ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ

Published 30 ಜೂನ್ 2024, 6:57 IST
Last Updated 30 ಜೂನ್ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಸೋಮವಾರದಿಂದ (ಜುಲೈ 1) ಜಾರಿಗೆ ಬರಲಿವೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿರುವ ಕಾಯ್ದೆಗಳು. 

ಈ ಮೂರು ಕಾನೂನುಗಳು ಕ್ರಮವಾಗಿ ಬ್ರಿಟಿಷ್ ಕಾಲದಲ್ಲಿ, ಅಂದರೆ 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ.

ಜೀರೋ ಎಫ್‌ಐಆರ್, ಆನ್‌ಲೈನ್‌ ಮೂಲಕ ದೂರು ಸಲ್ಲಿಕೆಗೆ ಅವಕಾಶ, ಎಸ್‌ಎಂಎಸ್‌ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಹೇಯ ಅಪರಾಧ ನಡೆದಾಗ ಆ ಸ್ಥಳದ ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಿರುವಂತಹ ನಿಬಂಧನೆಗಳನ್ನು ಒಳಗೊಂಡಿರುವ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.

ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕಾರ್ಯನಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ. ಇದೇ ವೇಳೆ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 1ರ ಹಾಗೂ ಆ ಬಳಿಕದ ಎಲ್ಲ ಎಫ್‌ಐಆರ್‌ಗಳನ್ನು ಸಿಆರ್‌ಪಿಸಿಯ 154ನೇ ಸೆಕ್ಷನ್‌ ಬದಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 173ನೇ ಸೆಕ್ಷನ್‌ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. 

ಮೂರು ಕಾನೂನುಗಳ ಕೆಲವು ಅಂಶಗಳು

  • ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಬೇಕು. ಮೊದಲ ವಿಚಾರಣೆ ನಡೆದ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು

  • ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನಗಳ ಒಳಗೆ ಸಲ್ಲಿಕೆಯಾಗಬೇಕು

  • 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು

  • ಅಪರಾಧಗಳ ಬಗ್ಗೆ ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮ ಬಳಸಿ ದೂರು ನೀಡಬಹುದು. ವ್ಯಕ್ತಿಯು ಪೊಲೀಸ್‌ ಠಾಣೆಗೆ ಖುದ್ದಾಗಿ ಹೋಗುವ ಅಗತ್ಯವಿಲ್ಲ

  • ‘ಜೀರೊ ಎಫ್‌ಐಆರ್‌’ ಪರಿಕಲ್ಪನೆಯಡಿ, ವ್ಯಕ್ತಿಯು ಅಪರಾಧ ಕೃತ್ಯದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬಹುದು. ಠಾಣಾ ವ್ಯಾಪ್ತಿಯ ಪ್ರಶ್ನೆ ಉದ್ಭವಿಸದು

  • ಬಂಧಿತ ವ್ಯಕ್ತಿಯು ತನ್ನ ಸ್ಥಿತಿಯ ಬಗ್ಗೆ ತಾನು ಇಚ್ಛಿಸಿದ ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಬಹುದು. ಬಂಧಿತ ವ್ಯಕ್ತಿಗೆ ತಕ್ಷಣಕ್ಕೆ ನೆರವು ಪಡೆಯಲು ಇದರಿಂದ ಸಾಧ್ಯವಾಗಲಿದೆ

  • ಬಂಧನದ ವಿವರಗಳನ್ನು ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಕಟಿಸಬೇಕು.

  • ಮಹಿಳೆಯರನ್ನು ಗುರಿಯಾಗಿಸಿಕೊಂಡ ಕೆಲವು ಅಪರಾಧಗಳಲ್ಲಿ, ಸಂತ್ರಸ್ತೆಯ ಹೇಳಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಮಹಿಳಾ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ದಾಖಲು ಮಾಡಿಕೊಳ್ಳಬೇಕು

  • ಆರೋಪಿ ಹಾಗೂ ಸಂತ್ರಸ್ತರಿಗೆ ಎಫ್‌ಐಆರ್, ಪೊಲೀಸ್ ವರದಿ, ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳನ್ನು 14 ದಿನಗಳೊಳಗೆ ನೀಡಬೇಕು

  • ಸಮನ್ಸ್‌ಗಳನ್ನು ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕ ರವಾನಿಸಬಹುದು

  • ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಗರಿಷ್ಠ ಎರಡು ಸಲ ಮಾತ್ರ ಮುಂದೂಡಬಹುದು

  • ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಸಾಕ್ಷಿಗಳ ರಕ್ಷಣೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು

  • ಗಂಭೀರ ಸ್ವರೂಪದ ಅಪರಾಧ ನಡೆದ ಸಂದರ್ಭಗಳಲ್ಲಿ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯ. ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಬೇಕು

  • ತಲೆಮರೆಸಿಕೊಂಡ ಆರೋಪಿಗಳ ವಿಚಾರಣೆ ಮತ್ತು ಅವರ ವಿರುದ್ಧ ತೀರ್ಪು ನೀಡಲು ಅವಕಾಶ

  • ಮಹಿಳೆಯರು, 15 ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ತೀವ್ರ ಅನಾರೋಗ್ಯ ಸಮಸ್ಯೆ ಇರುವವರಿಗೆ ಪೊಲೀಸ್ ಠಾಣೆಗೆ ಹೋಗುವುದರಿಂದ ವಿನಾಯಿತಿ

ಕಾನೂನುಗಳನ್ನು ಭಾರತೀಯರು ಭಾರತದ ಸಂಸತ್ತಿನ ಮೂಲಕ ಭಾರತೀಯರಿಗಾಗಿ ಮಾಡಿದ್ದಾರೆ. ಬ್ರಿಟಿಷರ ಕಾಲದ ಅಪರಾಧ ಕಾನೂನುಗಳ ಅಂತ್ಯವನ್ನು ಇದು ಸೂಚಿಸುತ್ತದೆ
ಅಮಿತ್‌ ಶಾ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT