‘ಏನ್ ಮೇಡಂ, ನಾವೇನು ಬೇಕಂತ ಬೇರೆಯವರಿಗೆ ಜ್ವರ ತಂದು ಕೊಡ್ತೀವಾ? ನಿಮ್ ಕೊರೋನಾ ಬಿಟ್ರೆ ಬೇರೆ ಕಾಯಿಲೆಗಳು ಕಾಯಿಲೇನೇ ಅಲ್ವಾ?’

ಹಿಂದೆಲ್ಲಾ ಕಾದಂಬರಿಗಳಲ್ಲಿ, ಚರಿತ್ರೆಯಲ್ಲಿ, ವೈದ್ಯಕೀಯ ಪಠ್ಯ ಪುಸ್ತಕಗಳಲ್ಲಿ ಪ್ಲೇಗ್ ಬಗ್ಗೆ ಓದಿದ್ದೆ. ಪ್ಲೇಗ್ ಮುಖವಾಡವನ್ನೇ ಧರಿಸುವ ಪ್ಲೇಗ್ ವೈದ್ಯರ ಬಗ್ಗೆ ಓದಿ ‘ಓ, ಆ ಕಾಲದಲ್ಲಿ ಹೀಗೆ ಮಾಡುತ್ತಿದ್ದರೇ?’ ಎಂದು ಅಚ್ಚರಿಪಟ್ಟಿದ್ದೆ. ಬೇರೆ ಬೇರೆ ದೇಶಗಳಲ್ಲಿ ವಿವಿಧ ಕಾಯಿಲೆಗಳು ಬಂದರೂ ಅವು ಈ ಪ್ಯಾಂಡೆಮಿಕ್ - ಎಲ್ಲೆಡೆಯೂ ಹರಡುವ ಕಾಯಿಲೆಗಳಾಗಿರಲಿಲ್ಲ.

ಒಮ್ಮೆ 2009ರಲ್ಲಿ, ನಾನು ಫೆಲೋಷಿಪ್ಗಾಗಿ ಜಪಾನ್ನ ಕೋಬೆಗೆ ಹೊರಟಿದ್ದೆ. ಹೊರಡುವ ದಿನ ಒಂದುಇಮೇಲ್ ಬಂತು. ‘ಇಲ್ಲಿ ಎಚ್1ಎನ್1 ಔಟ್ಬ್ರೇಕ್ ಆಗಿದೆ. ದಯಮಾಡಿ ಬರಬೇಡಿ. ಒಂದೊಮ್ಮೆ ಜಪಾನ್ಗೆ ಬಂದುಬಿಟ್ಟಿದ್ದರೆ ತಕ್ಷಣ ಎಂಬೆಸಿಯನ್ನು ಸಂಪರ್ಕಿಸಿ’. ನನಗೆ ಬೇಸರ. ನನ್ನ ಕುಟುಂಬದ ತುಂಬ ಇರುವ ವೈದ್ಯರು ‘ತಪ್ಪಿದ್ದು ಅದೃಷ್ಟ ಎಂದುಕೋ, ಪರದೇಶದಲ್ಲಿ ಕಾಯಿಲೆಯಿಂದ ನರಳುವ ಸ್ಥಿತಿ ನೆನೆಸಿಕೋ’ ಎಂದರೂ ನನಗೆ ಸಮಾಧಾನವಿರಲಿಲ್ಲ!

ಪ್ಯಾಂಡೆಮಿಕ್ನಂತೆಯೇ, ಕ್ವಾರಂಟೈನ್ ಬಗೆಗೂ ಅಷ್ಟೆ. ವೈಜ್ಞಾನಿಕವಾಗಿ ಈ ವಿಧಾನದ ಬಗೆ ಸಮಾಜೋ ವೈದ್ಯಕೀಯ ವಿಜ್ಞಾನದ ‘ಪಾರ್ಕ್ ಎಂಡ್ ಪಾರ್ಕ್’ ಎಂಬ ಪ್ರಸಿದ್ಧ ಪುಸ್ತಕದಲ್ಲಿ ಎಂ.ಬಿ.ಬಿ.ಎಸ್. ಮೂರನೇ ವರ್ಷದಲ್ಲಿ ಸಿಕ್ಕಾಪಟ್ಟೆ ಓದಿದ್ದೆವು. ಯಾವ ರೋಗಕ್ಕೆ ಎಷ್ಟು ದಿನ, ಹೇಗೆ ಕ್ವಾರಂಟೈನ್ ಮಾಡಬೇಕು ಎಂಬುದನ್ನೆಲ್ಲ ಅರೆದು ಕುಡಿದಿದ್ದೆವು. ಆದರೆ ಅನುಭವಿಸಿರಲಿಲ್ಲ; ಅನುಭವಿಸಿದವರನ್ನು ನೋಡಿರಲಿಲ್ಲ.

ಕ್ವಾರಂಟೈನ್ ಬಗೆಗೂ ಮೊದಲ ಬಾರಿ ಚಿಕ್ಕ ಚಿಕ್ಕ ಅನುಭವಗಳಾಗಿದ್ದು ವಿದೇಶದಲ್ಲಿಯೇ. ಮೊದಲ ಬಾರಿ ಆಸ್ಟ್ರೇಲಿಯಾಕ್ಕೆ ಹೋಗಿ ಇಳಿದಾಗ ಏರ್ಪೋರ್ಟ್ನಲ್ಲಿ ಎಲ್ಲೆಡೆ ‘ಅನಿಮಲ್ ಕ್ವಾರಂಟೈನ್’ ಎಂಬ ಬೋರ್ಡುಗಳು. ನಾಲಿಗೆ ರುಚಿ- ಸಸ್ಯಾಹಾರದ ಸಮಸ್ಯೆ ಎರಡೂ ಸೇರಿ ನಾನು ಹೊತ್ತೊಯ್ದ ಹಲವು ಚಟ್ನಿಪುಡಿ- ಕೊಬ್ಬರಿ ಮಿಠಾಯಿ- ಸಾಂಬಾರ್ ಪುಡಿಗಳನ್ನು ಅವುಗಳಲ್ಲಿ ಹಾಲಿನ ಉತ್ಪನ್ನ ಇರಬಹುದೆಂಬ ಸಂಶಯದಿಂದ, ಕಸ್ಟಮ್ಸ್ನವರು ನಿರ್ದಾಕ್ಷಿಣ್ಯವಾಗಿ ಕಸದ ಬುಟ್ಟಿಗೆ ಎಸೆದಿದ್ದರು. ‘ನಮ್ಮ ದೇಶದ ಬಗ್ಗೆ ನಾವು ಎಚ್ಚರ ವಹಿಸಬೇಡವೇ? ನೀನು ತಂದ ವಸ್ತುವಿನಲ್ಲಿ ಏನಾದರೂ ರೋಗಾಣು ಇದ್ದು ಅದು ನಮ್ಮ ದೇಶದ ಪ್ರಾಣಿಗಳಿಗೆ ತಗುಲಿದರೆ ಏನು ಗತಿ?’ ಎಂದ ಕಸ್ಟಮ್ಸ್ ಆಫೀಸರಳ ಮಾತು ಒಪ್ಪಿದರೂ, ನನಗ್ಯಾಕೋ ‘ಇವರದ್ದು ಅತಿಯಾಯಿತು’ ಎನಿಸಿಬಿಟ್ಟಿತ್ತು.

ಪ್ರತಿ ಬಾರಿ ಆಸ್ಟ್ರೇಲಿಯಾಕ್ಕೆ ಹೋಗುವಾಗಲೂ ಫ್ಲೈಟಿನಲ್ಲೇ ನನಗೆ ಅವರ ‘Declare or beware’ (ಘೋಷಿಸಿ ಇಲ್ಲವೇ ಶಿಕ್ಷೆಗಾಗಿ ಕಾದಿರಿ), ‘Declare or you can have severe delays’ (ಘೋಷಿಸಿ ಇಲ್ಲವೇ ತೀರ ತಡ ಮಾಡಿಕೊಳ್ಳಿ) ಎಂಬ ವಾಕ್ಯಗಳೇ ನೆನಪಾಗಿ ಹೆದರಿಸುತ್ತಿದ್ದವು. ದುಡ್ಡು ಖರ್ಚಾದರೂ, ಅರೆಹೊಟ್ಟೆಯಾದರೂ ಪರವಾಗಿಲ್ಲ ಎಂದು ವಿದೇಶಗಳಿಗೆ ಯಾವ ತಿನಿಸೂ ತೆಗೆದುಕೊಂಡು ಹೋಗುತ್ತಿರಲಿಲ್ಲ.

ಆದರೆ ಈಗ ಕ್ವಾರಂಟೈನ್, ಪ್ಯಾಂಡೆಮಿಕ್ ಗಳೆಲ್ಲದರ ಬಗ್ಗೆ ಮತ್ತೆ ಓದುವ, ಬರೀ ಓದುವುದಷ್ಟೇ ಅಲ್ಲ, ಸ್ವತಃ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ವೈದ್ಯೆಯಾಗಿಯಂತೂ ಕೊರೊನಾದ ಪ್ಯಾಂಡೆಮಿಕ್ ನೀಡುತ್ತಿರುವ ಅನುಭವಗಳು ವೈವಿಧ್ಯಮಯ. ಕೆಲವೊಮ್ಮೆ ಭಯ- ದುಃಖ, ನಿಸ್ಸಹಾಯಕತೆಯನ್ನು ಮೂಡಿಸಿದರೆ, ಆಗಾಗ್ಗೆ ನಗೆ ಬರಿಸುವ ಅನುಭವಗಳೂ ನಡೆಯುತ್ತವೆ.

ನಾನಿರುವ ಶಿವಮೊಗ್ಗೆ ಸದ್ಯಕ್ಕೆ ಹಸಿರು ವಲಯದಲ್ಲಿದೆ. ಆದರೆ ನನ್ನಲ್ಲಿ ಬರುವ ರೋಗಿಗಳು ಯಾವ ವಲಯದಿಂದ ಬರುವರೆಂದು ಹೇಳಲು ಸಾಧ್ಯವಿಲ್ಲ. ಅಂತಹ ಬೇರೆ ಜಿಲ್ಲೆಯಿಂದ ಬರಬೇಕಾದ ಒಬ್ಬ ರೋಗಿ, ಹರಸಾಹಸ ಮಾಡಿ, ಅಲ್ಲಿನ ಜಿಲ್ಲಾಧಿಕಾರಿಯ ಪರವಾನಗಿ ಪಡೆದು ಬಂದೇ ಬಿಟ್ಟರು. ಅಷ್ಟೆಲ್ಲಾ ಪ್ರಯತ್ನ ಮಾಡಿ, ಕೆಲವು ದಿನಗಳ ಮಾತ್ರೆಯೂ ಸಿಕ್ಕದೇ ರೋಸಿ ಹೋಗಿ, ಅಂತೂ ಗೆದ್ದವರಂತೆ ಬಂದು ಕುಳಿತವರಿಗೆ ನಾನೆಂದೆ– ‘ನಿಮ್ಮ ಊರಿನಲ್ಲಿ ಸಿಗಬಹುದಾದ ಮಾತ್ರೆಯನ್ನು ನಾನು ಫೋನಿನಲ್ಲೇ ಹೇಳುತ್ತಿದ್ದೆ. ಅಥವಾ ನಿಮ್ಮ ಹತ್ತಿರದ ವೈದ್ಯರ ಬಳಿ ಹೋಗಿ ನನಗೆ ಫೋನ್ ಮಾಡಿಸಬಹುದಾಗಿತ್ತು. ಈಗ ಏಕೆ ಬರಬೇಕಾಗಿತ್ತು? ನಿಮಗೂ, ಬೇರೆಯವರಿಗೂ ಇದು ಅಪಾಯವಲ್ಲವೇ?’. ಅದಕ್ಕೆ ಆ ರೋಗಿಯ ಮನೆಯವರಿಗೆ ಕೆರಳಿಯೇ ಹೋಯ್ತು!

ಅವರೆಂದರು, ‘ಏನ್ ಮೇಡಂ, ನಾವೇನು ಬೇಕಂತ ಬೇರೆಯವರಿಗೆ ಜ್ವರ ತಂದು ಕೊಡ್ತೀವಾ? ನಿಮ್ ಕೊರೋನಾ ಬಿಟ್ರೆ ಬೇರೆ ಕಾಯಿಲೆ ಕಾಯಿಲೇನೇ ಅಲ್ವಾ? ಕೊರೋನಾ ಆಗದೆ ಬೇರೆ ಕಾಯಿಲೆಯಿಂದ ಸತ್ರೆ ಏನ್ಮಾಡ್ತೀರಾ? ಇವರು ರಾತ್ರಿ ನಿದ್ರೆನೇ ಮಾಡ್ತಿಲ್ಲ, ಆ ಕಡೆಯಿಂದ ಈ ಕಡೆ ಓಡಾಡ್ತಾನೇ ಇರ್ತಾರೆ. ಹೇಳಿದ ಮಾತು ಕೇಳೋಲ್ಲ. ತಲೆ ನೋವು ಅಂತ ಅಳ್ತಾರೆ. ಡಾಕ್ಟ್ರ ಹತ್ರ ಬೇಗ ಕರ್ಕೊಂಡು ಹೋಗ್ಲಿಲ್ಲ ಅಂದ್ರೆ ಸತ್ತೇ ಹೋಗ್ತೀನಿ ಅಂತಾರೆ. ನಾವು ಕರ್ಕೊಂಡು ಬರದೇ ಏನು ಮಾಡ್ಬೇಕು?’

ರೋಗಿಯ ಮನೆಯವರ ಮಾತು ಕೇಳಿ ‘ಹೌದಲ್ಲ!’ ಎನಿಸಿತು. ಅವರಿಗೆ ಲಾಕ್ ಡೌನ್ ಮಾಡಿದ್ದ ಸರ್ಕಾರ, ಅನುಮತಿ ಕೊಡುವಾಗ ಮಾಹಿತಿ ಕೇಳಿದ ಅಧಿಕಾರಿಗಳು, ದಾರಿಯಲ್ಲಿ ನಿಲ್ಲಿಸಿ ಕಾರಣ ಕೇಳಿದ ಪೊಲೀಸ್ ಎಲ್ಲರ ಮೇಲೆ ಇದ್ದ ಸಿಟ್ಟನ್ನು, ಕೊರೊನಾದ ಅಧಿಕೃತ ಪ್ರತಿನಿಧಿಯೇ ನಾನು ಎಂಬಂತೆ ಕಾರಿಯೇ ಬಿಟ್ಟರು. ಹೇಗೋ ಸಮಾಧಾನ ಮಾಡಿ ಚಿಕಿತ್ಸೆ ನೀಡಿ, ಒಂದಷ್ಟು ಎಚ್ಚರ ಹೇಳಿ, ಅವರನ್ನು ಕಳಿಸಿದರೂ ಅವರ ನೋವು- ದುಃಖದ ಮಾತುಗಳು ಕೊರೆಯುತ್ತಲೇ ಇದ್ದವು.

ಕೊರೊನಾದಿಂದಾಗಿ ರೋಗಿಗಳನ್ನು ದೂರದಿಂದ ಮಾತನಾಡಿಸುವುದು ಅನಿವಾರ್ಯವಾಗಿದೆ. ಮೊದಲಿನಂತೆ ಬೆನ್ನು ತಟ್ಟುವ, ಕೈ ಹಿಡಿಯುವ ಕ್ರಿಯೆಯಿಂದಲೇ ಸಮಾಧಾನ ಹೇಳುವುದು, ಭರವಸೆ ಮೂಡುವಂತೆ ಮಾಡುವುದು ಇಂದು ಸಾಧ್ಯವಿಲ್ಲ. ಮೊದಲೆಲ್ಲಾ ರೋಗಿ ಬಂದು ಕುಳಿತಾಕ್ಷಣ ‘ಸ್ವಲ್ಪ ಮುಂದೆ ಹಾಕಿಕೊಳ್ರೀ’ ಎಂಬುದು ನನ್ನ ರೂಢಿಯಾಗಿತ್ತು. ಈಗ ಅವರು ಕುರ್ಚಿ ಮುಂದೆಳೆದುಕೊಳ್ಳಲು ಹೋದರೆ ಗಾಬರಿಯಿಂದ ನಾನೇ ‘ಹಿಂದೆ, ಹಿಂದೆ’ ಎಂದು ಕೂಗುವ ಸಮಯ. ಟೀಚರ್ ಆ ಕಡೆ ತಿರುಗಿದಾಗ ತುಂಟತನ ಮಾಡುವ ಮಕ್ಕಳಂತೆ, ನಮ್ಮ ರೋಗಿಗಳು, ಅವರ ಕುಟುಂಬದವರು ಆಸ್ಪತ್ರೆಗಳಲ್ಲಿ ಕುಳಿತಿರುವಾಗ ಇದ್ದಕ್ಕಿದ್ದಂತೆಯೇ ಮಾಸ್ಕ್ ತೆಗೆದು ನಿರಾಳವಾಗಿ ಉಸಿರಾಡುತ್ತಾರೆ! ನಾವು ಹೆದರಿಸಿದ ತಕ್ಷಣ, ತಪ್ಪು ಮಾಡಿದ ಮಕ್ಕಳಂತೆ ಮಾಸ್ಕ್ ಏರಿಸಿಕೊಳ್ಳುತ್ತಾರೆ.

ಹಿಂದೆಲ್ಲಾ ‘ಜ್ವರ ಬಂದಿತ್ತು ಡಾಕ್ಟ್ರೇ, ಮೈ ಬಿಸಿ ಇಲ್ಲದಿದ್ದರೂ ಒಳ ಜ್ವರ ಇರಬೇಕು ನೋಡಿ ಡಾಕ್ಟ್ರೇ’ ಎನ್ನುತ್ತಿದ್ದವರು ಈಗ ‘ಜ್ವರ ಬಂದಿತ್ತಾ?’ ಎಂಬ ಪ್ರಶ್ನೆಗೆ ಹೌಹಾರಿ, ತಕ್ಷಣ ‘ಇಲ್ಲವೇ ಇಲ್ಲ, ಇಲ್ಲವೇ ಇಲ್ಲ’ ಎಂದು ಖಂಡಿತವಾಗಿ ನಿರಾಕರಿಸಿ ಬಿಡುತ್ತಾರೆ. ಮಾತನಾಡುವಾಗ ಸಾದಾ ಕೆಮ್ಮು ಬಂದರೂ, ಅದನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಪ್ಲೇಗ್ನ ಮುಖವಾಡದಂತೆ ನಾವೂ ಈಗ ಕೊರೋನಾ ಮಾಸ್ಕ್ ಧರಿಸುತ್ತೇವೆ! ‘ಎಲ್ಲ’ವನ್ನೂ ಹೊಟ್ಟೆಯೊಳಗೇ ಕಟ್ಟಿಕೊಂಡು, ಎಂಟು ಗಂಟೆಗಳ ಕಾಲ ತಿನ್ನದೇ, ಕುಡಿಯದೆ, ಹೊರಗೆ ಬಿಡದೆ ಸುರಕ್ಷತಾ ಕವಚ ‘ಪಿಪಿಇ’ ಧರಿಸುವ ಕಷ್ಟವಂತೂ ಯಾರಿಗೂ ಬೇಡ. ಮಾಸ್ಕ್ ಒಳಗಿಂದ ಮಾತನಾಡಿದರಂತೂ ವೈದ್ಯನಿಗೂ, ರೋಗಿಗೂ ಸಮಾಧಾನವೇ ಇಲ್ಲ! ಮುಖದ ನಗು- ಅಳುವನ್ನು ಗುರುತಿಸುವುದರಲ್ಲಿ ಕಣ್ಣುಗಳ ಮಹತ್ವದ ಬಗ್ಗೆ ಸದ್ಯದಲ್ಲೇ ಅಧ್ಯಯನಗಳೂ ನಡೆಯಬಹುದು ಎನಿಸುತ್ತದೆ!

ಮೊನ್ನೆ ರೋಗಿಗಳನ್ನು ನೋಡುತ್ತಾ, ಪದ್ಯ ಹೇಳಿಕೊಂಡು 20 ಸೆಕೆಂಡುಗಳ ಕಾಲ ಕೈ ತೊಳೆಯುತ್ತಾ ಇದ್ದಾಗ ನರ್ಸ್ ಒಬ್ಬಳು ಗಾಬರಿಯಿಂದ ಓಡಿ ಬಂದಳು. ‘ಮೇಡಂ ಯಾರೋ ಒಬ್ಬರು 10 ರೂಪಾಯಿ ನೋಟು ಬೀಳಿಸಿ ಹೋಗಿದ್ದಾರೆ’ ಎಂದಳು. ನಾನು ಏನೂ ಹೇಳುವ ಮೊದಲೇ ‘ನಿನ್ನೆ ಟಿ.ವಿ.ಯಲ್ಲಿ ತೋರಿಸಿದ್ದರು ಮೇಡಂ, ಕೆಲವರು ಕಾಯಿಲೆ ಹಬ್ಬಿಸಬೇಕೆಂದೇ ಹೀಗೆ ಮಾಡ್ತಾರಂತೆ ಮೇಡಂ, ಅದಕ್ಕೇ 10 ರೂಪಾಯಿ ನೋಟು ಬೀಳಿಸಿದ್ದಾರೆ’ ಅಂದಳು. ಅಂದರೆ ಆಕಸ್ಮಿಕವಾಗಿದ್ದರೆ ಬೇರೆ ಹೆಚ್ಚಿನ ಬೆಲೆಯ ನೋಟು ಬೀಳುತ್ತಿತ್ತು ಎಂದು ಖಚಿತವಾಗಿದ್ದಂತೆ! ಬೇರೆ ಸಂದರ್ಭದಲ್ಲಾಗಿದ್ದರೆ ನಾನು ನಕ್ಕು ಅವಳ ಕೈಯ್ಯಲ್ಲೇ ಎತ್ತಿಸಿ ಅಥವಾ ನಾನೇ ಎತ್ತಿ ತೆಗೆದಿಡುತ್ತಿದ್ದೆನೇನೋ. ಆದರೆ ಕೊರೊನಾ ವಿಷಯದಲ್ಲಿ ನಗುವ ಹಾಗಿಲ್ಲವಲ್ಲ! ಗ್ಲವ್ಸ್ನಿಂದ ಎತ್ತಿ, ಸ್ಪಿರಿಟ್ ಹಾಕಿ ಅದನ್ನು ಒರೆಸಿದೆವು. ನಂತರ ಯಾರದ್ದು ಎಂದು ನರ್ಸಿಂಗ್ ಹೋಂ ಸುತ್ತ ಎಲ್ಲರಲ್ಲಿ ಕೇಳಿದೆವು. ಎಲ್ಲರೂ ತಮ್ಮದಲ್ಲ ಎನ್ನುವವರೇ!

ಪ್ರತಿದಿನವೂ ಇಂಥ ಘಟನೆಗಳು ನಡೆಯುತ್ತಲೇ ಇವೆ. ಭಯ- ಆತಂಕಗಳ ನಡುವೆಯೂ ರೋಗಿಗಳ ನೋವು- ಜಾಣ್ಮೆಯ ಮಾತುಗಳು- ಹೇಗಾದರೂ ಚಿಕಿತ್ಸೆ ಪಡೆಯುವ ಸಾಮರ್ಥ್ಯ ನನ್ನನ್ನು ಮತ್ತೆ ಮತ್ತೆ ವೈದ್ಯಕೀಯ ಕರ್ತವ್ಯದತ್ತ ಸೆಳೆಯುತ್ತದೆ. ಎಷ್ಟೋ ಕಡೆಗಳಲ್ಲಿ ‘ಐಸೋಲೇಷನ್ ವಾರ್ಡ್’ ಗಳಲ್ಲಿರುವ ರೋಗಿಗಳಿಗೆ ಏಕಮಾತ್ರ ಹೊರ ಜಗತ್ತಿನ ಸಂಪರ್ಕ ಎಂದರೆ ಅವರ ಆರೈಕೆ ಮಾಡುವ ವೈದ್ಯರು ಮತ್ತು ನರ್ಸ್ಗಳು. ತಮ್ಮ ಪ್ರೀತಿಯ ಗಂಡ/ ಹೆಂಡತಿ/ ಅಪ್ಪ/ ಅಮ್ಮ ಮುಂತಾದವರಿಗೆ ವಿದಾಯ ಹೇಳದೆ ತಮ್ಮ ವೈದ್ಯರನ್ನು ಮಾತ್ರ ನೋಡುತ್ತಾ ಸಾವನ್ನಪ್ಪಿದವರ ಸಂಖ್ಯೆ ಕೊರೊನಾದ ದಿನಗಳಲ್ಲಿ ಇಂದು ಬಹಳಷ್ಟು. ವೈದ್ಯರು ಜೀವಗಳನ್ನು ಉಳಿಸುವವರು. ಹಾಗಾಗಿ ಏನೇ ಆದರೂ ನಾವು ಅದನ್ನು ಮಾಡಲೇಬೇಕು. ಆದರೆ ನಾವೂ ಮನುಷ್ಯರು, ನಮಗೂ ಹೆದರಿಕೆಯಿದೆ ಎನ್ನುವುದೂ ಸತ್ಯ.

ಕೊರೊನಾದಿಂದ ಹಲವು ಪಾಠಗಳನ್ನು ಕಲಿತಿದ್ದೇವೆ. ನಮ್ಮ ರೋಗಿಗಳ ರಕ್ಷಣೆಗಾಗಿ, ಮತ್ತಷ್ಟು ಸರಿಯಾಗಿ ಸ್ವಚ್ಛತೆಯ ಅಭ್ಯಾಸ ಕಲಿತಿದ್ದೇವೆ. ಅನಿಶ್ಚಿತತೆಯ ನಡುವೆಯೂ, ರೋಗಿಗಳಿಗೆ ‘ಎಲ್ಲವೂ ಒಳ್ಳೆಯದಾಗುತ್ತದೆ, ಸರಿಯಾಗುತ್ತದೆ’ ಎಂಬ ಭರವಸೆ ಮೂಡಿಸಿ ನಾವೂ ಬದುಕುವುದನ್ನು ಕಲಿಯುತ್ತಲೇ ಇದ್ದೇವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.