ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ, ತೆಲಂಗಾಣದಲ್ಲಿ ಮಳೆ ಅಬ್ಬರ: ಜನಜೀವನ ತತ್ತರ

ಸೇನೆಯಿಂದ ರಕ್ಷಣಾ ಕಾರ್ಯಾಚರಣೆ; ಪ್ರವಾಹದ ನಡುವೆ ಸಿಲುಕಿದ್ದವರ ರಕ್ಷಣೆ
Published : 19 ಜುಲೈ 2024, 16:06 IST
Last Updated : 19 ಜುಲೈ 2024, 16:06 IST
ಫಾಲೋ ಮಾಡಿ
Comments

ಹೈದರಾಬಾದ್‌: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಗುರುವಾರ ರಾತ್ರಿಯಿಂದಲೇ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಹಲವು ಕಡೆ ಸಾಧಾರಣದಿಂದ ಭಾರಿ ಮಳೆಯಾಗಿದೆ. ಆಂಧ್ರದ ಹಲವು ಕಡೆಗಳಲ್ಲಿ ಶನಿವಾರವೂ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಐಎಂಡಿ ಈಗಾಗಲೇ ತೆಲಂಗಾಣದಲ್ಲಿ ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ತೆಲಂಗಾಣ ಅಭಿವೃದ್ಧಿ ಮತ್ತು ಯೋಜನಾ ಸೊಸೈಟಿ (ಟಿಜಿಡಿಪಿಎಸ್) ಪ್ರಕಾರ, ಹಲವು ಪ್ರದೇಶಗಳಲ್ಲಿ 100 ರಿಂದ 200 ಮಿಮೀ ಮಳೆಯಾಗಿದೆ.

ಗುರುವಾರ ರಾತ್ರಿಯಿಂದ ಉತ್ತರ ಆಂಧ್ರಪ್ರದೇಶ ಮತ್ತು ಗೋದಾವರಿ ಕಣಿವೆ ಪ್ರದೇಶದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭಾರಿ ಪ್ರವಾಹ ಉಂಟಾಗಿರುವುದರಿಂದ ಆಂಧ್ರಪ್ರದೇಶ ಸರ್ಕಾರವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಸೇನೆಗೆ ಮನವಿ ಮಾಡಿದೆ. ಭಾರತೀಯ ನೌಕಾಪಡೆಯ ಏರ್ ಸ್ಟೇಷನ್, ಐಎನ್ಎಸ್ ದೇಗಾ, ಪೂರ್ವ ನೌಕಾ ಕಮಾಂಡ್  ಪಿ8ಐ, ಡಾರ್ನಿಯರ್, ಸೀ ಕಿಂಗ್ಸ್ ಸೇರಿದಂತೆ ಏಳು ವಿಮಾನಗಳು ಮತ್ತು ಎಎಲ್‌ಎಚ್‌ ಹೆಲಿಕಾಪ್ಟರ್‌ಗಳೊಂದಿಗೆ ವ್ಯಾಪಕ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಅಶ್ವರಾವ್‌ಪೇಟೆ ಪೆದ್ದ ವಾಗು ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ವಿಶಾಖಪಟ್ಟಣದ ಪಶ್ಚಿಮಕ್ಕೆ 250 ಕಿಮೀ ದೂರದಲ್ಲಿರುವ ಕೊಯಮದರಂನಲ್ಲಿ ಪ್ರವಾಹದ ನಡುವೆ ಸಿಲುಕಿದ್ದ 28 ಜನರನ್ನು ಪ್ರತಿಕೂಲ ಹವಾಮಾನದ ನಡುವೆಯೂ ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಅಲ್ಲದೆ, ತೆಲಂಗಾಣದ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ವಿಪತ್ತು ನಿರ್ವಹಣಾ ತಂಡಗಳು ಹೆಲಿಕಾಪ್ಟರ್ ಮೂಲಕ 28 ಜನರನ್ನು ರಕ್ಷಿಸಿವೆ. 

ಮಹದೇವಪುರದಲ್ಲಿ ದಾಖಲೆ ಮಳೆ: ಜಯಶಂಕರ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರದಲ್ಲಿ ದಾಖಲೆಯ 207 ಮಿಮೀ ಮಳೆಯಾಗಿದ್ದು, ಇದು ಈ ವರ್ಷ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಎನಿಸಿದೆ ಎಂದು ಟಿಜಿಡಿಪಿಎಸ್ ತಿಳಿಸಿದೆ.

ಮಂಚೇರಿಯಾದ ಕೋಟಪಲ್ಲಿಯಲ್ಲಿ 172 ಮಿ.ಮೀ, ಕೊಮರಂ ಭೀಮ್ ಆಸಿಫಾಬಾದ್‌ನ ಕಾಗಜನಗರದಲ್ಲಿ 159.3 ಮಿ.ಮೀ, ಮಂಚೇರಿಯಾದ ವೇಮನಪಲ್ಲಿಯಲ್ಲಿ 156 ಮಿ.ಮೀ ಮಳೆಯಾಗಿದೆ. ಹೈದರಾಬಾದ್‌ನ ಬಾಲನಗರ, ರಾಮಚಂದ್ರಪುರಂ, ಕುಕಟ್‌ಪಲ್ಲಿ, ಪತಂಚೇರು, ಮಲ್ಕಾಜ್‌ಗಿರಿ, ಕುತ್ಬುಲ್ಲಾಪುರ, ಮರೇಡ್‌ಪಲ್ಲಿ, ಖೈರತಾಬಾದ್, ಶೇಕ್‌ಪೇಟ್ ಮತ್ತು ಸೆರಿಲಿಂಗಂಪಲ್ಲಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಮುಲುಗು, ಭದ್ರಾದ್ರಿ ಕೊತಗುಡೆಂ, ಖಮ್ಮಂ ಮತ್ತು ಮಹಬೂಬಾಬಾದ್ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಹಾಗೂ ಕೊಮರಂ ಭೀಮ್ ಆಸಿಫಾಬಾದ್‌ಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT