ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು | ದೋಡಾದಲ್ಲಿ ಗುಂಡಿನ ಕಾಳಗ: ನಾಲ್ವರು ಯೋಧರು ಹುತಾತ್ಮ

Published 16 ಜುಲೈ 2024, 2:04 IST
Last Updated 16 ಜುಲೈ 2024, 14:44 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ಡೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಬ್ರಿಜೇಶ್‌ ಥಾಪಾ, ಒಬ್ಬ ಪೊಲೀಸ್‌ ಸೇರಿದಂತೆ ನಾಲ್ವರು ಸೇನೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಸಿಪಾಯಿಗಳಾದ ಬಿಜೇಂದ್ರ, ಅಜಯಕುಮಾರ್‌ ಸಿಂಗ್‌ ಮತ್ತು ದೊಕ್ಕರಿ ರಾಜೇಶ್‌ ಹುತಾತ್ಮರಾದ ಯೋಧರು. ‘10 ರಾಷ್ಟ್ರೀಯ ರೈಫಲ್ಸ್‌’ನ ಮೇಜರ್ ಥಾಪಾ, ಇತ್ತೀಚೆಗಷ್ಟೆ ಬಡ್ತಿ ಹೊಂದಿದ್ದರು.

ಅರಣ್ಯದಲ್ಲಿ ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದ ವೇಳೆ, ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡಿನ ದಾಳಿ ನಡೆಸಿದವು ಎಂದು ಸೇನೆಯ ನಗ್ರೋತಾದಲ್ಲಿರುವ ವೈಟ್‌ ನೈಟ್‌ ಕೋರ್‌ ಮೂಲಗಳು ಹೇಳಿವೆ.

ಚಕಮಕಿ ಆರಂಭಗೊಂಡ ನಂತರ, ಪರಾರಿಯಾಗಲು ಯತ್ನಿಸಿದ ಉಗ್ರರನ್ನು ಯೋಧರು ಬೆನ್ನಟ್ಟಿದ್ದರು. ಈ ಪ್ರದೇಶವು ದಟ್ಟವಾದ ಅರಣ್ಯ ಮತ್ತು ಪರ್ವತಗಳಿಂದ ಕೂಡಿದ್ದರಿಂದ ಕಾರ್ಯಾಚರಣೆ ನಡೆಸುವುದು ಸವಾಲಿನಿಂದ ಕೂಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕೆಳಮಟ್ಟದಲ್ಲಿ ಮೋಡಗಳಿದ್ದವು. ಮಳೆಯೂ ಸುರಿಯುತ್ತಿದ್ದ ಕಾರಣ, ಯಾವುದೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ರಾತ್ರಿ 8.40ರ ಹೊತ್ತಿಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಅರಣ್ಯದಲ್ಲಿ ಅವಿತಿದ್ದ ಉಗ್ರರೊಂದಿಗೆ ಯೋಧರು ಸಂಪರ್ಕ ಸಾಧಿಸಿದರು’.

‘ಈ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡರು. ನಂತರ, ಗಾಯಗಳಿಂದಾಗಿ ಮೃತಪಟ್ಟರು. ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಹೆಚ್ಚುವರಿ ಯೋಧರನ್ನು ಕಳುಹಿಸಲಾಗಿದೆ’ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಕಳೆದ 10 ದಿನಗಳ ಅವಧಿಯಲ್ಲಿ ಸೇನೆ ಮೇಲೆ ನಡೆದಂತಹ ಎರಡನೇ ದೊಡ್ಡ ದಾಳಿ ಇದಾಗಿದೆ. ಜುಲೈ 8ರಂದು ಕಠುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿ, ಇತರ ಐವರು ಗಾಯಗೊಂಡಿದ್ದರು.

ಈ ಮೊದಲು ಪೂಂಚ್‌ ಮತ್ತು ರಜೌರಿ ಜಿಲ್ಲೆಗಳಲ್ಲಿ ಕೇಂದ್ರಿತವಾಗಿದ್ದ ಉಗ್ರರ ಚಟುವಟಿಕೆ ಈಗ ಜಮ್ಮು ಪ್ರದೇಶದಾದ್ಯಂತ ವಿಸ್ತರಿಸಿದೆ. ಈ ಪ್ರದೇಶ ಕಳೆದ ಕೆಲ ವರ್ಷಗಳಿಂದ ಉಗ್ರರ ಉಪಟಳದಿಂದ ಮುಕ್ತವಾಗಿತ್ತು.

ಜಮ್ಮು ಭಾಗದಲ್ಲಿ ಉಗ್ರರ ನಿಗ್ರಹಕ್ಕಾಗಿ ನಡೆದ ಕಾರ್ಯಾಚರಣೆ ವೇಳೆ, ಕಳೆದ ಎರಡೂವರೆಗಳ ಅವಧಿಯಲ್ಲಿ 48 ಯೋಧರು ಹುತಾತ್ಮರಾಗಿದ್ದಾರೆ.

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಸಂಪೂರ್ಣ ವಿಫಲವಾಗಿದೆ. ಕಾಶ್ಮೀರಿ ಪಂಡಿತರಿಗೆ ಪುನರ್ವತಿ ಕಲ್ಪಿಸಿಲ್ಲ ಇನ್ನೊಂದೆಡೆ ಜಮ್ಮು–ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗುತ್ತಿಲ್ಲ
ಸೌರಭ್‌ ಭಾರದ್ವಾಜ್ ದೆಹಲಿ ಸಚಿವ

ವಿವಿಧ ಪಕ್ಷಗಳ ಖಂಡನೆ

ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್‌ ಸೇರಿದಂತೆ ಸೇನೆಯ ನಾಲ್ವರು ಸಿಬ್ಬಂದಿ ಹತ್ಯೆಯಾಗಿದ್ದನ್ನು ವಿವಿಧ ಪಕ್ಷಗಳು ಖಂಡಿಸಿವೆ. ನ್ಯಾಷನಲ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಹಾಗೂ ಪಕ್ಷದ ಮುಖಂಡರು ಈ ಕೃತ್ಯವನ್ನು ಖಂಡಿಸಿದ್ದಾರೆ. ‘ಈ ಸಂಕಷ್ಟದ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ನಮ್ಮ ಸಹಾನುಭೂತಿ ಇದೆ’ ಎಂದು ಪಕ್ಷವು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರೂ ಯೋಧರ ಹತ್ಯೆಯನ್ನು ಖಂಡಿಸಿದ್ದಾರೆ. ‘ಡೋಡಾದಲ್ಲಿ ನಡೆದ ದಾಳಿಯಲ್ಲಿ ನಮ್ಮ ಧೀರ ಯೋಧರನ್ನು ಕಳೆದುಕೊಂಡಿದ್ದೇವೆ. ಡಿಜಿಪಿ ಸ್ವೇನ್‌ ಇಲ್ಲಿನ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಪಿಡಿಪಿಯನ್ನು ಹೇಗೆ ನಿರ್ಮೂಲನೆ ಮಾಡಬೇಕು ಮತ್ತು ಜನರಿಗೆ ಕಿರುಕುಳ ನೀಡುವುದರಲ್ಲಿಯೇ ಅವರು ಹೆಚ್ಚು ಮಗ್ನರಾಗಿದ್ದಾರೆ’ ಎಂದು ಹೇಳಿದ್ದಾರೆ. ‘ಡಿಜಿಪಿ ಸ್ಥಳೀಯರನ್ನು ಪಾಕಿಸ್ತಾನದ ಪ್ರಜೆಗಳಂತೆ ಕಾಣುತ್ತಿದ್ದಾರೆ’ ಎಂದು ಆರೊಫಿಸಿರುವ ಅವರು ಕೂಡಲೇ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

‘ಉಗ್ರವಾದದ ಉಪದ್ರವ ನಿರ್ಮೂಲನೆಗೆ ಬದ್ಧ’

‘ಜಮ್ಮು–ಕಾಶ್ಮೀರದಲ್ಲಿ ಉಗ್ರವಾದದ ಉಪದ್ರವವನ್ನು ನಿರ್ಮೂಲನೆ ಮಾಡಲು ಸೇನೆ ಬದ್ಧವಾಗಿದೆ’ ಎಂದು ಉಧಂಪುರದಲ್ಲಿರುವ ಸೇನೆಯ ನಾರ್ದರ್ನ್ ಕಮಾಂಡ್‌ ಮಂಗಳವಾರ ಹೇಳಿದೆ. ಡೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ನಾಲ್ವರು ಯೋಧರಿಗೆ ಗೌರವ ಸಲ್ಲಿಸಿದ ವೇಳೆ ಸೇನೆ ಈ ಮಾತು ಹೇಳಿದೆ. ‘ಗಡಿ ಮೂಲಕ ಒಳನುಸುಳಿ ಉಧಂಪುರ ಡೋಡಾ ಮತ್ತು ಕಿಸ್ತ್‌ವಾರ ಜಿಲ್ಲೆಗಳಲ್ಲಿ ತಮ್ಮ ಚಟುವಟಿಕೆ ವಿಸ್ತರಿಸುತ್ತಿರುವ ವಿದೇಶಿ ಉಗ್ರರನ್ನು ಹೊಡೆದುರುಳಿಸಲಾಗುವುದು. ಈ ಸಂಬಂಧ ಜಮ್ಮು–ಕಾಶ್ಮೀರ ಪೊಲೀಸರೊಂದಿಗೆ ಸೇನೆಯು ಸರಣಿ ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ’ ಎಂದು ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ‘ಉಗ್ರರ ಉಪಟಳವನ್ನು ಮಟ್ಟ ಹಾಕುವುದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರೊಂದಿಗೆ ಜಂಟಿ ತರಬೇತಿ ಆಯೋಜಿಸಲಾಗುತ್ತಿದೆ. ಸೇನೆ ಪೊಲೀಸರು ಮತ್ತು ಇತರ ಗುಪ್ತಚರ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯವೂ ನಡೆಯುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT