ಎರಡನೇ ತಿದ್ದುಪಡಿ
ಈ ತಿದ್ದುಪಡಿಯು ರಾಜ್ಯಗಳ ವಿದ್ಯಮಾನಗಳಿಗೆ ಸಂಬಂಧಿಸಿದ್ದರಿಂದ, ಇದಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ ಎಂದು ಸಮಿತಿ ಹೇಳಿದೆ. ಈ ತಿದ್ದುಪಡಿಯು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕಾಗಿ, ಚುನಾವಣಾ ಆಯೋಗವು (ಇ.ಸಿ) ರಾಜ್ಯ ಚುನಾವಣಾ ಆಯೋಗಗಳ (ಎಸ್.ಇ.ಸಿ) ಜೊತೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಅವಕಾಶಗಳಿಗೆ ಸಂಬಂಧಿಸಿದ್ದಾಗಿದೆ. ಸಾಂವಿಧಾನಿಕವಾಗಿ ಕೇಂದ್ರ ಚುನಾವಣಾ ಆಯೋಗ (ಇ.ಸಿ) ಮತ್ತು ರಾಜ್ಯ ಚುನಾವಣಾ ಆಯೋಗಗಳು (ಎಸ್.ಇ.ಸಿ) ಪ್ರತ್ಯೇಕ ಸಂಸ್ಥೆಗಳಾಗಿವೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನ, ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ. ಇನ್ನು, ಮುನ್ಸಿಪಾಲಿಟಿಗಳು, ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹೊಣೆ ಎಸ್.ಇ.ಸಿಗಳದ್ದು. ಹೀಗಾಗಿ, ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯು, ಲೋಕಸಭೆ ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ, ಹೊಸದಾಗಿ 324ಎ ವಿಧಿಯನ್ನು ಸೇರ್ಪಡೆ ಮಾಡಲಾಗುತ್ತದೆ.