ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ಸ್ಥೂಲಕಾಯ ಸ್ತ್ರೀಯರಿಗೆ ಹರ್ನಿಯಾ ಕಾಟ ಹೆಚ್ಚು

ಡಾ. ರಾಜೀವ್‌ ಪ್ರೇಮನಾಥ್‌
Published 14 ಜೂನ್ 2024, 23:26 IST
Last Updated 14 ಜೂನ್ 2024, 23:26 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ಹರ್ನಿಯಾ ಬೆಳವಣಿಗೆಗೆ ಸ್ಥೂಲಕಾಯ ಸಮಸ್ಯೆಯೂ ಮುಖ್ಯ ಕಾರಣ. ದಿನೇ ದಿನೇ ಬದಲಾಗುತ್ತಿರುವ ಜೀವನಶೈಲಿಯು ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕುಟುಂಬ ಹಾಗೂ ಉದ್ಯೋಗ ಎರಡನ್ನೂ ಸಮರ್ಥವಾಗಿ ನಿಭಾಯಿಸುವ ಮಹಿಳೆಯರು ದೈಹಿಕ ಹಾಗೂ ಮಾನಸಿಕ ಒತ್ತಡಗಳಿಂದ ಹಲವು ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರಲ್ಲಿಯೂ ಹರ್ನಿಯಾದಂಥ ಸಮಸ್ಯೆ ಕಾಣಿಸುತ್ತಿರುವುದಕ್ಕೆ ಬೊಜ್ಜು ಪ್ರಮುಖ ಕಾರಣವಾಗಿದೆ.

ಏನು ಹೇಳುತ್ತೆ ಅಂಕಿ–ಅಂಶ?

ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವವರಲ್ಲಿ ಹರ್ನಿಯಾ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಭಾರತದಂಥ ದೇಶದಲ್ಲಿ ಹರ್ನಿಯಾ ಸಮಸ್ಯೆ ಹೆಚ್ಚಳಗೊಳ್ಳುವುದಕ್ಕೆ ದೇಹದಲ್ಲಿ ಅತಿಯಾಗಿ ಶೇಖರಣೆಯಾಗುತ್ತಿರುವ ಬೊಜ್ಜು ಒಂದು ಕಾರಣವಾಗಿದೆ. ಅಂಕಿ ಅಂಶಗಳ ಪ್ರಕಾರ ನಗರ ಪ್ರದೇಶಗಳಲ್ಲಿ ವಾಸಿಸುವ ಶೇ 70ರಷ್ಟು ಮಂದಿಗೆ ಬೊಜ್ಜಿನ ಸಮಸ್ಯೆ ಇದೆ. ಅದರಲ್ಲೂ ಅತಿ ತೂಕವೆಂಬುದು ಅನಾರೋಗ್ಯವನ್ನು ಸೃಷ್ಟಿಸಲು ಇರುವ ಕೀಲಿಕೈ. 2022ರ ಅಧ್ಯಯನ ಪ್ರಕಾರ ಶೇ 5.4ರಷ್ಟು ಪುರುಷರು, ಶೇ 9.8ರಷ್ಟು ಮಹಿಳೆಯರಿಗೆ ಬೊಜ್ಜಿನ ಸಮಸ್ಯೆ ಇದೆ.

ಬೊಜ್ಜು ಹೆಚ್ಚಳದಿಂದ ಹರ್ನಿಯಾ

ಬೊಜ್ಜು ಶೇಖರಣೆಯಾದಂತೆ ದೇಹದ ಕೊಬ್ಬಿನ ರಚನೆಯು ಬದಲಾಗುತ್ತದೆ. ಬೊಜ್ಜು ಜೀವಿತಾವಧಿಯನ್ನು ಕಡಿಮೆ ಮಾಡುವುದಲ್ಲದೇ ಹಲವು ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಸ್ಥೂಲಕಾಯದಿಂದ ಹಲವು ಅಂಗಾಂಗಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಇದರಿಂದ ಅಂಗಾಂಶಗಳ ವಿನ್ಯಾಸದಲ್ಲಿ ಬದಲಾವಣೆಯಾಗುತ್ತದೆ. ಇದು ಸ್ನಾಯುಗಳನ್ನು ದುರ್ಬಲಗೊಳಿಸುವುದಲ್ಲದೇ ಹರ್ನಿಯಾ (ಅಂಡವಾಯು) ರಚನೆಗೆ ಕಾರಣವಾಗಬಹುದು. ಅಧಿಕ ತೂಕ ಇರುವವರು ಸ್ನಾಯುದೌರ್ಬಲ್ಯದಂಥ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಸ್ನಾಯುದೌರ್ಬಲ್ಯವೂ ಹರ್ನಿಯಾ ಬರಲು ಮುಖ್ಯ ಕಾರಣವಾಗುತ್ತದೆ.

ಮಹಿಳೆಯರಲ್ಲಿ ಗರ್ಭಾವಸ್ಥೆ, ಋತುಬಂಧದಂಥ ಪ್ರಮುಖ ಜೀವನಘಟ್ಟಗಳಲ್ಲಿ ಹಾರ್ಮೋನುಗಳ ಬದಲಾವಣೆ ಅಧಿಕವಾಗಿರುತ್ತದೆ. ಇದರಿಂದ ತೂಕ ಹೆಚ್ಚಿ, ಸ್ಥೂಲಕಾಯ ಬರಬಹುದು. ಸ್ಥೂಲಕಾಯದಿಂದ ಹೊಟ್ಟೆಯ ಸ್ನಾಯುಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಇದು ಒಟ್ಟಾರೆ ದೇಹದ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಸಂಭಾವ್ಯ ಸ್ಥಳಗಳಲ್ಲಿ ಹರ್ನಿಯಾ ರೂಪುಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಆರಂಭಿಕ ಹಂತದಲ್ಲಿಯೇ ಹರ್ನಿಯಾ ಮತ್ತು ಅದರ ರೋಗಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗಬೇಕು.

ಕೆಲವು ಬಗೆಯ ಹರ್ನಿಯಾಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಬಹುದು. ತೊಡೆಸಂದಿ ಸಂಬಂಧಿಸಿದ ಹರ್ನಿಯಾ ಮಹಿಳೆಯರಲ್ಲಿ ಕಡಿಮೆ ಕಂಡುಬರಬಹುದು. ಆದರೆ, ಕಿಬ್ಬೊಟ್ಟೆಯ ಹರ್ನಿಯಾ ಕಡೆಗಣಿಸುವಂತಿಲ್ಲ. ಹೀಗಿದ್ದೂ ತೊಡೆಯೆಲುಬಿನಲ್ಲಿಯೂ ಮಹಿಳೆಯರಿಗೆ ಹರ್ನಿಯಾ ಕಾಣಿಸಿಕೊಳ್ಳಬಹುದು. ಅಗಲವಾದ ಸೊಂಟ ಹೊಂದಿರುವರಲ್ಲಿ ಈ ಸಮಸ್ಯೆ ಹೆಚ್ಚು.

ಪ್ರಸವಾನಂತರ ಭಾರ ಎತ್ತುವ ಹಾಗೂ ಸ್ಥೂಲ ಕಾಯದಿಂದಲೂ ಈ ಹರ್ನಿಯಾ ಉಂಟಾಗಬಹುದು. ತೊಡೆಸಂದು, ತೊಡೆಯೆಲುಬಿನಲ್ಲಿ ಹರ್ನಿಯಾ ಕಾಣಿಸಿಕೊಳ್ಳಬಹುದು. ಇದರ ಜತೆಗೆ ಹೊಕ್ಕುಳ ಭಾಗದಲ್ಲಿಯೂ ಹರ್ನಿಯಾ ಬರಬಹುದು. ವಿಶೇಷವಾಗಿ ಗರ್ಭಧಾರಣೆಯ ಸಂದರ್ಭದಲ್ಲಿ ಕೊಬ್ಬಿನ ಅಂಗಾಂಶ ಮತ್ತು ಕರುಳಿನ ಭಾಗವು ಚಾಚಿಕೊಂಡಂತೆ ಇದ್ದಾಗ ಹರ್ನಿಯಾ ರೂಪುಗೊಂಡು ಸಮಸ್ಯೆ ತಂದೊಡ್ಡಬಹುದು. ಇದಲ್ಲದೇ ಕಿಬ್ಬೊಟ್ಟೆಯ ಅಂಗಾಂಶದ ಗೋಡೆಗಳ ಮೇಲೂ ಹರ್ನಿಯಾ ಕಾಣಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಲಕ್ಷಣಗಳೇನು?

ಮಹಿಳೆಯರ ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಹರ್ನಿಯಾದ ಆಧಾರದ ಮೇಲೆ ಅದರ ರೋಗಲಕ್ಷಣಗಳಿರುತ್ತವೆ.

ಬಹುತೇಕ ಹರ್ನಿಯಾದ ಲಕ್ಷಣಗಳು ಹೀಗಿರುತ್ತವೆ: ಅಂಗಾಂಶಗಳು ಊದಿಕೊಂಡಿರುತ್ತವೆ. ಅಸ್ವಸ್ಥತೆ, ಒತ್ತಡ ಕಂಡುಬರುತ್ತದೆ. ತೀವ್ರವಾದ ನೋವು ಹಾಗೂ ಆಗಾಗ್ಗೆ ವಾಂತಿ ಉಂಟಾಗಬಹುದು. ಹೆಣ್ಣುಮಕ್ಕಳಲ್ಲಿ ಹರ್ನಿಯಾ ಮೇಲ್ನೋಟಕ್ಕೆ ಕಾಣಿಸದಂತೆ ಇರಬಹುದು. ಯಾವುದೇ ಅಂಗಾಂಶಗಳು ಲಘುವಾಗಿ ಊದಿಕೊಂಡು, ನೋಡಿದ ತಕ್ಷಣ ತಿಳಿಯದೇ ಹೋಗಬಹುದು. ಕೆಲವೊಮ್ಮೆ ಸ್ತ್ರೀ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದಲೂ ಹೀಗಾಗಬಹುದು ಎಂದು ತಪ್ಪಾಗಿ ಅಂದಾಜಿಸಿ ರೋಗ ನಿರ್ಣಯ ಮಾಡುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT