ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

Published : 3 ಆಗಸ್ಟ್ 2023, 6:37 IST
Last Updated : 3 ಆಗಸ್ಟ್ 2023, 6:37 IST
ಫಾಲೋ ಮಾಡಿ
Comments
ADVERTISEMENT
ವಾರಾಣಸಿ: ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಹಿಂದೂ ದೇವಾಲಯ ಮೊದಲೇ ನಿರ್ಮಾಣಗೊಂಡಿತ್ತೇ ಎಂಬುದನ್ನು ಅರಿಯಲು ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ಅಲಹಾಬಾದ್ ಹೈಕೋರ್ಟ್‌ ಗುರುವಾರ ಆದೇಶಿಸಿದೆ.  ಜ್ಞಾನವ್ಯಾಪಿ ಮಸೀದಿ ಪ್ರಕರಣದ ಈವರೆಗಿನ ಪ್ರಮುಖ ಘಟನಾವಳಿಗಳು ಹೀಗಿವೆ...
1. 2023ರ ಜುಲೈ 21ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವ್ಯಾಪಿ ಮಸೀದಿಯ ವೈಜ್ಞಾನಿಕ ಸರ್ವೆ ನಡೆಸಲು ಎಎಸ್‌ಐಗೆ ನಿರ್ದೇಶನ ನೀಡಿತು. ಸದ್ಯ ಮಸೀದಿ ಇರುವ ಜಾಗದಲ್ಲಿ ದೇವಾಲಯ ಇತ್ತೇ...? ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿದ್ದ ದೇವಾಲಯದ ಮೇಲೆ ಮಸೀದಿ ನಿರ್ಮಿಸಲಾಗಿತ್ತೇ...? ಎಂಬುದನ್ನು ಪರಿಶೀಲಿಸಲು ಅಗತ್ಯ ಇರುವಲ್ಲಿ ಭೂಮಿ ಅಗೆದು ಸಮೀಕ್ಷೆ ಕೈಗೊಳ್ಳಲು ಅನುಮತಿ ನೀಡಲಾಗಿತ್ತು. 
2. 2023ರ ಜುಲೈ 24ರಂದು ಎಎಸ್‌ಐ ಸರ್ವೆ ಕಾರ್ಯ ಆರಂಭಿಸಿತು. ಜಿಲ್ಲಾ ನ್ಯಾಯಾಲಯದ ಆದೇಶ ಜಾರಿಗೆ ಒಂದಷ್ಟು ಕಾಲಾವಕಾಶ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಜುಲೈ 26ರ ಸಂಜೆ 5ರವರೆಗೆ ಸರ್ವೆ ನಡೆಸದಂತೆ ತಡೆ ಹೇರಿತು.
3. ಸರ್ವೆ ಕಾರ್ಯವು ಸದ್ಯ ಇರುವ ಕಟ್ಟಡಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಬದಲಿಗೆ ಅದರ ವಿಸ್ತೀರ್ಣದ ಲೆಕ್ಕ, ಛಾಯಾಚಿತ್ರ ಮತ್ತು ರಾಡಾರ್‌ ಅಧ್ಯಯನ ಮೂಲಕ ಸರ್ವೆ ನಡೆಸಲಾಗುತ್ತದೆ ಎಂದು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
4. ಇದಕ್ಕೂ ಮೊದಲು ಮಸೀದಿ ಕಟ್ಟಡವು ಹಿಂದು ದೇವಾಲಯದ ಮೇಲೆ ನಿರ್ಮಿಸಲಾಗಿದ್ದು, ಈ ಕುರಿತು ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ಕೋರಿ ಹಿಂದು ಮಹಿಳೆಯರ ಗುಂಪು ವಾರಾಣಸಿ ನ್ಯಾಯಾಲಯದ ಮೆಟ್ಟಿಲೇರಿದ್ದು ಜ್ಞಾನವ್ಯಾಪಿ ಮಸೀದಿ ಪ್ರಕರಣ ಹೆಚ್ಚು ಚರ್ಚೆಯಾಗಲು ಕಾರಣವಾಯಿತು.
5. 2022ರಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮಸೀದಿ ಇರುವ ಜಾಗದ ವಿಡಿಯೊ ಸರ್ವೆ ನಡೆಸುವಂತೆ ಆದೇಶಿಸಿತು. ಇದರಲ್ಲಿ ಕಂಡುಬಂದಿದ್ದು ‘ಶಿವಲಿಂಗ‘ ಎಂದು ಈ ಮಹಿಳೆಯರ ಗುಂಪು ವಾದಿಸಿತು.
6. ಆದರೆ ಮಸೀದಿ ನಿರ್ವಹಣಾ ಸಮಿತಿಯು, ‘ಅದು ಶಿವಲಿಂಗವಲ್ಲ, ಮಸೀದಿಗೆ ಪ್ರಾರ್ಥನೆಗೆ ಬರುವವರು ಕೈ, ಕಾಲು ತೊಳೆದುಕೊಳ್ಳುವ ಸಲುವಾಗಿ ವಝೂಖಾನಾದಲ್ಲಿ ನಿರ್ಮಿಸಿರುವ ಕಾರಂಜಿ‘ ಎಂದು ವಾದ ಮಂಡಿಸಿತು.
7. ಪ್ರಕರಣದ ಗಂಭೀರತೆ ಅರಿತ ಸುಪ್ರೀಂ ಕೋರ್ಟ್‌, ಈ ಪ್ರದೇಶದೊಳಗೆ ಪ್ರವೇಶ ನಿರ್ಬಂಧಿಸಿ ಅದಕ್ಕೆ ಬೀಗ ಹಾಕುವಂತೆ 2022ರ ಮೇ ತಿಂಗಳಲ್ಲಿ ಆದೇಶಿಸಿತು.
8. 2022ರ ಸೆಪ್ಟೆಂಬರ್‌ನಲ್ಲಿ, ಮಸೀದಿಯೊಳಗಿರುವ ‘ಶಿವಲಿಂಗ‘ಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆಯರ ಗುಂಪಿನ ಮನವಿಯನ್ನು ತಿರಸ್ಕರಿಸುವಂತೆ ಮಸೀದಿ ಸಮಿತಿಯ ಕೋರಿಕೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತು.
9. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಮೇಲ್ಮನವಿಯಲ್ಲೂ ಜಿಲ್ಲಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿಯಲಾಯಿತು.
10. ವಾರಾಣಸಿಯು ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ. ಮೊಘಲರ ದಾಳಿಯ ನಂತರ ನೆಲಸಮಗೊಂಡವು ಎನ್ನಲಾದ ಹಲವು ದೇವಾಲಯಗಳಲ್ಲಿ ಒಂದು ದೇವಾಲಯದ ಮೇಲೆ ನಿರ್ಮಾಣಗೊಂಡಿದ್ದು ಜ್ಞಾನವ್ಯಾಪಿ ಮಸೀದಿ ಎಂದೆನ್ನಲಾಗುತ್ತಿದೆ. ವಾರಾಣಸಿ ದೇಗುಲಗಳ ನಡುವೆ ಮಸೀದಿ ಹೇಗೆ ಬಂತು ಎಂದು 1980 ಹಾಗೂ 1990ರ ನಡುವೆ ಬಿಜೆಪಿ ಮೊದಲ ಬಾರಿಗೆ ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT