‘ಪ್ರಜಾವಾಣಿ’ಯು ಮಹಿಳಾದನಿಗಳನ್ನು ಅಂದಂದಿನ ಕಾಲದ ಸಂದರ್ಭಗಳಿಗೆ ಅನುಸಾರವಾಗಿ ನಿರೂಪಿಸಿಕೊಂಡು ಬಂದಿದೆ. ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ನುಡಿಚಿತ್ರ, ಅಂಕಣ ಬರಹಗಳು, ಸಂಪಾದಕೀಯ, ವಾಚಕರ ವಾಣಿ - ಹೀಗೆ ಪತ್ರಿಕೆಯ ವಿವಿಧ ವಿಭಾಗಗಳಲ್ಲಿನ ಬರಹ ಪ್ರಕಾರಗಳಲ್ಲಿ ಮಹಿಳೆ ಬಿಂಬಿತಳಾಗಿದ್ದಾಳೆ

‘ವರದಕ್ಷಿಣೆ ಕೊಡಲಿಲ್ಲವೆಂಬ ದ್ವೇಷದ ಕಾರಣ ಅತ್ತೆಯಿಂದ ಸುಡಲ್ಪಟ್ಟ ಸೊಸೆಯ ಸಾವು’ - 1963ರ ನವೆಂಬರ್ 21ರ ‘ಪ್ರಜಾವಾಣಿ’ ಸಂಚಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಮೂರು ಕಾಲಂ ಸುದ್ದಿಯ ಶೀರ್ಷಿಕೆ ಇದು. ಈ ಘಟನೆ ನಡೆದಿರುವುದು ಭದ್ರಾವತಿಯಲ್ಲಿ.

ಕಳೆದ ಶತಮಾನದ 70ರ ದಶಕದ ಉತ್ತರಾರ್ಧ ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ಮಹಿಳಾ ಸಂಘಟನೆಗಳು ವರದಕ್ಷಿಣೆ ವಿರುದ್ಧ ದೊಡ್ಡ ಮಟ್ಟದ ಆಂದೋಲನ ಶುರು ಮಾಡಿದ ನಂತರವಷ್ಟೇ ವಧು ದಹನ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿ ಬೆಳಕಿಗೆ ಬರಲು ಶುರುವಾದವು ಎಂಬುದು ನಮಗೆ ಗೊತ್ತಿರುವ ಸಂಗತಿ. ಆದರೆ, 1961ರಲ್ಲೇ ವರದಕ್ಷಿಣೆ ನಿಷೇಧ ಕಾನೂನು ರಾಷ್ಟ್ರದಲ್ಲಿ ಜಾರಿಯಾಗಿತ್ತು. ಬಹುಶಃ ಈ ಕುರಿತಾದ ಸೂಕ್ಷ್ಮ ಸಂವೇದನೆಯಿಂದಾಗಿ ಈ ಸುದ್ದಿಯ ಮಹತ್ವವನ್ನು ಗ್ರಹಿಸಿ ಒಂದನೇ ಪುಟದಲ್ಲಿ ಅದನ್ನು ಬಿಂಬಿಸಿರುವ ರೀತಿಯು, ಸ್ವಸ್ಥ ಸಮಾಜದ ಪರವಾಗಿ ಮೊದಲಿನಿಂದಲೂ ‘ಪ್ರಜಾವಾಣಿ’ ರೂಢಿಸಿಕೊಂಡು ಬಂದಿರುವ ಕಾಳಜಿಯನ್ನು ಧ್ವನಿಸುವಂತಹದ್ದು. ಸೊಸೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಅತ್ತೆ ಹಾಗೂ ಅತ್ತೆಯ ತಾಯಿಯನ್ನು ಬಂಧಿಸಿದ್ದ ವಿವರವೂ ಈ ವರದಿಯಲ್ಲಿದೆ.

1967ರ ಆಗಸ್ಟ್ 19ರ ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ‘ಬಾಕ್ಸ್ ಐಟಂ’ ಆಗಿ ಒಂದು ಸುದ್ದಿಯನ್ನು ಹೈಲೈಟ್ ಮಾಡಿ ‘ಗಂಡಸರ ರಾಜ್ಯ’ ಎಂಬ ಹೆಡ್ಡಿಂಗ್ ಅಡಿ ಮುದ್ರಿಸಲಾಗಿದೆ. ಉತ್ತರ ಪ್ರದೇಶದ ಸಮುದಾಯ ಅಭಿವೃದ್ಧಿ ಇಲಾಖೆಯಲ್ಲಿರುವ ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ವಜಾ ಮಾಡಿರುವುದು ಈ ಸುದ್ದಿಯ ಸಾರ. ಮಹಿಳಾ ವಿಭಾಗವೇ ರದ್ದಾಗಿದ್ದು ಮಹಿಳಾ ಪ್ರೊಬೇಷನರ್ ಅಧಿಕಾರಿಗಳನ್ನೂ ಕಿತ್ತೊಗೆಯಲಾಗಿದೆ. ಈ ಮಹಿಳೆಯರಿಗೆ ಇತರ ನೌಕರಿಗಳನ್ನು ನೀಡುವ ಬಗ್ಗೆ ಕೇಂದ್ರ ಸಮಾಜ ಅಭಿವೃದ್ಧಿ ಖಾತೆಯ ಸ್ಟೇಟ್ ಸಚಿವೆ ಫೂಲ್ ರೇಣು ಗುಹಾ ಅವರು ನಡೆಸಿದ ಪ್ರಯತ್ನವೂ ವಿಫಲಗೊಂಡಿರುವುದು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಆತಂಕವನ್ನುಂಟು ಮಾಡಿದೆ. ಉತ್ತರ ಪ್ರದೇಶದವರೇ ಆಗಿರುವ ಇಂದಿರಾಗಾಂಧಿ ಪ್ರಧಾನಿಯಾಗಿದ್ದರೂ ಸುಚೇತ ಕೃಪಲಾನಿ ಅವರು ಇತ್ತೀಚಿನವರೆಗೂ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರೂ ಉತ್ತರ ಪ್ರದೇಶವು ವಾಸ್ತವವಾಗಿ ಗಂಡಸರ ರಾಜ್ಯವೇ ಆಗಿದೆ ಎಂಬ ವ್ಯಾಖ್ಯಾನವನ್ನೂ ನೀಡಿರುವ ಈ ವರದಿ ಮಹಿಳಾ ಪರ ಧೋರಣೆಯನ್ನು ಧ್ವನಿಸಿದೆ. ಪ್ರಸ್ತುತ ಕಾಲದಲ್ಲೂ ಉತ್ತರ ಪ್ರದೇಶದಲ್ಲಿನ ಈ ವಾಸ್ತವ ಹೆಚ್ಚೇನೂ ಬದಲಾಗಿಲ್ಲವೆಂಬುದು ಕಾಕತಾಳೀಯ.

1966ರ ಜೂನ್ 4ರ ‘ಪ್ರಜಾವಾಣಿ’ ಸಂಚಿಕೆಯ ಮೊದಲ ಪುಟದಲ್ಲಿ ‘ಮಹಿಳೆಯರೇ ಇಲ್ಲದ ವಿಧಾನಸಭೆ’ ಎಂಬ ಶಿರೋನಾಮೆಯ ಚಿಟಿಕೆ ಸುದ್ದಿಯು, ಜಮ್ಮು ಮತ್ತು ಕಾಶ್ಮೀರದ ಹೊಸ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಹಿಂದಿನ ಎರಡೂ ವಿಧಾನಸಭೆಗಳಲ್ಲೂ ಮಹಿಳೆಯರಿರಲಿಲ್ಲ ಎಂಬುದನ್ನು ವರದಿ ಮಾಡುತ್ತಲೇ ತಾರತಮ್ಯ ಹಾಸುಹೊಕ್ಕಾಗಿರುವ ಸಮಾಜಕ್ಕೆ ಕನ್ನಡಿ ಹಿಡಿದಿದೆ.

ಕಳೆದ ಕೆಲವು ದಶಕಗಳವರೆಗೂ ‘ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆ’ ಎಂಬಂಥ ಹೆಗ್ಗಳಿಕೆ ಹೊಂದಿದ್ದು ಈಗಲೂ ‘ವಿಶ್ವಾಸಾರ್ಹ ದಿನಪತ್ರಿಕೆ’ ಯಾಗಿರುವ ‘ಪ್ರಜಾವಾಣಿ’, ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾದನಿಗಳನ್ನು ಅಂದಂದಿನ ಕಾಲದ ಸಂದರ್ಭಗಳಿಗೆ ಅನುಸಾರವಾಗಿ ನಿರೂಪಿಸಿಕೊಂಡು ಬಂದಿದೆ. ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ನುಡಿಚಿತ್ರ, ಅಂಕಣ ಬರಹಗಳು, ಸಂಪಾದಕೀಯ, ವಾಚಕರ ವಾಣಿ - ಹೀಗೆ ಪತ್ರಿಕೆಯ ವಿವಿಧ ವಿಭಾಗಗಳಲ್ಲಿನ ಬರಹ ಪ್ರಕಾರಗಳಲ್ಲಿ ಮಹಿಳೆ ಬಿಂಬಿತಳಾಗಿದ್ದಾಳೆ.

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಸಾಮ್ರಾಜ್ಯಶಾಹಿ ಬ್ರಿಟಿಷ್ ಸರ್ಕಾರದ ವಿರುದ್ಧದ ಸಮರಕ್ಕೆ ಪತ್ರಿಕೆಗಳೂ ವೇದಿಕೆಯಾಗಿದ್ದವು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರಾಷ್ಟ್ರೀಯವಾದಿ ಪತ್ರಿಕೆಗಳು ದೇಶೀ ಸರ್ಕಾರದ ಪರವಾಗಿ ಬೆಂಬಲದ ಧೋರಣೆ ತಾಳಿದ್ದವು. ಸ್ವಾತಂತ್ರ್ಯ ಬಂದ ನಂತರ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಆಯ್ಕೆ ಮಾಡಿಕೊಂಡಾಗ, ಅದು ದೊಡ್ಡ ಸವಾಲಿನ ರಾಜಕೀಯ ಸಾಹಸದ ಆರಂಭವಾಗಿತ್ತು. ಸಾಂಸ್ಕೃತಿಕ ವೈವಿಧ್ಯ, ಜನರ ಬಡತನ, ಅನಕ್ಷರತೆ, ಹೆಚ್ಚುತ್ತಿದ್ದ ಜನಸಂಖ್ಯೆಯನ್ನು ಸರ್ಕಾರ ಸಂಭಾಳಿಸಬೇಕಿತ್ತು. ಇವು, ಸಹಜವಾಗಿಯೇ ಸ್ವಾತಂತ್ರ್ಯಾನಂತರ ಪ್ರಕಟಣೆ ಆರಂಭಿಸಿದ ‘ಪ್ರಜಾವಾಣಿ’ಯ ಆರಂಭದ ದಿನಗಳಲ್ಲಿನ ಆದ್ಯತೆಗಳೂ ಆಗಿದ್ದವು. ಹೆಣ್ಣುಮಕ್ಕಳ ಸಾಕ್ಷರತೆ ಪ್ರಮಾಣ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದದ್ದು ಕೇವಲ ಶೇ 9. ಹೆಣ್ಣುಮಕ್ಕಳ ಶಿಕ್ಷಣ, ಬಾಲ್ಯ ವಿವಾಹದ ಪಿಡುಗು, ವಿವಾಹ ವಯಸ್ಸು ನಿಗದಿ, ತಾಯಿ-ಮಗು ಆರೋಗ್ಯ- ಇಂತಹ ವಿಚಾರಗಳು ಪತ್ರಿಕೆಯ ವಿವಿಧ ವಿಭಾಗಗಳಲ್ಲಿ ಆದ್ಯತೆ ಪಡೆದುಕೊಂಡಿರುವುದನ್ನು ಕಾಣಬಹುದು.

ಮಹಿಳೆಯ ಉದ್ಯೋಗ ಪ್ರವೇಶಕ್ಕೂ ಆ ಕಾಲದಲ್ಲಿದ್ದ ಪೂರ್ವಗ್ರಹಗಳನ್ನು ಎತ್ತಿ ತೋರಿಸುವ ರೀತಿಯಲ್ಲಿ ವರದಿಗಳು ಪ್ರಕಟವಾಗಿವೆ. ಐಎಎಸ್ನಲ್ಲಿ ವಿವಾಹಿತ ಮಹಿಳೆಯರ ಮುಂದುವರಿಕೆ ಹಾಗೂ ನೇಮಕಾತಿಗಳಿಗೆ ಇದ್ದ ನಿರ್ಬಂಧವನ್ನು ಕಿತ್ತು ಹಾಕಲು ಐಎಎಸ್ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂಬ ಸಂಸತ್ನ ಮೇಲ್ಮನೆಯ ಸದಸ್ಯರ ಪ್ರಯತ್ನ ವಿಫಲವಾದದ್ದು 1954ರ ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ವರದಿಯಾಗಿದೆ. ಇದು ಕೇವಲ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಅನ್ವಯಿಸುತ್ತದೆ ಎಂದು ಈ ನಿರ್ಬಂಧವನ್ನು ಸಮರ್ಥಿಸಿಕೊಂಡು ಕೇಂದ್ರ ಗೃಹ ಸಚಿವರು ಅಂದು ಹೇಳಿದ್ದ ಮಾತುಗಳಿವು: ‘ತಾಯಿಯ ಮೊದಲ ಕರ್ತವ್ಯ ಮಗುವಿನ ಪಾಲನೆ. ಗುಂಡು ಹಾರಿಸಲು ಆದೇಶ ನೀಡುವುದಲ್ಲ’. ಇದನ್ನು ಪ್ರತಿಭಟಿಸಿ ಐವರು ಕಾಂಗ್ರೆಸ್ ಮಹಿಳಾ ಎಂಪಿಗಳು ಹೊರ ನಡೆದಿದ್ದೂ ವರದಿಯಾಗಿದೆ.

ಐವತ್ತರ ದಶಕದಲ್ಲಿ ಮಧ್ಯಮ ವರ್ಗದ ಮಹಿಳೆಯ ಉದ್ಯೋಗರಂಗ ಪ್ರವೇಶವು ಹಲ ಬಗೆಯ ಸಂಶಯಗಳಡಿ ಸಿಲುಕಿತ್ತು ಎಂಬುದು ಇದರಿಂದ ವೇದ್ಯ. ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಗಳಲ್ಲಿ ‘ವಾದಭೂಮಿ’ ಅಂಕಣದ ಅಡಿ ‘ಮಹಿಳೆಯರು ದುಡಿದು ತರಬೇಕೆ?’ ಎಂಬುದು ತೀವ್ರ ಚರ್ಚೆಗೊಳಪಟ್ಟಿದೆ. ಮೈಸೂರಿನ ಹ.ಪ.ನಾಗರಾಜಯ್ಯ (ಅಕ್ಟೋಬರ್ 9, 1955) ಎಂಬವರು, ‘ಯಾವ ಪುರುಷನಿಗೂ ದೊರಕಲಾರದ ‘ಮಾತೃದೇವೋ ಭವ’ದಂತಹ ಪವಿತ್ರ ಸ್ಥಾನ ತೊರೆದು ಮಾಣಿಕ್ಯ ಬಿಸುಟು ಗಾಜಿನ ಚೂರಿಗಾಗಿ ಅಲೆಯುವಂತೆ, ಗುಮಾಸ್ತೆ ಹುದ್ದೆಗಾಗಿ ಸ್ತ್ರೀ ಬರಬೇಕೇ’ ಎಂದು ಪ್ರಶ್ನಿಸಿದ್ದಾರೆ. ‘ಅತಿ ಮುಖ್ಯವಾದ ಗೃಹಕೃತ್ಯಕ್ಕೆ ಸ್ತ್ರೀಯರು ಅತ್ಯಾವಶ್ಯವಾಗಿರುವುದರಿಂದ ಅವರೂ ದುಡಿಯಲು ಹೊರಡುವುದು ಅನರ್ಥಕಾರಿ’ ಎಂದಿದ್ದಾರೆ ಭದ್ರಾವತಿಯ ಎಸ್ ಕೃಷ್ಣ ಭಟ್ಟ. ‘ಗಂಡಸು ತರುವ ಸಂಬಳದಲ್ಲಿ ಸಂಸಾರವನ್ನು ತೂಗಿಸಿ ಆಕೆ ಹೇಗೆ ತಾನೇ ಸಾಮ್ರಾಜ್ಞಿಯಂತೆ ಮೆರೆದಾಳು’ ಎಂದು ಪ್ರಶ್ನಿಸಿರುವವರು ಬೆಂಗಳೂರಿನ ಶಾಂತಿ ಶ್ರೀಪಾದರಾಜ್. ‘ಪ್ರತಿಯೊಬ್ಬ ಮಹಿಳೆಯೂ ಸಂಸಾರವನ್ನು ತೂಗಿಸಲಾರದೆ, ಮನೋಲ್ಲಾಸವೆಂಬುದನ್ನೇ ಮರೆತು ಗೋಳಿಡುತ್ತಾ ಕೂರುವ ಬದಲು ಯಾವುದಾದರೂ ಕೆಲಸಕ್ಕೆ ಸೇರಿ ತಾನೂ ಸಂತೋಷಿಸುತ್ತಾ ಮನೆಯನ್ನು ಸುಖಸಾಗರವನ್ನಾಗಿಸಲು ಪ್ರಯತ್ನಿಸಬೇಕು’ ಎಂದಿದ್ದಾರೆ.

ಮಹಿಳೆಯ ನೌಕರಿಯ ಬಗ್ಗೆ ಇರುವ ಹಿಂಜರಿಕೆ, ಅಸಹನೆಗಳು ಹಲವು ಪತ್ರಗಳಲ್ಲಿ ವ್ಯಕ್ತ. ಬಹುಶಃ ಆ ಕಾಲದ ಸಂದರ್ಭವನ್ನು ಸೂಚಿಸುವಂತೆ ಪ್ರಕಟವಾಗಿರುವ ಪತ್ರಗಳಲ್ಲಿ ಹೆಚ್ಚಿನವು ಪುರುಷರೇ ಬರೆದಿರುವಂತಹವು.

ಲೈಂಗಿಕ ವೃತ್ತಿ ನಿರತರ ವಿಚಾರಗಳನ್ನು ‘ಪ್ರಜಾವಾಣಿ’ ಗಂಭೀರ ನೆಲೆಗಳಲ್ಲಿ ಪ್ರಕಟಿಸಿಕೊಂಡು ಬರುತ್ತಲೇ ಇದೆ. 2017ರಲ್ಲಿ ಜಯಮಾಲಾ ನೇತೃತ್ವದ ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ‘ವರದಿಯನ್ನು ಲೇಖನಮಾಲಿಕೆಯ ಮೂಲಕ ಪ್ರಜಾವಾಣಿ ಬಹಿರಂಗ ಪಡಿಸಿತ್ತು. ಬಳ್ಳಾರಿ ಜಿಲ್ಲೆಯಲ್ಲಿ, ದಲಿತ ಯುವತಿಯರ ಮೇಲೆ ಸವರ್ಣೀಯ ಪುರುಷರು ನಡೆಸುತ್ತಿದ್ದ ‘ಓಕುಳಿ ಎರಚುವ’ ಹೀನ ಸಂಪ್ರದಾಯ ಆಚರಣೆ, ಚಂದ್ರಗುತ್ತಿ ಬೆತ್ತಲೆ ಸೇವೆ ಆಚರಣೆಗಳ ಬಗ್ಗೆ ‘ಪ್ರಜಾವಾಣಿ’ಯ ವಸ್ತುನಿಷ್ಠ ಹಾಗೂ ಸೂಕ್ಷ್ಮ ಸಂವೇದನೆಯ ವರದಿಗಳು ಜನರಲ್ಲಿ ಜಾಗೃತಿ ಮೂಡಿಸಿವೆ.

ಕೋಲಾರ ಜಿಲ್ಲೆಯ ‘ದೊಂಬರ ಗುಡಿಸಲು’ ಕುಗ್ರಾಮದ ಪ್ರತಿ ಕುಟುಂಬಕ್ಕೂ ವೇಶ್ಯಾವೃತ್ತಿಯೇ ಜೀವನಾಧಾರವಾಗಿತ್ತು. 1989ರಲ್ಲಿ ಕೋಲಾರ ಗ್ರಾಮೀಣ ಬ್ಯಾಂಕ್ ಶಾಖೆ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಬಸವರಾಜ್ ಅವರು 1990ರ ಫೆಬ್ರುವರಿ 6ರಂದು ಈ ಗ್ರಾಮವನ್ನು ದತ್ತು ತೆಗೆದುಕೊಂಡು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ವ್ಯಾಪಾರ ಇತ್ಯಾದಿ ಆರ್ಥಿಕ ಚಟುವಟಿಕೆಗಳಿಗೆ ಮಹಿಳೆಯರನ್ನು ಪ್ರೇರೇಪಿಸಿದರು. ಬಸವರಾಜ್ ಅವರಿಗೆ ಕೃತಜ್ಞತೆ ಸಲ್ಲಿಸಲು ಊರಿನ ಹೆಸರೇ ‘ಬಸವರಾಜ ಪುರ’ ಎಂದು ಬದಲಾಯಿಸಲಾಯಿತು. ಆ ನಂತರ ಮತ್ತೆ 1999ರಲ್ಲಿ ಬ್ಯಾಂಕ್ ಸಾಲ ತೀರಿಸಲಾಗದೆ ಬಸವರಾಜಪುರ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ‘ಕರ್ನಾಟಕ ದರ್ಶನ’ ಪುರವಣಿಯ ಎರಡು ಲೇಖನಗಳು ಬೆಳಕು ಚೆಲ್ಲಿ ಅಭಿವೃದ್ಧಿ ಸಾಧನೆ ಹಾಗೂ ಆನಂತರ ಮುಂದುವರಿಸಿಕೊಂಡು ಹೋಗಬೇಕಾದ ಹಾದಿಯ ಕಲ್ಲುಮುಳ್ಳುಗಳನ್ನು ಪರಿಚಯಿಸಿವೆ.

( ಮುಂದುವರಿಯುತ್ತದೆ)

ಡಾ ಅಂಬೇಡ್ಕರ್ ರೂಪಿಸಿದ ಹಿಂದೂ ಕೋಡ್ ಮಸೂದೆ ಸ್ವತಂತ್ರ ಭಾರತದಲ್ಲಿ ಮಹಿಳಾ ಸಬಲೀಕರಣದತ್ತ ಇರಿಸಿದ ಮೊದಲ ಹೆಜ್ಜೆಯಾಗಿತ್ತು. ಆದರೆ ಈ ಮಸೂದೆ ಬಗ್ಗೆ ಸ್ವತಃ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸೇರಿದಂತೆ ಪಾರ್ಲಿಮೆಂಟ್ ಸದಸ್ಯ ಗಣ ಹಾಗೂ ಸಂಪ್ರದಾಯವಾದಿ ಸಾರ್ವಜನಿಕರ ಪ್ರತಿಭಟನೆ ತೀವ್ರವಾಗಿತ್ತು. ಜೊತೆಗೆ ರಾಷ್ಟ್ರದ ಮೊದಲ ಲೋಕಸಭೆ ಚುನಾವಣೆ (1952) ಮೇಲೆ ‘ಹಿಂದೂ ಕೋಡ್ ಹಟ’ವು ಬೀರಬಹುದಾದ ಪರಿಣಾಮವನ್ನು ಅರಿತುಕೊಂಡು ಮಸೂದೆ ಮಂಡನೆಯನ್ನು ಕೈಬಿಟ್ಟ ನೆಹರೂ ಕ್ರಮವನ್ನು ‘ವಿವೇಕದ ನಿಲುವು’ ಎಂದು ‘ಪ್ರಜಾವಾಣಿ’ಯ ಸಂಪಾದಕೀಯ (28 ಸೆಪ್ಟೆಂಬರ್ 1951) ಸಮರ್ಥಿಸಿಕೊಂಡಿದೆ. ‘ವಸ್ತು ಸ್ಥಿತಿ ಅನುಸರಿಸಿ ಸನ್ನಿವೇಶಾನುಗುಣವಾಗಿ ಜವಾಹರಲಾಲರು ಕೈಗೊಂಡ ನೀತಿಯು ನ್ಯಾಯಾಂಗ ಮಂತ್ರಿ ಅಂಬೇಡ್ಕರ್ ಅವರಿಗೆ ಹಿಡಿಸದಿದ್ದುದು ಆಶ್ಚರ್ಯವಲ್ಲ. ಅವರು ರಾಜೀನಾಮೆಯಿತ್ತಿರುವರೆಂಬುದಕ್ಕೂ ಹಿಂದೂ ಕೋಡ್ ಮಸೂದೆಯ ಹಿಂದೋಟ ಪ್ರಮುಖ ಕಾರಣವೆನ್ನಬಹುದು’ ಎಂದು ಸಂಪಾದಕೀಯ ಪ್ರಸ್ತಾಪಿಸಿದೆ. ‘ಲೌಕಿಕ ರಾಜ್ಯತತ್ವಕ್ಕೆ ಬದ್ಧರಾಗಿರುವ ನಮಗೆ ಪ್ರಗತಿ ಸಾಧಕ ಶಾಸನಗಳು ಅಗತ್ಯ. ಆದರೆ ಅಂಥ ಕ್ರಮಗಳನ್ನು ಕೈಗೊಳ್ಳುವಾಗ ಅವಸರ ಆತುರಗಳು ಸಲ್ಲವೆಂಬುದು ಈಗ ವ್ಯಕ್ತವಾಗಿದೆ. ಪಾರ್ಲಿಮೆಂಟಿನಲ್ಲಿ ಹಿಂದೂ ಕೋಡ್ ಮಸೂದೆಯು ಎದ್ದು ಬೀಳುತ್ತ ತೆವಳಿದುದನ್ನೂ ಈಗ ಮುಂದಕ್ಕೆ ಹಾಕಲ್ಪಟ್ಟಿರುವುದನ್ನೂ ನೋಡಿದರೆ ಅದು ಶಾಸನವಾಗುವ ಹೊತ್ತಿಗೆ ಮೂಲ ರೂಪವೇ ಬದಲಾಗುವುದೆಂಬುದು ಖಚಿತವಾಗಿ ಕಾಣುತ್ತಿದೆ’ ಎಂಬ ಮುನ್ನೋಟವನ್ನೂ ಸಂಪಾದಕೀಯ ನೀಡಿದೆ. ‘ಚುನಾವಣೆಯ ನಂತರ ಜನತೆಯ ‘ನೈಜ’ ಪ್ರತಿನಿಧಿಗಳಾಗಿ ಪಾರ್ಲಿಮೆಂಟಿಗೆ ಬರುವ ಸದಸ್ಯ ಗಣದ ವಿವೇಚನೆಯ ಮಥನಕ್ಕೆ ಸಿಕ್ಕುವ ಅವಕಾಶ ದೊರೆತಿರುವ ಹಿಂದೂ ಕೋಡ್ ಮಸೂದೆ ಹಿಂದೂ ಸಮಾಜದ ಆಧುನಿಕ ಅವಶ್ಯಕತೆಗಳಿಗೆ ಹೊಂದುವ ಸಮರ್ಪಕ ಶಾಸನ ಮಾಡುವುದೆಂದು ಆಶಿಸೋಣ’ ಎಂಬಂಥ ಆಶಯವನ್ನೂ ಸಂಪಾದಕೀಯದಲ್ಲಿ ವ್ಯಕ್ತಪಡಿಸಲಾಗಿದೆ.

ವಾಸ್ತವಿಕ ವಿಶ್ಲೇಷಣೆಯ ಲೇಖನ

‘ಪ್ರಜಾವಾಣಿ’ಯ ಭಾನುವಾರದ ಪುಟಗಳಲ್ಲಿ ಮಹಿಳಾ ವಿಚಾರಗಳು ಲೇಖನಗಳಾಗಿ ವಿಸ್ತೃತವಾಗಿ ಗಂಭೀರ ವಿಶ್ಲೇಷಣೆಗೊಳಪಡುವುದು ಅಂದಿನಿಂದಲೂ ನಡೆದು ಬಂದಿದೆ. ‘ಗೌರವವಿಲ್ಲದ ವೃತ್ತಿ - ವೇಶ್ಯಾವೃತ್ತಿಯ ವಿಶ್ಲೇಷಣೆ’ ಎಂಬ ಲೇಖನವು ಚಿತ್ರಗಳ ಸಹಿತ 1957ರ ಜುಲೈ 14ರಂದು ಪ್ರಕಟವಾಗಿದೆ. ಮುಂಬೈ ನಗರದ ವೇಶ್ಯಾಪೇಟೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿದ ವೇಶ್ಯೆ ವಿಟರನ್ನು ಆಕರ್ಷಿಸಲು ನಿಂತ ‘ಪಂಜರದ ಗಿಣಿಗಳು’ ಎಂಬಂಥ ಶೀರ್ಷಿಕೆಯ ಚಿತ್ರಗಳ ಸಹಿತ ಮಾಹಿತಿ ಪೂರ್ಣ ಲೇಖನ ಇದು. ವೇಶ್ಯಾವೃತ್ತಿಯ ಬಗ್ಗೆ ಭಾರತದ ನಿಲುವಿನ ಬಗ್ಗೆ ಈ ಲೇಖನ ಪ್ರಸ್ತಾಪಿಸಿದೆ. ಶ್ವೇತವರ್ಣೀಯರ ಗುಲಾಮರ ವ್ಯಾಪಾರದ ಸಮಸ್ಯೆಯಯತ್ತ ಲೀಗ್ ಆಫ್ ನೇಷನ್ಸ್ ಜಗತ್ತಿನ ರಾಷ್ಟ್ರಗಳ ಗಮನ ಸೆಳೆದಾಗ ಭಾರತವೂ ಸಹ 1904 ಮತ್ತು 1910ರಲ್ಲಾದ ಶ್ವೇತವರ್ಣೀಯರ ಗುಲಾಮರ ವ್ಯಾಪಾರವನ್ನು ತಡೆಗಟ್ಟುವ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೆ ಮೊದಲನೆಯದಾಗಿ 1921ರಲ್ಲಾದ ‘ಅಂತರರಾಷ್ಟ್ರೀಯ ಸ್ತ್ರೀ ಹಾಗೂ ಮಕ್ಕಳ ಅನೈತಿಕ ವ್ಯವಹಾರವನ್ನು ತಡೆಗಟ್ಟುವ ಒಪ್ಪಂದ’ಕ್ಕೂ ಭಾರತ ಸಹಿ ಹಾಕಿದೆ. ‘ಎಷ್ಟೇ ಹಾನಿಕಾರಕ ವೃತ್ತಿಯಾದರೂ ವ್ಯಭಿಚಾರ ನಿರ್ಮೂಲನೆ ಸಾಧ್ಯವಿಲ್ಲ’ ಎಂಬ ನಿಲುವನ್ನೂ ಲೇಖಕಿ ವ್ಯಕ್ತಪಡಿಸಿದ್ದಾರೆ. ‘ಭಾರತದ ನೀತಿಯೂ ಸಹ ವೇಶ್ಯಾ ವ್ಯಾಪಾರವನ್ನು ಸಮೂಲಾಗ್ರವಾಗಿ ನಿರ್ಮೂಲ ಮಾಡುವ ನೀತಿಯಾಗಿಲ್ಲ. ಬದಲು ಅದನ್ನು ಆದಷ್ಟು ಅಂಕೆಯಲ್ಲಿಡಲು ಪ್ರಯತ್ನಿಸಲಾಗುತ್ತಿದೆ’ ಎಂಬುದನ್ನು ಹೇಳಲಾಗಿದೆ. ಯಾವಾಗ ವ್ಯಭಿಚಾರವು ಅದರ ಆಚರಣೆಯೂ ಸಮಾಜದ ಸಭ್ಯತೆಗೆ ಹಾನಿಯನ್ನು ಉಂಟು ಮಾಡುತ್ತದೆಯೋ ಆಗ ಕಾನೂನು ಪ್ರವೇಶಿಸಬಲ್ಲುದೇ ಹೊರತು; ಸಮಾಜವು ಅನೈತಿಕ ಸಂಪರ್ಕವೆಂದು ಭಾವಿಸುವ ವೈಯಕ್ತಿಕ ವ್ಯಭಿಚಾರದಲ್ಲಿ ಕಾನೂನು ಪ್ರವೇಶಿಸಲಾರದು ಎಂದು ಲೇಖನ ವಿಶ್ಲೇಷಿಸಿದೆ. ವ್ಯಭಿಚಾರ -ಅದರಲ್ಲೂ ವೈಯಕ್ತಿಕ ವ್ಯಭಿಚಾರವನ್ನು ಕಾನೂನಿನಿಂದ ತಡೆಗಟ್ಟಲಾಗುವುದಿಲ್ಲ. ಕಾರಣ: ನಮ್ಮ ರಾಜ್ಯಾಂಗವು ಪ್ರತಿಯೊಬ್ಬ ವ್ಯಕ್ತಿಗೂ ‘ಯಾವುದೇ ವೃತ್ತಿ ಅಭ್ಯಾಸ ವ್ಯಾಪಾರ ಮತ್ತು ವ್ಯವಹಾರವನ್ನು ನಡೆಸಲು’ ಇತ್ತಿರುವ ಮೂಲಭೂತ ಹಕ್ಕಿಗೆ ಕುಂದುಂಟಾಗುತ್ತದೆ ಆದ್ದರಿಂದ ನಮ್ಮ ರಾಜ್ಯಾಂಗದ ಸಂದಿಗ್ಧ ನಿಬಂಧನೆಯಾದ 19ನೇ ನಿಬಂಧನೆಯು ಜನರ ಆರೋಗ್ಯ ಸಭ್ಯತೆ ಹಾಗೂ ನೀತಿಯ ದೃಷ್ಟಿಯಿಂದ ಪರಿಷ್ಕೃತವಾಗುವವರೆಗೂ ಏನನ್ನೂ ಮಾಡುವಂತಿಲ್ಲ’ ಎಂದು ಸುದೀರ್ಘವಾಗಿ ವಿವರಿಸಿದೆ ಈ ಲೇಖನ. ಗಂಭೀರವಾದ ಮಹಿಳಾ ದೃಷ್ಟಿಕೋನ ಹೊಂದಿದ ವಸ್ತುನಿಷ್ಠ ವಾಸ್ತವಿಕ ವಿಶ್ಲೇಷಣೆಯ ಲೇಖನವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.