ಕಾಶ್ಮೀರವೆಂದರೆ ಜನ್ನತ್ ಎಂದೋ ಸದಾ ಬಡಿದಾಡುವವರ ಜಾಗವೆಂದೋ ಟೆರರಿಸ್ಟರ ಕಾದಾಟದಲ್ಲಿ ಮುಳುಗೇಳುತ್ತಿರುವ ನೆಲವೆಂದೋ ಮಾಧ್ಯಮಗಳಲ್ಲಿ ಬಿಂಬಿಸುತ್ತಲೇ ಇರಲಾಗಿ ನಮಗೆ ಅಲ್ಲಿಯ ಅಸಲಿ ಬದುಕನ್ನು ಕಾಣುವ ಅವಕಾಶಗಳು ಬಹುಪಾಲು ಇಲ್ಲವಾಗಿವೆ. ಕಾಶ್ಮೀರದ ಹಿಮಾಲಯ ಚಾರಣ ಅಲ್ಲಿಯ ಒಳಬದುಕನ್ನು ಕಾಣ ಬಯಸುವವರಿಗೊಂದು ಅವಕಾಶ ಒದಗಿಸುತ್ತದೆ.

ಅಣ್ಣತಮ್ಮಂದಿರಿಬ್ಬರು ಮಾಡಿಕೊಂಡಿರುವ ಪಾಲುಗಳಂತೆ ಇರುವ ಲಡಾಖ್ ಮತ್ತು ಜಮ್ಮು ಕಾಶ್ಮೀರವೆಂಬ ಎರಡು ಭೂಭಾಗಗಳಲ್ಲಿ ಲಡಾಖ್ ಬೌದ್ಧ ಧರ್ಮೀಯರ ನೆಲ. ತಣ್ಣಗೆ ಮೌನವನ್ನೇ ಹೊದ್ದುಕೊಂಡಿದೆ. ಅದು ಬಹುಪಾಲು ಹಿಮಮರುಭೂಮಿ. ಅಲ್ಲಲ್ಲಿ ಕೃಷಿ ಮತ್ತು ಹಣ್ಣಿನ ತೋಟಗಳಿವೆ. ಕಾಶ್ಮೀರವಾದರೆ ಸಮೃದ್ಧ ಹಣ್ಣಿನ ತೋಟಗಳು, ಹುಲ್ಲುತುಂಬಿದ ಇಳಿಜಾರುಗಳು, ನದಿ ಹಳ್ಳ ಕೊಳ್ಳಗಳ ನಾಡು. ಕುರಿ, ಮೇಕೆ, ಕುದುರೆಗಳು ಗುಂಪು ಗುಂಪಾಗಿ ಮೇಯುವ ನೆಲ. ಲಡಾಖ್ನಲ್ಲಿ ಕೂಡ ಚಾರಣಕ್ಕೆ ಎರಡು ಮೂರು ಅವಕಾಶಗಳಿವೆ. ನಾವು ಹೋದ ಶ್ರೀನಗರದ ಕಡೆ ಎರಡು ತಾಣಗಳಿಗೆ ಮಾತ್ರ ಚಾರಣದ ಅವಕಾಶ ಇದೆ. ಒಂದು ಕಾಶ್ಮೀರದ ಮಹಾಸರೋವರಗಳ ಚಾರಣ. ಇನ್ನೊಂದು ತರ್ಸರ್ ಮತ್ತು ಮರ್ಸರ್ ಸರೋವರಗಳ ಚಾರಣ. ನಾವು ಆಯ್ಕೆ ಮಾಡಿಕೊಂಡದ್ದು ತರ್ಸರ್ ಮತ್ತು ಮರ್ಸರ್ ಸರೋವರಗಳ ಚಾರಣವನ್ನೇ.

ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಪಹಲ್ಗಾಮ್ ನಮ್ಮ ಚಾರಣದ ಬೇಸ್ ಕ್ಯಾಂಪ್. ಶ್ರೀನಗರದಿಂದ ಪಹಲ್ಗಾಮ್ಗೆ ಹೋಗುವ ರಸ್ತೆಯನ್ನು ಗ್ರೀನ್ರೂಟ್ ಎನ್ನುತ್ತಾರೆ. ಎರಡೂ ಕಡೆ ಸಮೃದ್ಧ ಸೇಬಿನ ತೋಟಗಳು. ಎಲ್ಲ ಮರಗಳಲ್ಲೂ ಸೇಬು ಹಣ್ಣುಗಳು ಜಗೆಬಿದ್ದಿದ್ದವು. ಅವುಗಳನ್ನು ನೋಡುವುದೇ ಹಬ್ಬ. ಮುಂದೆಹೋದಂತೆ ಅಕ್ರೂಟ್ ಮರಗಳ, ವಾಲ್ನಟ್ ಮರಗಳ ತೋಟಗಳು. ಈ ನೆಲದ ಸಮೃದ್ಧಿಯನ್ನು ಅವೆಲ್ಲ ಪ್ರತಿಫಲಿಸುತ್ತಿದ್ದವು.

ಪಹಲ್ಗಾಮ್ ತಲುಪುವ ಮುನ್ನ ಪಾಂಪೋರ್ ಎನ್ನುವ ಕಡೆ ಮತ್ತೊಮ್ಮೆ ನಮ್ಮ ವಾಹನ ನಿಂತಿತು. ಇದರ ವಿಶೇಷವೆಂದರೆ ಈ ಹಳ್ಳಿಯ ಸುತ್ತಮುತ್ತ ಮಾತ್ರ ಕೇಸರಿ ಬೆಳೆಯುತ್ತಾರೆ. ಹೊಲಗಳ ಮಧ್ಯೆ ಎತ್ತಿನ ಗಾಡಿಗಳ ಹಾಗೆ ಕಾರುಗಳು ನಿಂತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿ ಕೇಸರಿ ಮತ್ತು ಒಣಹಣ್ಣುಗಳನ್ನು ಮಾರುವ ಹತ್ತಾರು ಅಂಗಡಿಗಳಿದ್ದವು. ‘ಮೊಘಲ್ ಟೀ ಕೊಡಿಸುವೆ’ ಎಂದು ನಮ್ಮ ವಾಹನ ಚಾಲಕ ಸ್ಪೆಷಲ್ ಕಾಶ್ಮೀರಿ ಕೆಹವಾ ಎಂಬ ಬೋರ್ಡು ನೇತುಹಾಕಿದ್ದ ಟೀ ಅಂಗಡಿಯ ಮುಂದೆ ನಿಲ್ಲಿಸಿದ. ಅದರ ಮುಂದೆ ಸುಂದರವಾದ ದೊಡ್ಡ ಆಕಾರದ ಕೆಹವಾ ತುಂಬಿದ ಹೂಜಿ ಇಡಲಾಗಿತ್ತು. ಇದನ್ನು ಸಮೋವರ್ ಎನ್ನುತ್ತಾರೆ. ಈ ಹೂಜಿಯ ಅಡಿಯಿಂದ ಇದ್ದಲಿನ ಕೆಂಡದ ಶಾಖ ನಿರಂತರವಾಗಿ ಪೂರೈಕೆಯಾಗುತ್ತಿತ್ತು. ಕೇಸರಿ, ಬಾದಾಮಿ ಮತ್ತಿತರ ‘ಸಾಹಿತ್ಯ’ದಿಂದ ತಯಾರಿಸಿದ ಈ ಟೀ ಒಂದು ಅದ್ಭುತ. ನಮಗೆ ಅಪರಿಚಿತವಾದ ಕೆಹವಾ ಕಾಶ್ಮೀರದ ಜನಪ್ರಿಯ ಪಾನೀಯ.

ಪಹಲ್ಗಾಮ್ ರಸ್ತೆಯ ಉದ್ದಕ್ಕೂ ಇರುವ ಹಳ್ಳಿಗಳ ಹೆಸರುಗಳು ‘ಪುರ’ ಎಂದು ಕೊನೆಯಾಗುತ್ತವೆ. ಗೌರಿಪುರ, ನೂರ್ಪುರ ಇತ್ಯಾದಿ. ಮತ್ತೊಂದು ವಿಶೇಷವೆಂದರೆ ಇಡೀ ದೇಶಕ್ಕಾಗುವಷ್ಟು ಕ್ರಿಕೆಟ್ ಬ್ಯಾಟುಗಳನ್ನು
ಈ ರಸ್ತೆ ಪಕ್ಕದಲ್ಲಿರುವ ಗೃಹ ಕೈಗಾರಿಕೆಗಳು ಸಿದ್ಧಮಾಡಿ ಒದಗಿಸುತ್ತವೆ.

ಈ ರಸ್ತೆ ಪಕ್ಕದಲ್ಲಿರುವ ಗೃಹ ಕೈಗಾರಿಕೆಗಳು ಸಿದ್ಧಮಾಡಿ ಒದಗಿಸುತ್ತವೆ. ಅದಕ್ಕಾಗಿ ಲೋಡುಗಟ್ಟಲೆ ಮರದ ತುಂಡುಗಳನ್ನು ಮನೆ ಮೇಲೆ ಪೇರಿಸಿ ನಿಲ್ಲಿಸಿದ್ದಾರೆ. ನಮ್ಮ ದೇಶದಲ್ಲಿ ಹನ್ನೆರಡು ಜನ ಮಾತ್ರ ಕ್ರಿಕೆಟ್ ಆಡುತ್ತಾರೆ; ಉಳಿದವರು ಅದನ್ನು ನೋಡುತ್ತಾರೆ ಎಂದು ತಿಳಿದಿದ್ದ ನನಗೆ ನಮ್ಮ ಹುಡುಗರು ಇಷ್ಟೊಂದು ಕ್ರಿಕೆಟ್ ಆಡುತ್ತಾರೆಯೇ ಎಂದು ಆಶ್ಚರ್ಯವಾಯಿತು.

ಅನಂತನಾಗ್ ಜಿಲ್ಲೆಯ ಪಹಲ್ಗಾಮ್, ಅಮರನಾಥ ಯಾತ್ರೆಗೆ ಹೋಗುವವರಿಗೂ ಬೇಸ್ ಕ್ಯಾಂಪ್ ಆಗಿರುವುದರಿಂದ ಅದು ವರ್ಷಂಪ್ರತಿ ಹತ್ತಾರು ಸಾವಿರ ಜನರನ್ನು ನಿರ್ವಹಿಸಬಲ್ಲ ಆವರಣ. ಈಗ ಎರಡು ವರ್ಷಗಳಿಂದ ಕೊರೊನಾದ ಕಾರಣಕ್ಕೆ ಅಮರನಾಥ ಯಾತ್ರೆಯನ್ನು ರದ್ದುಪಡಿಸಿದ್ದಾರೆ. ಅದನ್ನೇ ನಂಬಿಕೊಂಡು ಬದುಕುತ್ತ ಬಂದಿದ್ದ ಸಾವಿರಾರು ಸ್ಥಳೀಕರ ಬದುಕು ಮೂರಾಬಟ್ಟೆಯಾಗಿದೆ. ಆರು ತಿಂಗಳು ಮಾತ್ರ ಜೀವಂತವಾಗಿರುವ ಈ ಪಟ್ಟಣ ಇನ್ನಾರು ತಿಂಗಳು ಹಿಮನಿದ್ರೆಗೆ ಜಾರುತ್ತದೆ.

ಪಹಲ್ಗಾಮ್ನಲ್ಲಿ ಒಂದು ರಾತ್ರಿ ತಂಗಿದ ನಾವು ಮರುದಿನ ಇಲ್ಲಿಂದ ಸುಮಾರು ಹದಿನಾಲ್ಕು ಕಿ.ಮೀ ದೂರ ಇರುವ ಅರು ಕಣಿವೆಗೆ ವಾಹನದಲ್ಲಿ ಹೊರಟೆವು. ಸುಮಾರು ಅರ್ಧಗಂಟೆಯಲ್ಲಿ ಅರುಕಣಿವೆಯನ್ನು ತಲುಪಿ, ಅಲ್ಲಿಂದ ನಮ್ಮ ನಿಜವಾದ ಚಾರಣ ಆರಂಭವಾಯಿತು. ಅರು ಕಣಿವೆ ಸಮುದ್ರಮಟ್ಟದಿಂದ ಸುಮಾರು 8,900 ಅಡಿ ಎತ್ತರದಲ್ಲಿದೆ. ನಾವು ತಲುಪಬೇಕಾಗಿರುವ ಮರ್ಸರ್ ಸರೋವರವು ಸುಮಾರು 13,450 ಅಡಿಗಳ ಎತ್ತರದಲ್ಲಿದೆ. ಮೊದಲ ದಿನ ಸುಮಾರು ಹನ್ನೆರಡು ಕಿ.ಮೀ ಚಾರಣ ಮಾಡಿ ಲಿದ್ದರ್ವಾಟ್ ಎಂಬ ತಾಣವನ್ನು ತಲುಪಬೇಕು. ಲಿದ್ದರ್ ನದಿ ಝೀಲಂ ನದಿಯ ಒಂದು ಉಪನದಿ. ಮುಂದೆ ಪಾಕಿಸ್ತಾನದಲ್ಲಿ ಝೀಲಂ ನದಿಯನ್ನು ಕೂಡಿಕೊಳ್ಳುತ್ತದೆ. ನೀರ್ಗಲ್ಲುಗಳು ಕರಗಿ ಹರಿಯುವ ನದಿ. ಸ್ವಲ್ಪ ಮಟ್ಟಿನ ಸಲ್ಫರ್ ಕರಗಿರುವ ಕಾರಣಕ್ಕೆ ಹಸಿರು ಹಸಿರಾಗಿ ಕಾಣುತ್ತದೆ.

ನದಿಯುದ್ದಕ್ಕೂ ನೆಲದಿಂದ ಹುಟ್ಟಿವೆಯೇನೋ ಎನ್ನುವಂತೆ ಸುಮಾರು ಎಂಟು ಅಡಿಗಳಷ್ಟು ಎತ್ತರದ ಅಲ್ಲೇ ಸಿಕ್ಕ ಕಲ್ಲುಗಳನ್ನು ಜೋಡಿಸಿ ಮೇಲೆ ಮರದ ಮುಚ್ಚಿಗೆ ಹಾಕಿಕೊಂಡಿರುವ ಕುರಿಗಾಹಿಗಳ ಗೂಡುಗಳು. ವರ್ಷದ ಆರು ತಿಂಗಳು ಇಲ್ಲಿ ಕುರಿಗಾಹಿಗಳ ವಾಸ. ನಾವು ಕಲ್ಪಿಸಿಕೊಳ್ಳಲು ಸಾಧ್ಯವಾಗದಷ್ಟು ಎತ್ತರದಲ್ಲಿ ನೂರಾರು ಕುರಿಗಳು ಮೇಯುತ್ತಿದ್ದವು. ಕುರಿ ಕಾಯುತ್ತಿರುವ ಒಬ್ಬರು ಅಥವಾ ಇಬ್ಬರು, ಒಂದು ನಾಯಿ, ನೂರಾರು ಕುರಿ ಮೇಕೆಗಳು ಮತ್ತು ಆ ಗೂಡಿನ ಮನೆ- ಇವಿಷ್ಟು ಅವರ ಬದುಕು. ಒಬ್ಬ ಹುಡುಗ ನೂರಾರು ಕುರಿ ಮೇಕೆಗಳನ್ನು ದಿನವೆಲ್ಲ ಮೇಯಿಸಿಕೊಂಡು ಸಂಜೆಗೆ ಗೂಡು ಸೇರುವ ಈ ಸಾಹಸ ಸಾಮಾನ್ಯವಲ್ಲ. ಇನ್ನು ಆಕಸ್ಮಾತ್ ಒಂದು ಕುರಿ ತಪ್ಪಿಸಿಕೊಂಡಿದ್ದರೆ ಲಾಟೀನು ಹಿಡಿದು ರಾತ್ರಿಯೆಲ್ಲ ಬೆಟ್ಟ ಅಲೆದು ಹುಡುಕಿ ತರಬೇಕೆಂಬುದನ್ನು ಕೇಳಿ ನಡುಕ ಹುಟ್ಟಿತು.

ನದಿಯ ಆಸುಪಾಸಿನಲ್ಲಿ ನಡೆದು ಲಿದ್ದರ್ವಾಟ್ ಎಂಬ ಸ್ಥಳ ತಲುಪುವ ಹೊತ್ತಿಗೆ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಲಿದ್ದರ್ ನದಿಯ ದಡದಲ್ಲಿ ನಮಗಾಗಿ ಟೆಂಟುಗಳು ಸಿದ್ಧವಾಗಿದ್ದವು. ಕುಳಿತ ತಕ್ಷಣ ಬಿಸಿ ಬಿಸಿ ಮ್ಯಾಗಿ ತುಂಬಿದ ತಟ್ಟೆಗಳು ಕೈಗೆ ಬಂದವು. ಇನ್ನು ಒಂದು ಗಂಟೆಯಲ್ಲಿ ಊಟ ರೆಡಿ ಎಂದ ನಮ್ಮ ಚಾರಣ ಮಾರ್ಗದರ್ಶಕ ಆಸಿಫ್. ರಾತ್ರಿಯ ಊಟ ಮಾಡಿ ಟೆಂಟುಗಳನ್ನು ಸೇರಿಕೊಂಡೆವು. ರಾತ್ರಿಯೆಲ್ಲ ಲಿದ್ದರ್ ನದಿಯ ಭೋರ್ಗರೆತ ಮತ್ತು ಮೊರೆತ ಜೋಗುಳದಂತಿದ್ದು ಒಳ್ಳೆಯ ನಿದ್ದೆ ಬಂತು.

ಮಾರನೆಯ ಬೆಳಗ್ಗೆ ಬಿಸಿ ಬಿಸಿ ಕೆಹವಾ ಕೊಟ್ಟು ನಮ್ಮನ್ನು ಎಬ್ಬಿಸಿದ ಆಸಿಫ್. ಶಿಕ್ವಾಸ್ ಎಂಬ ಇನ್ನೊಂದು ತಂಗುದಾಣಕ್ಕೆ ತಲುಪುವುದು ಆ ದಿನದ ಗುರಿ. ಅದು ಸಮುದ್ರಮಟ್ಟದಿಂದ ಸುಮಾರು 9,000 ಅಡಿ ಎತ್ತರದ ತಾಣ. ಸುಮಾರು ಆರು ಕಿ.ಮೀ ಚಾರಣ. ಮಾರ್ಗಮಧ್ಯದಲ್ಲಿ ಅರ್ಧ ಕಿ.ಮೀ. ಗುಂಡುಕಲ್ಲುಗಳ ಮೇಲೆ ನಡೆಯಬೇಕು. ಮೊದಮೊದಲಿಗೆ ಸರ್ಕಸ್ ಎನ್ನಿಸಿದರೂ ಸ್ವಲ್ಪ ಹೊತ್ತಿನಲ್ಲಿಯೇ ಅದೂ ಒಗ್ಗಿಬಿಟ್ಟಿತು. ಮಧ್ಯಾಹ್ನ ಶಿಕ್ವಾಸ್ ತಲುಪಿ ಯಥಾಪ್ರಕಾರ ಮ್ಯಾಗಿ ತಿಂದು, ನಂತರ ಊಟ ಪೂರೈಸಿ ನಮ್ಮ ಗೂಡುಗಳನ್ನು ಸೇರಿಕೊಂಡೆವು.

ಬೆಳಗ್ಗೆ ತರ್ಸರ್ ಸರೋವರದ ದಂಡೆಗೆ ತಲುಪಿಸುವ ಚಾರಣ ಆರಂಭವಾಯಿತು. ಇದೂ ಬಹುಪಾಲು ಬಂಡೆಗುಂಡುಗಳ ಮೇಲಿನ ಸರ್ಕಸ್ ನಡಿಗೆ. ಸಮುದ್ರಮಟ್ಟದಿಂದ 10,600 ಅಡಿಗೆ ಏರಿಸುವ ಏರುನಡೆ. ತರ್ಸರ್ ಮತ್ತು ಮರ್ಸರ್ ಸರೋರವರಗಳು ಅಕ್ಕಪಕ್ಕದಲ್ಲಿ ಇವೆ. ಒಂದು ಕಡಿದಾದ ಬೆಟ್ಟಸಾಲು ಎರಡನ್ನೂ ಬೇರೆ ಬೇರೆಯಾಗಿಸಿದೆ. ತರ್ಸರ್ ಸರೋವರವನ್ನು ಸೃಷ್ಟಿಪೋಷಕ ಸರೋವರವೆಂದೂ ಮರ್ಸರ್ ಸರೋವರವನ್ನು ಲಯಕಾರಿ ಸರೋವರವೆಂದೂ ಅಲ್ಲಿಯ ಜನ ಭಾವಿಸುತ್ತಾರೆ. ಹಾಗಾಗಿ ತರ್ಸರ್ ಸರೋವರವನ್ನು ಹತ್ತಿರದಿಂದ ಮುಟ್ಟಿ ಬಳಸುತ್ತಾರೆ. ಸುಮಾರು ಮೂರು ಮೈಲು ಉದ್ದ ಒಂದು ಮೈಲು ಅಗಲದ ಶುದ್ಧ ನೀರಿನ ಸರೋವರ. ಅದರ ಸುತ್ತ ಚಾರಣ ಮಾಡುತ್ತಾರೆ. ಆದರೆ ಮರ್ಸರ್ ಸರೋವರವನ್ನು ದೂರದಿಂದ ನೋಡಿ ಬರುತ್ತಾರೆಯೇ ವಿನಾ ಯಾರೂ ಅಲ್ಲಿ ಇಳಿಯುವುದಿಲ್ಲ. ಅದರಹತ್ತಿರ ಹೋದರೆ ಸಾವಿನ ಹತ್ತಿರ ಹೋದಂತೆ ಎಂದು ಭಾವಿಸುತ್ತಾರೆ. ಒಂದು ಹುಟ್ಟನ್ನು ಸಂಕೇತಿಸಿದರೆ ಇನ್ನೊಂದು ಸಾವನ್ನು ಸಂಕೇತಿಸುತ್ತದೆ. ಎರಡೂ ಸುಂದರ ಸರೋವರಗಳೇ.

ತರ್ಸರ್ ತಲುಪಿದಾಗ ಮಧ್ಯಾಹ್ನ 12.30. ನಾವು ಬರುವುದನ್ನೇ ಕಾಯುತ್ತಿದ್ದಂತೆ ಮೋಡಗಳು ಆಕಾಶ ಮತ್ತು ನೆಲವನ್ನೂ ಕವಿದುಕೊಂಡವು. ಇದ್ದಕ್ಕಿದ್ದಂತೆ ಜೋರು ಮಳೆ ಆರಂಭವಾಗಿ ಒಂದೆರಡು ಸಿಡಿಲುಗಳು ಅಪ್ಪಳಿಸಿದವು. ಅತ್ಯಂತ ಅನಿರೀಕ್ಷಿತ ಹವಾಮಾನಕ್ಕೆ ಹೆಸರಾದ ಜಾಗ ಇದು. ಹತ್ತೇ ನಿಮಿಷದಲ್ಲಿ ನಾವು ಅಂದುಕೊಳ್ಳಲೂ ಸಾಧ್ಯವಾಗದ ಬದಲಾವಣೆಗಳು ಇಲ್ಲಿ ಸಂಭವಿಸುತ್ತವೆ. ಆಲಿಕಲ್ಲಿನ ಮಳೆ, ಹಿಮಪಾತ ಯಾವುದಾದರೂ ಶುರುವಾಗಿಬಿಡಬಹುದು. ಹವಾಮಾನ ಸೂಕ್ತವಾಗಿದ್ದರೆ ಮಾತ್ರ ಇಲ್ಲಿಂದ ಮುಂದಕ್ಕೋ ಹಿಂದಕ್ಕೋ ಹೋಗಲು ಸಾಧ್ಯ. ಅಲ್ಲಿಯವರೆಗೆ ಸುಮ್ಮನೆ ಟೆಂಟುಗಳಲ್ಲಿ ಕಾಯಬೇಕು. ನಮ್ಮ ನಾಯಕರು ನಾಳಿನ ಕಾರ್ಯಕ್ರಮ ಸಾಧ್ಯವಾಗುವುದೋ ಇಲ್ಲವೋ ಎಂಬ ಸಂಕಟದಲ್ಲಿದ್ದರು. ಆಗದಿದ್ದರೆ ಇನ್ನೊಂದು ದಿನ ಇಲ್ಲೇ ಕಾಯುವುದು ಎಂಬ ತೀರ್ಮಾನಕ್ಕೆ ಬಂದರು. ಮಳೆ ನಿಲ್ಲುವ ಸೂಚನೆ ಕಾಣಲಿಲ್ಲ. ಚಳಿ ತೀವ್ರವಾಗಹತ್ತಿತು. ಹಗಲಿನಲ್ಲಿಯೇ ಎಲ್ಲ ನಿದ್ದೆ ಬ್ಯಾಗಿನೊಳಕ್ಕೆ ತೂರಿಕೊಂಡರು.

ಬೆಳಗ್ಗೆ ಎದ್ದಾಗ ಆಕಾಶ ನಿಚ್ಚಳವಾಗಿತ್ತು. ಸುಮಾರು ಮೂರೂವರೆ ಕಿ.ಮೀ. ದೂರದ ಚಾರಣ ಮಾಡಿ ಸರೋವರಗಳ ನಡುವಿನ ಕಡಿದಾದ ಬೆಟ್ಟ ಹತ್ತಿ ಮರ್ಸರ್ ಸರೋವರವನ್ನು ನೋಡಿ ಮತ್ತೆ ವಾಪಸ್ ನೇರವಾಗಿ ಶೆಕ್ವಾಸ್ಗೆ ಹೋಗಿ ಅಲ್ಲಿ ತಂಗುವುದೆಂದು ತೀರ್ಮಾನವಾಯಿತು. ಒಟ್ಟು ಹದಿನಾಲ್ಕು ಕಿ.ಮೀ. ಚಾರಣ. ಅದರಲ್ಲಿ ಸುಮಾರು 10,400 ಅಡಿಯಿಂದ 13,400 ಅಡಿಗೆ ಏರಿ ಇಳಿಯಬೇಕು.

ತರ್ಸರ್ ಸರೋವರದ ದಂಡೆಗುಂಟ ನಮ್ಮ ಚಾರಣ ಆರಂಭವಾಯಿತು. ಬೆಟ್ಟಗಳಿಂದ ಜಾರಿಬಂದು ರಾಶಿಯಾಗಿರುವ ಬಂಡೆಗುಂಡುಗಳ ಮೇಲೆ ಜಂಪ್ ಮಾಡುತ್ತ ದಾರಿ ಹುಡುಕುತ್ತ ಸುಮಾರು ಎರಡು ಕಿ.ಮೀ. ದೂರ ಸಾಗಬೇಕು. ಲತಾಗೆ (ನನ್ನ ಶ್ರೀಮತಿ) ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಚಾರಣ ಮಾಡುವುದು ಕಷ್ಟವೆನ್ನಿಸಹತ್ತಿತು. ವಾಪಸ್ಸು ಹೊರಡೋಣ ಎಂದುಕೊಳ್ಳುವಷ್ಟರಲ್ಲಿ ಹತ್ತು ನಿಮಿಷ ಬಂಡೆಯ ಮೇಲೆಯೇ ಮಲಗಿ ಎದ್ದು, ಹತ್ತಿಬಿಡೋಣ ನಡೆಯಿರಿ ಎಂದಳು. ಅಂತೂ ಅತ್ಯಂತ ಕಠಿಣವಾದ ಮರ್ಸರ್ ಸರೋವರ ಕಾಣುವ ಕಡಿದಾದ ಶಿಖರವನ್ನು ತಲುಪಿದಾಗ ಹನ್ನೆರಡು ಗಂಟೆಯಾಗಿತ್ತು. ಗುರಿ ತಲುಪಿದ ಸಂಭ್ರಮವನ್ನು ಎಲ್ಲರೂ ಅನುಭವಿಸುತ್ತಿದ್ದರು. ಲತಾ ಸಂತೋಷಕ್ಕೆ ಅತ್ತೇ ಬಿಟ್ಟಳು.

ಮರ್ಸರ್ ಸರೋವರ ಮೋಡಗಳಿಂದ ಮುಚ್ಚಿಹೋಗಿತ್ತು. ನಾವೆಲ್ಲ 13,400 ಅಡಿಗಳ ಎತ್ತರದಲ್ಲಿದ್ದೆವು. ಅಲ್ಲಿದ್ದ ಕಲ್ಲುರಾಶಿಯ ಸ್ತೂಪಕ್ಕೆ ನಾನೂ ಎರಡು ಕಲ್ಲುಗಳನ್ನು ಇಟ್ಟುಬರಲು ಅಷ್ಟುದೂರ ಹೋದೆ. ಬರುವಾಗ ಉಸಿರಾಟ ಲಯ ತಪ್ಪುತ್ತಿರುವುದು ಅರಿವಿಗೆ ಬಂತು. ಆಮ್ಲಜನಕದ ಕೊರತೆ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತು ಎಲ್ಲರೂ ಸುಧಾರಿಸಿಕೊಂಡು ವಾಪಸ್ಸು ಹೊರಡುವ ಹೊತ್ತಿಗೆ ಮರ್ಸರ್ ಸರೋವರವನ್ನು ಕವಿದುಕೊಂಡಿದ್ದ ಮೋಡಗಳು ತೆರವು ಮಾಡಿದವು. ದೂರದಿಂದಲೇ ಅದನ್ನು ನೋಡಿದೆವು.

