ನವದೆಹಲಿ: ಮಣಿಪುರದ ಹಿಂಸಾಚಾರ ಮತ್ತು ದೆಹಲಿ ಸುಗ್ರಿವಾಜ್ಞೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಸಂಸತ್‌ನ ಹೊರಗೆ ಈಗಾಗಲೇ ರಾಜಕೀಯ ಸಂಘರ್ಷ ಉತ್ತುಂಗಕ್ಕೇರಿದೆ.

ಇದರ ಬೆನ್ನಲ್ಲೇ ಗುರುವಾರದಿಂದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಈ ಸಂಘರ್ಷ ಸಂಸತ್‌ನ ಒಳಗೂ ಪ್ರವೇಶಿಸಲಿದ್ದು, ಸುಗಮ ಕಲಾಪ ನಡೆಸುವುದು ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಪ್ರತಿಪಕ್ಷಗಳು ‘ಇಂಡಿಯಾ’ದ ಒಗ್ಗಟ್ಟು ಪ್ರದರ್ಶಿಸಿದ ಬಳಿಕ ಬಿಜೆಪಿಯು ಎನ್‌ಡಿಎ ಸಭೆ ಮೂಲಕ ತನ್ನ ಸಂಖ್ಯಾಬಲ ಪ್ರದರ್ಶಿಸಿದ ಖುಷಿಯಲ್ಲಿದೆ. ಆದರೆ, ಕಣಿವೆ ರಾಜ್ಯದ ಹಿಂಸಾಚಾರ ನಿಯಂತ್ರಿಸುವಲ್ಲಿ ಸೋತಿರುವುದು ಹಾಗೂ ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಳೆದಿರುವ ಮೌನವು, ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರವೇ ಅಸ್ತ್ರ ನೀಡಿದಂತಾಗಿದೆ.

ಹಾಗಾಗಿ, ಈ ಅಧಿವೇಶನವು ಸರ್ಕಾರದ ಪಾಲಿಗೆ ಅಗ್ನಿಪರೀಕ್ಷೆಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಮೊದಲ ದಿನವೇ ಕಾವೇರುವ ಸಾಧ್ಯತೆ ದಟ್ಟವಾಗಿದೆ.

ಮಣಿಪುರ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈ ನಡುವೆಯೇ ಮೋದಿ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿಯನ್ನೂ ಮಾಡಿಲ್ಲ. ಇದು ವಿಪಕ್ಷಗಳ ತಾಳ್ಮೆಯನ್ನು ಪರೀಕ್ಷೆಗೊಡ್ಡಿದೆ. ಹಿಂಸಾಚಾರದ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕೋರಿ ಲೋಕಸಭೆಯ ಸ್ಪೀಕರ್‌ಗೆ ಪತ್ರ ಬರೆದಿವೆ.

ಅಧಿವೇಶನಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿಯೂ ಪ್ರತಿಪಕ್ಷಗಳು ಈ ವಿಷಯ ಪ್ರಸ್ತಾಪಿಸಿವೆ. ಮೋದಿ ಅವರು ಮೌನ ಮುರಿಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ‘ಇದನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರವೂ ಸಿದ್ಧವಾಗಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

‘ಹಿಂಸಾಚಾರದ ಬಗ್ಗೆ ಚರ್ಚೆಯನ್ನಷ್ಟೇ ನಾವು ಅಪೇಕ್ಷಿಸುವುದಿಲ್ಲ. ಕಲಾಪದಲ್ಲಿ ಮೋದಿ ಅವರ ಉತ್ತರವನ್ನೂ ಬಯಸುತ್ತೇನೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಗುಡುಗಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರಿಕ್ ಒಬ್ರಿಯನ್, ‘ಕಣಿವೆ ರಾಜ್ಯದ ಹಿಂಸಾಚಾರದ ಬಗ್ಗೆ ಪ್ರಧಾನಿ ಮಾತನಾಡದಿದ್ದರೆ ‘ಇಂಡಿಯಾ’ ಬದಲಾಗಿ ಉದ್ದೇಶಪೂರ್ವಕವಾಗಿಯೇ ಬಿಜೆಪಿ ಕಲಾಪಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

21 ಮಸೂದೆಗಳ ಮಂಡನೆ: ಆಗಸ್ಟ್ 11ರ ವರೆಗೆ ಅಧಿವೇಶನ ನಡೆಯಲಿದೆ. ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತ ಸುಗ್ರೀವಾಜ್ಞೆ ಸೇರಿದಂತೆ 21 ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ.

ಲೋಕಸಭೆಯಲ್ಲಿ ಸುಗ್ರೀವಾಜ್ಞೆಗೆ ಯಾವುದೇ ಅಡೆತಡೆ ಎದುರಾಗಿಲ್ಲ. ಆದರೆ, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ರಾಜ್ಯಸಭೆಯಲ್ಲಿ ನಿರ್ದಿಷ್ಟ ಸಂಖ್ಯಾಬಲ ಹೊಂದಿಲ್ಲ. ಹಾಗಾಗಿ, ಕೇಂದ್ರಕ್ಕೆ ಹೊಸ ಸವಾಲು ಎದುರಾಗಿದೆ.

ತಟಸ್ಥ ನಿಲುವು ತಳೆದಿರುವ ವೈಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಡಿ ನಿಲುವಿನ ಮೇಲೆ ಸುಗ್ರೀವಾಜ್ಞೆಯ ಹಣೆಬರಹ ನಿರ್ಧಾರವಾಗಲಿದೆ. ಈ ಎರಡೂ ಪಕ್ಷಗಳನ್ನು ತಮ್ಮತ್ತ ಸೆಳೆಯಲು ಎನ್‌ಡಿಎ ಮತ್ತು ‘ಇಂಡಿಯಾ’ ಕಸರತ್ತಿನಲ್ಲಿ ಮುಳುಗಿವೆ.

ಈ ಎರಡೂ ಪಕ್ಷಗಳು ‘ಇಂಡಿಯಾ’ ಬೆಂಬಲಕ್ಕೆ ನಿಂತರೆ ಮೋದಿ ಸರ್ಕಾರಕ್ಕೆ ಸೋಲಾಗುವುದು ಗ್ಯಾರಂಟಿ. ಆದರೆ, ರಾಜ್ಯಸಭೆಯಲ್ಲಿ ಮೋದಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ ಈ ಪಕ್ಷಗಳು ರಕ್ಷಣೆಗೆ ನಿಂತಿವೆ. ಹಾಗಾಗಿ, ಎನ್‌ಡಿಎ ವಿಶ್ವಾಸ ವೃದ್ಧಿಸಿದೆ.

ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದಂತೆ ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಸೂದೆಗೆ ಮಂಗಾರು ಅಧಿವೇಶನದಲ್ಲಿ ಜೀವ ನೀಡಲು ಸರ್ಕಾರ ತೀರ್ಮಾನಿಸಿದೆ.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಅಲ್ಲಿನ ‘ಮಹ್ರಾ’ ಹಾಗೂ ‘ಮಹಾರಾ’ ಸಮುದಾಯಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವ ಸಂಬಂಧ ಮಸೂದೆ ಮಂಡಿಸಲಿದೆ.

ಔಷಧಿ, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯ ವರ್ಧಕಗಳ ಪರಿಷ್ಕೃತ ಮಸೂದೆ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪರಿಶಿಷ್ಟ ಪಂಗಡಗಳ ಪರಿಷ್ಕರಣೆ ಮಸೂದೆ, ಜೀವವೈವಿಧ್ಯ (ತಿದ್ದುಪಡಿ) ಮಸೂದೆ, ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.