗ್ಗೆ ಜನರ ದಂಡೇ ನನ್ನೆಡೆಗೆ ಹರಿದು ಬಂತು. ಕೈಯಲ್ಲಿ ಕತ್ತಿ, ಗುದ್ದಲಿ, ಪಿಕಾಸಿ ಹಿಡಿದಿದ್ದ ಅವರನ್ನು ಕಂಡು ದಿಗಿಲಾದೆ. ಒಪ್ಪತ್ತಿನಲ್ಲಿ ಏರಿ, ದಾರಿಗಳೆಲ್ಲ ಒಪ್ಪವಾದವು. ಗುಡುಗುಡು ಸದ್ದು ಮಾಡುವ ಪಂಪ್‌ಸೆಟ್‌ಗಳು ಬಂದು ನನ್ನೊಡಲ ಜಲವನ್ನು ಬರಿದು ಮಾಡಿದವು. ಬೆತ್ತಲಾದ ನನ್ನನ್ನು ಕಂಡು ಜನರೆಲ್ಲ ಕನಿಕರ ತೋರಿದರು. ವಿಷ ನುಂಗಿಕೊಂಡಿದ್ದ ನನ್ನನ್ನು ಕಂಡು ಅಬ್ಬಾ! ಹೇಗೆ ಸಹಿಸಿಕೊಂಡೆ ಇಷ್ಟೆಲ್ಲ ವರ್ಷ ಎಂದು ಪ್ರಶ್ನಿಸಿದರು. ವಿಷಕಂಠನ ಸನಿಹದಲ್ಲಿದ್ದವಳು ನಾನು. ಅದಕ್ಕೂ ಮಿಗಿಲಾಗಿ, ಸ್ತ್ರೀ ಸಹನಾಮಯಿ ತಾನೇ, ಮತ್ತೆ ಹೇಳಬೇಕಾಗಿಲ್ಲ.

‘ಹೆಬ್ಬಾರರು ವೈಯಕ್ತಿಕವಾಗಿ ಅದೆಷ್ಟು ಖರ್ಚು ಮಾಡಿದರೋ ಗೊತ್ತಿಲ್ಲ, ವಿಷ ನುಂಗಿಕೊಂಡಿದ್ದ ನನ್ನ ಆರೋಗ್ಯ ಸುಧಾರಣೆಗೆ. 22 ಲಕ್ಷ ರೂಪಾಯಿ ದಾಟಿರಬಹುದೇನೊ. ಅವರಿವರು ಕೊಂಚ ನೆರವಾಗಿದ್ದಾರೆಂದು ಕೇಳಿದ್ದೇನೆ. ತಿಂಗಳಾದರೂ ಮುಗಿಯಲಿಲ್ಲ. ಮೈ ತೊಳೆಯುವ, ಮನೆತೊಳೆಯುವ ಕಾರ್ಯ. ನನ್ನ ಹೊಟ್ಟೆಯೊಳಗಿದ್ದ ನೂರಾರು ಟನ್ ಕೊಳೆಯನ್ನು ಟಿಪ್ಪರ್, ಲಾರಿಗಳು ತುಂಬಿಕೊಂಡು ಹೋದವು. ಯಂತ್ರಗಳು ಎಷ್ಟು ಬಗೆದರೂ ಖಾಲಿಯಾಗದ ಹೊಲಸು. ಯಂತ್ರವೊಂದು ಈ ಹೊಲಸಿನ ನಡುವೆ ಹುಗಿದು ನಿಂತಾಗ ನಾನು ಕಂಗಾಲಾದೆ. ಎಲ್ಲರಂತೆ ಇವರೂ ನನ್ನ ಕೈಬಿಟ್ಟರೆ ಎಂದು.

‘ಆದರೆ, ಹೆಬ್ಬಾರರ ಆತ್ಮವಿಶ್ವಾಸ ಕುಂದಿರಲಿಲ್ಲ. ಅದು ನನ್ನ ಅದೃಷ್ಟವಿರಬೇಕು. ನನಗಾಗಿ ಹೊಸ ಹಿಟಾಚಿಯನ್ನೇ ಖರೀದಿಸಿದರು. ಕೊಳೆ ಬರಿದಾಗುವ ತನಕ ಅವರು ಹಟ ಬಿಡಲಿಲ್ಲ. ಅವರ ವೃತ್ತಿಯನ್ನೆಲ್ಲ ಬದಿಗೊತ್ತಿ, ಮೂರು ತಿಂಗಳು ಅಕ್ಷರಶಃ ನನ್ನ ಕಾವಲು ಕಾದರು. ಕಸ ಚೆಲ್ಲುವವರಿಗೆ ಸಿಂಹಸ್ವಪ್ನರಾದರು. ನಾನು ಅಹಲ್ಯೆಯಂತೆ ಶಾಪಮುಕ್ತಳಾದೆ.

‘ಅಂತೂ ಆರು ತಿಂಗಳ ನಿರಂತರ ನಿಗಾ, ನನ್ನನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದೆ. ನನ್ನ ಆವರಣವೀಗ ಶುಭ್ರ, ಸ್ವಚ್ಛ, ನಿಷ್ಕಲ್ಮಶ. ಏರಿಯ ಮೇಲಿರುವ ಮರಗಳು ಕನ್ನಡಿಯಂತಾಗಿರುವ ನನ್ನೊಡಲಿಗೆ ಮುಖ ಮಾಡಿ, ಶೃಂಗಾರಗೊಳ್ಳುತ್ತವೆ. ಅವುಗಳ ಮೇಲೆ ಕುಳಿತ ಪಾರಿವಾಳಗಳು ಸರಸ–ಸಲ್ಲಾಪವಾಡುವುದನ್ನು ಕಂಡು ನಾನು ನಾಚಿಕೊಳ್ಳುತ್ತೇನೆ. ಹರೆಯದ ನೆನಪಾಗಿ. ಆಗ ಮೂಗು ಮುರಿದವರು, ಈಗ ನನ್ನೆಡೆಗೆ ಮುಖ ಮಾಡಿದ್ದಾರೆ. ಬೋಟ್‌ಗಳಲ್ಲಿ ಕುಳಿತು ಜಲಕ್ರೀಡೆಯಾಡುತ್ತಾರೆ. ನನ್ನ ಸೊಬಗನ್ನು ನೋಡಲೆಂದೇ ಹಲವರು ಭೇಟಿ ನೀಡುತ್ತಾರೆ. ರೋಟರಿ ಸದಸ್ಯರು ತಂದಿಟ್ಟಿರುವ ಜಿಮ್‌ನಲ್ಲಿ ಇಳಿ ಸಂಜೆಯಲ್ಲಿರುವ ಹಿರಿಯ ಜೀವಗಳು ನಿತ್ಯ ಬೆಳಿಗ್ಗೆ ಬಂದು ವ್ಯಾಯಾಮ ಮಾಡುತ್ತಾರೆ. ಏಕಾಂತ ಬಯಸುವವರು, ಬಣ್ಣದ ಟೈಲ್ಸ್ ಹಾಕಿ ಕಟ್ಟಿರುವ ಸುತ್ತಲ ಏರಿಯ ಮೇಲೆ ವಾಯುವಿಹಾರ ನಡೆಸುತ್ತಾರೆ.

‘ನಾನೀಗ ಧನ್ಯೆ. ನನ್ನ ಮರುಜನ್ಮಕ್ಕೆ ಕಾರಣರಾದವರಿಗೆ ಇಷ್ಟಾದರೂ ಋಣ ತೀರಿಸಿದ ಸಾರ್ಥಕತೆ ನನ್ನದು. ಇನ್ನು ಯಾರಾದರೂ ನನ್ನನ್ನು ಮಲಿನಗೊಳಿಸಿದರೆ, ಅವರನ್ನು ನಾನು ಕ್ಷಮಿಸಲಾರೆ. ಹೀಗೆ ನಾನು ‘ಶಂಕರಹೊಂಡ’ದಿಂದ ‘ಶಂಕರ ತೀರ್ಥ’ವಾಗಿ ಪರಿವರ್ತಿತವಾಗಿದ್ದೇನೆ.

‘ಇನ್ನೊಂದನ್ನು ಹೇಳಲು ಮರೆತೆ. ಅಘನಾಶಿನಿ ಸಾಕ್ಷ್ಯಚಿತ್ರ ತಯಾರಿಸಿ, ನಿನ್ನ ಅಸ್ಮಿತೆಯನ್ನು ಗಟ್ಟಿಗೊಳಿಸಿದ ಅಶ್ವಿನಿಕುಮಾರ್ ಭಟ್ ಅವರು, ನನ್ನ ಸಾಕ್ಷ್ಯಚಿತ್ರವನ್ನೂ ಮಾಡಿದ್ದಾರೆಂದು ಹೇಳಿಕೊಳ್ಳಲು ಹೆಮ್ಮೆ. ಶಿರಸಿ ಜೀವಜಲ ಕಾರ್ಯಪಡೆಯ ‘ಜಲ ವಿಜಯ’ ಚಿತ್ರದಲ್ಲಿ ("Jala Vijaya" www.youtube.com) ನಾನು ಕೂಡ ನಾಯಕಿ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಈ ಚಿತ್ರ ನೋಡಿದವರು, ಕುತೂಹಲಭರಿತರಾಗಿ ನನ್ನ ನೋಡಲು ಬರುತ್ತಾರೆ. ಎಂತಹ ಪುಳಕ ಗೊತ್ತಾ?’

– ಅಮ್ಮನ ಕಥೆ ಕೇಳಿ ನಾನು ನಿಟ್ಟುಸಿರು ಬಿಟ್ಟೆ. ಅಮ್ಮ ಒಂಥರಾ ಗಂಗೆಯಂತೆ, ಸದಾ ಪರಿಶುದ್ಧಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.