ಅದೊಂದು ವಿಲಕ್ಷಣ ಅನುಭವ. ಸೃಷ್ಟಿ, ಸ್ಥಿತಿ, ಲಯ ಮೂರನ್ನೂ ಜೋಡಿಸಿಟ್ಟ ಹಾಗೆ. ಹುಟ್ಟು ಮತ್ತು ಸಾವಿನ ಸಂಕೇತಗಳಾದ ಎರಡು ಸರೋವರಗಳು ಅಕ್ಕಪಕ್ಕದಲ್ಲಿ ಇವೆ; ನಡುವೆ ನಾವಿದ್ದೇವೆ. ಒಂದು ಕಡೆ ಹುಟ್ಟು ಇನ್ನೊಂದು ಕಡೆ ಸಾವು. ಒಂದಕ್ಕೊಂದು ಪೂರಕ. ನಿಸರ್ಗಕ್ಕೆ ಎರಡೂ ಸಮ. ಇದನ್ನು ಅಭಿನಯಿಸಿ ತೋರುವಂತೆ ಎರಡೂ ಸರೋವರಗಳು ಮತ್ತು ನಡುವಿನ ಏಣು ನಮ್ಮ ನಿಜ ಅವಸ್ಥೆಯನ್ನು ಕಾಣಿಸಿಕೊಟ್ಟವು. ನೆಲ, ಸರೋವರ, ಬೆಟ್ಟ, ಮೋಡ ಎಲ್ಲ ಒಂದರೊಳಗೊಂದು ಬೆರೆತುಹೋಗಿರುವ ಆವರಣ.

ವಾಪಸ್ ಶೆಕ್ವಾಸ್ ತಲುಪಿದಾಗ ಮಧ್ಯಾಹ್ನ ಮೂರು ಗಂಟೆ. ಊಟ ಮಾಡಿ ದಿಂಬಿಗೆ ತಲೆ ಕೊಟ್ಟೆವು. ನಿದ್ರೆ ಆವರಿಸಿತು. ಸಂಜೆ ಹಿತವಾಗಿತ್ತು. ಕೆಹವಾ ಕುಡಿಯುತ್ತ ನಮ್ಮ ಕಾಶ್ಮೀರದ ಗೆಳೆಯರನ್ನು ಮಾತನಾಡಿಸಿದೆ. ಅವರ ಬದುಕಿನ ಸ್ಥಿತಿಗತಿಗಳನ್ನು ಕುರಿತು ಮನಬಿಚ್ಚಿ ಮಾತನಾಡಿದರು. ಈ ಹಿಂದೆ ಪಾಶ್ಚಾತ್ಯ ಚಾರಣಿಗರು ಮಾತ್ರ ತರ್ಸರ್, ಮರ್ಸರ್ ಮತ್ತು ಸುತ್ತಲಿನ ಕೆಲವು ಜಾಗಗಳಿಗೆ ಚಾರಣ ಮಾಡುತ್ತಿದ್ದರು. ಅವರನ್ನು ಬಿಟ್ಟರೆ ಕುರಿಗಾಹಿಗಳು ಮಾತ್ರ ಆ ಸರೋವರಗಳನ್ನು ಕಂಡವರು. ಈಗ ದಿನಕ್ಕೆ ಎರಡು ಮೂರು ಗುಂಪುಗಳು ತಮ್ಮ ತಮ್ಮ ಟೆಂಟುಗಳ ಸಮೇತ ಮಾದೇಶ್ವರನ ಜಾತ್ರೆಗೆ ಬರುವಂತೆ ಬರುತ್ತಾರೆ. ಎದುರಿಗೆ ಸಿಗುವ ಎಲ್ಲರದ್ದೂ ಆತಂಕದ ಒಂದೇ ಪ್ರಶ್ನೆ: ‘ಹವಾಮಾನ ಹೇಗಿದೆ?’

ಶೆಕ್ವಾಸ್ನಲ್ಲಿ ರಾತ್ರಿ ಮೂರೂವರೆಗೆ ಆರಂಭವಾದ ಮಳೆ ಬೆಳಗ್ಗೆ ಎಂಟುಗಂಟೆಯಾದರೂ ಬಿಡಲಿಲ್ಲ. ಒಂಬತ್ತಕ್ಕೆ ಸ್ವಲ್ಪ ಬಿಡುವು ಕೊಟ್ಟಿತು. ತಕ್ಷಣವೇ ಹೊರಡಿರಿ ಎಂದರು ನಾಯಕರು. ರಾತ್ರಿಯ ಮಳೆಗೆ ಎಲ್ಲ ನದಿ ಹಳ್ಳಗಳೂ ಭೋರ್ಗರೆಯುತ್ತಿದ್ದವು. ದಾರಿಗುಂಟ ಅನೇಕ ಹಳ್ಳಗಳನ್ನು ದಾಟಲು ಕೈಕೈ ಹಿಡಿದು ನಡೆದೆವು. ಉದ್ದಕ್ಕೂ ಕೆಸರಿನ ಜಾರುದಾರಿ. ಪ್ರತಿ ಹೆಜ್ಜೆಯನ್ನೂ ಎಚ್ಚರದಿಂದ ಇಡುತ್ತಾ ಲಿದ್ದರ್ವಾಟ್ ತಲುಪಿದಾಗ ಮಧ್ಯಾಹ್ನ ಎರಡೂವರೆ ಆಗಿತ್ತು. ಒಂದು ವಾರ ಬರೀ ಆಲೂಪರೋಟ, ಪೋಹ, ಮ್ಯಾಗಿಗಳನ್ನು ತಿಂದು ಬಾಯಿಕೆಟ್ಟಿದ್ದ ನಮ್ಮ ನಾಯಕರು ಅಲ್ಲಿಯೇ ಇದ್ದ ಕುರಿಗಾಹಿಗಳ ಗೂಡುಗಳಲ್ಲಿ ಕೋಳಿಯ ಬೇಟೆಗೆಂದು ಹೋದರು. ರಾತ್ರಿಯ ಕೋಳಿಸಾರಿಗೆ ಆಗಲೇ ಜೊಲ್ಲುಸುರಿಸುತ್ತ ಕಾಯಲಾರಂಭಿಸಿದೆವು. ಲಿದ್ದರ್ ನದಿ ಭೋರ್ಗರೆಯುತ್ತಿತ್ತು.
ಬೆಳಗ್ಗೆ ಹನ್ನೆರಡು ಕಿಲೋಮೀಟರು ನಡೆದು ಅರುವ್ಯಾಲಿಯನ್ನು ತಲುಪುವಾಗ ಮಧ್ಯಾಹ್ನವಾಗಿತ್ತು. ಇದಂತೂ ಅತ್ಯಂತ ಜಾರು ದಾರಿ. ಜಾರಿಬೀಳುವುದು ಸಾಮಾನ್ಯ. ಅದೇ ದಾರಿಯಲ್ಲಿ ಮೇಲಿನ ಬೆಟ್ಟದ ನಿವಾಸಿಗಳು ಸಣ್ಣ ಮಕ್ಕಳನ್ನು ಹೆಗಲ ಮೇಲೆ ಹೊತ್ತು ನಮಗಿಂತ ಎರಡುಪಟ್ಟು ವೇಗವಾಗಿ ಹೋಗುತ್ತಿದ್ದರು. ಅವರೂ ಜಾರುತ್ತಿದ್ದರು. ಆದರೆ ಬೇರೆ ಮಾರ್ಗವಿರಲಿಲ್ಲ. ಎದುರಿಗೆ ಸಿಕ್ಕ ನಮ್ಮನ್ನು ‘ದವಾ ಹೈತೊ ದೇ’ ಎನ್ನುತ್ತಿದ್ದರು. ಎಲ್ಲರೂ ಹಲ್ಲುನೋವಿಂದ ಬಳಲುತ್ತಿದ್ದರು. ಅತಿ ತಣ್ಣನೆಯ ನೀರನ್ನು ಅನಿವಾರ್ಯವಾಗಿ ಬಳಸಲೇಬೇಕಿದ್ದ ಕಾರಣದಿಂದಲೋ ಏನೋ ಎಲ್ಲರಿಗೂ ಹಲ್ಲುನೋವಿನ ಸಮಸ್ಯೆ. ಕೆಲವರು ಬೀಡಿ, ಸಿಗರೇಟು ಬೇಡುತ್ತಿದ್ದರು.

ಅಂದೇ ಶ್ರೀನಗರ ತಲುಪಿದ ನಾವು ಒಂದು ದಿನ ದಾಲ್ ಸರೋವರದ ದೋಣಿಮನೆಗಳಲ್ಲಿ ಇದ್ದು ಶ್ರೀನಗರದ ಹೂತೋಟಗಳು ಮತ್ತು ಪ್ರಸಿದ್ಧ ಹಜರತ್ ಬಾಲ್ ದರ್ಗಾ ನೋಡಿದೆವು. ಲತಾ ಒಂದಷ್ಟು ಕಾಶ್ಮೀರಿ ಶಾಲುಗಳನ್ನು ಕೊಂಡುಕೊಂಡಳು. ಮರುದಿನ ಬೆಂಗಳೂರಿನ ವಿಮಾನ ಏರಿದಾಗ ಒಮ್ಮೆ ಇಳಿದು ಮತ್ತೆ ಕಾಶ್ಮೀರದ ಬೆಟ್ಟಗಳಿಗೆ ಹೋಗಿಬರೋಣವೇ ಎನ್ನಿಸಹತ್ತಿತ್ತು. ಹಿಮಾಲಯದ ಸೆಳೆತವೇ ಹಾಗೆ. ಅದು ಇಲ್ಲವೆನ್ನಲು ಆಗದ ಹಾಗೆ ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ. ನಮ್ಮ ಚಾರಣ ವ್ಯವಸ್ಥೆಯನ್ನು ಪ್ರೀತಿಯಿಂದ ಮಾಡುವ ಕರ್ನಾಟಕ ಹೈಕ್ಸ್ನ (ಫೋನ್:9901996099) ಹುಡುಗರು ಆಗಲೇ ಮುಂದಿನ ಹಿಮಾಲಯ ಚಾರಣದ ದಿನಾಂಕಗಳನ್ನು ಪ್ರಕಟಿಸಿ ಅಲ್ಲಿ ಸಿಗೋಣ ಎನ್ನುತ್ತಿದ್ದರು. ಮತ್ತೆ ಸಿಗೋಣ ಎಂದು ಅಗಲಿದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.