ಬೆಂಗಳೂರು: ‘ಖಾಸಗಿ ಡೇರಿಯವರು ಪ್ರತಿ ಲೀಟರ್‌ಗೆ ಕನಿಷ್ಠ ₹40 ನೀಡಿದರೆ ಹಾಲು ಒಕ್ಕೂಟಗಳು ₹30 ನೀಡಲು ಪರದಾಡುತ್ತಿವೆ. ಇದೇ ಸ್ಥಿತಿ ಮುಂದುವರಿದರೆ ಕರ್ನಾಟಕ ಹಾಲು ಒಕ್ಕೂಟಗಳಿಂದಲೇ ರೈತರು ವಿಮುಖರಾಗಬಹುದು. ದೊಡ್ಡಬಳ್ಳಾಪುರದಲ್ಲೇ ಪ್ರತಿ ದಿನ ಪೂರೈಕೆಯಾಗುತ್ತಿದ್ದ 1.5 ಲಕ್ಷ ಲೀಟರ್ ಹಾಲು ಈಗ 1 ಲಕ್ಷ ಲೀಟರ್‌ಗೆ ತಲುಪಿದೆ. ಹಾಲು ಉತ್ಪಾದಕರ ಸಂಖ್ಯೆಯೂ 11 ಸಾವಿರದಿಂದ ಈಗ 9.5 ಸಾವಿರಕ್ಕೆ ಇಳಿಕೆಯಾಗಿದೆ‘

‘ಹಾಲು ಉತ್ಪಾದಕರ ದುಡಿಮೆಗೆ ತಕ್ಕಂತೆ ಪ್ರತಿಫಲ ಸಿಗುತ್ತಿಲ್ಲ. ಒಟ್ಟಾರೆ ಹೈನುಗಾರಿಕೆಗೂ ಕುತ್ತು ತರುವ ಪ್ರಯತ್ನ ಗಳು ನಡೆಯುತ್ತಿವೆ’. ಇದು ದೊಡ್ಡಬಳ್ಳಾಪುರದ ರೈತ ಮುಖಂಡ ಆರ್. ಸತೀಶ್ ಅವರ ನೋವಿನ ನುಡಿಗಳಿವು.

‘ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಸರಾಸರಿ ₹40ರಿಂದ ₹50 ವೆಚ್ಚವಾಗುತ್ತದೆ. ಕೊಬ್ಬಿನ ಅಂಶ (ಎಸ್‌ಎನ್‌ಎಫ್) 8.5 ಇದ್ದರೆ ಮಾತ್ರ ಉತ್ತಮ ದರ ನೀಡಲಾಗುತ್ತದೆ. ಖಾಸಗಿ ಡೇರಿಗಳಲ್ಲಿ ದರ ನಿಗದಿಗೆ ಇರುವ ಮಾನದಂಡಗಳು ಕಡಿಮೆ. ಹೀಗಾಗಿಯೇ ರೈತರು ಖಾಸಗಿ
ಯವರತ್ತ ಒಲವು ತೋರುತ್ತಿದ್ದಾರೆ’ ಎಂದು ಸತೀಶ್ ವಿವರಿಸುತ್ತಾರೆ.

ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸುವಂತೆ ರೈತರ ಬೇಡಿಕೆಯಿದೆ. ತಮಿಳುನಾಡಿನಲ್ಲಿ ಹಾಲು ಶೇಖರಣೆ ದರವನ್ನು ₹35ರಿಂದ ₹38ಕ್ಕೆ ಹೆಚ್ಚಿಸಲಾಗಿದೆ. ಕೇರಳದಲ್ಲಿ 8.5 ಎಸ್‌ಎನ್‌ಎಫ್‌ಗೆ ₹43.98 ದರ ನಿಗದಿ ಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಒಕ್ಕೂಟಗಳು ಪ್ರತಿ ಲೀಟರ್‌ಗೆ ಸರಾಸರಿ ₹ 25ರಿಂದ ₹ 32 ಮಾತ್ರ ನೀಡುತ್ತಿವೆ.

ಬಮುಲ್ ವ್ಯಾಪ್ತಿಯಲ್ಲಿ 8 ಎಸ್‌ಎನ್‌ಎಫ್ ಇದ್ದರೆ ₹32.15 ನೀಡಲಾಗುತ್ತಿದೆ. ಬೆಳಗಾವಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲೂ ಕಳೆದ ಅಕ್ಟೋಬರ್ 11ರಿಂದ ಪ್ರತಿ ಲೀಟರ್‌ಗೆ ₹ 2 ಕಡಿಮೆ ಮಾಡಲಾಗಿದೆ. 8.5 ಎಸ್‌ಎನ್‌ಎಫ್ ಇದ್ದರೆ ಮಾತ್ರ ರೈತರಿಗೆ ₹31.10 ದೊರೆಯುತ್ತದೆ. ಮಂಡ್ಯ, ತುಮಕೂರು ಸೇರಿದಂತೆ ಬಹುತೇಕ ಯೂನಿಯನ್‌ಗಳು ₹32 ನೀಡುತ್ತಿವೆ.

ಹಾಲು ಒಕ್ಕೂಟಗಳು ಕಡಿಮೆ ದರ ನಿಗದಿಪಡಿಸಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ನೀಡುವ ಖಾಸಗಿ ಡೇರಿಗಳ ಪ್ರಾಬಲ್ಯ ದಿನೇ ದಿನೇ ಹೆಚ್ಚುತ್ತಿದೆ. ಪ್ರಮುಖವಾಗಿ ಚಾಮರಾಜನಗರ, ಕೋಲಾರ, ತುಮಕೂರು, ಬೆಳಗಾವಿ ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲು ಶೇಖರಣೆ ನಕಾರಾತ್ಮಕ ಬೆಳವಣಿಗೆ ಇದೆ. ಬೆಂಗಳೂರಿನಲ್ಲೇ ಪ್ರತಿ ದಿನ 45 ಲಕ್ಷ ಲೀಟರ್‌ಗೆ ಬೇಡಿಕೆ ಇದ್ದರೂ, ಬಮುಲ್ 35 ಲಕ್ಷ ಲೀಟರ್ ಹಾಲು ಮಾತ್ರ ಪೂರೈಸುತ್ತಿದ್ದು, ಖಾಸಗಿ ಡೇರಿಗಳು 10 ಲಕ್ಷ ಲೀಟರ್ ವಹಿವಾಟು ನಡೆಸುತ್ತಿವೆ.

ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತ ನಡೆಸಿದರೂ ಪ್ರೋತ್ಸಾಹ ಧನ ಮತ್ತು ಕ್ಷೀರಭಾಗ್ಯ ಸೇರಿದಂತೆ ಒಂದಿಲ್ಲೊಂದು ಯೋಜನೆಗಳ ಮೂಲಕ ಕೆಎಂಎಫ್‌ಗೆ ಆರ್ಥಿಕ ನೆರವು ನೀಡಿವೆ. ಇಡೀ ದೇಶದಲ್ಲೇ ಈ ರೀತಿಯ ನೆರವನ್ನು ಯಾವ ರಾಜ್ಯ ಸರ್ಕಾರಗಳು ಹಾಲು ಒಕ್ಕೂಟಗಳಿಗೆ ನೀಡುತ್ತಿಲ್ಲ.

ಒಟ್ಟಾರೆಯಾಗಿ ಕೆಎಂಎಫ್‌ಗೆ ವಾರ್ಷಿಕ ₹1000 ಕೋಟಿಗೂ ಹೆಚ್ಚು ಮೊತ್ತವನ್ನು ಸರ್ಕಾರವೇ ನೀಡುತ್ತಿದೆ. 2021–22ರಲ್ಲಿ ₹1250 ಕೋಟಿ, 2022–23ರಲ್ಲಿ ₹1200 ಕೋಟಿ ಮೊತ್ತವನ್ನು ನೀಡಲಾಗಿದೆ. ಜತೆಗೆ ಸಿನಿಮಾ ನಟರಾದ ಡಾ.ರಾಜಕುಮಾರ್, ಉಪೇಂದ್ರ, ಪುನೀತ್ ಅವರು ಉಚಿತವಾಗಿ ಕೆಎಂಎಫ್ ಬ್ರ್ಯಾಂಡ್ ರಾಯಭಾರಿಯಾಗಿ ಹಾಲಿನ ಉತ್ಪನ್ನಗಳ ಪ್ರಚಾರ ಮಾಡಿ, ಮಾರಾಟಕ್ಕೆ ನೆರವು ನೀಡಿದ್ದರು. ಇಷ್ಟೆಲ್ಲ ನೆರವು ದೊರೆಯುತ್ತಿದ್ದರೂ ಹೆಚ್ಚಿನ ಖರೀದಿ ದರವನ್ನು ಹಾಲಿಗೆ ಯಾವ ಕಾರಣಕ್ಕೆ ಕೆಎಂಎಫ್ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಹೈನುಗಾರರಿಗೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಕೆಎಂಎಫ್, ಈಗ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಕೆಎಂಎಫ್ ಛಾಪು ಮೂಡಿಸಿದೆ. ಅಮೂಲ್ ನಂತರ ಎರಡನೇ ಅತಿ ದೊಡ್ಡ ಸಹಕಾರ ಸಂಸ್ಥೆ ಕೆಎಂಎಫ್. ಅಮುಲ್ ಪ್ರತಿ ದಿನ ಅಂದಾಜು 1.8 ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿದ್ದರೆ, ಕೆಎಂಎಫ್ ಸುಮಾರು 81 ಲಕ್ಷ ಲೀಟರ್ ಸಂಗ್ರಹಿಸುತ್ತಿದೆ. ಕೆಎಂಎಫ್‌ನ ‘ನಂದಿನಿ’ ಸುಮಾರು 21 ಸಾವಿರ ಕೋಟಿ ಮೌಲ್ಯ ಹೊಂದಿರುವ ಪ್ರತಿಷ್ಠಿತ ಬ್ಯ್ರಾಂಡ್. ‘ನಂದಿನಿ’ಯನ್ನು ಕನ್ನಡಿಗರು ಕೇವಲ ಒಂದು ಉತ್ಪನ್ನವಾಗಿ ಕಂಡಿಲ್ಲ. ಅನ್ನದಾತರು ತಮ್ಮ ಬದುಕಿನ ಮತ್ತು ಗ್ರಾಮೀಣ ಆರ್ಥಿಕತೆಯ ಭಾಗವಾಗಿ ಭಾವನಾತ್ಮಕ ನಂಟು ಹೊಂದಿದ್ದಾರೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳ ಸ್ವಹಿತಾಸಕ್ತಿಯೇ ವಿಜೃಂಭಿಸುತ್ತಿದೆ. ಹಾಲು ಉತ್ಪಾದಕರ
ಸಂಘದಿಂದ ಕೆಎಂಎಫ್‌ವರೆಗಿನ ‘ಸೋರಿಕೆ’ ಅವ್ಯಾಹತವಾಗಿ ನಡೆಯುತ್ತಿದೆ. ‘ರೈತರೇ ‘ಯಜಮಾನ’ರಾಗ
ಬೇಕಾಗಿದ್ದ ಸಂಸ್ಥೆಯ ಆಡಳಿತ ಮಂಡಳಿಯಿಂದ ನೈಜ ಹೈನುಗಾರರನ್ನು ದೂರವೇ ಉಳಿಸುವ ವ್ಯವಸ್ಥೆಯನ್ನು ಸೃಷ್ಟಿಸಿ ರಾಜಕಾರಣಿಗಳು ಕೆಎಂಎಫ್ ಅನ್ನು ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದಾರೆ. ಒಕ್ಕೂಟಗಳ ಆಡಳಿತ ಮಂಡಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ ನೈಜ ರೈತರ ಬದಲು ರಿಯಲ್ ಎಸ್ಟೇಟ್ ಕುಳಗಳು, ರೌಡಿಶೀಟರ್ ಹಿನ್ನೆಲೆಯವರೂ ಆಯ್ಕೆಯಾಗುತ್ತಿದ್ದಾರೆ. ದುಂದು ವೆಚ್ಚ, ಭ್ರಷ್ಟಾಚಾರ, ಅನಗತ್ಯ ಸಿಬ್ಬಂದಿ ನೇಮಕಾತಿ, ಸ್ವಜನಪಕ್ಷಪಾತ, ಜಾತಿ ಸಂಕೋಲೆಯಲ್ಲಿ ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ನರಳಿ ನಲುಗಿವೆ‘ ಎನ್ನುವ ಆರೋಪವನ್ನು ಹೆಸರು ಬಹಿರಂಗ ಮಾಡಬಾರದು ಎನ್ನುವ ಶರತ್ತಿನ ಮೇಲೆ ಸಂಸ್ಥೆಯ ಮಾಜಿ ನಿರ್ದೇಶಕರೊಬ್ಬರು ಈ ಆಪಾದನೆ ಮಾಡಿದರು.

ಕೆಎಂಎಫ್ ಮತ್ತು ಹಾಲು ಒಕ್ಕೂಟಗಳ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗುವವರಿಗೆ ಸ್ಥಾನಮಾನ ದೊರೆಯುವ ಜತೆಗೆ, ಹಲವು ರೀತಿಯ ಭತ್ಯೆ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ವಿದೇಶ ಪ್ರವಾಸವೂ ಇವುಗಳಲ್ಲಿ ಮುಖ್ಯ. ಒಂದು ಅವಧಿಯಲ್ಲಿ ಕನಿಷ್ಠ ಒಂದು ಬಾರಿ ವಿದೇಶಿ ಪ್ರವಾಸ ಕೈಗೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರಿಗೆ ₹ 4 ಲಕ್ಷದಿಂದ ₹ 5 ಲಕ್ಷದವರೆಗೆ ವೆಚ್ಚ ಮಾಡಲಾಗುತ್ತದೆ. ಪ್ರವಾಸಕ್ಕೆ ತೆರಳುವ ತಂಡದ ಜತೆ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುತ್ತದೆ. ತಾರಾ ಹೋಟೆಲ್‌ಗಳಲ್ಲೇ ಇವರ ವಾಸ್ತವ್ಯ. ದಕ್ಷಿಣ ಕರ್ನಾಟಕದ ಒಕ್ಕೂಟಗಳೇ ಈ ವಿದೇಶ ಪ್ರವಾಸಗಳನ್ನು ಆಯೋಜಿಸುವುದು ಹೆಚ್ಚು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗೆ ಅಧ್ಯಯನ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಕೆಲವು ಬಾರಿ ಬ್ಯಾಂಕಾಕ್‌ನಂತಹ ‘ಆಕರ್ಷಕ ತಾಣ‘ಗಳು ಸಹ ಪ್ರವಾಸದ ಪಟ್ಟಿಯಲ್ಲಿ ಸೇರ್ಪಡೆಯಾದ ಉದಾಹರಣೆಗಳಿವೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್) ಅಧ್ಯಕ್ಷ ನಂಜೇಗೌಡ ಹಾಗೂ ಹಲವು ನಿರ್ದೇಶಕರು ಮತ್ತು ಅಧಿಕಾರಿಗಳು ಇತ್ತೀಚೆಗೆ ಯುರೋಪ್ ಪ್ರವಾಸ್ ಕೈಗೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ವೈದ್ಯಕೀಯ ಭತ್ಯೆಯನ್ನು ಸಹ ಮನಬಂದಂತೆ ಪಡೆಯಲಾಗುತ್ತಿದೆ ಎನ್ನುವ ದೂರುಗಳು ಸಹ ಇವೆ.

ಹಾಲು ಒಕ್ಕೂಟಗಳಿಗೆ ನಿರ್ದೇಶಕರಾಗಿ ಆಯ್ಕೆಯಾಗಲು ನಡೆಯುವ ಚುನಾವಣೆಯ ವೆಚ್ಚವೂ ಹೆಚ್ಚುತ್ತಿದೆ. ಅಧಿಕಾರ ಹಿಡಿಯುವ ‘ದಾಹ’ದಿಂದ ಚುನಾವಣೆಗೆ ₹25 ಲಕ್ಷದಿಂದ ₹75 ಲಕ್ಷದವರೆಗೆ ಖರ್ಚು ಮಾಡುತ್ತಿದ್ದು, ತೀವ್ರ ಪೈಪೋಟಿ ಇರುವ ಸ್ಥಳಗಳಲ್ಲಿ ₹1 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರಿಗೆ ಆಮಿಷವೊಡ್ಡಿ ಮತ ಪಡೆಯುವ ವ್ಯವಸ್ಥೆಯಿಂದ ಮೂಲ ಆಶಯಕ್ಕೆ ಧಕ್ಕೆ ಬಂದಿದೆ. ಇನ್ನು ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರಾಗಲು ಬಯಸುವವರು ₹50 ಲಕ್ಷದಿಂದ ₹ 1 ಕೋಟಿಗೂ ಹೆಚ್ಚು ಖರ್ಚು ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಎಂಎಫ್ ನಿರ್ದೇಶಕರೊಬ್ಬರು ಹೇಳುತ್ತಾರೆ.

‘ಒಟ್ಟಾರೆ ಒಕ್ಕೂಟದ ಚುನಾವಣೆಗಳು ವ್ಯಾಪಾರದಂತೆ ನಡೆಯುತ್ತಿವೆ. ಚುನಾವಣೆಯಲ್ಲಿನ ಖರ್ಚು ಸರಿದೂಗಿಸಲು ನೇಮಕಾತಿ, ವರ್ಗಾವಣೆ, ಬಡ್ತಿ ಮತ್ತು ಇತರ ಮೂಲಗಳಿಂದ ‘ಬಂಡವಾಳ’ ವಾಪಸ್ ಪಡೆಯುವ ವಾಮಮಾರ್ಗಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರ ಮನೆ ಮೇಲೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿತ್ತು. ಗ್ರಾಮೀಣ ಮಟ್ಟದಲ್ಲೂ ಇಂತಹ ಪರಿಸ್ಥಿತಿ ಸೃಷ್ಟಿಯಾದರೆ ರೈತರ ಬದುಕು ಹಸನಾಗಲು ಹೇಗೆ ಸಾಧ್ಯ’ ಎಂದು ಹಾಲು ಒಕ್ಕೂಟದ ನಿರ್ದೇಶಕರೊಬ್ಬರು ಪ್ರಶ್ನಿಸಿದರು.

ಇನ್ನು, ಸಚಿವ ಸ್ಥಾನ ಸಿಗದೆ ಭಿನ್ನ ಧ್ವನಿ ಮೊಳಗಿಸುವ ಶಾಸಕರನ್ನು ಸಂತೃಪ್ತಿಪಡಿಸಲು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಿಸಿ ಪುನರ್ವಸತಿ ಕಲ್ಪಿಸುವುದು ಕಾಲದಿಂದಲೂ ನಡೆದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಭೀಮನಾಯ್ಕ್ ಅವರು ಈಗ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಇವರು ಪರಾಭವಗೊಂಡಿದ್ದರು.

ಶಾಸಕ ಎಚ್.ಡಿ. ರೇವಣ್ಣ ಅವರು ಸುಮಾರು 30 ವರ್ಷ ಹಾಲು ಒಕ್ಕೂಟ ಮತ್ತು ಕೆಎಂಎಫ್‌ನಲ್ಲಿ ಆಡಳಿತ ನಡೆಸಿ ಹಿಡಿತ ಸಾಧಿಸಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಇವರೇ ಕೆಎಂಎಫ್ ಅಧ್ಯಕ್ಷರಾಗಿದ್ದರು. 2019ರಲ್ಲಿ ಜನತಾ ಪರಿವಾರದ ಪ್ರಾಬಲ್ಯ ನಿಯಂತ್ರಿಸುವಲ್ಲಿ ಯಶಸ್ವಿಯಾದ ಬಿಜೆಪಿಯು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು.

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಮೇಲೆಯೂ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಗಿ ಹಿಡಿತ ಸಾಧಿಸಿದ್ದಾರೆ. ಸಹಜವಾಗಿಯೇ ಅವರು ಸೂಚಿಸಿದ ಅಥವಾ ಬೆಂಬಲಿಸಿದ ವ್ಯಕ್ತಿಯೇ ಈ ಒಕ್ಕೂಟದ ಚುಕ್ಕಾಣಿ ಹಿಡಿಯುತ್ತಾರೆ.

ಶಾಸಕ ಬಾಲಚಂದ್ರ ಅವರು ಸಕ್ರಿಯ ರಾಜಕಾರಣಕ್ಕೆ ಬಂದ ಮೇಲೆ ಕ್ಷೀರೋದ್ಯಮದಲ್ಲಿ ‘ಪ್ರಭಾವಿ’ಯಾದರು. 20 ವರ್ಷಗಳಿಂದ ಬೆಮುಲ್ ಮೇಲೆ ತಮ್ಮದೇ ಪ್ರಭಾವ ಬೀರಿದ್ದಾರೆ. ಅವರ ಬೆಂಬಲದಿಂದಾಗಿಯೇ ವಿವೇಕರಾವ್ ಪಾಟೀಲ ಅವರು ಸತತ ಎರಡನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇಲ್ಲಿ ಇವರಿಬ್ಬರೇ ನಿರ್ಣಾಯಕರು ಎನ್ನುತ್ತಾರೆ ರೈತರು.

ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಹಾಲು ಮಹಾಮಂಡಳಿಗಳು ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ರಾಜಕೀಯ ಹಸ್ತಕ್ಷೇಪ ಮತ್ತು ಅದಕ್ಷತೆಯಿಂದ ಕಾಲಕ್ರಮೇಣ ಖಾಸಗಿ ಡೇರಿಗಳ ಜತೆ ಸ್ಪರ್ಧೆ ನೀಡಲು ವಿಫಲವಾಗಿವೆ. ಇಂತಹ ಆತಂಕ ಕೆಎಂಎಫ್‌ಗೂ ಎದುರಾಗುವ ಸ್ಥಿತಿ ನಿಧಾನವಾಗಿ ನಿರ್ಮಾಣವಾಗುತ್ತಿದೆ. ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಬೇಕಾಗಿದ್ದ ಈ ಸಂಸ್ಥೆಯನ್ನು ಸರ್ಕಾರದ ನಿಯಂತ್ರಣಕ್ಕೆ ದೂಡಲಾಗುತ್ತಿದೆ. ಕೆಎಂಎಫ್ ಮೇಲೆ ಪಶು ಸಂಗೋಪನೆ ಮತ್ತು ಸಹಕಾರ ಇಲಾಖೆಗಳು ಸವಾರಿ ಮಾಡುತ್ತಿವೆ.

ಕೆಎಂಎಫ್ ಮತ್ತು ಹಾಲು ಒಕ್ಕೂಟಗಳಲ್ಲಿ ನಡೆದಿರುವ ನೇಮಕಾತಿಗಳು ಸಹ ಪಾರದರ್ಶಕವಾಗಿ ನಡೆದಿಲ್ಲ ಎನ್ನುವ ಆರೋಪಗಳು ಪ್ರಬಲವಾಗಿ ಕೇಳುತ್ತಿದೆ. ಹಾಲು ಒಕ್ಕೂಟಗಳು ಲಾಭದ ಹಳಿಯಲ್ಲಿ ಇಲ್ಲದಿದ್ದರೂ ಸಿಬ್ಬಂದಿಗಳ ನೇಮಕಕ್ಕೆ ಆದ್ಯತೆ ನೀಡುತ್ತಿವೆ. ‘ತಾಳಿಭಾಗ್ಯ’ದ ಪ್ರಕರಣಗಳು ಸಹ ಇಲ್ಲಿಯೂ ನಡೆದಿವೆ. ತಮ್ಮ ಸಂಬಂಧಿಕರಿಗೆ, ಜಾತಿಯವರಿಗೆ, ಕ್ಷೇತ್ರದವರಿಗೆ ಮತ್ತು ಹಣದ ಥೈಲಿ ನೀಡಿದವರಿಗೆ ಮಣೆ ಹಾಕುತ್ತಿರುವುದು ನಡೆದುಕೊಂಡು ಬಂದಿದೆ.

ನೇಮಕದ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಯದಿದ್ದರೂ, ಪ್ರತಿ ಐದು ವರ್ಷಗಳ ಅವಧಿಯಲ್ಲಿ 200ರಿಂದ 500ರಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೆಲವು ಸಲ ಮೂಲ ವೇತನ ಆಧಾರದ ಮೇಲೆಯೂ ‘ಕಾಂಚಾಣ’ ನಿಗದಿಪಡಿಸಲಾಗುತ್ತಿದೆ. ಉದಾಹರಣೆಗೆ ಮೂಲ ವೇತನ ₹30 ಸಾವಿರ ಇದ್ದರೆ ₹30 ಲಕ್ಷ ‘ಕಾಂಚಾಣ’ವನ್ನು ನಿಗದಿಪಡಿಸಲಾಗುತ್ತಿದೆ ಎನ್ನುವ ಆಪಾದನೆಯಿದೆ. ಕೆಎಂಎಫ್‌ನಲ್ಲಿ ಇತ್ತೀಚೆಗೆ 487 ಮಂದಿಯ ನೇಮಕಾತಿ ಕೈಗೊಳ್ಳಲಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಒಂದು ವಾರ ಮೊದಲು ತರಾತುರಿಯಲ್ಲಿ ನೇಮಕಾತಿ ಆದೇಶ ನೀಡಲಾಯಿತು. ಬೆಳಗಾವಿ ಹಾಲು ಒಕ್ಕೂಟದಲ್ಲೂ ಇತ್ತೀಚೆಗೆ 46 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೋಚಿಮುಲ್‌ನಲ್ಲಿ 75 ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿರುವ ಆರೋಪ ಮಾಡಲಾಗಿತ್ತು.

