ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಚಿನ್ನದ ಹೊಳಪು | ಸುವರ್ಣ ಸಾಹಿತ್ಯ: ಸಶಕ್ತ, ಅಸ್ತವ್ಯಸ್ತ, ರಕ್ತಸಿಕ್ತ

Published : 9 ನವೆಂಬರ್ 2024, 1:39 IST
Last Updated : 9 ನವೆಂಬರ್ 2024, 1:39 IST
ಫಾಲೋ ಮಾಡಿ
Comments
ಪ್ರಶಸ್ತಿ ನಂಟು, ಜ್ಞಾನಪೀಠಗಳು ಎಂಟು
ಸಾಹಿತಿ–ಸಾಹಿತ್ಯದ ವಿಶ್ವಾಸಾರ್ಹತೆ ಮುಕ್ಕಾಗಿರುವುದರ ನಡುವೆಯೂ, ಸಾಹಿತ್ಯವನ್ನು ಗೌರವಿಸುವ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ. ವರ್ಷದ ಎಲ್ಲ ದಿನವೂ ಒಂದಲ್ಲಾ ಒಂದು ಸಾಹಿತ್ಯಿಕ ಪ್ರಶಸ್ತಿ ಪ್ರಕಟಗೊಳ್ಳುತ್ತಿರುವುದು ಕನ್ನಡ ಸಾಹಿತ್ಯದ ವರ್ತಮಾನ. ಈ ಪ್ರಶಸ್ತಿಪೂರದ ಹಿನ್ನೆಲೆಯಲ್ಲಿ ‘ಪ್ರಶಸ್ತಿ ಸಾಹಿತ್ಯ’ ಎನ್ನುವ ಪ್ರಕಾರವೊಂದು ಅಸ್ಪಷ್ಟವಾಗಿ ರೂಪುಗೊಳ್ಳುತ್ತಿರುವಂತಿದೆ. ಸಾಹಿತ್ಯವನ್ನು ಪ್ರಶಸ್ತಿಗಳ ಮೂಲಕ ಗುರ್ತಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲೇ, ಸಾಹಿತ್ಯದ ಹೊಸ ಚಲನೆಗಳನ್ನು ಗುರ್ತಿಸಬೇಕಾದ ‘ಸಾಹಿತ್ಯ ವಿಮರ್ಶೆ’ ಸೊರಗುತ್ತಿರುವುದನ್ನು ಗಮನಿಸಬೇಕು. ಪುಸ್ತಕ ಪ್ರಕಾಶನದಲ್ಲಾದ ಕ್ರಾಂತಿಕಾರಕ ಬೆಳವಣಿಗೆ ಹಾಗೂ ಗ್ರಂಥಾಲಯ ಇಲಾಖೆಯ ಒತ್ತಾಸೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಏಳೆಂಟು ಸಾವಿರ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದು, ಈ ಹೊರೆಯನ್ನು ಏಳೆಂಟು ವಿಮರ್ಶಕರೇ ಹೊರಬೇಕೆಂದು ಕನ್ನಡ ಸಾಹಿತ್ಯಲೋಕ ಅಪೇಕ್ಷಿಸುತ್ತಿದೆ. ಸದ್ಯದ ಸಾಹಿತ್ಯ ವಿಮರ್ಶಕರ ಕೊರತೆಯನ್ನು ಎದುರಿಸುತ್ತಿದೆಯೂ ಅಥವಾ ವಿಮರ್ಶೆಯೇ ಬೇಡದಿರುವ ಸ್ಥಿತಿಯನ್ನು ಸಾಹಿತ್ಯಲೋಕವೇ ಸೃಷ್ಟಿಸಿದೆಯೋ ಹೇಳುವುದು ಕಷ್ಟ. ಲೇಖಕನ ಭಾವಚಿತ್ರವೇ ಪುಸ್ತಕದ ಮುಖಪುಟವೂ ಆಗಿರುವ ಕೃತಿಯನ್ನು ಪ್ರಾತಿನಿಧಿಕ ವಿಮರ್ಶೆಯ ಕೃತಿಯಲ್ಲಿ ಪುರಸ್ಕರಿಸುವ ಪ್ರವೃತ್ತಿಯನ್ನು, ಈ ಹೊತ್ತಿನ ಸಾಹಿತ್ಯ ವಿಮರ್ಶೆ ಹಿಡಿದಿರುವ ಜಾಡಿಗೆ ಉದಾಹರಣೆಯಾಗಿ ಗಮನಿಸಬಹುದೇನೊ? ದೇಶದ ಅತ್ಯುನ್ನತ ಸಾಹಿತ್ಯ ಪುರಸ್ಕಾರಗಳಲ್ಲೊಂದಾದ ‘ಜ್ಞಾನಪೀಠ’ ಪ್ರಶಸ್ತಿಯನ್ನು ಕನ್ನಡ ಓದುಗವಲಯ ಕುತೂಹಲ ಹಾಗೂ ಗೌರವದಿಂದ ಕಾಣುತ್ತಿದೆ. ಜ್ಞಾನಪೀಠದೊಂದಿಗೆ ಕನ್ನಡದ ನಂಟು ಆರಂಭವಾದುದು 1967ರಲ್ಲಿ. ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಮೂಲಕ ಕುಡಿಯೊಡೆದ ಜ್ಞಾನಪೀಠದ ಬಳ್ಳಿ, ದ.ರಾ. ಬೇಂದ್ರೆ (1972), ಶಿವರಾಮ ಕಾರಂತ (1977), ಮಾಸ್ತಿ (1983), ವಿ.ಕೃ. ಗೋಕಾಕ್‌ (1990), ಯು.ಆರ್‌. ಅನಂತಮೂರ್ತಿ (1994), ಗಿರೀಶ ಕಾರ್ನಾಡ (1998), ಚಂದ್ರಶೇಖರ ಕಂಬಾರ (2010) ಅವರವರೆಗೆ ಹಬ್ಬಿಕೊಂಡಿದೆ. ಕರ್ನಾಟಕ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಆ ಬಳ್ಳಿಗೆ ಹೊಸ ಹೂವು ಸೇರ್ಪಡೆಗೊಳ್ಳಬಹುದೇನೊ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT