ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಹಮದಾಬಾದ್‌ | ₹1,841 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

Published : 6 ಅಕ್ಟೋಬರ್ 2024, 15:14 IST
Last Updated : 6 ಅಕ್ಟೋಬರ್ 2024, 15:14 IST
ಫಾಲೋ ಮಾಡಿ
Comments

ಅಹಮದಾಬಾದ್‌: ಗುಜರಾತ್‌ನ ಎಟಿಎಸ್‌ (ಭಯೋತ್ಪಾದಕ ನಿಗ್ರಹ ದಳ), ನವದೆಹಲಿಯ ಎನ್‌ಸಿಬಿ (ಮಾದಕವಸ್ತು ನಿಯಂತ್ರಣ ಘಟಕ) ಜತೆಗೂಡಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ₹1,841 ಕೋಟಿ ಮೌಲ್ಯದ ‘ಮೆಫೆಡ್ರೋನ್’ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ. 

ಈ ವಿಚಾರವನ್ನು ಗುಜರಾತ್‌ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ‘ಎಕ್ಸ್‌’ ಮೂಲಕ ಖಚಿತಪಡಿಸಿದ್ದಾರೆ.

ಎಟಿಎಸ್‌ ಅಧಿಕಾರಿಗಳ ಪ್ರಕಾರ, ‘ಕಾರ್ಖಾನೆಯಲ್ಲಿ ಮಾದಕದ್ರವ್ಯ ತಯಾರಿಸುತ್ತಿದ್ದ ಅತೀ ದೊಡ್ಡ ಪ್ರಕರಣ ಇದಾಗಿದೆ’.

ಭೋಪಾಲ್‌ನ ಹೊರವಲಯದಲ್ಲಿರುವ ಬಗ್ರೋಡಾ ಕೈಗಾರಿಕಾ ವಲಯದಲ್ಲಿರುವ ಕಾರ್ಖಾನೆ ಮೇಲೆ ಶನಿವಾರ ದಾಳಿ ನಡೆಸಲಾಯಿತು. ಈ ವೇಳೆ ಕಾರ್ಖಾನೆಯಲ್ಲಿ ‘ಮೆಫೆಡ್ರೋನ್’ ತಯಾರಿಸುತ್ತಿದ್ದರು. ಘನ ಹಾಗೂ ದ್ರವ ರೂಪದಲ್ಲಿದ್ದ 907.09 ಕೆ.ಜಿ  ‘ಮೆಫೆಡ್ರೋನ್‌’ ಅನ್ನು ವಶಕ್ಕೆ ಪಡೆಯಲಾಗಿದೆ. 2,500 ಚದರ ಅಡಿ ವಿಸ್ತೀರ್ಣದಲ್ಲಿ ಈ ಘಟಕವಿದ್ದು, ದಿನವೊಂದಕ್ಕೆ 25 ಕೆ.ಜಿ. ‘ಮೆಫೆಡ್ರೋನ್’ ತಯಾರಿಸುವ ಸಾಮರ್ಥ್ಯ ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜತೆಗೆ ಮಾದಕದ್ರವ್ಯ ತಯಾರಿಸಲು ಬಳಸುತ್ತಿದ್ದ 5 ಸಾವಿರ ಕೆ.ಜಿ ಕಚ್ಚಾವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಗ್ರೈಂಡರ್‌, ಮೋಟರ್‌, ಗ್ಲಾಸ್‌ ಫ್ಲಾಸ್ಕ್‌, ಹೀಟರ್‌ ಹಾಗೂ ಇತರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಭೋಪಾಲ್‌ನ ಸುಲ್ತಾನ್‌ಬಾದ್‌ ರಸ್ತೆಯ ಕೊಟ್ರಾ ನಿವಾಸಿ ಅಮಿತ್‌ ಪ್ರಕಾಶ್‌ಚಂದ್ರ ಚತುರ್ವೇದಿ (57) ಮಹಾರಾಷ್ಟ್ರದ ನಾಸಿಕ್‌ನ ಪ್ರಭು ಅಂಟ್ಲಾಟೀಸ್‌ ನಿವಾಸಿ ಸನ್ಯಾಲ್‌ ಪ್ರಕಾಶ್‌ ಬಾನೆ (40) ಅವರನ್ನು ಎಟಿಎಸ್‌ ವಶಕ್ಕೆ ಪಡೆದುಕೊಂಡಿದೆ.

ಬಂಧಿತ ಆರೋಪಿಗಳ ಜತೆ ಗುಜರಾತ್‌ನ ಎಟಿಎಸ್‌ ತಂಡ
ಬಂಧಿತ ಆರೋಪಿಗಳ ಜತೆ ಗುಜರಾತ್‌ನ ಎಟಿಎಸ್‌ ತಂಡ

ಮುಂಬೈನ ಅಂಬೋಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ಮೆಫೆಡ್ರೋನ್‌ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಸನ್ಯಾಲ್‌ ಪ್ರಕಾಶ್‌ ಬಾನೆಯನ್ನು ಬಂಧಿಸಲಾಗಿತ್ತು. ಆತನಿಗೆ ಐದು ವರ್ಷ ಜೈಲು ಶಿಕ್ಷೆಯೂ ಆಗಿತ್ತು.  ಬಿಡುಗಡೆಯ ಬಳಿಕ ಚತುರ್ವೇದಿ ಜತೆಗೆ ಸೇರಿಕೊಂಡು, ಮೆಫೆಡ್ರೋನ್‌ ತಯಾರಿಸಿ, ಮಾರಾಟದಲ್ಲಿ ತೊಡಗಿದ್ದ. ಬಗ್ರೋಡಾ  ಕಾರ್ಖಾನೆಯನ್ನು 6ರಿಂದ 7 ತಿಂಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದು, ಕಳೆದ ಮೂರರಿಂದ ನಾಲ್ಕು ತಿಂಗಳಿನಿಂದ ಮಾದಕದ್ರವ್ಯ ತಯಾರಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ.   ಆಗಸ್ಟ್‌ ತಿಂಗಳಲ್ಲಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ವಸತಿ ಗೃಹದಲ್ಲಿ ಮೆಫೆಡ್ರೋನ್‌ ತಯಾರಿಸುತ್ತಿದ್ದ ಮುಂಬೈನ ಡೊಂಗ್ರಿ ನಿವಾಸಿಗಳಾದ ಎಂ.ಡಿ ಯೂನುಸ್‌ ಅಲಿಯಾಸ್‌ ಐಜಾಜ್‌ (41), ಎಂ.ಡಿ. ಆದಿಲ್‌ ಶೇಕ್‌ (34) ಅವರನ್ನು ಬಂಧಿಸಿದ್ದರು. ಈ ವೇಳೆ ₹800 ಕೋಟಿ ಮೌಲ್ಯದ 793 ಕೆ.ಜಿ. ದ್ರವರೂಪದ  ‘ಮೆಫೆಡ್ರೋನ್‌’ ವಶಪಡಿಸಿಕೊಂಡಿದ್ದರು.    ಜೂನ್‌ ತಿಂಗಳಲ್ಲಿ ಇದೇ ಮಾದರಿಯಲ್ಲಿ ಸೂರತ್‌ನ ಪಲ್ಸಾನಾದಲ್ಲಿ ಕಾರ್ಖಾನೆ ನಡೆಸುತ್ತಿದ್ದ ಸುನಿಲ್‌ ಯಾದವ್‌, ವಿಜಯ್‌ ಹಜೆರಾ, ಹರೀಶ್‌ ಕೊರಟ್‌ ಅವರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT