ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಅಧ್ಯಾಯ: ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್

Published 27 ಜೂನ್ 2024, 4:49 IST
Last Updated 27 ಜೂನ್ 2024, 4:49 IST
ಅಕ್ಷರ ಗಾತ್ರ

ಭೋಪಾಲ್: ದೇಶದಲ್ಲಿ 1975-77ರ ವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ನಡೆದ ಅತಿರೇಕ ಮತ್ತು ದಮನಕಾರಿ ನೀತಿಯ ವಿರುದ್ಧ ನಡೆದ ಹೋರಾಟವನ್ನು ವಿವರಿಸುವ ಅಧ್ಯಾಯವನ್ನು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು.

ಭೋಪಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಯಾದವ್, 'ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟದ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅಗತ್ಯ. ಹಾಗಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಕೈಗೊಂಡ ಕಠಿಣ ಕ್ರಮ, ಅದನ್ನು ವಿರೋಧಿಸಿ ದೇಶದಲ್ಲಿ ನಡೆದ ಹೋರಾಟದ ಸನ್ನಿವೇಶಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು' ಎಂದು ಹೇಳಿದರು.

ಇದೇ ವೇಳೆ ಅವರು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದವರಿಗೆ ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಘೋಷಿಸಿದರು.

  • ಹೋರಾಟಗಾರರಿಗೆ ಹೆದ್ದಾರಿಗಳಲ್ಲಿ ಟೋಲ್ ಪಾವತಿಯಲ್ಲಿ ಸಡಿಲಿಕೆ ಹಾಗೂ ಸುಂಕದಲ್ಲಿ ಶೇ 50ರಷ್ಟು ರಿಯಾಯಿತಿಯಲ್ಲಿ ಮೂರು ದಿನಗಳ ಕಾಲ ಸರ್ಕಾರಿ ಸರ್ಕ್ಯೂಟ್ ಮತ್ತು ವಿಶ್ರಾಂತಿ ಗೃಹಗಳಲ್ಲಿ ಉಳಿಯುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಯಾದವ್ ಹೇಳಿದರು.

  • ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದಲ್ಲಿ , ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗಳು ಅಥವಾ ಇತರ ಮಹಾನಗರಗಳಿಗೆ ಪ್ರಯಾಣಿಸಲು ಏರ್ ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗುವುದು ಎಂದು ಯಾದವ್ ಈ ಸಂದರ್ಭದಲ್ಲಿ ಘೋಷಿಸಿದರು.

  • ರಾಜ್ಯದಲ್ಲಿ ಆರಂಭಿಸಿರುವ ಏರ್ ಟ್ಯಾಕ್ಸಿ ಸೇವೆಯಡಿ ಹೋರಾಟಗಾರರಿಗೆ ಪ್ರಯಾಣ ದರದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.

  • ಹೋರಾಟಗಾರರರು ನಿಧನರಾದರೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಅಲ್ಲದೇ ಮೃತರ ಕುಟುಂಬಗಳಿಗೆ ನೀಡಲಾಗುವ ಮೊತ್ತವನ್ನು ₹8 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಯಾದವ್‌ ಹೇಳಿದರು.

  • ಹೋರಾಟಗಾರರ ಕುಟುಂಬದ ಸದಸ್ಯರಿಗೆ ಕೈಗಾರಿಕೆ ಅಥವಾ ಇತರ ಉದ್ಯಮಗಳನ್ನು ಸ್ಥಾಪಿಸಲು ಅಗತ್ಯ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯಂತೆ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ಅವಧಿಯಲ್ಲಿ ಅಂದಿನ ವಿರೋಧ ಪಕ್ಷಗಳ ನಾಯಕರನ್ನು, ಸರ್ಕಾರದ ಟೀಕಾಕಾರನ್ನು ಸೆರೆಮನೆಗೆ ತಳ್ಳಲಾಗಿತ್ತು.

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಅದರ ವಿರುದ್ಧ ಪ್ರತಿಭಟಿಸಲು ಯತ್ನಿಸಿದ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲ ಪತ್ರಕರ್ತರನ್ನೂ ಜೈಲಿಗೆ ಹಾಕಲಾಗಿತ್ತು . ಜೊತೆಗೆ ‘ಮಾಧ್ಯಮ ಸೆನ್ಸರ್‌ಶಿಪ್‌’ ಅನ್ನು ಜಾರಿಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT