ವಿಮಾನ ಅಝರ್‌ಬೈಜಾನಿನ ಬಾಕು ಶಹರಿನ ಮೇಲಿಳಿವಾಗ ನಡುರಾತ್ರಿ. ನಗರದ ದೀಪಗಳು ನೀರಹಾಳೆಯಂತಿದ್ದ ಕ್ಯಾಸ್ಪಿಯನ್ ಕಡಲಲ್ಲಿ ಬೆಳಕಿನ ಕಂಬಗಳಂತೆ ಚಾಚಿಕೊಂಡಿದ್ದವು. ಇದೊಂದು ನೆಲಬಂಧಿತ ಕಡಲು. ರಷ್ಯಾ ಇರಾನ್ ಅಝರ್‌ಬೈಜಾನ್ ತುರ್ಕೆಮೆನಿಸ್ತಾನ್‌ಗಳು ಇದನ್ನು ಸುತ್ತುವರಿದಿವೆ. ಬಾಕುವಿನಲ್ಲಿದ್ದಷ್ಟೂ ದಿನ, ಈ ಕಡಲನ್ನು ಹಲವು ದಿಕ್ಕುಗಳಿಂದ ನೋಡುವ ಅವಕಾಶ ಒದಗಿತು. ನಿಸರ್ಗದ ಚೆಲುವಿನ ಆಗರವಾಗಿರುವ ಇದು, ಇಲ್ಲಿನ ಧರ್ಮ ಸಂಸ್ಕೃತಿ ರಾಜಕಾರಣ ವ್ಯಾಪಾರಗಳನ್ನು ರೂಪಿಸಿದ ಶಕ್ತಿಕೇಂದ್ರವಾಗಿದೆ. ಈ ಕೇಂದ್ರದ ಪಾತ್ರಧಾರಿಗಳು, ಕಡಲ ಸೆರಗಿನಲ್ಲಿ ಸಿಗುವ ಕೆಸರು, ಅನಿಲ, ತೈಲಗಳು.

ಅಝರ್‌ಬೈಜಾನ್ ಕೆಸರಬುಗ್ಗೆಗಳಿಗೆ ಖ್ಯಾತ. ಇವು ಶಿಲಾಯುಗದ ಬಂಡೆಚಿತ್ರಗಳಿರುವ ಗೊಬುಸ್ತಾನ್ ರಾಷ್ಟ್ರೀಯ ಉದ್ಯಾನದಲ್ಲಿವೆ. ಇಲ್ಲಿಗೆ ಮುಟ್ಟುವ ಕೊನೆಯ 10 ಕಿ.ಮೀ ಹಾದಿ ಮಾತ್ರ ಕರಕಷ್ಟ. ಕುರುಚಲು ಗಿಡದ ಮರುಭೂಮಿಯಲ್ಲಿ ಕಾವಲು ನಿಂತ ಬೋಳುಬೆಟ್ಟಗಳ ನಡುವೆ ಗುಂಡಿಗೊಟರುಗಳಲ್ಲಿ ಹಾಯುವ ಕಚ್ಚಾರಸ್ತೆ. ಅದನ್ನು ದಾಟಿಸಲೆಂದೇ ಮೀಸಲಾದ ಲಟಾರಿ ಕಾರುಗಳು.

ನಮ್ಮ ಕಾರು ಮರುಭೂಮಿಯಲ್ಲಿ, ತೈಲಬಾವಿ ಕೊರೆಯಲು ಗುರುತು ಮಾಡಿದ ಕಂಬಗಳ ನಡುವೆ, ಯಾನ ಹೊರಟಿತು. ಆದರೆ ನಮ್ಮ ಮುಂದಿದ್ದ ಕಾರು ಸುತ್ತಲಿನ ಏನೂ ಕಾಣದಂತೆ ಧೂಳಿನ ಮೋಡ ಸೃಷ್ಟಿಸುತ್ತಿತ್ತು. ರಷ್ಯನ್ ಮತ್ತು ಅಝೆರಿ ಬಿಟ್ಟರೆ ಬೇರೆ ಭಾಷೆ ಬಾರದ ಚಾಲಕನಿಗೆ, ಕೈಸನ್ನೆಯಿಂದ ‘ಅದನ್ನು ಹಿಂದಿಕ್ಕು’ ಎಂದೆ. ನನ್ನ ಸೂಚನೆ ಕಾರ್ಯಗತಗೊಂಡ ರೀತಿ ಭೀಕರವಾಗಿತ್ತು. ಆತ ಸರಕ್ಕನೆ ಕಚ್ಚಾರಸ್ತೆಯಿಂದ ಕಾಡುರಸ್ತೆಗೆ ಇಳಿಸಿದವನೇ, ರೇಸ್‌ಕಾರಿನಂತೆ ಓಡಿಸತೊಡಗಿದ. ಅಂತಿಮ ದಿನಗಳು ಸಮೀಪಿಸಿದವೇ, ಯಾಕಾದರೂ ಹೇಳಿದೆನೊ, ಕಾರಿನ ಬಿಡಿಭಾಗಗಳು ಎಲ್ಲಿ ಕಳಚಿಬೀಳುವವೊ ಎಂದು ಕಂಗಾಲಾಯಿತು. ಲಟಾರಿ ಕಾರಿನ ಮಹಿಮೆ ಮನವರಿಕೆಯಾಯಿತು. ಅದಕ್ಕೆ ಹೆಚ್ಚು ಅಶ್ವಶಕ್ತಿಯಿರುವ ಇಂಜಿನ್ ಅಳವಡಿಸಿರಬೇಕು. ನಾನು ಎದೆಯ ಬಳಿ ಕೈಯಿಟ್ಟು, ಪುಕುಪುಕು ಎನ್ನುತಿದೆ ಎಂದು ಸನ್ನೆಮಾಡುತ್ತ, ಸ್ಲೊಸ್ಲೊ ಎಂದು ಕೂಗಿದೆ. ಹಿಂದೆ ಕೂತಿದ್ದ ಗೆಳೆಯರಾದ ವಿ.ಎಸ್.ಶ್ರೀಧರ್- ಸರ್ವಮಂಗಳಾ ಕೂಡ ವೇಗ ನಿಯಂತ್ರಿಸಿ ಎಂದರು.

ಅಷ್ಟುಹೊತ್ತಿಗೆ ಕಾರು ಮರುಭೂಮಿಯನ್ನು ದಾಟಿ, ಹುಚ್ಚು ಹಿಡಿದವರಂತೆ ಎಪ್ಪತ್ತು ಡಿಗ್ರಿ ಇಳಿಜಾರಿನ ಬೆಟ್ಟವೊಂದನ್ನು ಸರಸರ ಏರತೊಡಗಿತು. ಕಣಿವೆಯಿಂದ ಜಿಗಿಯುತ್ತ ಬೆಟ್ಟವನ್ನೇರುವ ಕಡವೆಯಂತೆ ಏರಿ, ಸಪಾಟಾದ ನೆತ್ತಿಗೆ ಹೋಗಿ ನಿಂತಿತು. ಬೆಟ್ಟದ ನೆತ್ತಿಯಿಂದ ಬಿಸಿಲಿಗೆ ಕಾಯುತ್ತಿರುವ ಕ್ಯಾಸ್ಪಿಯನ್ ಕಡಲು ಥಳತಳಿಸುತ್ತ ಕಾಣುತ್ತಿತ್ತು. ಅದರೊಳಗೆ ಕೊರೆದ ತೈಲಬಾವಿಯ ಚಪ್ಪರ, ಲಂಗರು ಹಾಕಿದ ಹಡಗಿನಂತೆ ತೋರಿತು. ಬೆಟ್ಟದ ಮೇಲಿದ್ದ ವಿಶಾಲ ಪ್ರದೇಶದಲ್ಲಿ ನೂರಾರು ಕೆಸರುಕಾರುವ ದಿನ್ನೆಗಳಿದ್ದವು. ಬೃಹದಾಕಾರದ ಹುತ್ತಗಳಂತಿದ್ದ ಈ ದಿನ್ನೆಗಳ ಮುಖದಿಂದ, ನೆಲದ ಹುಣ್ಣು ಒಡೆದಂತೆ ಕೆಸರು ಹೊರಗೆ ಹರಿಯುತ್ತಿತ್ತು. ಅದು ಭೂಗರ್ಭದೊಳಗಿಂದ ಗೊರ್‌ಗೊಟರ್ ಶಬ್ದಮಾಡುತ್ತ, ಆಲೆಮನೆಯ ಕೊಪ್ಪರಿಗೆಯ ಕಬ್ಬಿನಹಾಲಿನಂತೆ ಕುದಿಯುತ್ತ, ಗೋಳಗುಮ್ಮಟದ ಗುಳ್ಳೆ ನಿರ್ಮಿಸುತ್ತ ಹೊಯ್ದಾಡುತ್ತಿತ್ತು. ಈ ಕೆಸರಾಟ ಎಷ್ಟು ಮಿಲಿಯನ್ ವರ್ಷಗಳಿಂದ ನಡೆಯುತ್ತಿದೆಯೊ? ಮುಟ್ಟಿನೋಡಿದೆ. ಎರೆಮಣ್ಣಿನ ಪಾಯಸದಂತಿದ್ದ ಕೆಸರು ತಣ್ಣಗಿತ್ತು. ಒಳಲೆಯಂತಿದ್ದ ಅದರ ಬಾಯಿಯ ಸೋಟೆಯಿಂದ ಹರಿವ ಕೆಸರನ್ನು ಪ್ರವಾಸಿಗರು ಬಾಟಲಿಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಸಣ್ಣಬಾವಿಗಳಂತಹ ಕೆಸರಚಿಲುಮೆಗಳಲ್ಲಿ ಕೆಲವರು ಮುಳುಗೇಳುತ್ತಿದ್ದರು. ಹಾಗೆ ಪಂಕಲೇಪಿತನಾಗಿ ಕಂಬಳದ ಕೋಣನಾಗಿದ್ದ ಅಝರ್‌ಬೈಜಾನಿ ತರುಣನೊಬ್ಬ, ಸನ್ನೆಯಿಂದ ನಮ್ಮಲ್ಲಿ ಸಿಗರೇಟು ಕೇಳಿದನು. ಕೆಸರಲೇಪನ ಚರ್ಮಕಾಂತಿಯನ್ನು ಹೆಚ್ಚಿಸುವುದಂತೆ. ಕೆಂಪಗೆ ಹೊಳೆವ ಅಝರಬೈಜಾನಿಗರಿಗೆ ಇದರ ಅಗತ್ಯವಿದ್ದಂತೆ ತೋರಲಿಲ್ಲ.

ಅಝರ್‌ಬೈಜಾನಿನಲ್ಲಿ ಐನೂರಕ್ಕೂ ಹೆಚ್ಚು ಕೆಸರ ಚಿಲುಮೆಗಳಿವೆ. ಇವು ತೈಲ ಮತ್ತು ಅನಿಲ ನಿಕ್ಷೇಪಗಳ ಬಂಧುಗಳು. ಕೆಲವು ಬುಗ್ಗೆಗಳು ಕ್ಯಾಸ್ಪಿಯನ್ ಕಡಲೊಳಗಿವೆ. ಅವುಗಳಲ್ಲಿ ಒಂದು ಬಾಂಬಿನಂತೆ ಸಿಡಿದು ಬಾನೆತ್ತರಕ್ಕೆ ಜ್ವಾಲೆಯನ್ನು ಹೊಮ್ಮಿಸಿದ್ದುಂಟು. ಈ ಬಡಬಾನಲದಿಂದ ನೀಲ ಕ್ಯಾಸ್ಪಿಯನ್ ಕಡಲು ಕಪ್ಪುರಾಡಿಯಾಗಿತ್ತು. ಕ್ಯಾಸ್ಪಿಯನ್ ತೀರದ ಇನ್ನೊಂದೆಡೆ, ಯಾನಾರ್‌ದಾಗ್ (ಉರಿವ ಬೆಟ್ಟ) ಎನ್ನುವ ಜ್ವಾಲಾಮುಖಿಯಿತ್ತು. ಅಲ್ಲಿ ಬೆಟ್ಟದ ಟೊಳ್ಳು ಭಾಗದಿಂದ ಅನಿಲ ಹೊಮ್ಮುತ್ತ ಜ್ವಾಲೆ ಹೊತ್ತಿ ಉರಿಯುತ್ತಿತ್ತು. ಜ್ವಾಲೆ ಹೊಮ್ಮುವ ಭಾಗದ ಮಣ್ಣೆಲ್ಲವೂ ಸುಟ್ಟು ಇಟ್ಟಿಗೆಯಂತೆ ಕೆಂಪೇರಿತ್ತು. ಜೋರುಗಾಳಿ ಬೀಸಿದಾಗ ಕ್ಷಣಕಾಲ ಆರುತ್ತಿದ್ದ ಜ್ವಾಲೆ, ಮತ್ತೆ ಧಗ್ಗನೆ ಪುಟಿಯುತ್ತಿತ್ತು. ನಿಸರ್ಗದ ಈ ಅದ್ಭುತ ವಿದ್ಯಮಾನಕ್ಕೆ ವಿಸ್ಮಯಗೊಂಡ ಆದಿಮ ಬುಡಕಟ್ಟು ಜನ, ಬೆಂಕಿ ಆರಾಧನೆ ಶುರು ಮಾಡಿರಬೇಕು. ಅದುವೇ ವಿಕಸನಗೊಂಡು ಜೊರಾಷ್ಟ್ರಿಯನ್ ಧರ್ಮವಾಗಿ ರೂಪುಗೊಂಡಿರಬೇಕು. ‘ಯಾನಾರ್ ದಾಗ್’ ಈಗಲೂ ಅಗ್ನಿಯಾರಾಧಕ ಫಾರಸಿಗಳಿಗೆ ಪವಿತ್ರ ಸ್ಥಳ. ಮುಂಬೈನ ಪಾರ್ಸಿ ದೇಗುಲದಲ್ಲಿ ಈಗಲೂ ಜ್ವಾಲೆ ಜ್ವಲಿಸುತ್ತಿರುತ್ತದೆ. ಅಗ್ನಿಪೂಜಕರಾದ ವೇದಕಾಲೀನ ಆರ್ಯರು ಯುರೇಶಿಯಾದ ಈ ಭೂಭಾಗದಿಂದಲೇ ಭಾರತಕ್ಕೆ ವಲಸೆ ಬಂದವರು ಎಂಬ ವಾದವೂ ಇದೆಯಷ್ಟೆ.

ಕ್ಯಾಸ್ಪಿಯನ್ ತಟದ ಸುರಖಾನಿ ಎಂಬಲ್ಲಿ ಜ್ವಾಲೆಕಾರುವ ಮತ್ತೊಂದು ಜಾಗವಿದೆ. ಇದನ್ನು ‘ಆತಿಶ್‌ಗಾಹ್’ (ಅಗ್ನಿದೇಗುಲ) ಎನ್ನಲಾಗುತ್ತದೆ. ಇದರ ಹಳೆಯ ಚಿತ್ರಪಟಗಳಲ್ಲಿ, ಅಗ್ನಿಕುಂಡದಿಂದ ಅಗ್ನಿಜ್ವಾಲೆಗಳು ಹೊಮ್ಮುತ್ತಿರುವ ಚಿತ್ರಣವಿದೆ. ಅನಿಲ-ತೈಲಗಳನ್ನು ದೊಡ್ಡಪ್ರಮಾಣದಲ್ಲಿ ತೆಗೆಯಲು ಆರಂಭಿಸಿದ ಬಳಿಕ, ಈ ಜ್ವಾಲೆಗಳು ನಿಂತುಹೋದವು. ಈಗ ಅಗ್ನಿಕುಂಡಕ್ಕೆ ಕೃತಕವಾಗಿ ಅನಿಲ ಪೂರೈಸುತ್ತ ಜ್ವಲಿಸುವಂತೆ ಮಾಡಿದೆ. ಈ ಅಗ್ನಿದೇಗುಲ ಹಿಂದೊಮ್ಮೆ, ಚೀನಾದಿಂದ ಇಟಲಿಯ ತನಕ 7000 ಸಾವಿರ ಕಿ.ಮೀ ಫಾಸಲೆಯಿದ್ದ ಸಿಲ್ಕ್ರೂಟಿಗೆ ಸೇರಿಕೊಳ್ಳುತ್ತಿದ್ದ, ಭಾರತೀಯ ವ್ಯಾಪಾರಿಗಳ ತಂಗುದಾಣವಾಗಿತ್ತು. ಇದನ್ನು ಭಾರತದ ಫಾರಸಿ ಸಿಖ್ ಹಿಂದೂ ವ್ಯಾಪಾರಿಗಳು 18ನೇ ಶತಮಾನದಲ್ಲಿ ಕಟ್ಟಿಸಿದರು. ಬ್ರಿಟಿಷ್ ವ್ಯಾಪಾರಿಗಳು, ಇಲ್ಲಿದ್ದ ಹಠಯೋಗಿಗಳ ಬಗ್ಗೆ ದಾಖಲಿಸಿದ್ದಾರೆ. ಅಗ್ನಿದೇಗುಲದ ಸುತ್ತಲೂ ಕೋಟೆಗೋಡೆಯಿದೆ. ಇದು ಸರಕು ಸಂಗ್ರಹಿಸುವ ವ್ಯಾಪಾರಿ ಕೋಠಿಯಾಗಿಯೂ ಕೆಲಸ ಮಾಡಿರುವಂತಿದೆ. ಬೌದ್ಧವಿಹಾರಗಳಲ್ಲಿ ಅಥವಾ ಸೂಫಿಗಳ ಖಾನಖಾಗಳಲ್ಲಿ ಇರುವಂತೆ, ಗುಡಿಯ ಸುತ್ತ ವರ್ತುಲಾಕಾರವಾಗಿ ಖೋಲಿಗಳಿವೆ. ಗುಹೆಯಂತಹ ಈ ಖೋಲಿಗಳಲ್ಲಿ ಭಾರತೀಯ ವ್ಯಾಪಾರಿಗಳು ಒಟ್ಟಿಗಿರುವ ಪ್ರತಿಕೃತಿಗಳಿವೆ. ಖೋಲಿಯ ಹೊರಗೋಡೆಗಳಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸ್ಕೃತದಲ್ಲೂ ಮತ್ತು ನಶ್ತಲಿಕ್ ಲಿಪಿಯಲ್ಲಿ ಫಾರಸಿಯಲ್ಲೂ ಗುರುಮುಖಿ ಲಿಪಿಯಲ್ಲಿ ಪಂಜಾಬಿಯಲ್ಲೂ ಕೆತ್ತಿದ ಶಾಸನಗಳಿವೆ. ದೇವನಾಗರಿ ಶಾಸನಗಳಲ್ಲಿ ಗಣಪತಿ ಸ್ತುತಿಯಿದೆ. ಭಾರತದ ಫಾರಸಿಗಳು ಈಗಲೂ ಈ ಅಗ್ನಿದೇಗುಲಕ್ಕೆ ಯಾತ್ರೆ ಬರುತ್ತಾರಂತೆ.

ಕ್ಯಾಸ್ಪಿಯನ್ ಕಡಲಗರ್ಭವೂ ಅದರ ತೀರಪ್ರದೇಶಗಳೂ ಹೊಮ್ಮಿಸುತ್ತಿರುವ ಮುಖ್ಯದ್ರವ ಕಚ್ಚಾತೈಲ. ಇಲ್ಲಿನ ನೆಲಕ್ಕೆ ಎಲ್ಲಿ ರಂಧ್ರ ಕೊರೆದರೂ ಎಣ್ಣೆ ಬುಗ್ಗೆಯೊಡೆಯುತ್ತದೆ. ಬಾಕುವಿನ ಹೊರವಲಯದಲ್ಲಿ, ಏತದಿಂದ ರೈತರು ನೀರು ಮೊಗೆವಂತೆ, ರಿಗ್ಗಿಂಗ್ ಯಂತ್ರಗಳನ್ನು ಹಿತ್ತಲು ಮತ್ತು ಪಾರ್ಕುಗಳನ್ನೂ ಬಿಡದಂತೆ ಸ್ಥಾಪಿಸಲಾಗಿತ್ತು. ಇವು ಹಗಲೂ ರಾತ್ರಿ, ಮಕ್ಕಳ ಕೀಲುಕುದುರೆಯಂತೆ ತಲೆಯನ್ನು ಕೆಳಕ್ಕೂ ಮೇಲಕ್ಕೂ ತೂಗುತ್ತಿದ್ದವು. ಇಲ್ಲಿಂದ ಸಂಗ್ರಹವಾಗುವ ಕೆಸರನೀರಿನಂತಹ ಕಚ್ಚಾತೈಲವು ಪೈಪುಗಳ ಮೂಲಕ ರಿಫೈನರಿಗಳಿಗೆ ಹೋಗುತ್ತಿತ್ತು. ಜ್ವಾಲೆಯುಗುಳುವ ಕೆಸರು, ಅನಿಲ ಮತ್ತು ರಾಡಿಯಂತಹ ತೈಲ, ಅಝರ್‌ಬೈಜಾನಿನ ಆರ್ಥಿಕತೆಯನ್ನೇ ಬದಲಿಸಿದ್ದವು.

ಬಾಕುವನ್ನು ತೊರೆದು ವಿಮಾನ ಹಾರುವಾಗ ಬಿಡುಹಗಲು. ನೀಲಾಕಾಶ. ಬಾಕುನಗರ ಚಿತ್ರ ಬರೆದಂತೆ ಕಾಣುತ್ತಿತ್ತು. ಆಗಸದಿಂದ ನೆಲದ ಮರೆಯ ನಿಧಾನಗಳಂತಿರುವ ಕೆಸರು ಜ್ವಾಲೆ ತೈಲಗಳು ಗೋಚರಿಸಲಿಲ್ಲ. ಆದರೆ ಇವನ್ನು ಹಡೆವ ತಾಯಿ ಕ್ಯಾಸ್ಪಿಯನ್ ಕಡಲು, ತನ್ನ ನೀಲಮೈ ಚಾಚಿ ಆಗಸದೊಂದಿಗೆ ಸ್ಪರ್ಧಿಸುತ್ತಿತ್ತು. ಅದರ ಕಂಪಿಸುವ ಕಿರುಅಲೆಗಳ ಮೇಲೆ ಬಿದ್ದ ಸೂರ್ಯನ ಬೆಳಕು ನಮ್ಮ ಮುಖಕ್ಕೆ ಬಡಿಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.