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟಕ್ಕೆ (ಕೋಚಿಮುಲ್) ಇತ್ತೀಚೆಗೆ ನಡೆದ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳೇ ಪತ್ತೆ ಮಾಡಿದ್ದರು. ‘ನೇಮಕಾತಿಯಲ್ಲಿ ಸಂದರ್ಶನದ ಅಂಕಗಳನ್ನು ತಿದ್ದಲಾಗಿದ್ದು, ಪ್ರತಿ ಹುದ್ದೆಯನ್ನು ₹ 20 ಲಕ್ಷದಿಂದ ₹ 30 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬುದನ್ನು ಕೋಚಿಮುಲ್ ನಿರ್ದೇಶಕರು ಹಾಗೂ ನೇಮಕಾತಿ ಸಮಿತಿ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆ ಹೇಳಿ ಒಪ್ಪಿಕೊಂಡಿದ್ದಾರೆ’ ಎಂಬುದಾಗಿ ಜಾರಿ ನಿರ್ದೇಶನಾಲಯವು ತಿಳಿಸಿತ್ತು. ಕೋಚಿಮುಲ್ ಅಧ್ಯಕ್ಷರಾಗಿರುವ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ 14 ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಅತ್ಯಂತ ಪ್ರಾಮುಖ್ಯತೆ ಹೊಂದಿರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ಚರ್ಚೆಗೆ ಗ್ರಾಸವಾಗಿದೆ. ಐಎಎಸ್ ಅಧಿಕಾರಿಗಳಿಗಿಂತ ತಾಂತ್ರಿಕವಾಗಿ ಪರಿಣತಿ ಹೊಂದಿರುವ ಸಂಸ್ಥೆಯ ಹಿರಿಯರನ್ನೇ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಬೇಕು ಎನ್ನುವ ವಾದಕ್ಕೆ ಬೆಲೆ ಸಿಕ್ಕಿಲ್ಲ. ಇಲ್ಲಿಯೂ ತಮ್ಮ ‘ಅಚ್ಚುಮೆಚ್ಚಿನ’ ಅಧಿಕಾರಿಗಳನ್ನೇ ನೇಮಿಸುವ ಸಂಪ್ರದಾಯ ದಶಕಗಳಿಂದ ನಡೆಯುತ್ತಾ ಬಂದಿದೆ. ಸಹಕಾರ ಇಲಾಖೆಯ ಅಧಿಕಾರಿಗಳನ್ನು ವ್ಯವಸ್ಥಾಪಕ ನಿರ್ದೆಶಕರನ್ನಾಗಿ ನೇಮಿಸಲೇಬಾರದು ಎನ್ನುವ ಪ್ರಬಲ ವಾದವೂ ಇದೆ. ಸಹಕಾರ ಇಲಾಖೆಯಿಂದ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಗೊಂಡ ಸಂದರ್ಭದಲ್ಲೇ ಕೆಎಂಎಫ್ ಅತಿ ಹೆಚ್ಚು ಸಂಕಷ್ಟಗಳನ್ನು ಅನುಭವಿಸಿದ ಉದಾಹರಣೆಗಳಿವೆ. ಹಾಲು ಮತ್ತು ತುಪ್ಪದ ಕೊರತೆಯ ಸಮಸ್ಯೆಗಳು ಸಹ ಸೃಷ್ಟಿಯಾಗಿದ್ದವು. 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದ ಸಂದರ್ಭದಲ್ಲೂ ಸಮರ್ಪಕವಾಗಿ ಗ್ರಾಹಕರಿಗೆ ಸರಬರಾಜು ಆಗಲಿಲ್ಲ. ಸಹಕಾರ ಇಲಾಖೆಯ ಎಂ.ಡಿ. ಇದ್ದಾಗಲೇ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹಲವು ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಿ ಬಲಿಷ್ಠ ವ್ಯಕ್ತಿಗಳಿಗೆ ಧಾರೆ ಎರೆದುಕೊಡಲಾಯಿತು ಎನ್ನುವ ಆರೋಪ ಕೆಎಂಎಫ್‌ನಲ್ಲಿ ಕೇಳಿಬಂದಿತ್ತು.

ಕೆಎಂಎಫ್ ಒಟ್ಟು 19 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸುವ ಘಟಕಗಳನ್ನು ಸ್ಥಾಪಿಸಿದೆ. ರಾಮನಗರ, ಚನ್ನರಾಯಪಟ್ಟಣ, ಮದರ್ ಡೇರಿ, ಡೆಂಪೋ ಡೇರಿಗಳಲ್ಲಿ ಹಾಲನ್ನು ಪುಡಿಯಾಗಿ ಪರಿವರ್ತಿಸುವ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಆದರೂ, ಬೆಂಗಳೂರು ಹಾಲು ಒಕ್ಕೂಟ ವತಿಯಿಂದ ಕನಕಪುರದಲ್ಲಿ 6 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಪುಡಿ ತಯಾರಿಸುವ ಘಟಕ ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ. ಇದೇ ರೀತಿ ಚನ್ನರಾಯಪಟ್ಟಣದಲ್ಲಿ ಘಟಕವಿದ್ದರೂ ಹಾಸನದಲ್ಲಿ ಮತ್ತೊಂದು ಘಟಕ ಸ್ಥಾಪಿಸಲಾಗಿದೆ. ಕೆಎಂಎಫ್‌ನ ಚಲ್ಲಘಟ್ಟ ಜಾಗದಲ್ಲಿ ಬೆಣ್ಣೆಯನ್ನು ‘ಡಿಫ್ರೀಜ್’ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಸಾಮಾನ್ಯವಾಗಿ ಬೆಣ್ಣೆ ಹೆಚ್ಚುವರಿಯಾಗಿ ಉಳಿಯವುದೇ ಇಲ್ಲ. ಹೀಗಿದ್ದರೂ, ಈ ಯೋಜನೆಯ ಅಗತ್ಯತೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಕೆಎಂಎಫ್ ಘಟಕಗಳಲ್ಲೇ ಪಶು ಆಹಾರ ತಯಾರಿಸುವ ಸಾಮರ್ಥ್ಯ ಇದ್ದರೂ ಖಾಸಗಿ ಸಹಭಾಗಿತ್ವದಲ್ಲಿ ಕೆ.ಆರ್. ಪೇಟೆ ಮತ್ತು ಅರಕಲಗೂಡಿನಲ್ಲಿ ಹೊಸದಾಗಿ ಪಶು ಆಹಾರ ತಯಾರಿಕ ಘಟಕವನ್ನು ಸಹ ಸ್ಥಾಪಿಸಲಾಗುತ್ತಿದೆ.

ಗುಜರಾತ್‌ನ ಅಮೂಲ್, ತೆಲಂಗಾಣದ ಹೆರಿಟೇಜ್ ಮತ್ತು ದೊಡ್ಲ, ತಮಿಳುನಾಡಿನ ಅರೋಕ್ಯ ಹಾಲು ಕರ್ನಾಟಕದಲ್ಲಿ ‘ನಂದಿನಿ’ಗೆ ಪೈಪೋಟಿ ನೀಡುತ್ತಿವೆ. ಕೇರಳದಲ್ಲಿ ‘ನಂದಿನಿ’ ಅತ್ಯಂತ ಜನಪ್ರಿಯವಾಗಿದ್ದು, ಪ್ರತಿ ನಿತ್ಯ 2 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಪೂರೈಕೆಯಾಗುತ್ತಿದೆ. ಅತಿ ಹೆಚ್ಚು ಬೇಡಿಕೆ ಇರುವ ಸ್ಥಳಗಳಲ್ಲಿ ದೊರೆಯುವ ಅವಕಾಶವನ್ನು ಹೆರಿಟೇಜ್, ಅರೋಕ್ಯ, ದೊಡ್ಲ ಮುಂತಾದ ಖಾಸಗಿ ಡೇರಿಗಳು ಬಳಸಿಕೊಂಡು, ಮಾರುಕಟ್ಟೆಯನ್ನು ಆಕ್ರಮಿಸುತ್ತಿವೆ. ಈ ಬೇಡಿಕೆಯನ್ನು ಸಮಗಟ್ಟಿ ನಂದಿನಿಯ ಪಾರುಪತ್ಯ ಉಳಿಸಿಕೊಳ್ಳಬೇಕಾಗಿದೆ.

ಕ್ಷೀರಭಾಗ್ಯದಲ್ಲೂ ಅಕ್ರಮ

ಕ್ಷೀರಭಾಗ್ಯ ಯೋಜನೆಯ ಅನುಷ್ಠಾನದಲ್ಲಿಯೂ ಅಕ್ರಮಗಳು ನಡೆದ ಪ್ರಕರಣಗಳು ವರದಿಯಾಗಿವೆ.

ಶಾಲೆಗಳ ಮುಖ್ಯಸ್ಥರು, ಬಿಇಒಗಳು ಗಮನಹರಿಸದ ಪರಿಣಾಮ ಹಾಲಿನ ಪುಡಿಯನ್ನು ಖಾಸಗಿ ದಿನಸಿ ಅಂಗಡಿಗಳಿಗೆ, ಬೇಕರಿಗಳಿಗೆ, ಐಸ್‌ಕ್ರೀಂ ಮತ್ತು ಚಾಕೊಲೇಟ್ ತಯಾರಿಸಲು ಅರ್ಧ ಬೆಲೆಗೆ ಪೂರೈಸುವ ಮಾಫಿಯಾ ತಲೆ ಎತ್ತಿದೆ.

ಹಾಲಿನ ಪುಡಿಯ ತೂಕದಲ್ಲೇ ವ್ಯತ್ಯಾಸ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಗುಣಮಟ್ಟದ ಹಾಲು ನೀಡದೆ ನೀರು ಮಿಶ್ರಣ ಮಾಡಿ ಪೂರೈಸುತ್ತಿರುವ ಪ್ರಕರಣಗಳು ನಡೆದಿವೆ.

ಹಾಲಿನ ಪುಡಿಯ ಪ್ಯಾಕಿಂಗ್ ಅನ್ನು ಖಾಸಗಿಯವರಿಗೆ ವಹಿಸಿದ್ದರಿಂದ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಲಬುರಗಿ, ಧಾರವಾಡ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಲಿನ ಪುಡಿಯ ಅಕ್ರಮ ವ್ಯವಹಾರ ಹೆಚ್ಚು ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಆದರೂ, ಹಾಲಿನ ಪುಡಿಯನ್ನು ಸಮರ್ಪಕವಾಗಿ ಪ್ಯಾಕ್ ಮಾಡುವ ವ್ಯವಸ್ಥೆ ರೂಪಿಸಿಲ್ಲ.

‘ನಷ್ಟದಲ್ಲಿ ಬಹುತೇಕ ಹಾಲು ಒಕ್ಕೂಟಗಳು’

‘ರಾಜ್ಯದಲ್ಲಿನ ಬಹುತೇಕ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಬಮುಲ್ ಈಗ ಸುಮಾರು ₹ 50 ಕೋಟಿ ನಷ್ಟದಲ್ಲಿದೆ. ಈ ಮೊದಲು ₹ 70 ಕೋಟಿ ನಷ್ಟದಲ್ಲಿತ್ತು. ರೈತರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ ₹ 2ರಷ್ಟು ಕಡಿಮೆ ಮಾಡಿದ್ದರಿಂದ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ’ ಎಂದು ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಹೇಳುತ್ತಾರೆ.

‘ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ರೈತರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹40 ನೀಡಬೇಕು. ಆಗ ಮಾತ್ರ ಹೈನೋದ್ಯಮಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಬೇರೆ ರಾಜ್ಯಗಳಲ್ಲಿ ಗ್ರಾಹಕರಿಗೆ ₹60 ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಕನಿಷ್ಠ ₹50 ದರ ನಿಗದಿ ಮಾಡಿದರೆ ಒಕ್ಕೂಟಗಳು ಉಳಿಯುತ್ತವೆ. ಒಕ್ಕೂಟಗಳೇ ದರ ನಿಗದಿಪಡಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಸರ್ಕಾರದ ನಿಯಂತ್ರಣಗಳಿಂದ ಮುಕ್ತವಾಗಬೇಕು’ ಎಂದು ಪ್ರತಿಪಾದಿಸುತ್ತಾರೆ.

‘ಒಂದು ಲೀಟರ್ ಹಾಲಿನ ಪುಡಿ ತಯಾರಿಸಲು ಪ್ರತಿ ಕೆ.ಜಿಗೆ ₹360 ವೆಚ್ಚವಾಗುತ್ತದೆ. ಸರ್ಕಾರವು ₹285 ಕ್ಕೆ ಖರೀದಿ ಮಾಡುತ್ತದೆ. ಇದರಿಂದ, ಕೆ.ಜಿಗೆ ₹75 ನಷ್ಟವಾಗುತ್ತಿದ್ದು, ತಿಂಗಳಿಗೆ ₹2.5 ಕೋಟಿಯಷ್ಟು ನಷ್ಟವಾಗುತ್ತಿದೆ. ಗ್ರಾಹಕರಿಗೆ ಕಡಿಮೆ ದರಕ್ಕೆ ಹಾಲು ಮಾರಾಟ ಮಾಡುವುದರಿಂದ ₹7 ಕೋಟಿ ನಷ್ಟವಾಗುತ್ತಿದೆ. ಇದರಿಂದ ಒಟ್ಟಾರೆ ಬಮುಲ್‌ಗೆ ತಿಂಗಳಿಗೆ ₹9.5 ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ’ ಎಂದು ಹೇಳುತ್ತಾರೆ.

‘ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮನ್‌ಮುಲ್) ₹ 24 ಕೋಟಿ ನಷ್ಟದಲ್ಲಿದೆ. ಹೀಗಾಗಿ, ಹಾಲು ಖರೀದಿ ದರವನ್ನು ಲೀಟರ್‌ಗೆ ₹1.50 ಇಳಿಕೆ ಮಾಡಲಾಗಿದೆ’ ಎಂದು ಮನ್‌ಮುಲ್ ಅಧ್ಯಕ್ಷ ಬಿ.ಬೋರೇಗೌಡ ವಿವರಿಸುತ್ತಾರೆ.

‘ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಹಾಲಿಗೆ ₹5 ಕಡಿಮೆ ಮಾಡಿದ್ದಾರೆ. ಹೀಗಾಗಿ ಅಲ್ಲಿ ಹಾಲು ಮಾರಾಟವಾಗದೇ ಅದನ್ನು ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಸರಬರಾಜು ಆಗುತ್ತಿದೆ. ನಮ್ಮ ಹಾಲು ಅವರಿಗಿಂತ ಹೆಚ್ಚು ದರ ಇರುವ ಕಾರಣ ಜನ ಅಲ್ಲಿಯ ಹಾಲನ್ನೇ ಖರೀದಿಸುವುದು ಹೆಚ್ಚು. ಇದರೊಂದಿಗೆ ಏಜೆಂಟರಿಗೆ ಖಾಸಗಿ ಒಕ್ಕೂಟಗಳು ಹೆಚ್ಚಿನ ಮಾರ್ಜಿನ್ ನೀಡುತ್ತಿವೆ. ಹಾಗಾಗಿ, ಅವರು ನಂದಿನಿ ಹಾಲು ಮಾರಾಟಕ್ಕೆ ತೆಗೆದುಕೊಳ್ಳಲು ಹಿಂದಡಿ ಇಟ್ಟಿದ್ದಾರೆ. ಹೀಗಾಗಿ ಬೆಳಗಾವಿ ಒಕ್ಕೂಟಗಳು ಹಾನಿಯಲ್ಲಿವೆ’ ಎಂದು ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಹೇಳುತ್ತಾರೆ.

ರೈತರ ಹಿತಾಸಕ್ತಿ ಕಾಪಾಡಲು ಕೆಎಂಎಫ್ ಸದಾ ಬದ್ಧವಾಗಿದೆ. ಕೆಎಂಎಫ್ ನೀಡುತ್ತಿರುವ ದರ ಕಡಿಮೆ ಇದೆ ಎಂದು ಭಾವಿಸಿಕೊಂಡರೂ ಖಾಸಗಿ ಡೇರಿಗಳ ಕಡೆ ಹೈನುಗಾರರು ವಾಲಿಲ್ಲ. ಗಡಿ ಜಿಲ್ಲೆಗಳಲ್ಲಿ ಬೇರೆ ರಾಜ್ಯಗಳ ಹಾಲು ಪೂರೈಕೆ ಸಾಮಾನ್ಯವಾದರೂ ಅದು ತಾತ್ಕಾಲಿಕವಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಕೆಎಂಎಫ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

-ಎಂ.ಕೆ. ಜಗದೀಶ್, ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್

‘ಕೆಎಂಎಫ್ ಹಿತಾಸಕ್ತಿ ಮುಖ್ಯವಾಗಲಿ’

ಗ್ರಾಹಕರು, ಹಾಲು ಉತ್ಪಾದಕರ ವಿಶ್ವಾಸ ಗಳಿಸುವ ಜತೆಗೆ ಕೆಎಂಎಫ್ ಹಿತಾಸಕ್ತಿ ಕಾಪಾಡುವುದು ಮುಖ್ಯವಾಗಬೇಕು. ಆದರೆ, ಲೂಟಿ ನಡೆಯುತ್ತಿದೆ. ಸಕಾಲಕ್ಕೆ ಮಂಡಳಿಯ ಸಭೆಗಳು ನಡೆಯುತ್ತಿಲ್ಲ. ನಾನು ಅಧಿಕಾರದಲ್ಲಿದ್ದಾಗ ಎಂಟು ಖಾಸಗಿ ಪಶು ಆಹಾರ ಕಾರ್ಖಾನೆಗಳನ್ನು ಮುಚ್ಚಿಸಿದ್ದೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಹಾಸನ ಹಾಲು ಒಕ್ಕೂಟ ಅತಿ ಹೆಚ್ಚು ದರವನ್ನು ನೀಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಳವಾಗಿದ್ದರಿಂದ ಅನಿವಾರ್ಯ ಕಾರಣಕ್ಕೆ ರೈತರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ ₹1 ಇಳಿಕೆ ಮಾಡಲಾಗಿದೆ

-ಎಚ್.ಡಿ. ರೇವಣ್ಣ ಶಾಸಕ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷ

ಪೂರಕ ಮಾಹಿತಿ: ಡಿ.ಎಂ. ಕುರ್ಕೆ ಪ್ರಶಾಂತ್, ಸಂತೋಷ ಚಿನಗುಡಿ, ಅಮೃತ ಕಿರಣ, ಮೋಹನ್ ಸಿ. ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.