ಮಾಮಲ್ಲಪುರಂ: ಭಾರತ–ಚೀನಾ ವ್ಯಾಪಾರದಲ್ಲಿ ವ್ಯಾಪಾರ ಕೊರತೆಯು ಭಾರತದ ಬಹುದೊಡ್ಡ ಕಳವಳ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಈ ವಿಚಾರ ಮುಖ್ಯವಾಗಿ ಚರ್ಚೆಯಾಗಿದೆ. ಆರ್ಥಿಕ ಮತ್ತು ವ್ಯಾಪಾರ ಸಂವಹನಕ್ಕೆ ಉನ್ನತ ಮಟ್ಟದ ವ್ಯವಸ್ಥೆ ರಚಿಸಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.

ಉನ್ನತದ ಮಟ್ಟದ ಈ ಸಮಿತಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಚೀನಾದ ಉಪಪ್ರದಾನಿ ಹು ಚುನ್ಹುವಾ ಅವರ ಜಂಟಿ ನಾಯಕತ್ವ ಇರುತ್ತದೆ.

ಹೆಚ್ಚುತ್ತಲೇ ಇರುವ ವ್ಯಾಪಾರ ಕೊರತೆ ನೀಗಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಷಿ ಅವರನ್ನು ಮೋದಿ ಕೋರಿದ್ದಾರೆ. ಜತೆಗೆ,ತಯಾರಿಕಾ ಕ್ಷೇತ್ರದಲ್ಲಿ ಪಾಲುದಾರಿಕೆಯ ಮಾರ್ಗಗಳನ್ನು ಶೋಧಿಸುವುದಕ್ಕೂ ಒಪ್ಪಿಕೊಳ್ಳಲಾಗಿದೆ.

ಚೆನ್ನೈ ಸಮೀಪದ ಕೋವಲಂನ ಕಡಲತಡಿಯಲ್ಲಿನ ರಿಸಾರ್ಟ್ನಲ್ಲಿ ನಡೆದ ಭಾರತ–ಚೀನಾ ಎರಡನೇ ಅನೌಪಚಾರಿಕ ಶೃಂಗಸಭೆಯು ಫಲಪ್ರದವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಸಭೆಯ ಬಳಿಕ ತಿಳಿಸಿದ್ದಾರೆ.

ಭಾರತ, ಚೀನಾ ಮತ್ತು ಇತರ 14 ರಾಷ್ಟ್ರಗಳ ನಡುವಣ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಪ್ರಸ್ತಾವದ ಬಗ್ಗೆಯೂ ಇಬ್ಬರೂ ನಾಯಕರು ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

ಶೃಂಗಸಭೆಯಿಂದ ಸಮತೋಲಿತ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದೇವೆ. ಇದು ಸರಕು, ಸೇವೆ ಮತ್ತು ಹೂಡಿಕೆ ವಹಿವಾಟು ಎಲ್ಲವುಗಳಲ್ಲಿಯೂ ವ್ಯಕ್ತವಾಗಬೇಕು ಎಂದು ಮೋದಿ ಅವರು ಜಿನ್ಪಿಂಗ್ಗೆ ಮನವರಿಕೆ ಮಾಡಿದ್ದಾರೆ.

ಆರ್ಸಿಇಪಿ ಬಗ್ಗೆ ಮೋದಿ ಅವರ ಅಭಿಪ್ರಾಯಗಳನ್ನು ಪರಿಶೀಲಿಸುವುದಾಗಿ ಜಿನ್ಪಿಂಗ್ ಹೇಳಿದ್ದಾರೆ. ಈ ವಿಚಾರದಲ್ಲಿ ಇನ್ನಷ್ಟು ಸಮಾಲೋಚನೆ ಅಗತ್ಯವಿದೆ ಎಂದೂ ಹೇಳಿರುವುದಾಗಿ ಗೋಖಲೆ ತಿಳಿಸಿದ್ದಾರೆ.

ಆಯ್ದ ಕ್ಷೇತ್ರಗಳಲ್ಲಿ ತಯಾರಿಕಾ ಪಾಲುದಾರಿಕೆಗೆ ಮೋದಿ ಮತ್ತು ಜಿನ್ಪಿಂಗ್ ಒಪ್ಪಿದ್ದಾರೆ. ಉನ್ನತ ಮಟ್ಟದ ಸಮಿತಿಯ ಮೊದಲ ಸಭೆಯಲ್ಲಿಯೇ ಈ ಪಾಲುದಾರಿಕೆಯ ರೂಪುರೇಷೆ ನಿರ್ಧಾರದ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಔಷಧ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ಚೀನಾದಲ್ಲಿ ಹೂಡಿಕೆ ಮಾಡಬೇಕು ಎಂದು ಜಿನ್ಪಿಂಗ್ ಒತ್ತಾಯಿಸಿದ್ದಾರೆ.

2018ರ ಏಪ್ರಿಲ್ನಲ್ಲಿ ಚೀನಾದ ವುಹಾನ್ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಅದಾದ ಬಳಿಕ, ಭಾರತದ ವ್ಯಾಪಾರ ಕೊರತೆಯನ್ನು ನೀಗಿಸಲು ಚೀನಾ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಔಷಧ ಮತ್ತು ಕೆಲವು ಕೃಷಿ ಉತ್ಪನ್ನಗಳ ರಫ್ತಿಗೆ ಇದ್ದ ನಿಯಂತ್ರಣಗಳನ್ನು ಸಡಿಲಿಸಿತ್ತು. ಆದರೆ, ಈ ವಿನಾಯಿತಿ ಭಾರತದ ರಫ್ತನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ಸಹಕಾರಿ ಆಗಿಲ್ಲ ಎಂಬ ವಿಚಾರವನ್ನು ಮೋದಿ ಅವರು ಜಿನ್ಪಿಂಗ್ ಗಮನಕ್ಕೆ ತಂದಿದ್ದಾರೆ.

ಚಿನ್ನದ ನೇಯ್ಗೆಯ ಶಾಲು ಉಡುಗೊರೆ

ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಚಿತ್ರವಿರುವ, ಕೈಯಿಂದ ನೇಯ್ದ ಒಂದು ರೇಷ್ಮೆ ಶಾಲನ್ನು ಮೋದಿ ಅವರು ಚೀನಾದ ಅಧ್ಯಕ್ಷರಿಗೆ ಶನಿವಾರ ಉಡುಗೊರೆಯಾಗಿ ನೀಡಿದರು. ಈ ಶಾಲನ್ನು ವಸ್ತ್ರ ವಿನ್ಯಾಸಕ ಎಂ ಧರ್ಮರಾಜ್ ಅವರು ವಿನ್ಯಾಸಗೊಳಿಸಿದ್ದರೆ, ಎ. ಷಣ್ಮುಗಸುಂದರಂ ಹಾಗೂ ಈ. ಮನೋಜ್ ಕುಮಾರ್ ಅವರು ನೇಯ್ದಿದ್ದಾರೆ.

ಚಿನ್ನದ ನೇಯ್ಗೆಯ ಈ ಶಾಲ್ನ ಎರಡೂ ಅಂಚುಗಳಲ್ಲಿ ಹೂವಿನ ಚಿತ್ರಗಳನ್ನು ರಚಿಸಲಾಗಿದ್ದು ಇದನ್ನು ತಯಾರಿಸಲು 15 ದಿನಗಳು ತಗುಲಿವೆ. ಕೆಂಪು ಬಣ್ಣದ ಈ ಶಾಲನ್ನು ಶುದ್ಧ ಮಲ್ಬರಿ ರೇಷ್ಮೆಯಿಂದ ತಯಾರಿಸಲಾಗಿದೆ.

ನಾಯಕರು ಶನಿವಾರ ಮಾಡಿದ್ದೇನು?

-ಮೋದಿ ಅವರು ಕೋವಳಂನಲ್ಲೇ ಉಳಿದಿದ್ದರು. ಷಿ ಅವರು ರಸ್ತೆ ಮಾರ್ಗವಾಗಿ ಕೋವಳಂಗೆ ಬಂದರು

-ಸಮುದ್ರದಂಡೆಯಲ್ಲಿರುವ ಪಂಚತಾರಾ ರೆಸಾರ್ಟ್ನಲ್ಲಿ ಷಿ ಅವರನ್ನು ಮೋದಿ ಬರಮಾಡಿಕೊಂಡರು. ಶೃಂಗಸಭೆಯ ಸ್ಥಳದವರೆಗೂ ಇಬ್ಬರು ನಾಯಕರು ಬ್ಯಾಟರಿ ಚಾಲಿತ ವಾಹನದಲ್ಲಿ ಪ್ರಯಾಣಿಸಿದರು

-ಸುಮಾರು 40 ನಿಮಿಷಗಳ ಕಾಲ ನಾಯಕರ ಮಾತುಕತೆ ನಡೆಯಿತು

-45 ನಿಮಿಷ ಇಬ್ಬರು ನಾಯಕರು ಪರಸ್ಪರ ರಾಷ್ಟ್ರಗಳ ನಿಯೋಗಗಳ ಜೊತೆ ಮಾತನಾಡಿದರು

-ಷಿ ಅವರನ್ನು ಭಾರತೀಯ ಕರಕುಶಲ ಪ್ರದರ್ಶನದ ಸ್ಥಳಕ್ಕೆ ಮೋದಿ ಅವರು ಕರೆದೊಯ್ದರು

-ಷಿ ಅವರಿಗೆ ಮಧ್ಯಾಹ್ನದ ಭೋಜನ ಏರ್ಪಡಿಸಿ ಮೋದಿ ಬೀಳ್ಕೊಟ್ಟರು

ಹುವಾವೆಗೆ ಅವಕಾಶ?

ಶೃಂಗಸಭೆಯ ಸಂದರ್ಭದಲ್ಲಿ ಚೀನಾಕ್ಕೆ ಸಕಾರಾತ್ಮಕ ಸಂದೇಶವೊಂದನ್ನು ಭಾರತ ನೀಡಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ಚೀನಾದ ಹುವಾವೆ ಕಂಪನಿಯ 5ಜಿ ಸೇವೆಯ ಪ್ರಾತ್ಯಕ್ಷಿಕೆಗೆ ಅವಕಾಶ ಕೊಡಲಾಗಿದೆ. ಇದು ದೆಹಲಿಯಲ್ಲಿ ಇದೇ 14ರಿಂದ 16ರವರೆಗೆ ನಡೆಯಲಿದೆ.

ಭಾರತದಲ್ಲಿ ಹುವಾವೆಯ 5ಜಿ ತಂತ್ರಾಂಶದ ವ್ಯಾಪಕ ಪರೀಕ್ಷೆಗೆ ಭಾರತ ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ, ಏರ್ಟೆಲ್ ಮತ್ತು ವೊಡಾಫೋನ್–ಐಡಿಯಾ ಜತೆಗೂಡಿ ಪ್ರಾತ್ಯಕ್ಷಿಕೆಗೆ ಅವಕಾಶ ಕೊಟ್ಟಿರುವುದು ಸಕಾರಾತ್ಮಕ ಅಂಶ.

ಹುವಾವೆ ಉತ್ಪನ್ನಗಳ ಬಳಕೆಯನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಈ ಕಂಪನಿಯು ದೂರಸಂಪರ್ಕ ಸಾಧನಗಳ ಮೂಲಕ ನಿಗಾ ಮತ್ತು ಗೂಢಚರ್ಯೆ ನಡೆಸಬಹುದು ಎಂಬುದು ಅಮೆರಿಕದ ಆತಂಕ.

ಹುವಾವೆ 5ಜಿ ಸೇವೆಗೆ ಅವಕಾಶ ಕೊಡಬಾರದು ಎಂದು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಅವರು ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದಾಗಲೂ ಹುವಾವೆ ಬಗ್ಗೆ ಎಚ್ಚರಿಕೆ ನೀಡಿದ್ದರು.

ಕಿನಾರೆಯಲ್ಲಿ ಪ್ಲಾಸ್ಟಿಕ್ ಹೆಕ್ಕಿ ‘ಸ್ವಚ್ಛ ಭಾರತ’ ಸಂದೇಶ

ಮಾಮಲ್ಲಪುರಂ: ಕರಾವಳಿಯ ಈ ಪಟ್ಟಣದಿಂದ ಮೋದಿ ಅವರು ‘ಸ್ವಚ್ಛ ಭಾರತ’ ಮತ್ತು ‘ಪ್ಲಾಸ್ಟಿಕ್
ಮುಕ್ತ ಭಾರತ’ದ ಸಂದೇಶವನ್ನು ನೀಡಿದ್ದಾರೆ. ಕೋವಲಂ ಕಡಲ ಕಿನಾರೆಯಲ್ಲಿ ಚೆಲ್ಲಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೋದಿ ಅವರು ಶನಿವಾರ ಬೆಳಿಗ್ಗೆ ಹೆಕ್ಕಿ ತೆಗೆದರು. ಸುಮಾರು ಮೂವತ್ತು ನಿಮಿಷ ಅವರು ಈ ಕೆಲಸ ಮಾಡಿದ್ದಾರೆ.

ಬೆಳಿಗ್ಗಿನ ನಡಿಗೆ (ಜಾಗಿಂಗ್) ಜತೆಗೆ ತ್ಯಾಜ್ಯ ಹೆಕ್ಕುವುದನ್ನು ಪ್ಲಾಗಿಂಗ್ ಎಂದು ಹೇಳಲಾಗುತ್ತಿದೆ. ಇದು ಸ್ವೀಡನ್ನಲ್ಲಿ 2016ರಲ್ಲಿ ಒಂದು ಅಭಿಯಾನದ ರೂಪದಲ್ಲಿ ಆರಂಭವಾಯಿತು. ಈಗ ಜಗತ್ತಿನಾದ್ಯಂತ ಜನಪ್ರಿಯವೂ ಆಗಿದೆ.

ಜಿನ್ಪಿಂಗ್ ಅವರ ಜತೆಗಿನ ಅನೌಪಚಾರಿಕ ಶೃಂಗಸಭೆಗಾಗಿ ಇಲ್ಲಿನ ಕಡಲ ಕಿನಾರೆಯ ಸಮೀಪದಲ್ಲಿರುವ ಐಷಾರಾಮಿ ರೆಸಾರ್ಟ್ನಲ್ಲಿ ಮೋದಿ ತಂಗಿದ್ದರು. ಶನಿವಾರ ಬೆಳಿಗ್ಗೆ ಎದ್ದವರು ಪ್ಲಾಗಿಂಗ್ ಮಾಡಿದರು. ಈ ಬಗ್ಗೆ ಅವರು ಸಂದೇಶ ಮತ್ತು ವಿಡಿಯೊವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.

‘ಬೆಳಿಗ್ಗೆ ಮಾಮಲ್ಲಪುರಂ ಕಡಲ ಕಿನಾರೆಯಲ್ಲಿ ಪ್ಲಾಗಿಂಗ್ ನಡೆಸಿದೆ. ಇದು ಸುಮಾರು 30 ನಿಮಿಷ ನಡೆಯಿತು. ನಾನು ಸಂಗ್ರಹಿಸಿದ್ದನ್ನು ಹೋಟೆಲ್ನ ಸಿಬ್ಬಂದಿ ಜಯರಾಜ್ಗೆ ನೀಡಿದೆ. ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳೋಣ. ಹಾಗೆಯೇ, ನಾವು ಆರೋಗ್ಯಕರವಾಗಿ, ಫಿಟ್ ಆಗಿ ಇರುವಂತೆ ಎಚ್ಚರ ವಹಿಸೋಣ’ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.

ಫ್ಯುಜಿಯಾನ್ ಜತೆ ‘ಸೋದರ ಬಂಧ’

ತಮಿಳುನಾಡು ಮತ್ತು ಚೀನಾದ ಫ್ಯುಜಿಯಾನ್ ಪ್ರಾಂತದ ನಡುವೆ ‘ಸೋದರ ರಾಜ್ಯ’ ಸಂಬಂಧ ಸ್ಥಾಪನೆಗೆ ಭಾರತ ಮತ್ತು ಚೀನಾ ನಿರ್ಧರಿಸಿವೆ. ಈ ಎರಡು ರಾಜ್ಯಗಳ ನಡುವೆ ಸುಮಾರು 800 ವರ್ಷಗಳ ಹಿಂದೆ ಇದ್ದ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಕ್ಕೆ ಪುನಶ್ಚೇತನ ನೀಡುವುದು ಇದರ ಉದ್ದೇಶ.

ಮಾಮಲ್ಲಪುರಂ ಮತ್ತು ಫ್ಯುಜಿಯಾನ್ ನಡುವಣ ಸಂಬಂಧದ ಬಗ್ಗೆ ಅಧ್ಯಯನ ನಡೆಸಲು ಅಕಾಡೆಮಿ ಸ್ಥಾಪನೆಗೂ ನಿರ್ಧರಿಸಲಾಗಿದೆ.

ಫ್ಯುಜಿಯಾನ್ನ ಕ್ವಾನ್ಜೌ ಎಂಬಲ್ಲಿ ತಮಿಳು ಶಾಸನಗಳು ಮತ್ತು ತಮಿಳು ವಾಸ್ತುಶಿಲ್ಪ ಶೈಲಿಯ ಅವಶೇಷಗಳು ಇತ್ತೀಚೆಗೆ ದೊರೆತಿದ್ದವು. ತಮಿಳು ವ್ಯಾಪಾರಿಗಳು 12ನೇ ಶತಮಾನದಲ್ಲಿ ಅಲ್ಲಿ ದೇಗುಲವೊಂದನ್ನು ನಿರ್ಮಿಸಿದ್ದರು ಎಂಬ ಸುಳಿವು ಇದರಿಂದ ಸಿಕ್ಕಿದೆ. ಈಗ, ‘ಸೋದರ ರಾಜ್ಯ’ ಸಂಬಂಧ ಅಭಿವೃದ್ಧಿಯಿಂದಾಗಿ ಶತಮಾನಗಳ ಹಳೆಯ ನಂಟು ಮರುಸ್ಥಾಪನೆಗೊಳ್ಳಲಿದೆ.

ಚೀನಾದ ರೇಷ್ಮೆ ಮಾರ್ಗದ ಭಾಗವಾಗಿದ್ದ ಮಾಮಲ್ಲಪುರಂ, ಎರಡು ಸಾವಿರ ವರ್ಷಗಳ ಹಿಂದೆಯೇ ಚೀನಾದ ಜತೆಗೆ ಸಂಬಂಧ ಹೊಂದಿತ್ತು.

ಮೋದಿ ತಮಿಳು ಪ್ರೀತಿ

ಸಾಂಪ್ರದಾಯಿಕ ಧೋತಿ ಮತ್ತು ಅರ್ಧ ತೋಳಿನ ಅಂಗಿ, ತಮಿಳು ಭಾಷೆಯಲ್ಲಿ ಟ್ವೀಟ್ ಮತ್ತು ತಮಿಳು ಆಹಾರಗಳ ಬಗ್ಗೆ ಮೆಚ್ಚುಗೆ ಮೂಲಕ ಮೋದಿ ಅವರು ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದಾದ ತಮಿಳು ಮತ್ತು ಅದರ ಸಂಸ್ಕೃತಿ ಬಗ್ಗೆ ಮತ್ತೆ ತಮ್ಮ ಅಭಿಮಾನ ಪ್ರಕಟಿಸಿದ್ದಾರೆ.

ಮೋದಿ ಅವರು ಯಾವ ರಾಜ್ಯಕ್ಕೆ ಹೋದರೂ ಆ ರಾಜ್ಯದ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಚೀನಾ ಅಧ್ಯಕ್ಷರನ್ನು ಬರಮಾಡಿಕೊಳ್ಳಲು ಮಾಮಲ್ಲಪುರಂಗೆ ಶುಕ್ರವಾರ ಬಂದಾಗಲೂ ಇದನ್ನು ಅವರು ಪಾಲಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಚೆನ್ನೈ ತಲುಪಿದ ಬಳಿಕ ಶನಿವಾರ ಅಲ್ಲಿಂದ ನಿರ್ಗಮಿಸುವವರೆಗೆ ಮೋದಿ ಅವರು ತಮ್ಮೆಲ್ಲ ಟ್ವೀಟ್ಗಳನ್ನು ತಮಿಳು, ಮ್ಯಾಂಡರಿನ್ ಮತ್ತು ಇಂಗ್ಲಿಷ್ನಲ್ಲಿ ಮಾಡಿದ್ದಾರೆ.

ತಮಿಳು ಭಾಷೆಯನ್ನು ಹೊಗಳುವ ವಿಚಾರದಲ್ಲಿ ಮೋದಿ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಧಾರಾಳತನ ತೋರಿದ್ದಾರೆ. ಜಿನ್ಪಿಂಗ್ ಜತೆಗಿನ ಶೃಂಗಸಭೆಯು ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧದ ಭಾಗ. ಆದರೆ, ಈ ಕಾರ್ಯಕ್ರಮದಲ್ಲಿಯೂ ರಾಜಕೀಯ ಸಂದೇಶ ರವಾನಿಸುವ ಪ್ರಯತ್ನವನ್ನು ಮೋದಿ ಮಾಡಿದ್ದಾರೆ. ಬಿಜೆಪಿಯ ಬಗ್ಗೆ ತಮಿಳು ಜನರಿಗೆ ಅಂತಹ ಪ್ರೀತಿಯೇನೂ ಇಲ್ಲ. ಈಗ, ಜಿನ್ಪಿಂಗ್ ಅವರನ್ನು ಮಾಮಲ್ಲಪುರಂಗೆ ಕರೆ ತರುವ ಮೂಲಕ ತಮಿಳಿನ ಬಗ್ಗೆ ತಮಗೆ ಪ್ರೀತಿ ಇದೆ ಎಂಬ ಸಂದೇಶವನ್ನು ಮೋದಿ ಕೊಟ್ಟಿದ್ದಾರೆ. ಇಂತಹ ಕ್ರಮಗಳೇ ತಮ್ಮನ್ನು ತಮಿಳು ಜನರಿಗೆ ಹತ್ತಿರವಾಗಿಸಬಲ್ಲುದು ಎಂಬ ನಂಬಿಕೆ ಅವರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.